ಸರ್ಕಾರದ ವೈಫಲ್ಯ ಅಕ್ಷಮ್ಯ ಶಾಂತಿ ಸ್ಥಿತಿ ಮರಳಲಿ ರಾಜ್ಯದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಉಭಯ ರಾಜ್ಯಗಳಲ್ಲಿ ಶಾಂತಿಗೆ ಭಂಗ ತಂದಿದೆ. ಹಿಂಸಾಚಾರದ ಘಟನೆಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ. ಅದರಲ್ಲೂ ಝಗಮಗಿಸುತ್ತಿದ್ದ ಬೆಂಗಳೂರು ಕರ್ಫ್ಯೂ ಕಾರಣದಿಂದಾಗಿ ಭಣಗುಡುವಂತಾಗಿದ್ದಕ್ಕೆ ಯಾರು ಹೊಣೆ? ಅನ್ಯಾಯವಾಗಿ ಎರಡು ಸಾವಿಗೆ ಬೆಂಗಳೂರು ನಗರ ಸಾಕ್ಷಿಯಾಗಬೇಕಾಯಿತು. 10 ದಿನಗಳ ಕಾಲ ಪ್ರತೀ ದಿನ ತಮಿಳುನಾಡಿಗೆ 15,000 ಕ್ಯೂಸೆಕ್‌ ನೀರು ಬಿಡಬೇಕೆಂಬ ಸೆಪ್ಟೆಂಬರ್ 5ರ ಆದೇಶದ ಮಾರ್ಪಾಡಿಗೆ ಕೋರಿ ರಾಜ್ಯ ಸಲ್ಲಿಸಿದ್ದ ತುರ್ತು ಅರ್ಜಿಯಲ್ಲಿ ಕಾನೂನು ಮತ್ತು ಶಾಂತಿ ಪಾಲನೆ ಕೈಮೀರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದೆ. ಇಂತಹ ಒಕ್ಕಣೆ ಇರುವ ಅರ್ಜಿ ಸಲ್ಲಿಸಿದ್ದು ಮೊದಲ ತಪ್ಪು. ನಂತರ, ಶಾಂತಿ ಕದಡಬಹುದು ಎಂಬ ಪರಿಜ್ಞಾನವಿದ್ದೂ ಕಾನೂನು ಸುವ್ಯವಸ್ಥೆ ಕಾಪಾಡಲು ಸನ್ನದ್ಧರಾಗದಿದ್ದುದು ಸರ್ಕಾರದ ವೈಫಲ್ಯ ಎಂದೇ ಹೇಳಬೇಕಾಗುತ್ತದೆ. ಭದ್ರತಾ ವ್ಯವಸ್ಥೆ ಬಲಪಡಿಸಿ ಜನರಲ್ಲಿ ವಿಶ್ವಾಸ ತುಂಬುವ ಕಾರ್ಯವನ್ನು ಸರ್ಕಾರ ಮಾಡಲಿಲ್ಲ ಎಂಬುದು ಎದ್ದುಕಾಣುವ ಅಂಶ. ಬದಲಿಗೆ ಮುನ್ನೆಚ್ಚರಿಕೆ ಕ್ರಮವಾಗಿ ‘ನಮ್ಮ ಮೆಟ್ರೊ’ ಸಂಚಾರ ಸ್ಥಗಿತಗೊಳಿಸಿ ರವಾನಿಸಿದ ಸಂದೇಶ ಸಕಾರಾತ್ಮಕವಾದುದಾಗಿರಲಿಲ್ಲ. ಹಿಂಸಾಚಾರ ನಡೆದ ಸ್ಥಳಗಳಿಗೆ ಪೊಲೀಸರು ತಡವಾಗಿ ಬಂದರು ಎಂಬ ದೂರುಗಳೂ ಕೇಳಿಬಂದಿವೆ. ಜಾಗತಿಕ ಮಟ್ಟದ ನಗರ, ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂಬ ಹೆಸರು ಹೊತ್ತ ಬ್ರ್ಯಾಂಡ್‌ ಬೆಂಗಳೂರಿನ ಪ್ರತಿಷ್ಠೆ ಮುಕ್ಕಾಗಿರುವುದು ಗಂಭೀರ ಸಂಗತಿ. ಕನ್ನಡದ ಹೆಸರು ಹೇಳಿಕೊಂಡು ಹಲವು ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಂಡಿದ್ದು ದುರದೃಷ್ಟಕರ. ಗಲಭೆ ಸೃಷ್ಟಿಸುವವರನ್ನು ಮಟ್ಟ ಹಾಕುವಲ್ಲಿ ಸರ್ಕಾರ ಬದ್ಧತೆ ಪ್ರದರ್ಶಿಸುವುದು ಅಗತ್ಯ. ಉಭಯ ರಾಜ್ಯಗಳಲ್ಲೂ ಇಂತಹ ಸಂಘಟನೆಗಳು ಪರಿಸ್ಥಿತಿಯ ಲಾಭ ಪಡೆಯಲು ಅವಕಾಶ ಕೊಡಬಾರದು. ಭಾಷಾಭಿಮಾನ ಬೇಕು. ಆದರೆ ಅದು ಭಾಷಾಂಧತೆಯ ಸ್ವರೂಪ ಪಡೆಯಬಾರದು. ಭಾಷಾಂಧತೆಯನ್ನು ನಿಯಂತ್ರಿಸುವುದು ಅತ್ಯವಶ್ಯ. ಆಧುನಿಕ ಕಾಲದಲ್ಲಿ ವಿವಿಧ ನಗರಗಳಲ್ಲಿ ವಿವಿಧ ಭಾಷಾಸಮುದಾಯಗಳ ಸಹಜೀವನದ ವಾಸ್ತವವನ್ನು ಒಪ್ಪಿಕೊಳ್ಳುವುದು ಅನಿವಾರ್ಯ. ಕಾವೇರಿ ಜಲ ವಿವಾದಕ್ಕೆ ಸರಳವಾದ ಪರಿಹಾರ ಸೂತ್ರ ಇಲ್ಲ ಎಂಬುದು ಸರ್ವವಿದಿತ. ಅದರಲ್ಲೂ ನದಿಯ ಮೇಲ್ಭಾಗದಲ್ಲಿರುವ ಪ್ರದೇಶಗಳ ಜೊತೆ ನದಿಯ ಕೆಳಭಾಗದಲ್ಲಿರುವವರ ದೂರು ಜಗತ್ತಿನ ಎಲ್ಲೆಡೆ ಹೆಚ್ಚಾಗಿಯೇ ಇರುತ್ತದೆ. ಐತಿಹಾಸಿಕವಾಗಿ ನಡೆದುಬಂದಿರುವ ವಿದ್ಯಮಾನ ಇದು. ಕಾವೇರಿ ಜಲವಿವಾದಕ್ಕಂತೂ ಶತಮಾನದ ಹಿನ್ನೆಲೆ ಇದೆ. ಕಾವೇರಿ ನದಿ ನೀರು ಹಂಚಿಕೆ ವಿವಾದ 19ನೇ ಶತಮಾನದಿಂದಲೇ ಆರಂಭವಾಗಿದೆ. ಉಭಯ ರಾಜ್ಯಗಳಲ್ಲಿ ಹಲವು ಸರ್ಕಾರಗಳು ಬಂದು ಹೋದರೂ ಈ ವಿವಾದ ಪರಿಹಾರವಾಗಿಲ್ಲ. ಅನೇಕ ಕೋರ್ಟ್ ತೀರ್ಪುಗಳು, ನ್ಯಾಯಮಂಡಳಿ ನಿರ್ದೇಶನಗಳಿಂದಲೂ ಈ ವಿವಾದ ತಣ್ಣಗಾಗಿಲ್ಲ. ಅದರಲ್ಲೂ ಮಳೆ ಕೊರತೆಯಾದ ವರ್ಷಗಳಲ್ಲಿ ಈ ವಿವಾದ ಉಲ್ಬಣಿಸುತ್ತದೆ. ನಿರ್ದಿಷ್ಟ ಸಂಕಷ್ಟ ಸೂತ್ರವನ್ನು ರೂಪಿಸದಿರುವುದೂ ಅನೇಕ ಗೊಂದಲಗಳಿಗೆ ಕಾರಣವಾಗುತ್ತಿದೆ. ವಸ್ತುಸ್ಥಿತಿ ಅರಿಯದ ಕೋರ್ಟ್ ಆದೇಶಗಳು ಜನರ ಆಕ್ರೋಶಕ್ಕೆ ಕಾರಣವಾಗುತ್ತಿವೆ ಎಂಬುದು ಕಟುವಾಸ್ತವ. ‘ನಮ್ಮಿಂದ ಕಿತ್ತುಕೊಳ್ಳಲಾಗಿದೆ ಎಂಬ ಮಂತ್ರ ಪಠಿಸುತ್ತಾ ಕಾನೂನಿನ ನಿರ್ದಿಷ್ಟ ವಿಚಾರಗಳನ್ನು ಮಂಕಾಗಿಸಲಾಗದು’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಕಾನೂನಾತ್ಮಕ ವಿಚಾರಗಳನ್ನು ಸಮರ್ಥವಾಗಿ ಬಿಂಬಿಸುವಲ್ಲಿ ನಾವು ಸೋತಿದ್ದು ಎಲ್ಲಿ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾನೂನು ವ್ಯಾಪ್ತಿಯನ್ನೂ ಮೀರಿ ರಾಜಕೀಯವಾಗಿ ಈ ಸಮಸ್ಯೆ ಪರಿಹರಿಸಿಕೊಳ್ಳಲು ಉಭಯ ರಾಜ್ಯಗಳಿಗೂ ಅವಕಾಶ ಇದ್ದೇ ಇದೆ. ಈ ನೆಲೆಯಲ್ಲಿ ಚಿಂತಿಸಲು ಹಾಗೂ ಯೋಜನೆಗಳನ್ನು ರೂಪಿಸಲು ಸರ್ಕಾರಗಳು ಮುಂದಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.