ಶಾಲೆಗಳ ವಿಷಯದಲ್ಲಿ ನಿದ್ರೆ ಸಾಕು ಮೊದಲು ಶಿಕ್ಷಕರನ್ನು ಭರ್ತಿ ಮಾಡಿ ದೇಶದಾದ್ಯಂತ ಪ್ರಾಥಮಿಕ ಶಾಲೆಗಳಲ್ಲಿ ಐದು ಲಕ್ಷ ಶಿಕ್ಷಕರ ಕೊರತೆಯಿರುವ ಕಳವಳಕಾರಿ ಸಂಗತಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದಲೇ ಹೊರಬಿದ್ದಿದೆ. ಅದರಲ್ಲೂ ಒಂದು ಲಕ್ಷ ಶಾಲೆಗಳಲ್ಲಿ ಏಕೋಪಾಧ್ಯಾಯರಿದ್ದಾರೆ. ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ರಾಜಸ್ತಾನ, ಮಹಾರಾಷ್ಟ್ರ, ಒಡಿಶಾ ಮತ್ತಿತರ ರಾಜ್ಯಗಳಲ್ಲಿ ಸಾವಿರಾರು ಶಾಲೆಗಳನ್ನು ಮುಚ್ಚಲಾಗುತ್ತಿದೆ. ಈ ವಿಷಯದಲ್ಲಿ ನಮ್ಮ ರಾಜ್ಯವೇನೂ ಹಿಂದೆ ಬಿದ್ದಿಲ್ಲ. ಇಂತಹ ವಿದ್ಯಮಾನಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಅಧಃಪತನದತ್ತ ಜಾರುತ್ತಿರುವ ದ್ಯೋತಕ. ಒಂದೆಡೆ ಸರ್ಕಾರಿ ಶಾಲೆಗಳು ಉತ್ತಮ ಸಾಧನೆ ತೋರುತ್ತಿಲ್ಲ. ಇನ್ನೊಂದೆಡೆ ಖಾಸಗಿ ಶಾಲೆಗಳು ಮಕ್ಕಳಿಗೆ ಸ್ಪರ್ಧಿಸುವುದನ್ನು ಹೇಳಿಕೊಡುತ್ತಿವೆಯೇ ಹೊರತು ಸೃಜನಾತ್ಮಕವಾಗಿ ಯೋಚಿಸುವುದನ್ನು ಕಲಿಸುತ್ತಿಲ್ಲ. ಹೀಗಾಗಿ ಇಡೀ ವಿದ್ವತ್‌ ವ್ಯವಸ್ಥೆಯ ಬುನಾದಿ ಎನಿಸಿದ ಪ್ರಾಥಮಿಕ ಶಿಕ್ಷಣ ಈಗ ಸಂಕಷ್ಟದಲ್ಲಿದೆ. ಶಿಕ್ಷಣ ಹಾಗೂ ಆರೋಗ್ಯ ಬಹುಮುಖ್ಯ ಆದ್ಯತಾ ವಲಯಗಳು. ಆದರೆ, ಸ್ವಾತಂತ್ರ್ಯ ಸಿಕ್ಕ ದಿನಗಳಿಂದಲೂ ನಮ್ಮ ಆಡಳಿತಗಾರರು ಈ ಎರಡೂ ವಲಯಗಳತ್ತ ಗಂಭೀರವಾಗಿ ಯೋಚಿಸಿಲ್ಲ. 1960ರ ದಶಕದಲ್ಲಿ ಶಾಲೆಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲೇನೋ ಹೆಚ್ಚಾಯಿತು. ಅದಕ್ಕೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸುವ ಜತೆಗೆ ತರಬೇತಿ ಹೊಂದಿದ ಶಿಕ್ಷಕರ ವ್ಯವಸ್ಥೆ ಮಾಡಲು ಸರ್ಕಾರಗಳಿಗೆ ಸಾಧ್ಯವಾಗಲಿಲ್ಲ. ಹಣ ವ್ಯಯಿಸಲು ಒಂದಿಷ್ಟು ಯೋಜನೆಗಳು