ಬಂದ್‌, ಮುಷ್ಕರ ಮನೋಭಾವ ಬದಲಾಗಲಿ ಹನ್ನೆರಡು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಶುಕ್ರವಾರದ ಮುಷ್ಕರ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಕೊನೆಗೊಂಡಿರುವುದು ನೆಮ್ಮದಿ ನೀಡುವ ಸಂಗತಿ. ದುಡಿಯುವ ವರ್ಗದ ಮುಷ್ಕರಕ್ಕೆ ದೇಶದಾದ್ಯಂತ ಸಂಪೂರ್ಣ ಬೆಂಬಲವೇನೂ ವ್ಯಕ್ತವಾಗಿಲ್ಲ. ಇದು, ಮುಷ್ಕರ ಕಾರಣದಿಂದ ನಡೆದ ಅಘೋಷಿತ ಬಂದ್‌ನ ಔಚಿತ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ. ಮಹಾದಾಯಿ ನ್ಯಾಯಮಂಡಳಿಯ ಮಧ್ಯಂತರ ಆದೇಶ ವಿರೋಧಿಸಿ ರಾಜ್ಯ ಬಂದ್‌ ನಡೆದ ಒಂದು ತಿಂಗಳ ಅಂತರದಲ್ಲಿ ಈ ಮುಷ್ಕರ ನಡೆದಿದೆ. ದೇಶದ ಆರ್ಥಿಕತೆಯನ್ನು ಸ್ತಬ್ಧಗೊಳಿಸುವ ಇಂತಹ ಮುಷ್ಕರಗಳಿಂದ ಯಾವ ಪುರುಷಾರ್ಥ ಸಾಧಿಸಿದಂತಾಯಿತು? ಕನಿಷ್ಠ ವೇತನ ಹಾಗೂ ಪಿಂಚಣಿ ಹೆಚ್ಚಳಕ್ಕೆ ಒತ್ತಾಯ; ಕಾರ್ಮಿಕ ಕಾಯ್ದೆ ತಿದ್ದುಪಡಿ, ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ವಿರೋಧ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಕಾರ್ಮಿಕ ಸಂಘಟನೆಗಳು ಈ ಮುಷ್ಕರಕ್ಕೆ ಕರೆ ನೀಡಿದ್ದವು. ಉತ್ತಮ ವೇತನ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕೆಂಬುದು ಕಾರ್ಮಿಕರ ಹಕ್ಕೊತ್ತಾಯ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ಕಾರ್ಮಿಕ ಕಾಯ್ದೆಗಳ ಸುಧಾರಣೆ ಹೆಸರಿನಲ್ಲಿ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎನ್ನುವುದೂ ಕಾರ್ಮಿಕ ಸಂಘಟನೆಗಳ ಪ್ರಮುಖ ಆಕ್ಷೇಪ. ಕಾರ್ಮಿಕರ ಬೇಡಿಕೆಗಳಲ್ಲಿ ಕೆಲವು ನ್ಯಾಯೋಚಿತವಾಗಿದ್ದರೂ, ಅವುಗಳ ಈಡೇರಿಕೆಗೆ ಆಗ್ರಹಿಸಿ ನಡೆಸುವ ಸೇವೆ ಸ್ಥಗಿತದಂಥ ಕ್ರಮಗಳು ಉದ್ದೇಶ ಸಾಧಿಸುವಲ್ಲಿ ಎಷ್ಟರಮಟ್ಟಿಗೆ ಪರಿಣಾಮ ಬೀರಬಲ್ಲವು ಎಂಬುದರ ಬಗ್ಗೆ ಕಾರ್ಮಿಕ ಸಂಘಟನೆಗಳು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ. ತಯಾರಿಕಾ ವಲಯ, ಹಣಕಾಸು ಸೇವೆ, ಗಣಿಗಾರಿಕೆ, ಸಾರಿಗೆ, ಸರಕು ಪೂರೈಕೆ ಮತ್ತಿತರ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ದೇಶಿ ಅರ್ಥ ವ್ಯವಸ್ಥೆಗೆ ಒಂದೇ ದಿನದಲ್ಲಿ ₹18 