ಭೂಒತ್ತುವರಿ ವಿಚಾರಣೆ ವಿಶೇಷ ಕೋರ್ಟ್: ಅಧಿಕಾರಿಗಳಿಗೇಕೆ ರಕ್ಷಣೆ? ಇದನ್ನೇ ಹಲ್ಲು ಕಿತ್ತ ಹಾವು ಎಂದು ಹೇಳೋದು. ನೋಡಲಿಕ್ಕೆ ಹಾವು. ಆದರೆ ‘ಭುಸ್‌ ಇಲ್ಲ; ಠುಸ್‌ ಎಲ್ಲ’. ಭೂ ಒತ್ತುವರಿ ಪ್ರಕರಣಗಳ ವಿಚಾರಣೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೆಂಗಳೂರಿನಲ್ಲಿ ಬುಧವಾರ ಅಸ್ತಿತ್ವಕ್ಕೆ ತಂದ ‘ವಿಶೇಷ ನ್ಯಾಯಾಲಯ’ ಒಂದು ರೀತಿಯಲ್ಲಿ ಹಲ್ಲು ಕಿತ್ತ ಹಾವಿದ್ದಂತೆ. ಯಾಕೆಂದರೆ ಭೂ ಕಬಳಿಕೆಗೆ ಸಹಕರಿಸಿದ, ಭೂ ಮಾಫಿಯಾ ಜತೆ ಕೈಜೋಡಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಅದಕ್ಕೇನೂ ಅಧಿಕಾರವೇ ಇಲ್ಲ. ಅದು ಹೆಚ್ಚೆಂದರೆ, ‘ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಿ’ ಎಂದು ಸರ್ಕಾರದ ಇಲಾಖೆಗಳಿಗೆ ಶಿಫಾರಸು ಮಾಡಬಹುದು. ಅಲ್ಲಿಗೆ ಅದರ ಕೆಲಸ ಮುಗಿಯಿತು. ತಮ್ಮ ಸಹೋದ್ಯೋಗಿ ಅಧಿಕಾರಿಗಳನ್ನು ರಕ್ಷಿಸುವ ಕಲೆಯಲ್ಲಿ ಪರಿಣತಿ ಹೊಂದಿರುವವರೇ ಸರ್ಕಾರಿ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಕೊಂಡಿರುವಾಗ, ನ್ಯಾಯಾಲಯದ ‘ಶಿಫಾರಸಿಗೆ’ ಏನು ಗತಿಯಾಗಬಹುದು ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. ತಪ್ಪು ಮಾಡಿದ ಅಧಿಕಾರಿಗಳನ್ನು ಲೋಕಾಯುಕ್ತದಂತಹ ಬಲಿಷ್ಠ ಸಂಸ್ಥೆಗಳೇ ಹೆಸರಿಸಿ ಕ್ರಮಕ್ಕೆ ಸೂಚಿಸಿದರೂ ಜಪ್ಪಯ್ಯ ಎನ್ನದ ಆಡಳಿತಶಾಹಿಯನ್ನು ನಾಡಿನ ಜನ ನೋಡಿಬಿಟ್ಟಿದ್ದಾರೆ. ಹೀಗೆ, ‘ಸೂಚನೆ, ಆದೇಶಕ್ಕೇ’ ಬಗ್ಗದವರು, ಕೇವಲ ‘ಶಿಫಾರಸಿಗೆ’ ಎಷ್ಟು ಕಿಮ್ಮತ್ತು ಕೊಡಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದು. ಒಂದಂತೂ ನಿಜ. ಒತ್ತುವರಿ ಮಾಡಿದವರು ಶಿಕ್ಷೆ ಅನುಭವಿಸಬೇಕಾಗುತ್ತದೆ. ಕನಿಷ್ಠ 1 ವರ್ಷ ಮತ್ತು ಗರಿಷ್ಠ 3 ವರ್ಷ ಜೈಲು ವಾಸದ ಜತೆಗೆ, ₹ 25 ಸಾವಿರ ದಂಡ ತೆರಬೇಕಾಗಬಹುದು. ಆದರೆ ಅವರಿಗೆ ಸಹಕಾರ ಕೊಟ್ಟ ಅಧಿಕಾರಿಗಳು ಮಾತ್ರ ರಾಜಾರೋಷವಾಗಿ ಸಕಲ ಸೌಲಭ್ಯಗಳನ್ನು