ಕಾವೇರಿ: ಮನವರಿಕೆ ಅಗತ್ಯ ಸಂಕಷ್ಟ ಸೂತ್ರ ರೂಪಿಸಿ ಕಾವೇರಿ ನೀರಿನ ವಿಷಯ, ರಾಜ್ಯದಲ್ಲಿ ಮತ್ತೊಮ್ಮೆ ಭಾವೋದ್ವೇಗಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ದಿನಕ್ಕೆ 15 ಸಾವಿರ ಕ್ಯುಸೆಕ್‌ನಂತೆ ಹತ್ತು ದಿನ ನೀರು ಹರಿಸಲು ಸೋಮವಾರ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಇದರ ಬೆನ್ನಲ್ಲಿಯೇ ಕಾವೇರಿ ಕೊಳ್ಳದ ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಚಳವಳಿಕಾರರು ಒತ್ತಾಯಿಸುತ್ತಿದ್ದಾರೆ. ಈ ಸಲ ಕಾವೇರಿ ಕೊಳ್ಳದ ಜಲಾಶಯಗಳೇ ಇನ್ನೂ ತುಂಬಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಬಹುದು ಎಂಬುದು ರೈತರ ಆತಂಕ. ಆದರೆ ದೇಶದ ಅತ್ಯುನ್ನತ ನ್ಯಾಯಾಲಯದ ನಿರ್ದೇಶನವನ್ನು ಏಕಾಏಕಿ ತಿರಸ್ಕರಿಸಲು ಸಾಧ್ಯವಿಲ್ಲ. ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಅದರಿಂದ ರಾಜ್ಯಕ್ಕೆ ಒಳಿತಿಗಿಂತ ಕೆಡುಕೇ ಜಾಸ್ತಿ. ಬಂದ್‌, ರಸ್ತೆ ತಡೆಗಳೂ ಪರಿಹಾರವಲ್ಲ. ಈ ವಿಷಯದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವುದು ಅಗತ್ಯ. ಇಂತಹ ವಿಚಾರದಲ್ಲಿ ರಾಜಕೀಯ ಮಾಡಬಾರದು. ಸಮಚಿತ್ತ ಮತ್ತು ಸಮಾಧಾನದಿಂದ ಮುಂದುವರಿದು ಪರಿಹರಿಸಿಕೊಳ್ಳಬೇಕಾದ ಸಮಸ್ಯೆ ಇದು. ರಾಜ್ಯದ ಪರ ವಾದ ಮಂಡಿಸುವ ವಕೀಲರ ತಂಡ, ಈ ವಿಚಾರದಲ್ಲಿ ರಾಜ್ಯದ ನಿಲುವನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿಸುವುದು ಅಗತ್ಯ. ಇದಕ್ಕಾಗಿ ಅಗತ್ಯ ಮಾಹಿತಿಗಳನ್ನು ಒದಗಿಸಿಕೊಡುವಲ್ಲಿ ಸರ್ಕಾರದ ಹೊಣೆಗಾರಿಕೆಯೂ ಇದೆ. ಅಂತರರಾಜ್ಯ ಜಲವಿವಾದಗಳಲ್ಲಿ ನೀರಿನ ಹಂಚಿಕೆಗೆ ಸಂಬಂಧಪಟ್ಟಂತೆ ಕೋರ್ಟ್‌ಗಳಲ್ಲಿ ಪದೇ ಪದೇ ರಾಜ್ಯಕ್ಕೆ ಹಿನ್ನಡೆ ಏಕಾಗುತ್ತಿದೆ ಎಂಬ ಬಗ್ಗೆ ಆತ್ಮಾವಲೋಕನ ಅಗತ್ಯ. ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಈಗ ಲಭ್ಯವಿರುವ ನೀರು ಬರೀ 51 ಟಿಎಂಸಿ ಅಡಿಗಳು. ಅಂದರೆ ವಾಡಿಕೆಗಿಂತ 80 ಟಿಎಂಸಿಯಷ್ಟು ಕಡಿಮೆ. ಇದರಲ್ಲಿ 40 ಟಿಎಂಸಿ ಅಡಿಗಳಷ್ಟು ನೀರು ಬೇಸಿಗೆ ಮುಗಿಯುವವರೆಗೂ ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬೇಕಾಗುತ್ತದೆ. ಕೋರ್ಟ್ ಆದೇಶಕ್ಕೆ ಅನುಗುಣವಾಗಿ 10 ದಿನಗಳಲ್ಲಿ ತಮಿಳುನಾಡಿಗೆ ಬಿಡಬೇಕಾದ ನೀರು 13 ಟಿಎಂಸಿಯಷ್ಟು