ಘೋಷಣೆಯಾದುವೇ ಹೊರತು ಶೈಕ್ಷಣಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ನಡೆಯಲಿಲ್ಲ. ಸೈಕಲ್‌, ಶೂ ಮತ್ತಿತರ ಭಾಗ್ಯಗಳನ್ನು ಕೊಟ್ಟು, ಶಿಕ್ಷಕರ ವ್ಯವಸ್ಥೆಯನ್ನೇ ಮಾಡದಿದ್ದರೆ ಮಕ್ಕಳು ಶಾಲೆಗೆ ಬಂದು ಏನು ಮಾಡಬೇಕು? ರಾಜ್ಯದಲ್ಲೂ 37 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಒಂದರಿಂದ ಐದನೇ ತರಗತಿವರೆಗೆ ಪ್ರತಿ ತರಗತಿಯಲ್ಲಿ ಒಬ್ಬ ಶಿಕ್ಷಕರಾದರೂ ಇರಬೇಕು. ನಂತರದ ತರಗತಿಗಳಲ್ಲಿ ಪ್ರತಿ ವಿಷಯಕ್ಕೂ ಒಬ್ಬ ಶಿಕ್ಷಕ ಇರಬೇಕು ಎನ್ನುವುದು ಗುಣಮಟ್ಟದ ಶಿಕ್ಷಣದ ಕನಿಷ್ಠ ಬೇಡಿಕೆ; ಸಮಾನ ಶಿಕ್ಷಣದ ವೈಜ್ಞಾನಿಕ ನಿಯಮ. ನೇಮಕಾತಿ ಪ್ರಕ್ರಿಯೆಯನ್ನು ಸರಿಯಾಗಿ ನಡೆಸದೆ ಗುತ್ತಿಗೆ ಶಿಕ್ಷಕರ ಮೂಲಕ ಕೊರತೆ ನೀಗಿಸಲು ಹೊರಡುವುದು ಇಡೀ ವ್ಯವಸ್ಥೆಯನ್ನೇ ನಾಶಗೊಳಿಸುವಂತಹ ಕ್ರಮ. ಏಕೆಂದರೆ, ಗುತ್ತಿಗೆ ಶಿಕ್ಷಕರಿಗೆ ಕನಿಷ್ಠ ಸಂಬಳ ನೀಡಲಾಗುತ್ತದೆ. ಅವರನ್ನು ನೇಮಕ ಮಾಡಿಕೊಳ್ಳುವಾಗ ಅರ್ಹತೆ ವಿಷಯದಲ್ಲೂ ರಾಜೀ ಮಾಡಿಕೊಳ್ಳಲಾಗುತ್ತದೆ. ಅದರ ಕರಿನೆರಳು ಗುಣಮಟ್ಟದ ಮೇಲೆ ಬಿದ್ದೇ ಬೀಳುತ್ತದೆ. ವರ್ಗಾವಣೆ ರಾಜಕೀಯ, ವೇತನ ಬಾಕಿ, ಬೋಧಕೇತರ ಕಾರ್ಯಭಾರ ಸೇರಿದಂತೆ ವಿವಿಧ ಸಮಸ್ಯೆಗಳ ಸುಳಿಯಿಂದ ಹೊರಬರಲು ಶಿಕ್ಷಕರ ಒಕ್ಕೂಟಗಳು ಹುಟ್ಟಿಕೊಂಡಿವೆ. ಅಲ್ಲಿ ಅವರ ಹಿತರಕ್ಷಣೆ ಮುಖ್ಯವಾಗುವುದೇ ಹೊರತು ಶಿಕ್ಷಣದ ಗುಣಮಟ್ಟದತ್ತ ಒಂದಿನಿತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಶಿಕ್ಷಣ ವ್ಯವಸ್ಥೆಯ ಇಂದಿನ ಅಧೋಗತಿಗೆ ಅದರ ಅಗತ್ಯಗಳನ್ನು ಸರಿಯಾಗಿ ಗ್ರಹಿಸದೆ ರೂಪಿಸಿದ ದೋಷಯುಕ್ತ ನೀತಿಗಳೇ ಕಾರಣ. ಸಮಸ್ಯೆಗಳಿಗೆ ಜವಾಬ್ದಾರಿಯಿಂದ ಪರಿಹಾರ ಹುಡುಕಬೇಕಾದ ಶಿಕ್ಷಣದ ನೀತಿ ನಿರೂಪಕರು ಹಾಗೂ ಆಡಳಿತಗಾರರು ತಾತ್ಕಾಲಿಕ ಪರಿಹಾರಕ್ಕೆ ಒತ್ತು ನೀಡಿದ್ದು, ಹೊಣೆಗೇಡಿತನ ಪ್ರದರ್ಶಿಸಿದ್ದು ಎದ್ದು ಕಾಣುತ್ತಿದೆ. ಶಿಕ್ಷಣದ ಪರಿಕಲ್ಪನೆ ಅರ್ಥ ಮಾಡಿಕೊಳ್ಳುವಲ್ಲಿ ಅವರು ವಿಫಲವಾಗಿರುವುದು ಸುಸ್ಪಷ್ಟ. ವೃತ್ತಿಪರ ಕೌಶಲ, ಸೂಕ್ಷ್ಮ ಜ್ಞಾನ ಹಾಗೂ ಭಾವನಾತ್ಮಕ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವಂತಹ ಶಿಕ್ಷಕರು ನಮ್ಮ ಭವಿಷ್ಯದ ಪ್ರಜೆಗಳಿಗೆ ಬೇಕು. ಆದರೆ, ಶಾಲೆಗಳಲ್ಲಿ ಅಂತಹ ಶಿಕ್ಷಕರ ಕೊರತೆ ಇದೆಯೆಂದೇ ಹೇಳಬೇಕಾಗುತ್ತದೆ. ಇಂದಿನ ಶಿಕ್ಷಕರು ತಮ್ಮ ಗುರುಗಳನ್ನೊಮ್ಮೆ ನೆನಪಿಸಿಕೊಳ್ಳಬೇಕು. ಅವರಿಂದ ಪ್ರೇರಣೆಯನ್ನೂ ಪಡೆಯಬೇಕು. ಖಾಸಗಿ ಶಾಲೆಗಳಿಂದ ಶಿಕ್ಷಣದ ಗುಣಮಟ್ಟ ಕಾಪಾಡಲಾಗುತ್ತದೆ ಎನ್ನುವುದು ಬರೀ ಭ್ರಮೆ. ಖಾಸಗಿಯವರು ಶಿಕ್ಷಣ ನಡೆಸುವುದು ಲಾಭಕ್ಕಾಗಿ. ಲಾಭದ ಪ್ರಶ್ನೆ ಬಂದಾಗ ಶಿಕ್ಷಕರ ಸಂಬಳದ ವಿಷಯದಲ್ಲಿ ಚೌಕಾಸಿ ಶುರುವಾಗುತ್ತದೆ. ಕಡಿಮೆ ಸಂಬಳಕ್ಕೆ ಸಿಕ್ಕವರನ್ನು ಕರೆತಂದು ಪಾಠ ಮಾಡಲು ಬಿಡಲಾಗುತ್ತದೆ. ಈ ವಿಷಯವನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಶಾಲೆಗಳು ಮಕ್ಕಳಿಗೆ ಪಠ್ಯವನ್ನು ಕಂಠಪಾಠ ಮಾಡಿಸುವ ಕೇಂದ್ರಗಳಾಗಿದ್ದು, ಸೃಜನಶೀಲತೆ, ನೈತಿಕತೆ ಹಾಗೂ ಸದ್ವರ್ತನೆ ಬೋಧಿಸುವಲ್ಲಿ ಸಂಪೂರ್ಣವಾಗಿ ಸೋತಿವೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಬರೀ ಎಚ್ಚರಿಕೆ ನೀಡಿದರೆ ಸಾಲದು, ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು, ತರಬೇತಿ ಹೊಂದಿದ ಶಿಕ್ಷಕರ ವ್ಯವಸ್ಥೆ ಮಾಡಲು ತಕ್ಷಣ ಮುಂದಾಳತ್ವ ವಹಿಸಿಕೊಳ್ಳಬೇಕು.ತಡ ಮಾಡಿದಷ್ಟೂ ಭವಿಷ್ಯದ ಪೀಳಿಗೆಯ ಬಾಲ್ಯ ಶಾಲೆಗಳಲ್ಲಿ ಅರ್ಥಹೀನವಾಗಿ ಕಳೆದುಹೋಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.