ಅನುಭವಿಸಿಕೊಂಡು ಅಧಿಕಾರದಲ್ಲಿ ಮುಂದುವರಿಯುತ್ತಾರೆ. ಏಕೆಂದರೆ ಹೊಸ ನ್ಯಾಯಾಲಯದ ರಚನೆ, ವ್ಯಾಪ್ತಿಯೇ ಆ ರೀತಿಯಿದೆ. ‘ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011’ರ ಅಡಿಯಲ್ಲಿ ಸ್ಥಾಪನೆಯಾದ ಈ ವಿಶೇಷ ನ್ಯಾಯಾಲಯಕ್ಕೆ ಸಿವಿಲ್‌ ಮತ್ತು ಸೆಷನ್‌್ಸ ನ್ಯಾಯಾಲಯದ ಅಧಿಕಾರಗಳೇನೋ ಇವೆ. ಆದರೆ, ಅದೇನಿದ್ದರೂ ಭೂ ಕಬಳಿಕೆ ಮಾಡಿದ ನಾಗರಿಕರ ಮೇಲೆ ಚಲಾಯಿಸಲು ಮಾತ್ರ ಮೀಸಲು. ಈ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ, ಕಾನೂನು ಮಂತ್ರಿ ಆಡಿದ ಮಾತುಗಳೆಲ್ಲ ಬರೀ ವೀರಾವೇಶದ್ದು. ‘ಕಂದಾಯ ಇಲಾಖೆಯ ಅಧಿಕಾರಿಗಳು ಕೈಜೋಡಿಸಿದ್ದರಿಂದಲೇ ಭೂ ಕಬಳಿಕೆ ನಡೆದಿದೆ. ಇದರಿಂದ ಭೂ ಮಾಫಿಯಾದವರು ಶ್ರೀಮಂತರಾದರು. ಸರ್ಕಾರವನ್ನು, ನ್ಯಾಯಾಧೀಶರನ್ನು, ಸಚಿವರನ್ನು ಕೊಂಡುಕೊಳ್ಳುವಷ್ಟು ಹಣವಂತರಾದರು. ಅವರು ಈಗ ಧಿಮಾಕಿನಿಂದ ಮೆರೆಯುತ್ತಿದ್ದಾರೆ. ಅವರಿಗೆ ಕಡಿವಾಣ ಹಾಕಲೇಬೇಕಿದೆ. ಸೊಕ್ಕಿನಿಂದ ಅಟ್ಟಹಾಸ ತೋರಿಸುತ್ತಿರುವ ಭೂಗಳ್ಳರಿಗೆ ಬುದ್ಧಿ ಕಲಿಸಬೇಕಿದೆ’ ಎಂದು ಇವರಿಬ್ಬರೂ ಮಾತಿನಲ್ಲಿ ಗುಡುಗಿದರೂ, ಇವರ ಕೃತಿಗಳಲ್ಲಿ ಪ್ರಾಮಾಣಿಕತೆ, ಬದ್ಧತೆಯ ಕೊರತೆ ಎದ್ದು ಕಾಣುತ್ತದೆ. ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎನ್ನುವುದನ್ನು ಮುಖ್ಯಮಂತ್ರಿಯೇ ಒಪ್ಪಿಕೊಳ್ಳುತ್ತಾರೆ. ಆದರೆ ಅಂಥ ಭ್ರಷ್ಟ, ದುಷ್ಟ ಅಧಿಕಾರಿಗಳ ಮೇಲೆ ಕಠೋರ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ನ್ಯಾಯಾಲಯಕ್ಕೆ ಕೊಡದೇ ಇರುವುದರ ಮರ್ಮ ಏನು? ಯಾರ ಒತ್ತಡ ಇದೆ, ಯಾವ ಲಾಬಿಗೆ ಸರ್ಕಾರ ಮಣಿದಿದೆ? ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವಿನ ವಿಷಯದಲ್ಲಿಯೇ ಈ ಸರ್ಕಾರದ ಇಬ್ಬಂದಿ ಧೋರಣೆ, ‘ಬಡವರಿಗೆ ಒಂದು ನ್ಯಾಯ– ಪ್ರಭಾವಿಗಳಿಗೆ ಇನ್ನೊಂದು ನ್ಯಾಯ’ ಎಂಬುದು ಜಗಜ್ಜಾಹೀರಾಗಿದೆ. ಅಮಾಯಕ ಬಡವರು, ಶ್ರೀಸಾಮಾನ್ಯರ ಮನೆಗಳನ್ನು ನಿಷ್ಕರುಣೆಯಿಂದ ಒಡೆದು