ಕಾಶ್ಮೀರ: ಸಹಜ ಸ್ಥಿತಿ ಪುನರ್‌ಸ್ಥಾಪನೆಗೆ ಮುಂದಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಿದ್ದಾರೆ. ಹಿಂಸಾಚಾರಗಳಿಂದ ನಲುಗಿರುವ ಕಾಶ್ಮೀರದಲ್ಲಿ ಸಹಜ ಸ್ಥಿತಿ ಸ್ಥಾಪನೆಗೆ ನೆರವಾಗಲು ಇರಿಸಿದ ಹೆಜ್ಜೆ ಇದು. ಹಲವು ಪ್ರದೇಶಗಳಲ್ಲಿ ಕಳೆದ 45 ದಿನಗಳಿಂದ ಜಾರಿಯಲ್ಲಿದ್ದ ಕರ್ಫ್ಯೂ ತೆರವುಗೊಳಿಸಲಾಗಿದ್ದರೂ ಪರಿಸ್ಥಿತಿ ಶಾಂತವಾಗಿಲ್ಲ. 2010ರ ನಂತರ ಇಷ್ಟೊಂದು ದೀರ್ಘ ಕಾಲದ ಹಿಂಸಾಚಾರ ಹಾಗೂ ಕರ್ಫ್ಯೂ ದಿನಗಳನ್ನು ಜಮ್ಮು ಮತ್ತು ಕಾಶ್ಮೀರ ಮತ್ತೊಮ್ಮೆ ಕಂಡಂತಾಗಿದೆ ಎಂಬುದು ವಿಷಾದನೀಯ.ಕಾಶ್ಮೀರಕ್ಕೆ ಕಳೆದ ಒಂದು ತಿಂಗಳಲ್ಲಿ ರಾಜನಾಥ ಸಿಂಗ್ ಅವರು ನೀಡುತ್ತಿರುವ ಎರಡನೇ ಭೇಟಿ ಇದು. ಜುಲೈ 8ರಂದು ಹಿಜ್‌ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಬುರ್ಹಾನ್ ವಾನಿ ಹತ್ಯೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಿಂಸಾಚಾರಗಳಲ್ಲಿ ಕನಿಷ್ಠ 69 ಮಂದಿ ಅಸುನೀಗಿದ್ದಾರೆ. ಭದ್ರತಾ ಸಿಬ್ಬಂದಿಯೂ ಸೇರಿದಂತೆ ಸುಮಾರು 10,000 ಜನ ಗಾಯಗೊಂಡಿದ್ದಾರೆ. ಹಿಂಸೆಯಿಂದ ನಲುಗಿಹೋಗುತ್ತಿರುವ ಜಮ್ಮು–ಕಾಶ್ಮೀರದ ಪ್ರತಿಪಕ್ಷಗಳ ನಿಯೋಗ ಪ್ರಧಾನಿ ನರೇಂದ್ರ ಮೋದಿಯವರನ್ನು ನವದೆಹಲಿಯಲ್ಲಿ ಮೊನ್ನೆ ಭೇಟಿ ಮಾಡಿದೆ. ಈ ಭೇಟಿಯ ನಂತರ, ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗೆ ಸಂವಿಧಾನದ ಚೌಕಟ್ಟಿನಲ್ಲಿ ಕಾಯಂ ಪರಿಹಾರ ಕಂಡುಕೊಳ್ಳಲು ಮಾತುಕತೆಗಳಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಕಾಶ್ಮೀರದಲ್ಲಿ ಹಿಂಸಾಚಾರ ಆರಂಭವಾದ ಆರು ವಾರಗಳ ನಂತರ ಸಾಕಷ್ಟು ತಡವಾಗಿ ಅಂತೂ ಪ್ರಧಾನಿ ಮಾತನಾಡಿದ್ದಾರೆ. ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಬಲೂಚಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಮೋದಿಯವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಒಂದು ಮಾತೂ ಹೇಳಿರಲಿಲ್ಲ. ಈಗ ಕಾಶ್ಮೀರ ಕುರಿತಾದ ನೋವು ಹಾಗೂ ಕಾಳಜಿಯನ್ನು ಮೋದಿಯವರು ವ್ಯಕ್ತಪಡಿಸುವ ಮುಂಚೆಯೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕಾಶ್ಮೀರದಲ್ಲಿನ ಅಶಾಂತಿಗೆ ಪಾಕಿಸ್ತಾನವೇ ಕಾರಣ ಎಂದಿದ್ದಲ್ಲದೆ ಕಲ್ಲು ತೂರುವವರು ಸತ್ಯಾಗ್ರಹಿಗಳಲ್ಲ, ರಾಷ್ಟ್ರ ವಿಭಜಿಸಲು ಮುಂದಾಗಿರುವ ಆಕ್ರಮಣಕಾರರು ಎಂದು ದೂಷಿಸಿದ್ದರು. ನಾಯಕರೇ ಇಲ್ಲದ ಗುಂಪುಗಳು ಕಾಶ್ಮೀರದ ಬೀದಿಗಳಲ್ಲಿ ಹಿಂಸಾಚಾರಗಳಲ್ಲಿ ತೊಡಗಿವೆ. ಮುಖ್ಯವಾಹಿನಿ ಹಾಗೂ ಸ್ಥಳೀಯ ರಾಜಕಾರಣಿಗಳೂ ಅಪ್ರಸ್ತುತವಾಗಿರುವ ತೀವ್ರ ಬಿಕ್ಕಟ್ಟಿನ ಸನ್ನಿವೇಶ ಇದು. ಕಾಶ್ಮೀರದಲ್ಲಿ ಸಹಜ ಸ್ಥಿತಿ ಪುನರ್ ಸ್ಥಾಪನೆಗೆ ಯಾರ ಜೊತೆ ಮಾತನಾಡಬೇಕು ಎಂಬಂತಹ ಸಮಸ್ಯೆ ಈಗ ಇಲ್ಲಿದೆ. ಮುಖ್ಯವಾಹಿನಿ ಪಕ್ಷಗಳ ಮಾತುಗಳನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅನೇಕ ಕಾಶ್ಮೀರಿಗಳು ಇಲ್ಲ. ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯೂ (ಪಿಡಿಪಿ) ಅವರಿಗೆ ಅಪ್ರಸ್ತುತವಾಗಿರುವಂತಹ ಸ್ಥಿತಿ ಇದು. ಈಗಿನ ಸಂಘರ್ಷ ಸ್ಥಿತಿಯನ್ನು ಮುನ್ನಡೆಸುತ್ತಿರುವವರು ಯಾವುದೇ ಶ್ರೇಣೀಕೃತ ನಾಯಕತ್ವವಿಲ್ಲದ ಯುವಜನರು ಎಂಬುದು ಸ್ಪಷ್ಟ. ಇಂತಹ ಬದಲಾದ ವಾಸ್ತವವನ್ನು ಗ್ರಹಿಸಿಕೊಂಡು ದೀರ್ಘಾವಧಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸರಿಪಡಿಸಲಾಗದ ಹಾನಿಯಾಗದಂತೆ ತನ್ನ ರಾಜಕಾರಣ ಹಾಗೂ ತಂತ್ರಗಾರಿಕೆಯನ್ನು ಸರಿಪಡಿಸಿಕೊಳ್ಳಬೇಕಾದ ಬದ್ಧತೆಯನ್ನು ಕೇಂದ್ರ ಸರ್ಕಾರ ಪ್ರದರ್ಶಿಸಬೇಕು. ನಾಗರಿಕರು ಹಾಗೂ ಭದ್ರತಾಪಡೆಗಳ ಮಧ್ಯದ ಕಂದರ ರಾಜ್ಯದಲ್ಲಿ ಹೆಚ್ಚಿದೆ. ಭದ್ರತಾಪಡೆಗಳ ವಿರುದ್ಧದ ಅಸಮಾಧಾನ ಜನರಲ್ಲಿ ಕುದಿಯುತ್ತಿದೆ. ಇಂತಹ ಸಂದರ್ಭದಲ್ಲಿ. ‘ಜನರ ಗುಂಪುಗಳನ್ನು ಎದುರಿಸುವಾಗ ಗರಿಷ್ಠ ಸಂಯಮ ಪಾಲಿಸಬೇಕು ಮತ್ತು ಮಾನವಹಕ್ಕುಗಳನ್ನು ಎತ್ತಿಹಿಡಿಯಬೇಕು’ ಎಂದು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರು ಯೋಧರಿಗೆ ಕರೆ ನೀಡಿರುವುದು ಮಹತ್ವದ ಬೆಳವಣಿಗೆ. ಇಂತಹ ಮಾತು ರಾಜಕೀಯ ನಾಯಕತ್ವದಿಂದಲೇ ಮೊದಲು ಮೂಡಿಬರಬೇಕಿತ್ತು. ಭದ್ರತಾ ಪಡೆಗಳು ಹಾಗೂ ಜನರ ಮಧ್ಯದ ಬಾಂಧವ್ಯವನ್ನು ಸೌಹಾರ್ದಮಯವಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಾರಿಗಳನ್ನು ಹುಡುಕಬೇಕು. ಗಡಿಯಾಚೆಯಿಂದ ಜಿಹಾದಿ ಗುಂಪುಗಳ ಒಳನುಸುಳುವಿಕೆ ಸಮಸ್ಯೆಯಿಂದಾಗಿ ಭದ್ರತಾಪಡೆಗಳ ಇರುವಿಕೆ ಕಾಶ್ಮೀರದಲ್ಲಿ ಅಗತ್ಯ ಎಂಬುದನ್ನು ಜನರಿಗೆ ಮನಗಾಣಿಸಬೇಕು. ಸ್ಥಳೀಯರ ಜೊತೆ ಸೇನಾಪಡೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದು ಅಗತ್ಯ. ಇದು ಸಾಧ್ಯವಾದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟಾರೆ ಸ್ಥಿತಿ ಸುಧಾರಣೆಗೆ ಅವಕಾಶಗಳು ತೆರೆದುಕೊಳ್ಳುತ್ತವೆ. ಜೊತೆಗೆ ಪ್ರತ್ಯೇಕತಾವಾದಿಗಳೊಂದಿಗೆ ರಾಜಕೀಯ ಮಾತುಕತೆಗಳೂ ಪರಿಸ್ಥಿತಿ ಸುಧಾರಿಸಲು ಇರಿಸಬೇಕಾಗಿರುವ ಮತ್ತೊಂದು ಹೆಜ್ಜೆ. ಹಿಂದಿನ ತಮ್ಮ ಕಾಶ್ಮೀರ ಭೇಟಿಯ ನಂತರ ರಾಜನಾಥ ಸಿಂಗ್ ಶ್ರೀನಗರದಿಂದ ಬರಿಗೈಯಲ್ಲಿ ಹಿಂದಿರುಗಿದ್ದರು. ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕರನ್ನು ಬಿಟ್ಟರೆ ಬೇರೆ ಯಾರೂ ಸಚಿವರನ್ನು ಭೇಟಿಯಾಗಿರಲಿಲ್ಲ. ಹೀಗಾಗಿ ಮಾತುಕತೆ ಆರಂಭಿಸುವುದೇ ಸಾಧ್ಯವಾಗಿರಲಿಲ್ಲ. ಈ ಬಾರಿ ಹೇಗೆ ಅವರು ಜನರ ಗುಂಪುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವರು ಎಂಬುದು ಕುತೂಹಲಕರವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.