ವಾಯು ಮಾಲಿನ್ಯ: ಜಾಗತಿಕ ಸಮುದಾಯಕ್ಕೆ ಎಚ್ಚರಿಕೆ ಗಂಟೆ ಪ್ರತಿಯೊಬ್ಬರೂ ಉಸಿರಾಡುವ ಗಾಳಿಯೂ ವಿಶ್ವದಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಕಲುಷಿತಗೊಂಡಿರುವ ಬಗ್ಗೆ ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯುಎಚ್‌ಒ) ವರದಿಯಲ್ಲಿ ಉಲ್ಲೇಖವಾಗಿರುವುದು ಜಾಗತಿಕ ಸಮುದಾಯಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಗಾಳಿಯಲ್ಲಿನ ಅದೃಶ್ಯ ಶತ್ರುವಿನ ರೂಪದಲ್ಲಿ ಇರುವ ಮಾಲಿನ್ಯಕಾರಕ ಅಂಶಗಳು ಲಕ್ಷಾಂತರ ಜನರನ್ನು ಸದ್ದಿಲ್ಲದೆ ಆಪೋಶನ ತೆಗೆದುಕೊಳ್ಳುತ್ತಿರುವುದು ಗಾಬರಿ ಹುಟ್ಟಿಸುತ್ತದೆ. ಇದರಿಂದ ವಿಶ್ವದಾದ್ಯಂತ ಸಾರ್ವಜನಿಕ ಸ್ವಾಸ್ಥ್ಯ ರಕ್ಷಣೆಯ ಹೊಸ ಬಿಕ್ಕಟ್ಟೂ ಸೃಷ್ಟಿಯಾಗುತ್ತಿದೆ. ವಿಷಕಾರಿಯಾದ ಗಾಳಿ ಸೇವನೆಯಿಂದ ಬರುವ ಗಂಭೀರ ಸ್ವರೂಪದ ಕಾಯಿಲೆಗಳಿಂದ ಲಕ್ಷಾಂತರ ಜನರು ಸಾವನ್ನಪ್ಪುತ್ತಿರುವುದಕ್ಕೆ ಸಾಮಾಜಿಕ, ಆರ್ಥಿಕ ಆಯಾಮಗಳೂ ಇವೆ. ವಾಯುಮಾಲಿನ್ಯದ ಕಾರಣದಿಂದಲೇ ಉಂಟಾಗುವ ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್‌ ಮತ್ತಿತರ ಮಾರಣಾಂತಿಕ ಕಾಯಿಲೆಗಳು ಅಭಿವೃದ್ಧಿಶೀಲ ದೇಶಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಜನರನ್ನು ಬಲಿ ತೆಗೆದುಕೊಳ್ಳುತ್ತಿವೆ. ಈ ಸಮಸ್ಯೆಗೆ ಭಾರತವೂ ಭಾರಿ ಬೆಲೆ ತೆರುತ್ತಿದೆ. ವಾಯು ಮಾಲಿನ್ಯ ಸಂಬಂಧಿ ಕಾಯಿಲೆಗೆ ಬಲಿಯಾಗುವವರ ಸಂಖ್ಯೆಯಲ್ಲಿ ಭಾರತವು ಚೀನಾ ನಂತರದ ಎರಡನೇ ಸ್ಥಾನದಲ್ಲಿ ಇದೆ. 2012ರಲ್ಲಿ ಚೀನಾದಲ್ಲಿ 8 ಲಕ್ಷ ಮತ್ತು ಭಾರತದಲ್ಲಿ 6 ಲಕ್ಷ ಜನರು ಮೃತಪಟ್ಟಿರುವ ಅಂದಾಜಿದೆ. ಆಗ್ನೇಯ ಏಷ್ಯಾ ಭಾಗದಲ್ಲಿ ಪ್ರತಿ ವರ್ಷ 8 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದು, ಆ ಪೈಕಿ ಶೇ 75ರಷ್ಟು ಮಂದಿ ಅಂದರೆ ಆರು ಲಕ್ಷಕ್ಕೂ ಅಧಿಕ ಜನರು ಭಾರತಕ್ಕೆ ಸೇರಿದವರಾಗಿದ್ದಾರೆ. ಅವಧಿ ಮುಂಚಿತ ಹೆರಿಗೆ, ಶಿಶುಗಳು ಕಡಿಮೆ ತೂಕ ಹೊಂದಿರುವುದಕ್ಕೂ ವಾಯು ಮಾಲಿನ್ಯಕ್ಕೂ ನೇರ ಸಂಬಂಧ ಇರುವುದು ಕೂಡ ಹೆಚ್ಚು ಆತಂಕಕಾರಿ ಸಂಗತಿಯಾಗಿದೆ.ಇದು ಹೊಸ ಪೀಳಿಗೆಯ ಆರೋಗ್ಯಕರ ಭವಿಷ್ಯವನ್ನೇ ಹಾಳು ಮಾಡಲಿದೆ. ವಿಶ್ವದಲ್ಲಿನ ಪ್ರತಿ 10 ಜನರ ಪೈಕಿ, 9 ಮಂದಿ ಕಳಪೆ ಗುಣಮಟ್ಟದ ಗಾಳಿ ಸೇವಿಸುತ್ತಿದ್ದಾರೆ. ವಾಯುಮಾಲಿನ್ಯದಿಂದಾಗಿ ಬಡ ದೇಶಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸಾವುಗಳು ಸಂಭವಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಪ್ರತಿ ಮೂರು ಸಾವುಗಳಲ್ಲಿ ಎರಡು ಸಾವು ಭಾರತವನ್ನೂ ಒಳಗೊಂಡ ಆಗ್ನೇಯ ಏಷ್ಯಾ ಹಾಗೂ ಪಶ್ಚಿಮ ಪೆಸಿಫಿಕ್‌ ವಲಯದಲ್ಲಿ ಸಂಭವಿಸುತ್ತಿವೆ. ಸಾರಿಗೆ, ಅಡುಗೆ ತಯಾರಿಕೆಗೆ ಕಟ್ಟಿಗೆ ಉರಿಸುವುದು, ತ್ಯಾಜ್ಯ ಸುಡುವುದು, ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರ ಹಾಗೂ ಕೈಗಾರಿಕಾ ಚಟುವಟಿಕೆಗಳು ವಾಯುಮಾಲಿನ್ಯಕ್ಕೆ ಪ್ರಮುಖ ಕೊಡುಗೆ ನೀಡುತ್ತಿವೆ. ನಗರೀಕರಣ, ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ, ಬದಲಾದ ಜೀವನಶೈಲಿ ಮುಂತಾದವುಗಳ ಕೊಡುಗೆಯೂ ಸಾಕಷ್ಟಿದೆ. ವಾಯುಮಾಲಿನ್ಯದ ವಿಷಯದಲ್ಲಿ ಸಿರಿವಂತ ಮತ್ತು ಬಡ ದೇಶಗಳ ಮಧ್ಯೆ ಯಾವುದೇ ತಾರತಮ್ಯ ಇಲ್ಲದಿರುವುದೂ ಮುಖ್ಯವಾಗಿದೆ. ಬಡ ದೇಶಗಳಲ್ಲಿ ಈ ಸಮಸ್ಯೆ ಉಲ್ಬಣಗೊಂಡಿದ್ದರೆ, ಶ್ರೀಮಂತ ದೇಶಗಳೂ ಈ ಸಮಸ್ಯೆಯಿಂದ ಮುಕ್ತವಾಗಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಶೇ 58ರಷ್ಟು ನಗರಗಳಲ್ಲೂ ವಾಯು ಮಾಲಿನ್ಯವು ಗಂಭೀರ ಸ್ವರೂಪದಲ್ಲಿಯೇ ಇದೆ. ಹೊರಾಂಗಣ ವಾಯು ಮಾಲಿನ್ಯದ ಜತೆಗೆ ಒಳಾಂಗಣ ವಾಯು ಮಾಲಿನ್ಯವೂ ಅಪಾಯಕಾರಿ ಮಟ್ಟದಲ್ಲಿ ಇರುವುದು ಇನ್ನೊಂದು ಕಳವಳಕಾರಿ ವಿದ್ಯಮಾನವಾಗಿದೆ. ವಾಯುಮಾಲಿನ್ಯವು ವಿಶ್ವದ ಅತಿದೊಡ್ಡ ಪರಿಸರ ಗಂಡಾಂತರವಾಗಿ ವ್ಯಾಪಿಸುತ್ತಿದೆ. ಕೊನೆಮೊದಲಿಲ್ಲದ ಕಾಯಿಲೆ ಮತ್ತು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.ಹೀಗಾಗಿ ಆದ್ಯತೆ ಮೇರೆಗೆ ಇದಕ್ಕೆ ಪರಿಹಾರ ಕಂಡುಕೊಳ್ಳಲೇಬೇಕಾದ ತುರ್ತು ಎದುರಾಗಿದೆ. ಈ ಸಮಸ್ಯೆಗೆ ಕಾರ್ಯಸಾಧ್ಯವಾದ ಪರಿಹಾರೋಪಾಯ ಕಂಡುಕೊಳ್ಳುವುದಕ್ಕಿಂತ ಪರಸ್ಪರ ವಿರುದ್ಧದ ಕೆಸರೆರಚಾಟವೇ ಮುಖ್ಯವಾಗಿ ನಡೆಯುತ್ತಿರುವುದು ಸಮರ್ಥನೀಯವಲ್ಲ. ಶುದ್ಧ ಇಂಧನ ಬಳಕೆ ಬಗ್ಗೆ ಶಬ್ದಾಡಂಬರದ ಸದ್ದೇ ಹೆಚ್ಚಾಗಿದೆ. ಬರೀ ಘೋಷಣೆಯಲ್ಲಿಯೇ ಕಾಲಹರಣ ಮಾಡುವುದರ ಬದಲಿಗೆ, ಒಟ್ಟಾರೆ ವಿಶ್ವ ಸಮುದಾಯವು ಸಮನ್ವಯ ಮತ್ತು ಒಗ್ಗಟ್ಟಿನಿಂದ ಇದಕ್ಕೆ ತುರ್ತಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅಭಿವೃದ್ಧಿಹೊಂದಿದ ದೇಶಗಳು ಶುದ್ಧ ಇಂಧನದ ತಂತ್ರಜ್ಞಾನವನ್ನು ಅಭಿವೃದ್ಧಿಶೀಲ ದೇಶಗಳ ಜತೆ ಹಂಚಿಕೊಂಡರೆ ಮಾಲಿನ್ಯ ತಗ್ಗಿಸಲು ಸಾಧ್ಯವಾದೀತು. ಮಾಲಿನ್ಯ ತಗ್ಗಿಸುವ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿಯೂ ಇಡೀ ಮನುಕುಲವೇ ಚಿಂತಿಸಿ, ದೃಢ ಹೆಜ್ಜೆ ಇಟ್ಟರೆ ಮಾತ್ರ ಎಲ್ಲರ ಭವಿಷ್ಯ ಹಸನಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.