ಪಾನನಿಷೇಧದ ಯಶಸ್ಸು ಕಳ್ಳಬಟ್ಟಿ ತಡೆ ಅವಲಂಬಿಸಿದೆ ಸಾಕಷ್ಟು ಪೂರ್ವಸಿದ್ಧತೆ, ಪರ್ಯಾಯ ವ್ಯವಸ್ಥೆ ಇಲ್ಲದೆ ಏಕಾಏಕಿ ಪಾನನಿಷೇಧ ಜಾರಿಗೆ ತಂದರೆ ಏನು ಅನಾಹುತ ಆಗಬಹುದು ಎಂಬುದಕ್ಕೆ ಬಿಹಾರದ ಉದಾಹರಣೆ ಈಗ ನಮ್ಮ ಮುಂದಿದೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ವಾಗ್ದಾನಕ್ಕೆ ಅನುಸಾರವಾಗಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಏ. 5ರಿಂದ ಅಲ್ಲಿ ಸಂಪೂರ್ಣ ಪಾನನಿಷೇಧ ಜಾರಿಗೊಳಿಸಿದ್ದರು. ಕುಡುಕರು ಮಾತ್ರವಲ್ಲ, ಯಾರದೇ ಮನೆಯಲ್ಲಿ ಮದ್ಯದ ಒಂದೇ ಒಂದು ಬಾಟಲಿ ಸಿಕ್ಕರೂ ಮಹಿಳೆಯರೂ ಸೇರಿದಂತೆ ಆ ಮನೆಯ ಎಲ್ಲ ವಯಸ್ಕ ಸದಸ್ಯರ ಮೇಲೆ ಮೊಕದ್ದಮೆ ದಾಖಲಿಸುವ ಮತ್ತು ಇಡೀ ಗ್ರಾಮದ ಮೇಲೆ ಪುಂಡುಗಂದಾಯ ವಿಧಿಸಲು ಅವಕಾಶ ಕೊಡುವ ನಿರಂಕುಶ ಕಾನೂನನ್ನು ತಂದಿದ್ದರು. ಇಷ್ಟೆಲ್ಲ ಕ್ರಮಗಳ ನಂತರವೂ ಸ್ವಾತಂತ್ರ್ಯೋತ್ಸವದ ಮರು ದಿನ ರಾತ್ರಿ ಅಲ್ಲಿ ಕಳ್ಳಬಟ್ಟಿ ಕುಡಿದು 16 ಜನ ಸಾವಿಗೀಡಾಗಿದ್ದಾರೆ. ಅದೂ ಒಂದೇ ಕಡೆ ಅಲ್ಲ. ಐದು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ. ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರು ಎನ್ನುವಂತೆ ಅಲ್ಲೀಗ 15 ಪೊಲೀಸರನ್ನು ಅಮಾನತು ಮಾಡಲಾಗಿದೆ. ಕಳ್ಳಬಟ್ಟಿ ತಯಾರಿಕೆ ಮತ್ತು ಮಾರಾಟದ ಆರೋಪದ ಮೇಲೆ 14 ಜನರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಕೆಲವರನ್ನು ಬಂಧಿಸಲಾಗಿದೆ. ಇಂತಹ ಅನಾಹುತಗಳು ಮರುಕಳಿಸದಂತೆ ಕಟ್ಟುನಿಟ್ಟು ಕ್ರಮ ತೆಗೆದುಕೊಳ್ಳುವುದಾಗಿ ನಿತೀಶ್‌ ಗುಡುಗಿದ್ದಾರೆ. ಮೃತರ ಅವಲಂಬಿಗಳಿಗೆ ಪರಿಹಾರ ಘೋಷಿಸಿದ್ದಾರೆ. ಅಲ್ಲೀಗ ಇರುವುದು ದೇಶದಲ್ಲಿ ಎಲ್ಲೂ ಇಲ್ಲದಂತಹ ಕಠೋರ ಕಾನೂನು. ಆದರೂ ಈ ದುರಂತ ನಡೆದಿದೆ. ಅಂದರೆ, ಸಂಪೂರ್ಣ ಪಾನನಿಷೇಧ ಜಾರಿಗೆ ಕಾಲ ಪಕ್ವವಾಗಿದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ. ಏಕೆಂದರೆ, ಮದ್ಯದ ಅಮಲು ಕುಡುಕರನ್ನು ಎಷ್ಟರಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ಕಾನೂನು, ನಿಷೇಧಕ್ಕೆ ಅವರು ಮಣಿಯುವುದಿಲ್ಲ. ಜನಜಾಗೃತಿ, ಮನವೊಲಿಕೆ, ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದರಿಂದ ಕುಡಿತ ಕಡಿಮೆ ಮಾಡಬಹುದು. ಆ ಪ್ರಯತ್ನವನ್ನು ಬಿಟ್ಟು ಜನಪ್ರಿಯತೆಯ ವ್ಯಾಮೋಹ ಮತ್ತು ಮತಗಳ ಮೇಲೆ ಕಣ್ಣಿಟ್ಟು ಪಾನನಿಷೇಧ ಜಾರಿಗೆ ತರುವುದರಿಂದ ಒಳಿತಿಗಿಂತ ಕೆಡುಕೇ ಹೆಚ್ಚು. ‘ಕುಡಿತ ಬಿಡುವಂತೆ ನನ್ನ ಮಗನ ಮನವೊಲಿಸಲು ನನಗೆ ಸಾಧ್ಯವಾಗಲಿಲ್ಲ. ಆದರೆ ಕಾರ್ಖಾನೆಯಲ್ಲಿ ತಯಾರಾದ ಅಥವಾ ಗುಣಮಟ್ಟದ ಮದ್ಯ ಸಿಕ್ಕಿದ್ದರೆ ಅವನು ಕಳ್ಳಬಟ್ಟಿಯ ಮೊರೆ ಹೋಗುತ್ತಿರಲಿಲ್ಲ; ಸಾಯುತ್ತಲೂ ಇರಲಿಲ್ಲ’ ಎಂದು ಮೃತ ಯುವಕನೊಬ್ಬನ ತಂದೆ ನೋವಿನಿಂದ ಹೇಳಿದ ಮಾತುಗಳು ಹೆಚ್ಚು ಅರ್ಥಪೂರ್ಣ. ಪಾನನಿಷೇಧದ ಮತ್ತೊಂದು ಮುಖವನ್ನು ತೆರೆದಿಡುತ್ತವೆ. ಆದರೆ ಇದರ ಅರ್ಥ, ಪಾನನಿಷೇಧ ನಿಷ್ಪ್ರಯೋಜಕ ಎಂದಲ್ಲ. ಎಗ್ಗಿಲ್ಲದ ಕುಡಿತ ಅಸಂಖ್ಯಾತ ಸಂಸಾರಗಳ ನೆಮ್ಮದಿ ಕೆಡಿಸಿದೆ. ವಿಶೇಷವಾಗಿ ಬಡವರ ಬದುಕನ್ನೇ ಹಾಳು ಮಾಡಿದೆ. ಆದ್ದರಿಂದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮತ್ತು ದೈಹಿಕ ಆರೋಗ್ಯ, ಕೌಟುಂಬಿಕವಾಗಿ ಸುಖೀ ಜೀವನಕ್ಕೆ ಕುಡಿತದಿಂದ ದೂರ ಇರುವುದು ಒಳ್ಳೆಯದು. ಅದು ಮನಸ್ಸಿನ ಒಳಗಡೆಯಿಂದ ಬರಬೇಕು. ಇನ್ನೊಂದು ಮುಖ್ಯ ಸಂಗತಿ ಎಂದರೆ, ಎಲ್ಲೆಲ್ಲಿ ಮದ್ಯಪಾನ ನಿಷೇಧ ಇದೆಯೋ ಅಲ್ಲಿ ಎದ್ದು ಕಾಣುವಂತಹ ತಾರತಮ್ಯವೂ ಇದೆ. ಬಿಹಾರವನ್ನೇ ನೋಡುವುದಾದರೆ, ಸಾರಾಯಿ ಮತ್ತು ಮದ್ಯಕ್ಕೆ ಮಾತ್ರ ನಿಷೇಧ. ಸರ್ಕಾರದಲ್ಲಿ ಪಾಲುದಾರ ಪಕ್ಷವಾದ ಲಾಲುಪ್ರಸಾದ್‌ ಅವರ ಆರ್‌ಜೆಡಿಯ ಒತ್ತಡಕ್ಕೆ ಮಣಿದು ಸೇಂದಿಯನ್ನು ನಿಷೇಧದ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ. ಅಲ್ಲದೆ, ರಾಜ್ಯದಲ್ಲಿನ ಮದ್ಯ ತಯಾರಿಕಾ ಘಟಕಗಳು ಉತ್ಪಾದನೆ ಮುಂದುವರಿಸಲು ಅವಕಾಶ ನೀಡಲಾಗಿದೆ. ಆದರೆ ಅದನ್ನು ರಾಜ್ಯದಲ್ಲಿ ಮಾರುವಂತಿಲ್ಲ; ಹೊರ ರಾಜ್ಯಕ್ಕೆ ಕಳಿಸಬೇಕು. ಅಕ್ಕಪಕ್ಕದ ರಾಜ್ಯಗಳಲ್ಲಿ ಧಾರಾಳವಾಗಿ ಮದ್ಯ ಸಿಗುವಾಗ ರಾಜ್ಯದೊಳಗೆ ಕುಡಿತ ನಿಲ್ಲಿಸುತ್ತೇವೆ ಎನ್ನುವುದೇ ಹಾಸ್ಯಾಸ್ಪದ. ಜನರಲ್ಲಿ ಇರುವ ಮದ್ಯಸೇವನೆಯ ಚಟವನ್ನು ಸರ್ಕಾರಿ ಆದೇಶ ಹೊರಡಿಸಿ ತಡೆಯಬಹುದು ಎಂಬುದು ಬರೀ ಭ್ರಮೆ. ಈಗ ಕೇರಳ ಮತ್ತು ಗುಜರಾತ್‌ನಲ್ಲಿ ಕೂಡ ಅಧಿಕೃತವಾಗಿ ಪಾನನಿಷೇಧ ಜಾರಿಯಲ್ಲಿದೆ. ಆದರೆ ವಾಸ್ತವವೇ ಬೇರೆ. ಕಾನೂನಿನಿಂದ ಮದ್ಯಪಾನಿಗಳ ಸಂಖ್ಯೆಯೇನೂ ಕಡಿಮೆ ಆಗುವುದಿಲ್ಲ. ಬಹಿರಂಗವಾಗಿ ಕುಡಿಯುವವರು ಕದ್ದು ಕುಡಿಯುತ್ತಾರೆ. ಕಳ್ಳಬಟ್ಟಿ, ಅಕ್ರಮ ಮದ್ಯ ತಯಾರಿಕೆ ಹೆಚ್ಚುತ್ತದೆ. ನೇರವಾಗಿ ಬೊಕ್ಕಸಕ್ಕೆ ಜಮೆಯಾಗುವ ಹಣ ಭ್ರಷ್ಟರ ಕೈಸೇರುತ್ತದೆ.ಇದನ್ನೆಲ್ಲ ತಪ್ಪಿಸಬೇಕು. ಕಳ್ಳಬಟ್ಟಿ ವ್ಯವಹಾರವನ್ನು ಬುಡಸಮೇತ ಕಿತ್ತು ಹಾಕಬೇಕು. ಆಗ ಮಾತ್ರ ಜೀವ ಹಾನಿ ತಡೆಯಲು ಸಾಧ್ಯ. ಆದರೆ ಈಗ ಹೋದ ಜೀವಗಳು ಮತ್ತೆ ಬರುತ್ತವೆಯೇ? ಇದು ನಮ್ಮ ರಾಜಕಾರಣಿಗಳಿಗೆ ಅರ್ಥವಾಗುತ್ತದೆಯೇ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.