ಪೊಲೀಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಸಹಕಾರಿ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾದ 24 ಗಂಟೆಗಳ ಒಳಗೆ ಅದನ್ನು ರಾಜ್ಯ ಪೊಲೀಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಸ್ವಾಗತಾರ್ಹ. ಪೊಲೀಸ್ ವೆಬ್‌ಸೈಟ್ ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದೂ ಕೋರ್ಟ್ ಸೂಚಿಸಿದೆ. ಮುಂದಿನ ನವೆಂಬರ್ 15ರೊಳಗೆ ರಾಷ್ಟ್ರದ ಎಲ್ಲಾ ಪೊಲೀಸ್ ಠಾಣೆಗಳೂ ಈ ಕ್ರಮ ಅನುಸರಿಸಲು ಸನ್ನದ್ಧವಾಗಬೇಕಾಗಿದೆ. ಲೈಂಗಿಕ ಅಪರಾಧ, ಬಂಡುಕೋರ ಚಟುವಟಿಕೆ ಹಾಗೂ ಭಯೋತ್ಪಾದನೆಯಂತಹ ಸೂಕ್ಷ್ಮ ಪ್ರಕರಣಗಳ ಎಫ್‌ಐಆರ್‌ಗಳಿಗೆ ಈ ನಿರ್ದೇಶನದಿಂದ ವಿನಾಯಿತಿ ನೀಡಲಾಗಿದ್ದು, ಖಾಸಗಿತನ ರಕ್ಷಣೆ ಹಾಗೂ ರಾಷ್ಟ್ರೀಯ ಹಿತದೃಷ್ಟಿ ಇದಕ್ಕೆ ಕಾರಣ. ಹಾಗೆಯೇ ಅಂತರ್ಜಾಲ ಸಂಪರ್ಕದ ಸಮಸ್ಯೆ ಇರುವ ಗುಡ್ಡಗಾಡು ಪ್ರದೇಶಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಎಫ್‌ಐಆರ್‌ ಅನ್ನು ಅಂತರ್ಜಾಲದಲ್ಲಿ ಪ್ರಕಟಿಸಲು 72 ಗಂಟೆಗಳ ಸಮಯ ನೀಡಲಾಗಿದೆ. ‘ಅಪರಾಧ ಕಾನೂನು ಅನ್ವಯಗೊಂಡು ವ್ಯಕ್ತಿಯ ಸ್ವಾತಂತ್ರ್ಯಎಂಬುದು ಪ್ರಶ್ನೆಗೆ ಸಿಲುಕಿದಾಗ ಆರೋಪಿಗೆ ಎಲ್ಲಾ ಮಾಹಿತಿ ಸಿಗಬೇಕಾದುದು ಧರ್ಮ’ ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಸಿ. ನಾಗಪ್ಪನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಹೇಳಿರುವುದು ಸರಿಯಾದುದು. ಒಂದು ವೇಳೆ ಎಫ್‌ಐಆರ್ ಪ್ರಕಟಿಸದೆ ತಡೆಹಿಡಿಯಬೇಕೆಂದಾದಲ್ಲಿ ಆ ಬಗ್ಗೆ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿ ನಿರ್ಧಾರ ಕೈಗೊಂಡು ಕಾರಣಗಳನ್ನು ದಾಖಲಿಸಬೇಕು ಎಂದೂ ಸೂಚಿಸಲಾಗಿದೆ. ಅಪರಾಧ ತನಿಖೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇದು ದೊಡ್ಡ ಹೆಜ್ಜೆ. ತನ್ನ ಮೇಲೆ ಏನು ಆರೋಪ ಹೊರಿಸಲಾಗಿದೆ ಎಂಬುದನ್ನು ತಿಳಿಯುವ ಹಕ್ಕು ಆರೋಪಿಗೆ ಇದೆ. ಎಫ್‌ಐಆರ್ ದಾಖಲಾದ ತಕ್ಷಣವೇ ವ್ಯಕ್ತಿ ತಪ್ಪಿತಸ್ಥನಾಗುವುದಿಲ್ಲ. ಪ್ರತಿವಾದ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲು ಇದರಿಂದ ಅನುಕೂಲವಾಗುತ್ತದೆ. ಸಿಆರ್‌ಪಿಸಿ ಸೆಕ್ಷನ್‌ 207ರ ಅಡಿ ಆರೋಪಿಯ ಹಕ್ಕುಗಳನ್ನು ರಕ್ಷಿಸಲು ಇದು ಸಹಕಾರಿ. ಎಫ್ಐಆರ್‌ ಹಂತದಲ್ಲಿ ಭ್ರಷ್ಟಾಚಾರಗಳಿಗೆ ಎಡೆ ಮಾಡಿಕೊಡುವ ಅವಕಾಶಗಳಿರುತ್ತವೆ ಎಂಬುದು ಗೊತ್ತಿರುವ ಸಂಗತಿ. ಆನ್‌ಲೈನ್‌ನಲ್ಲಿ ಎಫ್‌ಐಆರ್‌ಗಳನ್ನು ಪ್ರಕಟಿಸುವ ಪದ್ಧತಿ ಜಾರಿಗೆ ತರುವುದರಿಂದ ಇಂತಹ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವುದು ಸಾಧ್ಯ. ಆ ಮೂಲಕ ಪೊಲೀಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಸಾಧ್ಯವಾಗುತ್ತದೆ. ದೆಹಲಿ ಹೈಕೋರ್ಟ್ ಸೇರಿದಂತೆ ಕೆಲವು ರಾಜ್ಯಗಳ ಹೈಕೋರ್ಟ್‌ಗಳು ಈಗಾಗಲೇ ಇಂತಹ ನಿರ್ದೇಶನಗಳನ್ನು ಪೊಲೀಸರಿಗೆ ನೀಡಿವೆ ಎಂಬುದನ್ನೂ ಗಮನಿಸಬೇಕು. ಎಫ್‌ಐಆರ್ ದಾಖಲಾತಿ ನಂತರ ಆರೋಪಪಟ್ಟಿ ಸಲ್ಲಿಕೆಗೆ ಪೊಲೀಸರು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂಬುದೂ ಇಂತಹ ವ್ಯವಸ್ಥೆಯಿಂದ ಸಾರ್ವಜನಿಕ ಪರಿಶೀಲನೆಗೆ ಒಳಪಡುತ್ತದೆ. ಹೀಗಾಗಿ ಪೊಲೀಸ್ ವ್ಯವಸ್ಥೆಯನ್ನು ಉತ್ತರದಾಯಿಯಾಗಿಸುವತ್ತ ಇದು ಸಹಕಾರಿ. ಆದರೆ ಸವಾಲು ಇರುವುದು ಅನುಷ್ಠಾನದಲ್ಲಿ. ರಾಷ್ಟ್ರದ ಬಹಳಷ್ಟು ಪೊಲೀಸ್ ಠಾಣೆಗಳಲ್ಲಿ ಮೂಲ ಸೌಕರ್ಯಗಳೇ ಇಲ್ಲ ಎಂಬುದು ಕಟು ವಾಸ್ತವ. ಪೊಲೀಸ್ ಸಿಬ್ಬಂದಿ ಕೊರತೆ, ಕೆಲಸದ ಅವಧಿಯ ಹೆಚ್ಚಳ ಇತ್ಯಾದಿ ಸಮಸ್ಯೆಗಳು ಇಲಾಖೆಯನ್ನು ಕಾಡುತ್ತಿವೆ. ಇನ್ನು ಅಂತರ್ಜಾಲ ಸಂಪರ್ಕ ಲಭ್ಯತೆಯೂ ಮುಖ್ಯವಾದುದು. ಜೊತೆಗೆ ಅದನ್ನು ನಿರ್ವಹಿಸುವಲ್ಲಿ ಪೊಲೀಸರಿಗೆ ತರಬೇತಿ ಇದೆಯೇ ಎಂಬುದೂ ಪ್ರಶ್ನೆ. ಹಾಗೆಂದು ಓಬೀರಾಯನ ಕಾಲದ ವ್ಯವಸ್ಥೆಯೇ ಮುಂದುವರಿದಲ್ಲಿ ಪೊಲೀಸ್ ವ್ಯವಸ್ಥೆ ಸುಧಾರಣೆ ಅಸಾಧ್ಯ. ಹೀಗಾಗಿ ರಾಷ್ಟ್ರದಲ್ಲಿ ಪೊಲೀಸ್ ಪಡೆ ಆಧುನೀಕರಣಕ್ಕೆ ಸುಪ್ರೀಂ ಕೋರ್ಟ್‌ನ ಈ ನಿರ್ದೇಶನ ಚಾಲನೆ ನೀಡಬೇಕು. ಪೊಲೀಸ್ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಉನ್ನತೀಕರಣಕ್ಕೆ ಇದು ಪ್ರೇರಕವಾಗಬೇಕು. ಹಾಗಾದಾಗ ಮಾತ್ರ ಪಾರದರ್ಶಕ ಹಾಗೂ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.