ಕಾಶ್ಮೀರ ಬಿಕ್ಕಟ್ಟು: ಮಾತುಕತೆಗೆ ಪ್ರಯತ್ನ ಮುಂದುವರಿಯಬೇಕು ಕಾಶ್ಮೀರ ಹಿಂಸಾಚಾರ ಕೊನೆಗೊಳಿಸಿ ರಾಜಕೀಯ ಪರಿಹಾರ ಹುಡುಕುವ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ. ಅಲ್ಲಿಗೆ ಹೋಗಿದ್ದ ಸರ್ವಪಕ್ಷಗಳ ನಿಯೋಗದ ಜತೆ ಮಾತುಕತೆಗೆ ಪ್ರತ್ಯೇಕತಾವಾದಿ ಮುಖಂಡರು ಒಪ್ಪಲೇ ಇಲ್ಲ. ಈ ಮೂಲಕ, ಮನೆ ಬಾಗಿಲಿಗೇ ಬಂದಿದ್ದ ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ 20 ರಾಜಕೀಯ ಪಕ್ಷಗಳ 26 ಸಂಸದರ ನಿಯೋಗ ಎರಡು ದಿನಗಳ ಭೇಟಿ ಅವಧಿಯಲ್ಲಿ ಎಲ್ಲ ಪಕ್ಷಗಳು ಮತ್ತು ಸಂಘಟನೆಗಳ ಜತೆ ಮಾತುಕತೆಗೆ ಉತ್ಸುಕವಾಗಿಯೇ ಇತ್ತು. ‘ರಾಷ್ಟ್ರೀಯ ಮಟ್ಟದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಬರುತ್ತಿದ್ದಾರೆ. ಅವರೊಡನೆ ಮಾತನಾಡಿ, ಅಭಿಪ್ರಾಯ ಹಂಚಿಕೊಳ್ಳಿ, ಶಾಂತಿ ಸ್ಥಾಪನೆಗೆ ಸಹಕರಿಸಿ’ ಎಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪ್ರತ್ಯೇಕತಾವಾದಿಗಳಿಗೆ ಮಾಡಿದ ಮನವಿಯೂ ವ್ಯರ್ಥವಾಯಿತು. ಸರ್ವಪಕ್ಷ ನಿಯೋಗದಲ್ಲಿದ್ದರೂ ಸಹಾನುಭೂತಿ ದೃಷ್ಟಿಯಿಂದ ಪ್ರತ್ಯೇಕವಾಗಿ ಹುರಿಯತ್‌ ಮತ್ತು ಜೆಕೆಎಲ್‌ಎಫ್‌ ಮುಖಂಡರನ್ನು ಭೇಟಿಯಾಗಲು ಹೋದ ಸಿಪಿಎಂ, ಸಿಪಿಐ, ಜೆಡಿಯು ಮತ್ತು ಆರ್‌ಜೆಡಿಯ ನಾಲ್ವರು ಸಂಸದರನ್ನು ಭೇಟಿಯಾಗದೆ ಪ್ರತ್ಯೇಕತಾವಾದಿಗಳು ಅವಮಾನ ಮಾಡಿದರು. ಇದನ್ನು ನೋಡಿದರೆ ಹುರಿಯತ್‌ ಕಾನ್ಫರೆನ್ಸ್‌, ಜಮ್ಮು ಕಾಶ್ಮೀರ ವಿಮೋಚನಾ ರಂಗ ಸೇರಿದಂತೆ 30ಕ್ಕೂ ಹೆಚ್ಚು ದೊಡ್ಡ– ಸಣ್ಣ ಪ್ರತ್ಯೇಕತಾವಾದಿ ಸಂಘಟನೆಗಳ ಮುಖಂಡರಿಗೆ ಶಾಂತಿ ಬೇಕಾಗಿಲ್ಲ ಎನಿಸುತ್ತದೆ. ಪಾಕಿಸ್ತಾನದ ಕುಮ್ಮಕ್ಕಿನಿಂದ ಸದಾ ಕಾಲವೂ ಪ್ರತ್ಯೇಕತೆಯ ಜಪ ಮಾಡುತ್ತ ಅವರು ಅಶಾಂತಿ ಸೃಷ್ಟಿಸುತ್ತಿದ್ದಾರೆ; ಜನಸಾಮಾನ್ಯರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಆದರೆ ತಾವು ಮಾತ್ರ ಸರ್ಕಾರಿ ಖರ್ಚಿನಲ್ಲಿ ಸಕಲ ಸೌಲಭ್ಯಗಳನ್ನೂ ಅನುಭವಿಸುತ್ತ ಬೆಚ್ಚಗಿದ್ದಾರೆ. ಭಾರತ ವಿರೋಧಿ ನಿಲುವನ್ನು ಪ್ರತಿಪಾದಿಸುತ್ತ ಉಗ್ರರನ್ನು ಬೆಂಬಲಿಸುತ್ತಿರುವ 1,474 ಪ್ರತ್ಯೇಕತಾವಾದಿ ಮುಖಂಡರ ಭದ್ರತೆ, ಆರೋಗ್ಯ, ಓಡಾಟ ಮತ್ತಿತರ ಸೌಕರ್ಯಗಳಿಗಾಗಿ ಸಾರ್ವಜನಿಕ ಬೊಕ್ಕಸದಿಂದ ಆಗುತ್ತಿರುವ ಖರ್ಚು ವರ್ಷಕ್ಕೆ ಸುಮಾರು ₹ 310 ಕೋಟಿ. ಸರ್ವಪಕ್ಷ ನಿಯೋಗವನ್ನು ಭೇಟಿಯಾಗಬೇಕು ಎಂಬ ಸಲಹೆಯನ್ನು ತಿರಸ್ಕರಿಸಿದ ಕಾರಣ ಇವರ ಈ ಸೌಕರ್ಯಗಳನ್ನು ವಾಪಸ್‌ ಪಡೆಯಬೇಕು ಎಂಬ ಒತ್ತಾಯ ಈಗ ಬಲಗೊಳ್ಳುತ್ತಿದೆ. ಇದು ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿದ್ದು ಇದೇ 14ರಂದು ವಿಚಾರಣೆ ನಡೆಯಲಿದೆ. ಕಾಶ್ಮೀರ ಕಣಿವೆಯಲ್ಲಿನ ನಿರಂತರ ಹಿಂಸಾಚಾರ ಸಾಮಾನ್ಯ ಜನರ ಬದುಕನ್ನೇ ದುರ್ಬರಗೊಳಿಸಿದೆ. ಹಿಜಬುಲ್‌ ಉಗ್ರ ಬುರ್ಹಾನ್‌ ವಾನಿಯನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ ನಂತರ ಜುಲೈ 8ರಿಂದ ಅಲ್ಲಿ ಸಂಘರ್ಷ ನಡೆಯುತ್ತಲೇ ಇದೆ. ನಾಗರಿಕರು, ಭದ್ರತಾ ಸಿಬ್ಬಂದಿಯನ್ನು ಒಳಗೊಂಡು 70ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ಎಷ್ಟೋ ಪಟ್ಟಣಗಳಲ್ಲಿ ಸತತ ಕರ್ಫ್ಯೂ ಜಾರಿಯಲ್ಲಿದೆ. ಹಿಂಸೆ ಹೀಗೆ ಮುಂದುವರಿಯುವುದು ಯಾರ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ. ಅದರಿಂದ ಕ್ಷಣಿಕ ಲಾಭ ಸಿಗಬಹುದು; ಆದರೆ ದೀರ್ಘಾವಧಿಯಲ್ಲಿ ಹಾನಿಯೇ ಹೆಚ್ಚು ಎಂಬುದನ್ನು ವಿಶೇಷವಾಗಿ ಅಲ್ಲಿನ ಯುವಜನರು ಅರ್ಥ ಮಾಡಿಕೊಳ್ಳಬೇಕು. ಧರ್ಮದ ಆಧಾರದ ಮೇಲೆ ಪಾಕಿಸ್ತಾನವನ್ನು ಸೇರಲು ಪ್ರತ್ಯೇಕತಾವಾದಿ ಸಂಘಟನೆಗಳು ಆತುರ ತೋರಿಸುತ್ತಿವೆ. ಆದರೆ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಬಲೂಚಿಸ್ತಾನದ ಜನ ಪಾಕ್‌ ಆಡಳಿತದ ಬಗ್ಗೆ ರೋಸಿ ಹೋಗಿದ್ದಾರೆ ಎನ್ನುವುದನ್ನು ಅವು ಉದ್ದೇಶಪೂರ್ವಕವಾಗಿ ಜನರಿಂದ ಮರೆ ಮಾಚುತ್ತಿವೆ. ಇದರಲ್ಲಿ ಪ್ರತ್ಯೇಕತಾವಾದಿ ಮುಖಂಡರ ಸ್ವಾರ್ಥ ಕೂಡ ಇದೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬುದು ಐತಿಹಾಸಿಕ ಸತ್ಯ. ಕಾಶ್ಮೀರದಿಂದ ಬರಿಗೈಯಲ್ಲಿ ಮರಳಿದ ಸರ್ವಪಕ್ಷ ನಿಯೋಗ ಕೂಡ ದೆಹಲಿಯಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ಈ ಅಂಶವನ್ನು ಪುನರುಚ್ಚರಿಸಿದೆ. ದೇಶದ ಸಾರ್ವಭೌಮತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಯಾವುದೇ ಚರ್ಚೆಗೂ ಸಿದ್ಧ ಎಂದು ಕಾಶ್ಮೀರಿ ಮುಖಂಡರಿಗೆ ಸ್ಪಷ್ಟವಾಗಿ ಹೇಳಿ, ಇಡೀ ದೇಶದ ಅಭಿಮತವನ್ನು ಪ್ರತಿಬಿಂಬಿಸಿದೆ. ‘ರಾಜ್ಯದ ಶೇ 95ರಷ್ಟು ಜನ ಶಾಂತಿಪ್ರಿಯರು. ಆದರೆ ಶೇ 5ರಷ್ಟು ಜನ ಮಾತ್ರ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ’ ಎಂಬ ಮುಖ್ಯಮಂತ್ರಿ ಮೆಹಬೂಬಾ ಅವರ ಮಾತು ಅಲ್ಲಿನ ವಾಸ್ತವ ಸ್ಥಿತಿಗೆ ಕನ್ನಡಿ. ಬಿಕ್ಕಟ್ಟಿನ ಸ್ಥಿತಿಯಿಂದಾಗಿ ಜನಸಾಮಾನ್ಯರು ಪರಕೀಯ ಭಾವನೆಯನ್ನು ಅನುಭವಿಸುತ್ತಿರುವುದೂ ನಿಜ. ಕೇಂದ್ರ ಸರ್ಕಾರ ಮಾತುಕತೆ ಪ್ರಯತ್ನ ಮುಂದುವರಿಸಬೇಕು; ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹಿಂಸಾಚಾರದಿಂದ ಏನೂ ಸಾಧ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿಸಬೇಕು. ಆಗ ಮಾತ್ರ ಶಾಶ್ವತ ಪರಿಹಾರ ನಿರೀಕ್ಷಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.