ವ್ಯಾಪಾರಿ ಧೋರಣೆಯ ಶಿಕ್ಷಣ ವ್ಯವಸ್ಥೆಗೆ ಬೇಕಿದೆ ನೈತಿಕ ಸ್ಪರ್ಶ ಮಕ್ಕಳ ಪಾಲಿಗೆ ಆನಂದದಾಯಕ ಆಗಿರಬೇಕಾದ ಶಾಲಾ ಶಿಕ್ಷಣ ಶಿಕ್ಷೆಯಾಗಿ ಪರಿಣಮಿಸಿದೆಯೇ? ಬಾಲ್ಯವನ್ನು ಪ್ರಫುಲ್ಲಗೊಳಿಸಬೇಕಾದ ಶಿಕ್ಷಣ ವ್ಯವಸ್ಥೆ ಮಕ್ಕಳ ಮನಸ್ಸಿನಲ್ಲಿ ಕಹಿ ತುಂಬುತ್ತಿದೆಯೇ? ಇತ್ತೀಚೆಗೆ ವರದಿಯಾದ ಕೆಲವು ಘಟನೆಗಳನ್ನು ಗಮನಿಸಿದರೆ ನಮ್ಮ ಶಿಕ್ಷಣ ವ್ಯವಸ್ಥೆ ರೋಗಪೀಡಿತವಾಗಿದೆ ಎನ್ನದೆ ವಿಧಿಯಿಲ್ಲ. ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಖಾಸಗಿ ಶಾಲೆಗಳು ಮಕ್ಕಳ ಬೆನ್ನಮೇಲೆ ಪಾಟಿಚೀಲದ ಮಣಗಟ್ಟಲೆ ಹೊರೆ ಹೇರಿವೆ. ಈ ವಿದ್ಯಾಸಂಸ್ಥೆಗಳು ಮಕ್ಕಳ ಮನೋವಿಕಾಸಕ್ಕೆ ವೇದಿಕೆಯಾಗುವ ಬದಲು, ಭಾರ ಹೊರುವ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ತುರುಸಿನಲ್ಲಿರುವಂತೆ ಕಾಣಿಸುತ್ತದೆ. ಕೂಲಿಗಳಂತೆ ಎಳೆಯರನ್ನು ನಡೆಸಿಕೊಳ್ಳುವ ಹೇರಿಕೆಯ ಬಗ್ಗೆ ಈವರೆಗೂ ಮಕ್ಕಳ ಹಕ್ಕುಗಳ ಬಗ್ಗೆ ಕಾಳಜಿಯುಳ್ಳ ಸಹೃದಯರು ಆಗಾಗ ಧ್ವನಿ ಎತ್ತುತ್ತಿದ್ದರು. ಆದರೀಗ, ಮಹಾರಾಷ್ಟ್ರದಲ್ಲಿ ಇಬ್ಬರು ಮಕ್ಕಳು ಸುದ್ದಿಗೋಷ್ಠಿ ಕರೆದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಮೂಲಕ, ಶಿಕ್ಷಣದ ಹೆಸರಿನಲ್ಲಿ ತಮ್ಮ ಮೇಲೆ ನಡೆಯುತ್ತಿರುವ ಶೋಷಣೆಯ ಬಗ್ಗೆ ಗಮನಸೆಳೆದಿದ್ದಾರೆ. ಪ್ರತಿನಿತ್ಯವೂ 5ರಿಂದ 7 ಕಿಲೋ ತೂಕದ ಪುಸ್ತಕಗಳನ್ನು ಹೊಂದಿರುವ ಚೀಲವನ್ನು ಹೊತ್ತುಕೊಂಡು ಮೂರನೇ ಮಹಡಿಯಲ್ಲಿರುವ ಶಾಲೆಗೆ ಹೋಗಬೇಕು ಎಂದು ಹೇಳಿರುವ 12 ವರ್ಷದ ಇಬ್ಬರು ಬಾಲಕರ ನೋವು, ಈ ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಅಂತರಂಗದ ಅಳಲೂ ಆಗಿದೆ. ಶಾಲಾಮಕ್ಕಳ ಸಮಸ್ಯೆ ಪುಸ್ತಕಗಳ ಹೊರೆಗಷ್ಟೆ ಸೀಮಿತವಾದುದಲ್ಲ. ಶೌಚಾಲಯ, ಕುಡಿಯುವ ನೀರಿನಂಥ ಮೂಲ ಸೌಕರ್ಯಗಳು ಅನೇಕ ಶಾಲೆಗಳಲ್ಲಿ ಇರುವುದಿಲ್ಲ. ಗ್ರಾಮೀಣ ಪ್ರದೇಶಗಳ ಕೆಲವು ಶಾಲೆಗಳಲ್ಲಂತೂ ತಲೆಯ ಮೇಲಿನ ಸೂರು ಯಾವಾಗ ನೆತ್ತಿಯ ಮೇಲೆ ಬೀಳುತ್ತದೋ ಎನ್ನುವ ಆತಂಕದಲ್ಲಿ ತರಗತಿಗಳು ನಡೆಯುತ್ತವೆ. ಆಟದ ಮೈದಾನಗಳಂತೂ ಅದೃಷ್ಟವಂತ ಮಕ್ಕಳಿಗಷ್ಟೇ ಲಭ್ಯ ಎನ್ನುವ ಸ್ಥಿತಿ ಇಂದಿನದು. ತರಗತಿಗಳ ಹೊರೆ, ಟ್ಯೂಷನ್‌, ಹೋಮ್‌ ವರ್ಕ್‌ಗಳಲ್ಲಿ ಮಕ್ಕಳ ಬಿಡುವನ್ನು ಕಸಿದುಕೊಂಡಿರುವುದರಿಂದ ಆಟದ ಅಂಗಳಗಳು ಅಗತ್ಯವಿಲ್ಲವೆಂದು ವ್ಯಾಪಾರಿ ಮನೋಭಾವದ ಶಿಕ್ಷಣಸಂಸ್ಥೆಗಳು ಭಾವಿಸಿದ್ದರೆ ಆಶ್ಚರ್ಯವೇನೂ ಇಲ್ಲ. ಶಾಲಾಮಕ್ಕಳ ಸುರಕ್ಷತೆ ಪೋಷಕರನ್ನು ಸದಾ ಕಳವಳಗೊಳಿಸುವ ಮತ್ತೊಂದು ಸಂಗತಿ. ಬಾಲಕಿಯರ ಲೈಂಗಿಕ ಶೋಷಣೆಯ ಪ್ರಕರಣಗಳು ಒಂದೆಡೆಯಾದರೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಕಠಿಣವಾಗಿ ಶಿಕ್ಷಿಸುವ ಬೋಧಕರೂ ಇದ್ದಾರೆ. ಚಾಮರಾಜನಗರ ಜಿಲ್ಲೆಯ ಗಿರಿಜನ ಆಶ್ರಮ ಶಾಲೆಯಲ್ಲಿ ಬಾಲಕಿಯೊಬ್ಬಳಿಗೆ ಹೆರಿಗೆಯಾದ ಪ್ರಕರಣ ಮಕ್ಕಳ ಸುರಕ್ಷತೆಯ ಕುರಿತ ನಿರ್ಲಕ್ಷ್ಯದ ಮತ್ತೊಂದು ರೂಪ. ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತುವ ಮಕ್ಕಳನ್ನು ವಿದ್ಯಾಸಂಸ್ಥೆಗಳು ನಾನಾ ರೀತಿಯಲ್ಲಿ ಗೋಳು ಹೊಯ್ದುಕೊಳ್ಳುವುದೂ ಇದೆ. ಶಾಲೆಗಳಲ್ಲಿನ ದುಬಾರಿ ಶುಲ್ಕವನ್ನು ಪ್ರಶ್ನಿಸಿ ಕೆಲವು ಪೋಷಕರು ಕೋರ್ಟ್‌ಗೆ ಹೋದ ಹಿನ್ನೆಲೆಯಲ್ಲಿ, ವಿದ್ಯಾಸಂಸ್ಥೆಗಳ ಸಿಬ್ಬಂದಿ, ಮಕ್ಕಳಿಗೆ ಕಿರುಕುಳ ನೀಡಿದ ಘಟನೆಯ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ. ಈ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ; ‘ಮಕ್ಕಳ ಹಕ್ಕುಗಳ ಆಯೋಗ’ ಕೂಡ ಜಾರಿಕೊಳ್ಳುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಕಡಿಮೆ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳನ್ನು ಹೊಡೆಯಲಾಗುತ್ತಿತ್ತು, ಸಭಾಂಗಣದಲ್ಲಿ ಕೂಡಿ ಹಾಕಲಾಗುತ್ತಿತ್ತು ಎನ್ನುವ ದೂರುಗಳು ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕತೆ ಸಂಪೂರ್ಣ ನಶಿಸಿರುವುದರ ಸೂಚನೆಯಂತಿದೆ. ಆದರೆ, ಈ ವ್ಯವಸ್ಥೆಯ ವಿರುದ್ಧ ಮಕ್ಕಳು ಧ್ವನಿ ಎತ್ತಿರುವುದು ಶಿಕ್ಷಣದಿಂದ ದೊರೆಯಬೇಕಾದ ಅರಿವು ಮತ್ತು ವಿವೇಕವನ್ನು ಧ್ವನಿಸುವಂತಿದೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಮಕ್ಕಳು ಬೆನ್ನಮೇಲಿನ ಹೊರೆ ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ. ಹೀಗೆ ವಿದ್ಯಾರ್ಥಿಗಳೇ ತಮ್ಮ ಸಂಕಟ ತೋಡಿಕೊಳ್ಳುವುದು ಹಾಗೂ ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಬೇಕಾದ ಸ್ಥಿತಿ ವ್ಯವಸ್ಥೆಯ ನಿಷ್ಕ್ರಿಯತೆಗೆ ಕನ್ನಡಿ. ಮಕ್ಕಳ ಮಾತನ್ನು ಆಲಿಸುವ ವಿವೇಕವನ್ನು ದೊಡ್ಡವರು ಹಾಗೂ ವ್ಯವಸ್ಥೆ ಈಗ ತೋರಿಸಬೇಕಿದೆ. ಕಲಿಕೆ ಚಿಣ್ಣರ ಪಾಲಿಗೆ ಸಂತೋಷ ಉಂಟುಮಾಡುವಂತೆ ಇರಬೇಕು, ಅದು ಒತ್ತಡರೂಪದಲ್ಲಿರದೆ ಸೃಜನಶೀಲ ಆಗಿರಬೇಕು. ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳ ರೂಪದಲ್ಲಿ ನೋಡುತ್ತಿರುವ ನಾವು, ಸ್ಪರ್ಧೆಯ ಭರಾಟೆಯಲ್ಲಿ ಎಳೆಯರ ಅಂತಃಕರಣವನ್ನೇ ಬರಡು ಮಾಡುತ್ತಿದ್ದೇವೆ. ಇನ್ನು ಮೇಲಾದರೂ ಅದು ನಿಲ್ಲಬೇಕು. ನಾಳಿನ ಸ್ವಸ್ಥ ಸಮಾಜದ ಹಿನ್ನೆಲೆಯಲ್ಲಿ ಇಂದಿನ ಮಕ್ಕಳ ಬಾಲ್ಯ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಅಂಥ ಬಾಲ್ಯವನ್ನು ಕಹಿಗೊಳಿಸುವುದು ಕ್ರೌರ್ಯ ಹಾಗೂ ಅನೈತಿಕ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.