ಹಾಕುವಾಗಿನ ಉತ್ಸಾಹ, ಆರ್ಭಟಗಳು ಚಿತ್ರನಟ ಮತ್ತು ಪ್ರಭಾವಿಗಳ ಅಪಾರ್ಟ್‌ಮೆಂಟ್‌ ಎದುರು ತಣ್ಣಗಾಗಿವೆ. ‘ಬೆಂಗಳೂರಿನಲ್ಲಿ ಬಡವರ ಮನೆಗಳ ಒತ್ತುವರಿ ತೆರವು ವಿಷಯವೇ ಬೇರೆ; ಚಿತ್ರನಟ ದರ್ಶನ್‌ ಮನೆ, ಎಸ್‌ಎಸ್‌ ಆಸ್ಪತ್ರೆ ಕಟ್ಟಡಗಳ ವಿಷಯವೇ ಬೇರೆ’ ಎಂದು ಸ್ವತಃ ಕಾನೂನು ಸಚಿವರೇ ಹೇಳಿ ಎಲ್ಲರನ್ನೂ ದಂಗುಬಡಿಸಿದ್ದಾರೆ. ಈಗಾಗಲೇ ತೆರವು ಮಾಡಲಾದ ಬಹುತೇಕ ಮನೆಗಳ ನಿರ್ಮಾಣ ಮತ್ತು ನೀರು– ವಿದ್ಯುತ್‌ ಸಂಪರ್ಕಕ್ಕೆ ಪಾಲಿಕೆ, ಬಿಡಿಎ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳೇ ಅನುಮತಿ ಕೊಟ್ಟಿದ್ದರು. ಇವೇನೂ ಅನಧಿಕೃತವಾಗಿ ನಿರ್ಮಾಣಗೊಂಡವು ಅಲ್ಲ. ಆದರೂ ನೆಲಸಮ ಮಾಡಲಾಯಿತು. ಈ ಹಿಂದೆಯೂ ಕೆರೆ ಒತ್ತುವರಿ ನೆಲಸಮ ಕಾರ್ಯಾಚರಣೆ ನಡೆದಾಗ ನೆಲೆ ಕಳೆದುಕೊಂಡವರು ಬಡವರು ಮತ್ತು ಮಧ್ಯಮವರ್ಗದವರು ಮಾತ್ರ. ಅಧಿಕಾರಿಗಳು, ರಾಜಕಾರಣಿಗಳು, ಸಿರಿವಂತರ ಬಡಾವಣೆ ಬಳಿ ಬರುತ್ತಿದ್ದಂತೆ ಇಡೀ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಮನೆ ಕಳೆದುಕೊಂಡ ಬಡವರು ಗೋಳಾಡಿದ್ದೇ ಬಂತು. ಆಗಲೂ ತಪ್ಪಿತಸ್ಥ ಅಧಿಕಾರಿಗಳು ಬಚಾವಾಗಿದ್ದರು. ಅದೇ ಪರಿಪಾಠ ಮುಂದುವರಿಯುವುದಿಲ್ಲ ಎಂಬ ಖಾತರಿಯಂತೂ ಇಲ್ಲ. ಆದ್ದರಿಂದ ಸರ್ಕಾರಕ್ಕೆ ನ್ಯಾಯ–ನೀತಿ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ, ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸುವ ಅಧಿಕಾರವನ್ನು ಈ ಕೂಡಲೆ ವಿಶೇಷ ನ್ಯಾಯಾಲಯಕ್ಕೆ ಕೊಡಬೇಕು. ಅದಕ್ಕಾಗಿ ಅಗತ್ಯಬಿದ್ದರೆ ಸುಗ್ರೀವಾಜ್ಞೆ ಹೊರಡಿಸಬೇಕು. ಇಲ್ಲದೇ ಹೋದರೆ, ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿ ತೀರ್ಪು ಕೊಟ್ಟರೂ ಒತ್ತುವರಿಗೆ ಮುಖ್ಯ ಕಾರಣರಾದ ಅಧಿಕಾರಿಗಳು ಶಿಕ್ಷೆಯ ಭಯ ಇಲ್ಲದೆ ಬಚಾವಾಗುತ್ತಾರೆ. ಇದನ್ನು ಯಾರಾದರೂ ‘ನ್ಯಾಯ’ ಎನ್ನಲು ಸಾಧ್ಯವೇ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.