ಅಪರಾಧಗಳ ಹೆಚ್ಚಳ ಕೂಲಂಕಷ ಪರಿಶೀಲನೆಯಾಗಲಿ 2015ರಲ್ಲಿ ರಾಷ್ಟ್ರದಲ್ಲಿ ದಾಖಲಾದ ಅಪರಾಧಗಳ ಅಂಕಿಅಂಶಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ವರದಿ ಆತಂಕಕಾರಿ ಚಿತ್ರಣವನ್ನು ನೀಡುತ್ತದೆ. 2015ರಲ್ಲಿ 73 ಲಕ್ಷ ಕ್ರಿಮಿನಲ್ ಅಪರಾಧ ಪ್ರಕರಣಗಳು ದಾಖಲಾಗಿವೆ. 2014ರಲ್ಲಿ ದಾಖಲಾದ ಪ್ರಕರಣಗಳಿಗೆ ಹೋಲಿಸಿದರೆ ಇದು ಶೇ 3.4ರಷ್ಟು ಏರಿಕೆಯನ್ನು ಸೂಚಿಸುತ್ತದೆ. ಮಾನವ ಅಕ್ರಮ ಸಾಗಣೆ, ಬೆಳೆಯುತ್ತಿರುವ ದೊಡ್ಡ ಸಮಸ್ಯೆಯಾಗಿದೆ ಎಂಬುದೂ ಈ ವರದಿಯಿಂದ ವ್ಯಕ್ತ. ಕೆಲವು ನಿರ್ದಿಷ್ಟ ಅಪರಾಧಗಳ ಪ್ರಮಾಣಗಳಲ್ಲಿ ಕಂಡು ಬಂದಿರುವ ಏರಿಕೆ ಗಮನ ಸೆಳೆಯುವಂತಹದ್ದು. 2015ರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2683 ಗಲಭೆ ಪ್ರಕರಣಗಳು ವರದಿಯಾಗಿವೆ. 2014ರಲ್ಲಿ ಇಂತಹ 628 ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಹೀಗಾಗಿ ಇದು ಶೇ 327ರಷ್ಟು ಏರಿಕೆಯನ್ನು ಸೂಚಿಸುತ್ತದೆ. ಈ ಮಟ್ಟಿಗಿನ ಏರಿಕೆಗೆ ಏನು ಕಾರಣ ಎಂಬುದರ ಬಗ್ಗೆ ಕೂಲಂಕಷ ಪರಿಶೀಲನೆಗಳಾಗಬೇಕಾದುದು ಅಗತ್ಯ. ರಾಷ್ಟ್ರದಲ್ಲಿನ ಕೃಷಿ ಬಿಕ್ಕಟ್ಟಿಗೆ ಇದು ಸೂಚಕ. ಹಿಂಸಾತ್ಮಕವಾಗಿ ಇದು ವ್ಯಕ್ತಗೊಳ್ಳುತ್ತಿರುವುದಕ್ಕೆ ಈ ಅಂಕಿ ಅಂಶ ದ್ಯೋತಕ. ಹೀಗಾಗಿ ಇದು ಕೇವಲ ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕೃಷಿ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿ ಕೃಷಿಗೆ ಸಂಬಂಧಿಸಿದ ನೀತಿಗಳ ಪರಾಮರ್ಶೆ ಮಾಡುವುದು ಅಗತ್ಯ. 2014ರಲ್ಲಿ ವರದಿಯಾದ ಒಟ್ಟು ಗಲಭೆಗಳ ಪ್ರಮಾಣ 66,042. ಆದರೆ 2015ರಲ್ಲಿ ವರದಿಯಾದ ಪ್ರಕರಣಗಳು 65,255. ಅಂದರೆ, ಗಲಭೆಗಳ ಪ್ರಮಾಣ ಅಷ್ಟೇನೂ ಏರಿಕೆಯಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಆದರೆ ವಿದ್ಯಾರ್ಥಿ ಗಲಭೆಗಳ ಪ್ರಮಾಣ 261ರಿಂದ 485ಕ್ಕೆ ಏರಿಕೆಯಾಗಿದೆ ಎಂಬುದನ್ನೂ ಗಮನಿಸಬೇಕು. ವಿದ್ಯಾರ್ಥಿ ಗಲಭೆಗಳಿಗೆ ಸಂಬಂಧಿಸಿದಂತೆ ಬಂಧಿತರಾದವರ ಸಂಖ್ಯೆ 3600. 2014ರಲ್ಲಿ ದಾಖಲಾದ ಸಂಖ್ಯೆಗೆ ಹೋಲಿಸಿದರೆ ಇದು ಬಹುತೇಕ ದ್ವಿಗುಣಗೊಂಡಿದೆ. ವಿಶೇಷ ಎಂದರೆ ಕೋಮು ಗಲಭೆಗಳ ಪ್ರಮಾಣ 2014ರ ವರ್ಷಕ್ಕೆ ಹೋಲಿಸಿದರೆ ಇಳಿಮುಖವಾಗಿದೆ. 2014ರಲ್ಲಿ 1227 ಕೋಮುಗಲಭೆ ಪ್ರಕರಣಗಳು ವರದಿಯಾಗಿದ್ದವು. 