ರಾಜನ್‌ ಉತ್ತರಾಧಿಕಾರಿ ಪಟೇಲ್‌ ಜಾಣತನದ ಪ್ರಬುದ್ಧ ನಡೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಗೆ ಡೆಪ್ಯುಟಿ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರನ್ನು ನೇಮಕ ಮಾಡುವ ಮೂಲಕ ಕೇಂದ್ರ ಸರ್ಕಾರವು ಹಲವು ದಿನಗಳ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದಿದೆ. ಹಾಲಿ ಗವರ್ನರ್‌ ರಘುರಾಂ ರಾಜನ್‌ ಅವರ ಗರಡಿಯಲ್ಲಿ ಪಳಗಿರುವ ಪಟೇಲ್‌ ಅವರಿಗೆ ಕೇಂದ್ರೀಯ ಬ್ಯಾಂಕ್‌ನ ಹೊಣೆಗಾರಿಕೆ ಒಪ್ಪಿಸಿರುವುದು ಸರ್ಕಾರದ ಜಾಣ ಮತ್ತು ಪ್ರಬುದ್ಧ ನಡೆಯಾಗಿದೆ. ರಘುರಾಂ ರಾಜನ್‌ ಆರಂಭಿಸಿದ್ದ ವಿವೇಚನೆಯ ನೀತಿಗಳನ್ನೇ ಮುಂದುವರೆಸಲಾಗುವುದು ಎಂದು ವಿದೇಶಿ ಹೂಡಿಕೆದಾರರಿಗೆ ಮತ್ತು ಹಣಕಾಸು ಮಾರುಕಟ್ಟೆಗೆ ಭರವಸೆ ನೀಡುವ ಸಂದೇಶವೂ ಈ ನೇಮಕದಲ್ಲಿ ಅಡಕವಾಗಿದೆ. ಎರಡನೇ ಅವಧಿಗೆ ಮುಂದುವರೆಯಲು ಹಿಂದೇಟು ಹಾಕಿದ ರಾಜನ್‌ ನಿರ್ಧಾರದಿಂದ ಸರ್ಕಾರದ ವರ್ಚಸ್ಸಿಗೆ ಆಗಿರುವ ಹಾನಿ ಸರಿಪಡಿಸುವ ಕ್ರಮವೂ ಇದಾಗಿದೆ. ರಾಜನ್‌ ಅವರ ಅಧಿಕಾರಾವಧಿಯಲ್ಲಿ ಅನುಸರಿಸಿಕೊಂಡು ಬಂದಿರುವ ಹಣಕಾಸು ನೀತಿಯನ್ನೇ ಮುಂದುವರೆಸುವ ಇರಾದೆ ತನಗೂ ಇದೆ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿದಂತಾಗಿದೆ. ಇದರಿಂದಾಗಿ ಆರ್‌ಬಿಐ ನೀತಿ ನಿರೂಪಣೆಯಲ್ಲಿ ಇನ್ನು ಮುಂದೆ ಹೆಚ್ಚಿನ ಸ್ಥಿರತೆ ಕಂಡು ಬರಲಿದೆ. ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿರುವ ದೇಶಿ ಆರ್ಥಿಕತೆಯಲ್ಲಿ, ಹಣಕಾಸು ಸ್ಥಿರತೆ ಕಾಯ್ದುಕೊಳ್ಳುವುದೇ ಸದ್ಯಕ್ಕೆ ನಿಜವಾದ ಸವಾಲಾಗಿದೆ. ಇಂತಹ ಸೂಕ್ಷ್ಮ ಘಟ್ಟದಲ್ಲಿ ಹಣಕಾಸು ವಿಷಯಗಳಲ್ಲಿ ಪ್ರಭುತ್ವ ಹೊಂದಿರುವ ಪರಿಣತ ಅರ್ಥಶಾಸ್ತ್ರಜ್ಞರೂ ಆಗಿರುವ ಪಟೇಲ್‌ ಅವರನ್ನು ಸರ್ಕಾರ ನೇಮಿಸಿರುವುದು ಸಕಾರಾತ್ಮಕ ಸಂಕೇತ ರವಾನಿಸುವಲ್ಲಿ ಸಫಲವಾಗಿದೆ. ಬಹುರಾಷ್ಟ್ರೀಯ ಸಂಸ್ಥೆಗಳು, ದೇಶಿ ಹಣಕಾಸು ಸಂಸ್ಥೆಗಳು, ಸರ್ಕಾರಿ ಸಮಿತಿಗಳ ಜತೆ ಕೆಲಸ ಮಾಡಿರುವ ವಿಶಿಷ್ಟ ಅನುಭವಗಳ ಹಿನ್ನೆಲೆ ಇರುವ ಪಟೇಲ್‌, ಗವರ್ನರ್‌ ಹುದ್ದೆಗೆ ಏರುವ ಎಲ್ಲ ಅರ್ಹತೆ ಹೊಂದಿದ್ದಾರೆ. ಹೂಡಿಕೆದಾರರ ನಿರೀಕ್ಷೆಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವೂ ಪಟೇಲ್‌ ಅವರಿಗಿದೆ. ಹಣದುಬ್ಬರ ನಿಯಂತ್ರಣದ ಸಮರ್ಥ ಸೇನಾನಿ ಎಂದೇ ಬಿಂಬಿತರಾಗಿರುವ ಪಟೇಲ್‌ ಅವರಿಂದಲೂ ಹಣದುಬ್ಬರ ನಿಯಂತ್ರಣ ವಿರುದ್ಧದ ಸಮರ ಮುಂದುವರೆಯಲಿದೆ. ತುಂಬ ಸೂಕ್ಷ್ಮ ವಿಷಯಗಳಾದ ಆರ್ಥಿಕ ಬೆಳವಣಿಗೆ ಮತ್ತು ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಸುಧಾರಿಸಿ ಕಡಿಮೆ ಬಡ್ಡಿದರದ ಸಾಲ ನೀಡಿಕೆ ಪುನರಾರಂಭಿಸುವುದನ್ನು ಪಟೇಲ್‌ ಅವರು ನಿರ್ಲಕ್ಷಿಸಲಿಕ್ಕಿಲ್ಲ. ಹಣದುಬ್ಬರಕ್ಕೆ ಗರಿಷ್ಠ ಮಿತಿ ವಿಧಿಸುವ, ಬೆಲೆ ಸ್ಥಿರತೆ ಸಾಧಿಸುವ ಮತ್ತು ಹಣಕಾಸು ನೀತಿ ಸಮಿತಿಯೇ ಬಡ್ಡಿ ದರ ನಿರ್ಧರಿಸುವ ನೀತಿ ಸಿದ್ಧಪಡಿಸುವಲ್ಲಿ ಪಟೇಲ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಅವುಗಳನ್ನು ಜಾರಿಗೆ ತರುವ ಜವಾಬ್ದಾರಿ ಸ್ಥಾನವೂ ಅದೃಷ್ಟಕ್ಕೆ ಅವರನ್ನೇ ಹುಡುಕಿಕೊಂಡು ಬಂದಿದೆ. ಆರ್ಥಿಕ ಬೆಳವಣಿಗೆಗೆ ಅಡ್ಡಿಪಡಿಸದೆ, ಹಣದುಬ್ಬರವನ್ನೂ ನಿಯಂತ್ರಿಸುವಲ್ಲಿ ಹೇಗೆ ಸಮತೋಲನ ಸಾಧಿಸಲಿದ್ದಾರೆ ಎನ್ನುವುದನ್ನು ಹಣಕಾಸು ಮಾರುಕಟ್ಟೆ ಪರಿಣತರು, ಹೂಡಿಕೆದಾರರು, ಜನಸಾಮಾನ್ಯರು, ಅರ್ಥಶಾಸ್ತ್ರಜ್ಞರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸುವ ಬ್ಯಾಂಕಿಂಗ್‌ ಸುಧಾರಣಾ ಕ್ರಮಗಳಿಗೆ ಪಟೇಲ್‌ ಒತ್ತು ನೀಡಿ, ಹೊಸ ಬ್ಯಾಂಕ್‌ ಲೈಸೆನ್ಸ್‌ಗಳನ್ನು ಉದಾರವಾಗಿ ನೀಡಲಿದ್ದಾರೆ ಎಂದು ಬಹುವಾಗಿ ನಿರೀಕ್ಷಿಸಲಾಗಿದೆ. ಮೂರು ವರ್ಷಗಳ ಕಾಲ ಆರ್‌ಬಿಐನಲ್ಲಿದ್ದರೂ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಬಗ್ಗೆ ಅವರ ಧೋರಣೆ ಏನೆಂಬುದು ಇನ್ನೂ ತಿಳಿದು ಬಂದಿಲ್ಲ.ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ಸೃಷ್ಟಿಯಾಗುವ ಹೊಸ ಪರಿಸ್ಥಿತಿಯನ್ನು ನಿಭಾಯಿಸುವ ಸವಾಲೂ ಅವರ ಹೆಗಲ ಮೇಲಿದೆ. ಗವರ್ನರ್‌ ಹುದ್ದೆ ಮತ್ತು ಆರ್‌ಬಿಐನ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಗೌರವಿಸಿದರೆ ಪಟೇಲ್‌ ಅವರ ಕೆಲಸ ಹೆಚ್ಚು ಸುಲಲಿತಗೊಳ್ಳಲಿದೆ. ಅರ್ಥ ವ್ಯವಸ್ಥೆಗೆ ಮಧ್ಯಮಾವಧಿಯಿಂದ ಹಿಡಿದು ದೀರ್ಘಾವಧಿವರೆಗೆ ಧಕ್ಕೆ ಒದಗಿಸುವ ಸರ್ಕಾರದ ಅಲ್ಪಾವಧಿ ಲಾಭದ ಜನಪ್ರಿಯ ನೀತಿಗಳಿಗೆ ಬಲಿಪಶುವಾಗದಿದ್ದರೆ ಮಾತ್ರ ಆರ್‌ಬಿಐನ ಸ್ವಾಯತ್ತತೆ ಉಳಿಸಿಕೊಳ್ಳಲು ಪಟೇಲ್‌ ಅವರಿಂದ ಸಾಧ್ಯವಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.