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಂದಾಜಿಸಿದೆ. ಕಾರ್ಮಿಕ ಸಂಘಟನೆಗಳು ಈ ಮುಷ್ಕರದ ಯಶಸ್ಸಿಗೆ ಸಾಕಷ್ಟು ಪೂರ್ವಸಿದ್ಧತೆ ನಡೆಸಿದ್ದವು. ಆದರೂ ಕೇರಳದಂಥ ಒಂದೆರಡು ರಾಜ್ಯಗಳು ಬಿಟ್ಟರೆ ಉಳಿದೆಡೆ ಭಾಗಶಃ ಬೆಂಬಲ ಮಾತ್ರ ವ್ಯಕ್ತವಾಗಿದೆ. ಸಾರ್ವಜನಿಕ ಸೇವೆ ಸ್ಥಗಿತದಿಂದ ಅನನುಕೂಲವೇ ಹೆಚ್ಚು ಎನ್ನುವ ಭಾವನೆ ಜನರಲ್ಲಿ ಬಲಗೊಳ್ಳುತ್ತಿರುವುದೇ ಈ ಸ್ಥಿತಿಗೆ ಕಾರಣ. ಕಾಲಧರ್ಮಕ್ಕೆ ತಕ್ಕಂತೆ ಕಾರ್ಮಿಕ ಸಂಘಟನೆಗಳು ತಮ್ಮ ಮನೋಭಾವ ಬದಲಿಸಿಕೊಳ್ಳುವುದು ವಿಹಿತ. ಸಾಮಾಜಿಕ ಸುರಕ್ಷತೆಗೆ ಒಳಪಟ್ಟ ಕಾರ್ಮಿಕರ ಸಂಖ್ಯೆ ನಮ್ಮಲ್ಲಿ ಕಡಿಮೆ ಇರುವುದು ನಿಜ. ಅಂಥವರು ವೇತನ ಹೆಚ್ಚಳ, ಸಾಮಾಜಿಕ ಭದ್ರತೆಗೆ ಒತ್ತಾಯಿಸುವುದರಲ್ಲಿ ತಪ್ಪಿಲ್ಲ. ಆದರೆ, ಖಾಸಗೀಕರಣ, ವಿದೇಶಿ ಬಂಡವಾಳ ಹೂಡಿಕೆಗೆ ವಿನಾಕಾರಣ ವಿರೋಧ ವ್ಯಕ್ತಪಡಿಸುವುದರಲ್ಲಿ ಅರ್ಥ ಇಲ್ಲ. ಈಗಿನ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅದು ಉಚಿತವೆನಿಸಲಾರದು. ಉದ್ಯೋಗ ಅವಕಾಶ ಹೆಚ್ಚಿಸುವಂಥ ಸುಧಾರಣಾ ಕ್ರಮಗಳಿಂದ ಕಾರ್ಮಿಕರ ಹಿತಾಸಕ್ತಿಗೆ ಯಾವುದೇ ಬಾಧಕ ಇರಲಾರದು. ಅಂತೆಯೇ ಸರ್ಕಾರದ ನೀತಿ–ನಡೆಯನ್ನು ಪರಾಮರ್ಶಿಸುವುದಕ್ಕೆ ಮತ್ತು ಅದಕ್ಕೆ ವಿರೋಧ ವ್ಯಕ್ತಪಡಿಸುವುದಕ್ಕೆ ಪ್ರಜಾಸತ್ತಾತ್ಮಕವಾದ ಮಾರ್ಗಗಳು ಹತ್ತಾರು ಇವೆ. ಬಂದ್‌ ಎಂಬ ಅಸ್ತ್ರವನ್ನು ಬದಿಗೆ ಸರಿಸಿ ಪರ್ಯಾಯ ಮಾರ್ಗಗಳನ್ನು ಬಳಸಿದರೆ ಜನರ ಬೆಂಬಲ ಕೂಡ ದೊರೆಯುತ್ತದೆ. ನಮ್ಮ ಅರ್ಥ ವ್ಯವಸ್ಥೆಗೂ ಧಕ್ಕೆ ಆಗುವುದಿಲ್ಲ. ಸರ್ಕಾರದ ಪ್ರತಿನಿಧಿಗಳು ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಒಂದೆಡೆ ಕುಳಿತು ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ ಮಾರ್ಗ. ಸಂಧಾನಕ್ಕೆ ಒಣಪ್ರತಿಷ್ಠೆ ತೊಡರುಗಾಲಾಗಿ ಪರಿಣಮಿಸಬಾರದು. ಕಾರ್ಮಿಕರ ನ್ಯಾಯೋಚಿತ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಬೇಕು. ಕಾರ್ಮಿಕರು ಸಂಘರ್ಷ ಮನೋಭಾವ ಕೈಬಿಡಬೇಕು. ಸರ್ಕಾರ ಮತ್ತು ಕಾರ್ಮಿಕರು ಪರಸ್ಪರ ಕೈಜೋಡಿಸಿದರೆ ಪ್ರಗತಿಯ ಚಕ್ರ ಸುಸೂತ್ರವಾಗಿ ಉರುಳೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.