ಕ್ರೀಡಾ ಸಂಸ್ಥೆಗಳ ಆಡಳಿತ ಸರಿಪಡಿಸಲು ಸರ್ಕಾರ ಮುಂದಾಗಲಿ ಭಾರತದ ಕ್ರಿಕೆಟ್‌ ಆಡಳಿತದಲ್ಲಿ ಸುಧಾರಣೆ ತರುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಅತಿಯಾದ ಆಸಕ್ತಿ ಮತ್ತು ಕೋರ್ಟ್‌ ಆದೇಶದ ಚಾಟಿಯಿಂದ ನುಣುಚಿಕೊಳ್ಳಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸುತ್ತಿರುವ ಕಸರತ್ತು ದೇಶದಾದ್ಯಂತ ಚರ್ಚೆಗೆ ಗ್ರಾಸ ಒದಗಿಸಿದೆ. ಬಿಸಿಸಿಐನಲ್ಲಿ ಪಾರದರ್ಶಕ ಆಡಳಿತ ತರುವ ಆಶಯದಿಂದ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ.ಲೋಧಾ ನೇತೃತ್ವದ ಸಮಿತಿ ನೀಡಿದ್ದ ವರದಿಯ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಈ ವರ್ಷದ ಜುಲೈ 18ರಂದೇ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಲೋಧಾ ಅವರು ನಾಲ್ಕು ದಿನಗಳ ಹಿಂದೆ ಕೋರ್ಟ್‌ಗೆ ವರದಿ ನೀಡಿದ್ದರು. ಶಿಫಾರಸಿನಲ್ಲಿ ಸೂಚಿಸಿರುವ ನಿಯಮಗಳ ವ್ಯಾಪ್ತಿಯನ್ನು ಮೀರಿದ ಕೆಲವರು ಬಿಸಿಸಿಐನ ಉನ್ನತ ಸ್ಥಾನದಲ್ಲಿದ್ದಾರೆ; ಇಂಥವರು ಕೆಳಗಿಳಿಯದಿದ್ದರೆ ಶಿಫಾರಸುಗಳ ಅನುಷ್ಠಾನ ಅಸಾಧ್ಯ ಎಂದೂ ಲೋಧಾ ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್‌ 21ರಂದು ನಡೆದ ಬಿಸಿಸಿಐನ ವಾರ್ಷಿಕ ಮಹಾಸಭೆಯ ವಿವರಗಳನ್ನೂ ತಮಗೆ ನೀಡಿಲ್ಲ ಎಂದಿರುವ ಲೋಧಾ, ‘ಕೋರ್ಟ್‌ ಆದೇಶವನ್ನು ಬಿಸಿಸಿಐ ತಿರಸ್ಕಾರದಿಂದ ಕಂಡಿದೆ’ ಎಂದಿದ್ದಾರೆ. ಈ ವರದಿಯನ್ನು ನೋಡಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್‌ ಅವರು ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದಾರೆ. ‘ಈ ದೇಶದಲ್ಲಿರುವ ಕಾನೂನು ವ್ಯವಸ್ಥೆಗಿಂತಲೂ ತಾವೇ ದೊಡ್ಡವರೆಂದು ಬಿಸಿಸಿಐನವರು ಭಾವಿಸಿದಂತಿದೆ. ಅವರನ್ನು ಸರಿದಾರಿಗೆ ತರುವುದು ಹೇಗೆಂದು ನ್ಯಾಯಾಲಯಕ್ಕೆ ಗೊತ್ತಿದೆ’ ಎಂದೂ ಠಾಕೂರ್‌ ಹೇಳಿದ್ದಾರೆ. ಲೋಧಾ ಸಮಿತಿಯ ಶಿಫಾರಸುಗಳನ್ನು ಅದೆಷ್ಟರ ಮಟ್ಟಿಗೆ ಜಾರಿಗೆ ತರಲಾಗಿದೆ ಎಂಬುದರ ಕುರಿತು ಈ ತಿಂಗಳ 6ರ ಒಳಗೆ ಪೂರ್ಣ ವರದಿ ನೀಡುವಂತೆಯೂ ಕೋರ್ಟ್‌ ಗಡುವು ನೀಡಿದೆ. ಈ ಸಂದಿಗ್ಧದಲ್ಲಿಯೇ ಶನಿವಾರ ಬಿಸಿಸಿಐನ ವಿಶೇಷ ಮಹಾಸಭೆ ನಡೆದಿದೆ. ‘ಲೋಧಾ ಸಮಿತಿಯ ಹಲವು ಶಿಫಾರಸುಗಳನ್ನು ಈಗಾಗಲೇ ಜಾರಿಗೊಳಿಸಿದ್ದೇವೆ. ಆದರೆ ಪ್ರಾಯೋಗಿಕವಾಗಿ ಸಮಂಜಸವಲ್ಲದ ಕೆಲವು ಶಿಫಾರಸುಗಳನ್ನು ಕೈಬಿಟ್ಟಿದ್ದೇವೆ. ಇಂತಹ ಶಿಫಾರಸುಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬುದನ್ನು ತೀರ್ಮಾನಿಸುವುದು ಬಿಸಿಸಿಐ ಸದಸ್ಯರಿಗೆ ಬಿಟ್ಟ ವಿಚಾರ’ ಎಂದೂ ವಿಶೇಷ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಬಿಸಿಸಿಐನ ಈ ನಿಲುವಿನ ಬಗ್ಗೆ ಕೋರ್ಟ್‌ ಇನ್ನೂ ಪ್ರತಿಕ್ರಿಯಿಸಿಲ್ಲ. ಬಿಸಿಸಿಐ ಮತ್ತು ಸುಪ್ರೀಂ ಕೋರ್ಟ್‌ ನಡುವಣ ಜಟಾಪಟಿ ಈ ರೀತಿ ತಾರಕಕ್ಕೆ ಹೋಗಿರುವುದು ಸರಿಯಲ್ಲ.ಭಾರತದಲ್ಲಿ ಕ್ರಿಕೆಟ್‌ ಆಡಳಿತ ಸಂಪೂರ್ಣ ಹದಗೆಟ್ಟಿತ್ತು. ಅದರ ಶುದ್ಧೀಕರಣ ಪ್ರಕ್ರಿಯೆ ಬಗ್ಗೆ ಕೋರ್ಟ್‌ ಅತ್ಯುತ್ತಮ ನಿಲುವು ತಳೆಯಿತು. ಲೋಧಾ ವರದಿಯ ಶಿಫಾರಸುಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳೂ ಈ ಶಿಫಾರಸುಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ದೇಶದಾದ್ಯಂತ ಕೇಳಿ ಬಂದಿತ್ತು. ಆದರೆ ಬಿಸಿಸಿಐ ಜತೆಗೆ ಕೋರ್ಟ್‌ ಹೀಗೆ ನೇರವಾಗಿ ‘ಕದನ’ಕ್ಕಿಳಿಯುವ ಅಗತ್ಯವಿತ್ತೇ ಎಂಬ ಪ್ರಶ್ನೆ ಈಗ ಎದ್ದಿದೆ. ಲೋಧಾ ಸಮಿತಿ ಶಿಫಾರಸುಗಳು ಸಮರ್ಪಕವಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ ಆದೇಶ ನೀಡಿದ್ದರೆ ಸೂಕ್ತವಾಗುತ್ತಿತ್ತು. ಎಲ್ಲವನ್ನೂ ನ್ಯಾಯಾಂಗವೇ ಮಾಡುವುದಿದ್ದರೆ ಶಾಸಕಾಂಗ, ಕಾರ್ಯಾಂಗಕ್ಕೇನು ಕೆಲಸ ಎಂಬ ಪ್ರಶ್ನೆಯೂ ಏಳುತ್ತದೆ. ಬಿಸಿಸಿಐನ ಆಡಳಿತ ಸರಿಯಾದರಷ್ಟೇ ಸಾಲದು.ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳ ಆಡಳಿತದಲ್ಲಿಯೂ ಪಾರದರ್ಶಕತೆ ಮೂಡಬೇಕು. ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಗುಣಮಟ್ಟ ಕಾಪಾಡಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಸಮಗ್ರ ನೀತಿ ರೂಪಿಸುವ ಹೊಣೆಗಾರಿಕೆ ಸರ್ಕಾರದ್ದು. ಅದನ್ನು ಮಾಡುವಂತೆ ಕೋರ್ಟ್‌ ಸೂಚಿಸಲಿ. ಕ್ರೀಡಾ ಸಂಸ್ಥೆಯೊಂದರ ನೀತಿ ನಿರೂಪಣೆ ಮತ್ತು ಆಡಳಿತದ ವಿಷಯದಲ್ಲಿ ನ್ಯಾಯಾಲಯ ಈ ಮಟ್ಟಿಗೆ ತೊಡಗಿಕೊಳ್ಳುವ ಅಗತ್ಯ ಇದೆಯೇ ಎಂಬ ಮಾತೂ ಕೇಳಿಬರುತ್ತಿದೆ. ನ್ಯಾಯಾಲಯದಲ್ಲಿ ಅಪಾರ ಪ್ರಮಾಣದಲ್ಲಿ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಅಂತಹುದರಲ್ಲಿ ಇದೊಂದೇ ಪ್ರಕರಣಕ್ಕೆ ಇಷ್ಟೊಂದು ಸಮಯ ವ್ಯಯಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯೂ ಇದೆ. ಒಂದು ರಾಜ್ಯಕ್ಕೆ ಒಂದೇ ಮತ, ಎಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ರಾಜ್ಯ ಸಂಸ್ಥೆ ಹಾಗೂ ಬಿಸಿಸಿಐ ಚುನಾವಣೆಯಲ್ಲಿ ಸ್ವರ್ಧಿಸುವಂತಿಲ್ಲ ಎನ್ನುವುದೂ ಸೇರಿದಂತೆ ಕೆಲವು ಪ್ರಮುಖ ಶಿಫಾರಸುಗಳನ್ನು ಬಿಸಿಸಿಐ ಒಪ್ಪಿಕೊಂಡಿಲ್ಲ. ಅಜಯ್‌ ಶಿರ್ಕೆ ಅವರು ಬಿಸಿಸಿಐ ಕಾರ್ಯದರ್ಶಿಯಾಗಿ ಈಚೆಗೆ ಅವಿರೋಧವಾಗಿ ಆಯ್ಕೆಯಾಗಿರುವುದು ಕೋರ್ಟ್‌ ಆದೇಶದ ನೇರ ಉಲ್ಲಂಘನೆಯೇ ಆಗಿದೆ. ಹೀಗಾಗಿಯೇ ಮುಖ್ಯ ನ್ಯಾಯಮೂರ್ತಿಯವರು ಅಸಮಾಧಾನಗೊಂಡಿದ್ದಾರೆ. ಬಿಸಿಸಿಐ ಕೂಡ ತನ್ನ ಮಾತೇ ನಡೆಯಬೇಕು ಎಂದು ಹಟ ಹಿಡಿಯುವುದು ಸರಿಯಲ್ಲ. ಕೋರ್ಟ್‌ ಆದೇಶವನ್ನು ಪಾಲಿಸಲೇ ಬೇಕು. ಅದರಿಂದ ತಪ್ಪಿಸಿಕೊಳ್ಳಲು ನಾನಾ ಮಾರ್ಗಗಳನ್ನು ಹುಡುಕುವುದು ಸರಿಯಲ್ಲ. ಲೋಧಾ ಸಮಿತಿಯ ಶಿಫಾರಸುಗಳ ಚೌಕಟ್ಟಿನ ನಡುವೆಯೇ ಬಿಸಿಸಿಐ ಪಾರದರ್ಶಕ ಆಡಳಿತ, ವಿಶ್ವಾಸಾರ್ಹತೆ ಮತ್ತು ವೃತ್ತಿಪರತೆಯನ್ನು ಹಿಗ್ಗಿಸಿಕೊಂಡು ಕ್ರೀಡಾಲೋಕದ ಅತ್ಯುತ್ತಮ ಆಡಳಿತ ಸಂಸ್ಥೆಯಾಗಿ ಎದ್ದು ನಿಲ್ಲಲು ಅವಕಾಶ ಇದೆ.ಬಿಸಿಸಿಐ ಹಟ ಹಿಡಿಯುವುದು ಸರಿಯಲ್ಲ. ಕೋರ್ಟ್‌ ಆದೇಶವನ್ನು ಅದು ಪಾಲಿಸಲೇಬೇಕು. ಕ್ರೀಡಾ ಸಂಸ್ಥೆಗಳ ಆಡಳಿತ ಶುದ್ಧೀಕರಣಕ್ಕೆ ಸರ್ಕಾರವೂ ಗಮನಹರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.