2015ರಲ್ಲಿ ಇದು 789ಕ್ಕೆ ಇಳಿಕೆಯಾಗಿದೆ ಎನ್ನುತ್ತದೆ ಎನ್‌ಸಿಆರ್‌ಬಿ ವರದಿ. ಆದರೆ ಈ ಅಂಕಿಅಂಶವನ್ನು ಎಚ್ಚರದಿಂದ ಪರಿಶೀಲಿಸುವುದು ಅವಶ್ಯ. ಏಕೆಂದರೆ 2015ರಲ್ಲಿ ಕೋಮು ಹಿಂಸಾಚಾರ ಪ್ರಕರಣಗಳು ಅದರ ಹಿಂದಿನ ವರ್ಷಕ್ಕಿಂತ ರಾಷ್ಟ್ರದಲ್ಲಿ ಶೇ 17ರಷ್ಟು ಏರಿಕೆ ಕಂಡಿವೆ ಎಂದು ಇತ್ತೀಚೆಗಷ್ಟೇ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ತಿಳಿಸಿದ್ದರು. ಈ ವ್ಯತ್ಯಾಸಕ್ಕೆ ಕಾರಣಗಳೇನು ಎಂಬುದು ಪತ್ತೆಯಾಗಬೇಕು. ರಾಜ್ಯಗಳಿಂದ ತರಿಸಿಕೊಳ್ಳುವ ಕೋಮು ಹಿಂಸಾಚಾರಗಳ ಅಂಕಿಅಂಶ ಮಾಹಿತಿ ಆಧರಿಸಿ ಕೇಂದ್ರ ಗೃಹ ಸಚಿವಾಲಯ ವರದಿಯನ್ನು ಸಿದ್ಧಪಡಿಸುತ್ತದೆ. ಇಂಟೆಲಿಜೆನ್ಸ್ ಬ್ಯೂರೊ (ಐಬಿ) ನೀಡುವ ವರದಿಗಳನ್ನೂ ಇದು ಆಧರಿಸಿರುತ್ತದೆ. ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಲ್ಲಿಸಲಾದ ಎಫ್ಐಆರ್ ವರದಿಗಳು ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳ ಅನ್ವಯ ವಿವಿಧ ಅಪರಾಧಗಳ ವರ್ಗಗಳಡಿ ಮಾಹಿತಿಗಳನ್ನು ಎನ್‌ಸಿಆರ್‌ಬಿ ಸಂಗ್ರಹಿಸುತ್ತದೆ. ಕೋಮು ಹಿಂಸಾಚಾರ ಪ್ರಕರಣಗಳ ಅಂಕಿ ಅಂಶಗಳನ್ನು ಪ್ರತ್ಯೇಕವಾಗಿ 2014ರಲ್ಲಿ ಮೊದಲ ಬಾರಿಗೆ ಎನ್‌ಸಿಆರ್‌ಬಿ ನೀಡಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಈ ವರ್ಷ ಎನ್‌ಸಿಆರ್‌ಬಿ ವರದಿ ಪ್ರಕಟವಾಗಲು ಎರಡೂವರೆ ತಿಂಗಳು ತಡವಾಗಿದೆ. ಪ್ರತಿ ವರ್ಷ ಜೂನ್ ತಿಂಗಳಲ್ಲಿ ಈ ವರದಿ ಪ್ರಕಟವಾಗುತ್ತದೆ. ಮುಗಿದ ವರ್ಷದಲ್ಲಿ ದಾಖಲಾದ ಅಪರಾಧಗಳ ಅಂಕಿಅಂಶಗಳನ್ನು ಸಮಗ್ರವಾಗಿ ಅರಿತುಕೊಳ್ಳಲು ಆರು ತಿಂಗಳು ಕಾಯಬೇಕು ಎಂಬುದೇ ತ್ವರಿತಗತಿಯ ಈ ಮಾಹಿತಿ ಯುಗದಲ್ಲಿ ವಿಪರ್ಯಾಸ ಎನ್ನಬಹುದು. ಇಂತಹ ಸ್ಥಿತಿಯಲ್ಲಿ ಮತ್ತೆ ಎರಡೂವರೆ ತಿಂಗಳು ಈ ವರ್ಷ ತಡವಾಗಿದೆ. ಅಪರಾಧಗಳ ಕುರಿತಾದ ಅಂಕಿಅಂಶಗಳನ್ನು ತಡವಾಗಿ ಎಂದರೆ ಜೂನ್ ತಿಂಗಳಲ್ಲಿ ಪಶ್ಚಿಮ ಬಂಗಾಳ ಹಾಗೂ ದೆಹಲಿ ಕಳಿಸಿದ್ದು ಎನ್‌ಸಿಆರ್‌ಬಿ ವರದಿ ಪ್ರಕಟಣೆ ವಿಳಂಬಕ್ಕೆ ಕಾರಣವಾಯಿತು ಎಂದು ವರದಿಗಳು ಹೇಳಿವೆ. ತ್ವರಿತಗತಿಯಲ್ಲಿ ಯಾವುದೇ ದೋಷ ನುಸುಳದಂತೆ ಅಂಕಿಅಂಶ ಸಂಗ್ರಹಿಸುವ ವೈಜ್ಞಾನಿಕ ವಿಧಾನವನ್ನು ಉನ್ನತೀಕರಿಸುವುದು ಅಗತ್ಯ. ಅನೇಕ ಸಂದರ್ಭಗಳಲ್ಲಿ ಅಂಕಿಅಂಶ ಸಂಗ್ರಹದ ಬಗ್ಗೆಯೇ ಸರಿಯಾದ ಜಾಗೃತಿ ಇರುವುದಿಲ್ಲ. ಅಪರಾಧಗಳ ವರ್ಗೀಕರಣದ ಬಗ್ಗೆ ಸೂಕ್ತ ಅರಿವು ಇರುವುದಿಲ್ಲ. ಅಪರಾಧವನ್ನು ಯಾವ ವರ್ಗಕ್ಕೆ ಸೇರಿಸಬೇಕೆಂಬ ವಿಚಾರದಲ್ಲಿ ವ್ಯತ್ಯಾಸವೂ ಉಂಟಾಗಬಹುದಾದ ಸಾಧ್ಯತೆಗಳಿರುತ್ತವೆ. ಇದು ತಪ್ಪಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.