ಈರುಳ್ಳಿ ಬೆಲೆ ಕುಸಿತದ ಬಿಕ್ಕಟ್ಟು ಸರ್ಕಾರಗಳು ನೆರವಿಗೆ ಧಾವಿಸಲಿ ಸಮೃದ್ಧ ಫಸಲಿನಿಂದಾಗಿ ಈರುಳ್ಳಿ ಈಗ ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ. ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ (ಎಪಿಎಂಸಿ) ಬರುತ್ತಿರುವ ಫಸಲಿಗೆ ಸಗಟು ಖರೀದಿದಾರರು ಕೂಗುವ ಧಾರಣೆ ಕಂಡು ರೈತರು ಕಂಗಾಲಾಗಿದ್ದಾರೆ. ಬಿತ್ತನೆ ಸಂದರ್ಭದಲ್ಲಿ ಇದ್ದ ಉತ್ತಮ ಬೆಲೆ, ಮಾರಾಟಕ್ಕೆ ತಂದಾಗ ದಿಢೀರನೆ ಕುಸಿದಿರುವುದು ಕೃಷಿಕರನ್ನು ಅಧೀರರನ್ನಾಗಿ ಮಾಡಿದೆ. ಹೊಸ ಫಸಲು ಮಾರುಕಟ್ಟೆಗೆ ಬರುತ್ತಿರುವಾಗಲೇ ಬೆಳೆಗಾರರು ತಮ್ಮ ಸಂಗ್ರಹದಲ್ಲಿದ್ದ ಸರಕನ್ನು ಕರಗಿಸಲು ಮುಂದಾಗಿದ್ದಾರೆ. ಇದರಿಂದಾಗಿ ಮಾರುಕಟ್ಟೆಗೆ ಪೂರೈಕೆ ಪ್ರಮಾಣ ಏಕಾಏಕಿ ಹೆಚ್ಚಳಗೊಂಡು ಬೆಲೆ ದಿಢೀರನೆ ಕುಸಿಯತೊಡಗಿದೆ. ಉತ್ತರ ಕರ್ನಾಟಕದ ಈರುಳ್ಳಿ ಬೆಳೆಯುವ ಪ್ರಮುಖ ಪ್ರದೇಶಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಫಸಲು ಮಾರುಕಟ್ಟೆಗೆ ಆವಕವಾಗುತ್ತಿದೆ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಲ್ಲಿನ ಉತ್ತಮ ಫಸಲಿನ ಪರಿಣಾಮವಾಗಿ ಕರ್ನಾಟಕವೂ ಸೇರಿದಂತೆ, ಈರುಳ್ಳಿ ಬೆಳೆಯುವ ರಾಜ್ಯಗಳ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಇದರಿಂದಾಗಿ ಕನಿಷ್ಠ ಲಾಭ ಬಿಡಿ, ಈರುಳ್ಳಿ ಬೆಳೆಯುವುದಕ್ಕೆ ಮಾಡಿದ ಖರ್ಚೂ ಗಿಟ್ಟುತ್ತಿಲ್ಲ ಎಂದು ರೈತರು ಅಸಮಾಧಾನಗೊಂಡಿದ್ದಾರೆ. ಜೂನ್‌ ತಿಂಗಳಾಂತ್ಯಕ್ಕೆ ಕೊನೆಗೊಂಡಿರುವ ಬೆಳೆ ವರ್ಷದಲ್ಲಿ 2.10 ಕೋಟಿ ಟನ್‌ಗಳಷ್ಟು ಫಸಲು ಬಂದಿರುವುದು ಹೊಸ ದಾಖಲೆಯಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 11ರಷ್ಟು ಹೆಚ್ಚಾಗಿದೆ. ದೇಶದಲ್ಲಿಯೇ ಅತಿದೊಡ್ಡ ಈರುಳ್ಳಿ ಸಗಟು ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಾಸಲ್‌ಗಾಂವ್‌ಗೆ ಪ್ರತಿ ದಿನ 20 ಸಾವಿರ ಕ್ವಿಂಟಲ್‌ಗಳಷ್ಟು ಫಸಲು ಬರುತ್ತಿರುವುದರಿಂದ ಬೆಲೆ ಮಟ್ಟದ ಮೇಲೆ ತೀವ್ರ ಒತ್ತಡ ಬಿದ್ದಿದೆ. ಪ್ರತಿ ಕೆ.ಜಿ ಬೆಲೆ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಸಹಜವಾಗಿಯೇ ರೈತಾಪಿ ವರ್ಗದಲ್ಲಿ ಕಳವಳ ಮೂಡಿಸಿದೆ. ಸಗಟು ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿಗೆ ₹ 1ರಿಂದ ₹2ರವರೆಗೆ ಮಾರಾಟ ಆಗುತ್ತಿರುವುದು ಕಂಡು ರೈತರು ಹತಾಶರಾಗಿದ್ದಾರೆ. ಇದು ಐದು ವರ್ಷಗಳಲ್ಲಿನ ಕನಿಷ್ಠ ಮಟ್ಟವಾಗಿದೆ. ಈ ಹಿಂದೆ ಫಸಲನ್ನು ಇತರ ರಾಜ್ಯಗಳಿಗೂ ಪೂರೈಸಲಾಗುತ್ತಿತ್ತು. ಈ ಬಾರಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌ ಮತ್ತು ಬಿಹಾರಗಳಲ್ಲಿ ಉತ್ತಮ ಫಸಲು ಬಂದಿರುವುದರಿಂದ ಒಟ್ಟಾರೆ ಬೇಡಿಕೆ ತಗ್ಗಿ ಬೆಲೆ ಕುಸಿತಕ್ಕೆ ಇಂಬು ನೀಡಿದಂತಾಗಿದೆ. ಮಾರುಕಟ್ಟೆ ಶಕ್ತಿಗಳಾದ ಬೇಡಿಕೆ ಮತ್ತು ಪೂರೈಕೆ ಪರಿಸ್ಥಿತಿ ಆಧರಿಸಿ ಹೇಳುವುದಾದರೆ, ಬೆಲೆ ಪರಿಸ್ಥಿತಿ ತಕ್ಷಣಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಕಂಡು ಬರುತ್ತಿಲ್ಲ. ಇದು ಬೆಳೆಗಾರರ ಬವಣೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಏಪ್ರಿಲ್‌ – ಮೇ ತಿಂಗಳಲ್ಲಿ ಪ್ರತಿ ಕ್ವಿಂಟಲ್‌ ಈರುಳ್ಳಿ ಬೆಲೆ ₹ 2,500 ಗಡಿ ದಾಟಿತ್ತು. ಇದೇ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರು ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಕಾರಣ ಈಗ ಬೆಲೆ ಪಾತಾಳಕ್ಕೆ ಕುಸಿದಿದೆ. ಬೆಲೆ ಕುಸಿತದಿಂದ ರೈತರನ್ನು ರಕ್ಷಿಸಿ, ಅವರಿಗೆ ಆಗುತ್ತಿರುವ ಹಣಕಾಸು ನಷ್ಟ ತಪ್ಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಧ್ಯಪ್ರವೇಶಿಸಬೇಕಾಗಿದೆ. ಬೆಲೆ ಕುಸಿತಕ್ಕೆ ತಡೆ ಹಾಕಿ, ಬೆಳೆಗಾರರ ಆರ್ಥಿಕ ಸಂಕಷ್ಟ ದೂರ ಮಾಡಲು ಮುಂದಾಗಬೇಕಾಗಿದೆ. ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ತಗ್ಗಿಸುವ ಮೂಲಕವೂ ಸರ್ಕಾರ ಬೆಳೆಗಾರರ ರಕ್ಷಣೆಗೆ ಧಾವಿಸಬೇಕಾಗಿದೆ. ಖರೀದಿ ಕೇಂದ್ರ ತೆರೆದು, ಬೆಂಬಲ ಬೆಲೆಯಡಿ ಉಳ್ಳಾಗಡ್ಡಿ ಖರೀದಿಸಿದರೆ ಮಾತ್ರ ರೈತರ ಬೆವರಿಗೆ ನ್ಯಾಯಯುತ ಬೆಲೆ ಸಿಗಲಿದೆ. ಈರುಳ್ಳಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿ ಇಟ್ಟುಕೊಳ್ಳುವಂತೆಯೂ ಇಲ್ಲ. ಸಂಗ್ರಹಿಸಿ ಇಡುವುದರಿಂದ ಎರಡರಿಂದ ಮೂರು ತಿಂಗಳಲ್ಲಿ ಶೇ 25ರಿಂದ ಶೇ 32ರಷ್ಟು ತೂಕ ಕಡಿಮೆಯಾಗಿ ಗುಣಮಟ್ಟವೂ ಕುಸಿಯುತ್ತದೆ. ಇದನ್ನು ತಪ್ಪಿಸುವ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಬೇಕಾಗಿದೆ. ಅಗತ್ಯ ಪ್ರಮಾಣದಲ್ಲಿ ಶೈತ್ಯಾಗಾರಗಳೂ ನಮ್ಮಲ್ಲಿ ಇಲ್ಲ. ಹೀಗಾಗಿ ಬೆಳೆಗಾರರು ಮೇಲಿಂದ ಮೇಲೆ ಸಂಕಷ್ಟಕ್ಕೆ ಸಿಲುಕುತ್ತಲೇ ಇದ್ದಾರೆ. ರೈತರ ಬವಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಶೈತ್ಯಾಗಾರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಮಾಡಬೇಕಾಗಿದೆ. ಉತ್ಪಾದನೆ ಕುಸಿದಾಗ ಬೆಲೆ ನಾಗಾಲೋಟದಲ್ಲಿ ಏರಿ ಬಳಕೆದಾರರಿಗೆ ಹೊರೆಯಾಗಿ ಪರಿಣಮಿಸಿದರೆ, ಪೂರೈಕೆ ಹೆಚ್ಚಿದಾಗ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡುತ್ತದೆ. ಇಬ್ಬರಿಗೂ ಅನ್ಯಾಯವಾಗದಂತೆ ಈರುಳ್ಳಿ ನೀತಿ ರೂಪಿಸಿದರೆ ಮಾತ್ರ ಬೆಳೆಗಾರರು ಮತ್ತು ಬಳಕೆದಾರರ ಬವಣೆ ದೂರವಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.