ಆಗುತ್ತದೆ. ಹೀಗಾದಲ್ಲಿ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ನೀರು ಕಡಿಮೆಯಾಗುತ್ತದೆ ಎಂಬ ಆತಂಕ ಸಹಜವಾದದ್ದು. ಮಳೆ ಕಡಿಮೆಯಾಗಿ ಸಂಕಷ್ಟ ಎದುರಾದರೆ ಕಾವೇರಿ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳು ಕೊರತೆಗೆ ಅನುಗುಣವಾಗಿ ನೀರು ಹಂಚಿಕೊಳ್ಳಬೇಕು ಎಂದು 2007ರ ಫೆ. 6ರಂದು ಅಂತಿಮ ತೀರ್ಪಿನಲ್ಲಿ ನ್ಯಾಯಮಂಡಳಿ ಸೂಚಿಸಿತ್ತು. ಆದರೆ ಆ ಸೂತ್ರ ಹೇಗಿರಬೇಕು ಎಂದು ಸ್ಪಷ್ಟವಾಗಿ ವಿವರಿಸಿರಲಿಲ್ಲ. ಸಮಸ್ಯೆ ಇರುವುದೇ ಇಲ್ಲಿ. ಇದುವರೆಗೂ ಸಂಕಷ್ಟ ಸೂತ್ರವನ್ನೇ ರೂಪಿಸಿಲ್ಲ. ಯಾರು ರೂಪಿಸಬೇಕು, ಉಸ್ತುವಾರಿ ಯಾರು ನೋಡಿಕೊಳ್ಳಬೇಕು, ನೀರಿನ ಕೊರತೆಯನ್ನು ಹೇಗೆ ಲೆಕ್ಕ ಹಾಕಬೇಕು ಎಂಬ ಬಗ್ಗೆ ನ್ಯಾಯಮಂಡಳಿ ಉಲ್ಲೇಖಿಸಿಲ್ಲ. ಹೀಗಾಗಿ, ಕರ್ನಾಟಕ– ತಮಿಳುನಾಡು ಮಧ್ಯೆ ಆಗಾಗ ಸಂಘರ್ಷಕ್ಕೆ ಇದು ಕಾರಣವಾಗುತ್ತಿದೆ. ಕಷ್ಟದ ಸಂದರ್ಭದಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಹಂಚಿಕೆ ಪ್ರಮಾಣವನ್ನು ನಿಗದಿ ಮಾಡಬೇಕಾದುದು ಅವಶ್ಯ. ‘ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿನ 40 ಸಾವಿರ ಎಕರೆ ಸಾಂಬಾ ಬೆಳೆ ಮಳೆಯಿಲ್ಲದೆ ತೀವ್ರ ತೊಂದರೆಯಲ್ಲಿದೆ. ಆದ್ದರಿಂದ 50 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಬೇಕು’ ಎಂದು ತಮಿಳುನಾಡು ಸರ್ಕಾರ ಕಳೆದ ತಿಂಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅಲ್ಲದೆ, ‘ಪ್ರತಿ ತಿಂಗಳು ಬಿಡಬೇಕಾದ ನೀರಿನ ವೇಳಾಪಟ್ಟಿಯನ್ನು ಕರ್ನಾಟಕ ಪಾಲಿಸಿಲ್ಲ. 25 ಟಿಎಂಸಿ ಅಡಿ ಬಾಕಿ ಉಳಿಸಿಕೊಂಡಿದೆ’ ಎಂದೂ ದೂರಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಮತ್ತು ಉದಯ್‌ ಯು ಲಲಿತ್‌ ಅವರ ಪೀಠ, ‘ನೀವು ಬದುಕಿ; ಬೇರೆಯವರಿಗೂ ಬದಕಲು ಬಿಡಿ’ ಎಂದು ಕರ್ನಾಟಕಕ್ಕೆ ಹಿತವಚನ ಹೇಳಿದೆ. ಕಾವೇರಿ, ಕೃಷ್ಣಾ, ಮಹಾದಾಯಿ– ಹೀಗೆ ಯಾವುದೇ ನದಿ ನೀರಿನ ಹಂಚಿಕೆ ಇದ್ದರೂ ಕರ್ನಾಟಕಕ್ಕೆ ಹಿನ್ನಡೆ ಆಗುತ್ತಲೇ ಇದೆ. ಇದಕ್ಕೆ ಕಾರಣಗಳನ್ನು ಹುಡುಕಬೇಕು. ನಾವೆಲ್ಲಿ ಎಡವುತ್ತಿದ್ದೇವೆ, ಏಕೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂಕಷ್ಟ ಸೂತ್ರ ರೂಪಿಸುವಂತೆ ಒತ್ತಡ ತರಬೇಕು. ಶಾಶ್ವತ ಪರಿಹಾರ ಹುಡುಕಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.