ಶಿಕ್ಷಾಭಯವಿಲ್ಲದ ಸ್ಥಿತಿ ಆತಂಕಕಾರಿ ತನಿಖೆ ತ್ವರಿತಗೊಳಿಸಿ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯಾಗಿ ಒಂದು ವರ್ಷ ಕಳೆದರೂ ಹಂತಕರು ಪತ್ತೆಯಾಗದಿರುವುದು ಕಳವಳಕಾರಿ. ಈ ಕಳವಳಕ್ಕೆ ಧ್ವನಿಯಾಗಿ ಬಂದೂಕಿನೆದುರು ರಾಷ್ಟ್ರೀಯ ಜನದನಿ ಜಾಥಾ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಪರ ರಾಷ್ಟ್ರೀಯ ಸಮಾವೇಶವನ್ನು ಧಾರವಾಡದಲ್ಲಿ ನಡೆಸಲಾಗಿದೆ. ಕೇವಲ ಎರಡು ವರ್ಷಗಳ ಅವಧಿಯಲ್ಲಿ ರಾಷ್ಟ್ರದಲ್ಲಿ ಮೂವರು ವಿಚಾರವಾದಿಗಳ ಹತ್ಯೆ ನಡೆದದ್ದು ಆಘಾತಕಾರಿಯಾದುದು. 2013ರ ಆಗಸ್ಟ್ 20ರಂದು ಪುಣೆಯಲ್ಲಿ ನರೇಂದ್ರ ದಾಭೋಲ್ಕರ್ ಹತ್ಯೆಯಾಯಿತು. ನಂತರ 2015ರ ಫೆಬ್ರುವರಿ 20ರಂದು ಕೊಲ್ಲಾಪುರದಲ್ಲಿ ಗೋವಿಂದ ಪಾನ್ಸರೆ ಅವರ ಹತ್ಯೆಯಾಯಿತು. ಮತ್ತೆ ಅದೇ ವರ್ಷ ಆಗಸ್ಟ್ 30ರಂದು ಕಲಬುರ್ಗಿ ಅವರ ಹತ್ಯೆಯಾಯಿತು. ಆದರೆ ಈ ಸರಣಿ ಹತ್ಯೆಗಳ ತನಿಖೆ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ ಎಂಬುದು ನಮ್ಮ ತನಿಖಾ ವ್ಯವಸ್ಥೆಯ ಲೋಪಗಳಿಗೆ ಹಿಡಿದ ಕನ್ನಡಿ. ಧಾರವಾಡದಲ್ಲಿ ನಡೆದ ಜಾಥಾದಲ್ಲಿ ದಾಭೋಲ್ಕರ್, ಪಾನ್ಸರೆ ಕುಟುಂಬ ಸದಸ್ಯರಲ್ಲದೆ ರಾಷ್ಟ್ರದ ನಾನಾ ಭಾಗಗಳಿಂದ ಬಂದ ಲೇಖಕರು, ವಿಚಾರವಾದಿಗಳು ಪಾಲ್ಗೊಂಡಿದ್ದರು ಎಂಬುದು ಮಹತ್ವದ ಸಂಗತಿ. ಮೂವರೂ ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ 7.65 ಮಿ.ಮೀ. ದೇಶಿ ಪಿಸ್ತೂಲು ಬಳಕೆಯಾಗಿದೆ ಎಂದು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹೇಳಿದೆ. ಹಾಗೆಯೇ ಮೂವರ ಹತ್ಯೆಗಳಲ್ಲಿ ಬಳಕೆಯಾದ ಗುಂಡುಗಳು ಒಂದೇ ರೀತಿ ಇವೆ ಎಂಬುದನ್ನೂ ಸಿಐಡಿ ಪತ್ತೆ ಹಚ್ಚಿದೆ. ಈ ಬಗ್ಗೆ ಹೆಚ್ಚಿನ ಸ್ಪಷ್ಟತೆಗಾಗಿ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರ ನೆರವನ್ನು ಕೋರಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ. ದಾಭೋಲ್ಕರ್ ಹಾಗೂ ಪಾನ್ಸರೆ ಹತ್ಯೆಗಳಿಗೆ ಬಳಕೆಯಾದಂತಹ ಮೋಟಾರ್ ಸೈಕಲ್‌ ಅನ್ನೇ ಕಲಬುರ್ಗಿ ಹತ್ಯೆಯಲ್ಲಿ ಬಳಸಲಾಗಿದೆ ಎಂದು ಬಾಂಬೆ ಹೈಕೋರ್ಟ್‌ಗೆ ಮಹಾರಾಷ್ಟ್ರ ಪೊಲೀಸರು ಮಾಹಿತಿ ಸಲ್ಲಿಸಿದ್ದಾರೆ. ತನಿಖಾಧಿಕಾರಿಗಳ ಕಾರ್ಯನಿರ್ವಹಣೆಗೆ ಬಾಂಬೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ ನಂತರವಷ್ಟೇ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸನಾತನ್ ಸಂಸ್ಥೆಯ ವೀರೇಂದ್ರ ತಾವಡೆಯನ್ನು ಬಂಧಿಸಲಾಯಿತು ಎಂಬುದನ್ನೂ ಗಮನಿಸಬೇಕು. ‘ಅಲ್ಲಿಯವರೆಗೆ ತನಿಖೆಯಲ್ಲಿ ಪ್ರಗತಿಯೇ ಆಗಿರಲಿಲ್ಲ’ ಎಂಬಂತಹ ದಾಭೋಲ್ಕರ್ ಕುಟುಂಬ ಸದಸ್ಯರ ಮಾತು ನಮ್ಮ ವ್ಯವಸ್ಥೆಯ ದೋಷಗಳನ್ನು ಎತ್ತಿಹೇಳುವಂತಹದ್ದು. ಕಲಬುರ್ಗಿ ಹತ್ಯೆಯ ನಂತರ ಸಾಹಿತಿಗಳು, ವಿಜ್ಞಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸರ್ಕಾರದ ಪ್ರಶಸ್ತಿಗಳನ್ನು ಹಿಂತಿರುಗಿಸುವುದಕ್ಕೆ ಪ್ರೇರಣೆಯಾಗಿ ಈ ವಿದ್ಯಮಾನ ಆಂದೋಲನದ ರೂಪ ತಾಳಿದ್ದನ್ನು ಮರೆಯುವಂತಿಲ್ಲ. ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಧ್ವನಿ ಎತ್ತಲು ಇದು ಕಾರಣವಾಯಿತು. ನಂತರ ದನದ ಮಾಂಸಭಕ್ಷಣೆ, ಗೋರಕ್ಷಣೆ, ದೇಶಭಕ್ತಿ ಇತ್ಯಾದಿ ಹಲವು ವಿಚಾರಗಳಿಗೆ ಸಂಬಂಧಿಸಿದ ವಿವಾದಗಳು ರಾಷ್ಟ್ರದಲ್ಲಿ ಸೃಷ್ಟಿಯಾಗುತ್ತಲೇ ಇವೆ. ಮೂರು ದಶಕಗಳ ನಂತರ ಭರ್ಜರಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೆ ಏರಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ಬಹುಸಂಖ್ಯಾತರ ಮೌಲ್ಯಗಳನ್ನು ಆದರ್ಶವಾಗಿ ಮುಂಚೂಣಿಗೆ ತರುತ್ತಿರುವುದು ಸಮಾಜದಲ್ಲಿ ತಿಕ್ಕಾಟಗಳಿಗೆ ಕಾರಣವಾಗುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದೇವೆ. ಏಕಸಂಸ್ಕೃತಿಯ ಹುಸಿ ಶ್ರೇಷ್ಠತೆಯ ಪ್ರತಿಪಾದನೆ, ಭಾರತದ ಮೂಲಧಾತುವಾದ ಬಹುಸಂಸ್ಕೃತಿಯ ಸಂಕೀರ್ಣತೆಗಳನ್ನು ನಿರಾಕರಿಸುವಂತಹದ್ದು ಎಂಬುದನ್ನು ನೆನಪಿಡಬೇಕು. ನಾವು ಅಂಗೀಕರಿಸಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಅಶಯಗಳಿಗೆ ಇದು ಕುಂದುಂಟುಮಾಡುವಂತಹದ್ದು. ಧರ್ಮದ ಹೆಸರಲ್ಲಿ ಹಿಂಸಾಚಾರ ಜಾಗತಿಕ ಪ್ರಕ್ರಿಯೆಯಾಗುತ್ತಿದೆ. ಬಾಂಗ್ಲಾದೇಶದಲ್ಲಿನ ಬ್ಲಾಗರುಗಳ ಹಂತಕರು ಅಥವಾ ದಾಭೋಲ್ಕರ್, ಪಾನ್ಸರೆ, ಕಲಬುರ್ಗಿ ಹತ್ಯೆಗಳ ಶಂಕಿತ ಹಂತಕರು ವಿಭಿನ್ನ ಧರ್ಮಗಳಿಗೆ ನಿಷ್ಠರಾಗಿರಬಹುದು. ಆದರೆ ಧರ್ಮದ ಹೆಸರಲ್ಲಿ ಹಿಂಸೆಗಿಳಿಯುವ ಮನಸ್ಥಿತಿ ಮಾತ್ರ ಒಂದೇ. ಇಂತಹ ಹತ್ಯೆಗಳು ಪ್ರತಿರೋಧಗಳ ದನಿ ಹತ್ತಿಕ್ಕುವಂತಹದ್ದು. ಹೀಗಾಗಿ ಈ ಕುರಿತ ತನಿಖೆಯಲ್ಲಿ ಹೆಚ್ಚಿನ ಕಾಳಜಿ ಅಗತ್ಯ. ಆದರೆ, ಧರ್ಮದ ಹೆಸರಲ್ಲಿ ದ್ವೇಷ ಬಿತ್ತುವವರನ್ನು ವ್ಯವಸ್ಥಿತವಾಗಿ ಪ್ರತಿರೋಧಿಸುವಲ್ಲಿ ಹೆಚ್ಚಿನ ಪ್ರಯತ್ನಗಳಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ, ‘ಹಿಂಸೆಯಿಂದ ವಿಚಾರಗಳ ದನಿ ಅಡಗುವುದಿಲ್ಲ’ ಎಂಬುದನ್ನು ಧ್ವನಿಸುವಂತೆ ಧಾರವಾಡದಲ್ಲಿ ನಡೆದ ಪ್ರತಿಭಟನೆ ಮಹತ್ವವಾದದ್ದು. ವ್ಯಕ್ತಿಗಳ ಹತ್ಯೆಗಳಿಂದ ವಿಚಾರಗಳಿಗೆ ಸಾವು ಬರದು ಎಂಬುದನ್ನು ಅರಿಯುವುದು ಮುಖ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.