ಯಾವ ಪುರುಷಾರ್ಥಕ್ಕೆ ಈ ಸೌಲಭ್ಯ? ಉಕ್ಕಿನ ಸೇತುವೆ ಯೋಜನೆ ಕೈಬಿಡಿ ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಮೇಲ್ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರದ ಕುರಿತು ಈಗ ವಿಸ್ತೃತವಾಗಿ ಚರ್ಚೆಯಾಗುತ್ತಿದೆ. ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಿರುವ ರಸ್ತೆಯುದ್ದಕ್ಕೂ ಮಾನವ ಸರಪಳಿ ರಚಿಸುವ ಮೂಲಕ ನಗರದ ನಾಗರಿಕರು ಈ ಯೋಜನೆಯ ವಿರುದ್ಧ ಒಕ್ಕೊರಲ ಧ್ವನಿ ಹೊರಡಿಸಿದ್ದಾರೆ. 812 ಮರಗಳ ನಿರ್ನಾಮಕ್ಕೆ ಕಾರಣವಾಗುವ, ಪಾರಂಪರಿಕ ಕಟ್ಟಡಗಳ ಅಂದಗೆಡಿಸುವ, ಪರಿಸರಕ್ಕೆ ಧಕ್ಕೆ ಉಂಟುಮಾಡುವ, ₹ 1,800 ಕೋಟಿಯಷ್ಟು ಸಾರ್ವಜನಿಕ ಹಣವನ್ನು ಪೋಲು ಮಾಡುವ ಈ ಮೇಲ್ಸೇತುವೆಯ ನಿರ್ಮಾಣ ಯಾವ ಪುರುಷಾರ್ಥಕ್ಕಾಗಿ, ವಿಮಾನ ನಿಲ್ದಾಣದ ಪ್ರಯಾಣಿಕರ ಮೇಲಷ್ಟೇ ಏಕೆ ಈ ವಿಪರೀತ ಕಳಕಳಿ, ಆ ರಸ್ತೆಯಲ್ಲಿ ಮಾತ್ರ ದಟ್ಟಣೆ ಇದೆಯೇ ಎಂಬುವು ಅವರ ಪ್ರಶ್ನೆಗಳು. ಅದಕ್ಕೆ ಆಡಳಿತ ವ್ಯವಸ್ಥೆಯು ಸೂಕ್ತ ಸಮಜಾಯಿಷಿ ನೀಡುವ ಗೋಜಿಗೆ ಹೋಗದೆ ‘ಮೇಲ್ಸೇತುವೆ ನಿರ್ಮಾಣ ಮಾಡಿಯೇ ಸಿದ್ಧ’ ಎಂದು ಹಟತೊಟ್ಟಿದೆ. ಯೋಜನೆ ಅನುಷ್ಠಾನದ ಹೊಣೆ ಹೊತ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಡೆ ಕೂಡ ಸಂಶಯಾಸ್ಪದವಾಗಿದೆ. ಯೋಜನೆ ಕುರಿತಂತೆ ಆರ್‌ಟಿಐ ಅಡಿಯಲ್ಲಿ ಕೇಳಿದ ಮಾಹಿತಿ ಕೊಡಲು ನಿರಾಕರಿಸಿರುವ ವಿದ್ಯಮಾನ, ಪಾರದರ್ಶಕತೆ ಕೊರತೆಯ ಆರೋಪಕ್ಕೆ ಪುಷ್ಟಿ ನೀಡಿದೆ. ನಾಗರಿಕರ ಆಕ್ರೋಶ ಹರಳುಗಟ್ಟಿದಾಗ ವಿಸ್ತೃತ ಯೋಜನಾ ವರದಿಯೂ (ಡಿಪಿಆರ್‌) ಸೇರಿದಂತೆ ಕೆಲವು ದಾಖಲೆಗಳನ್ನು ಬಿಡಿಎ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆದರೆ, ಕಾರ್ಯಸಾಧ್ಯ ವರದಿಯೊಂದಿಗೆ ಇನ್ನೂ ಕೆಲವು ವಿವರಗಳನ್ನು ಅಡಗಿಸಿಟ್ಟಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ. ಆದರೆ, ಆಡಳಿತದ ಚುಕ್ಕಾಣಿ ಹಿಡಿದವರು ತಮ್ಮದು ಪಾಳೆಯಪಟ್ಟು ಎಂದು ತಿಳಿದಂತಿದೆ. ಚುನಾಯಿಸಿ ಕಳುಹಿಸಿದ ಪ್ರಜೆಗಳಿಗೇ ಬೇಡವಾದ ಯೋಜನೆಯನ್ನು ಅನುಷ್ಠಾನಕ್ಕೆ ತರಲು ವಿಪರೀತ ಉತ್ಸಾಹ ತೋರುವ ಮೂಲಕ ಭಂಡತನ ಪ್ರದರ್ಶಿಸಲಾಗಿದೆ. ಸೇತುವೆಗೆ ವೆಚ್ಚ ಮಾಡಲು ಹೊರಟಿರುವುದು ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನೇ ಹೊರತು ಅದರ ಪರ ವಕಾಲತ್ತು ವಹಿಸಿದವರ ಸ್ವಂತ ಸಂಪತ್ತಿನಿಂದಲ್ಲ. ಹೌದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಘಲಕ್‌ ದರ್ಬಾರ್‌ಗೆ ಅವಕಾಶವಿಲ್ಲ. ಯೋಜನೆ ಅನುಷ್ಠಾನಕ್ಕೆ ನಡೆಸಿರುವ ತರಾತುರಿಯ ಹಿಂದೆ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ. ವೆಚ್ಚದಲ್ಲಿ ಏಕಾಏಕಿ ₹ 500 ಕೋಟಿಯಷ್ಟು ಏರಿಕೆ ಆಗಿರುವುದು ಸಂಶಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಮಹಾನಗರ ಯೋಜನಾ ಸಮಿತಿ ರಚನೆಯಾಗಿದ್ದರೂ ಅದರ ಗಮನಕ್ಕೆ ತಾರದೆ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದು ಸರ್ಕಾರ ಎಸಗಿದ ಬಲುದೊಡ್ಡ ಪ್ರಮಾದ. ನಗರದ ಪರಿಸರಕ್ಕೆ ಯಾವುದೇ ಹಾನಿ ಉಂಟುಮಾಡದ, ಸುಗಮ ಸಂಚಾರಕ್ಕೆ ಪೂರಕವಾದ ಯೋಜನೆಯೇ ಇದಾಗಿದ್ದರೆ ಅದರ ವಿರುದ್ಧ ಧ್ವನಿ ಎತ್ತಲು ಜನರೇನು ಹೆಡ್ಡರೇ? ಮೇಲ್ಸೇತುವೆ ವಿರುದ್ಧ ಇಷ್ಟೊಂದು ಪ್ರಬಲವಾದ ಕೂಗು ಕೇಳಿಬರಲು ಏನು ಕಾರಣ ಎಂಬುದನ್ನು ಮುಖ್ಯಮಂತ್ರಿಯವರು ತಮ್ಮ ಸಂಪುಟದ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ತಂಡದೊಂದಿಗೆ ಕುಳಿತು ಚರ್ಚಿಸಬೇಕು. ನಗರದ ನೀಲನಕ್ಷೆ ರೂಪಿಸುವಲ್ಲಿ ದೇಶದ ಬೇರೆಲ್ಲೂ ಕಾಣದಷ್ಟು ಸಮುದಾಯದ ಸಹಭಾಗಿತ್ವ ಬೆಂಗಳೂರಿನಲ್ಲಿದೆ. ಪರಿಸರ ಸಂಘಟನೆಗಳು, ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತುಂಬಾ ಕ್ರಿಯಾಶೀಲವಾಗಿವೆ. ದೊಡ್ಡಸಂಖ್ಯೆಯ ನಗರ ಯೋಜನಾತಜ್ಞರು ಇಲ್ಲಿದ್ದಾರೆ. ಅವರೆಲ್ಲರ ಸಲಹೆ ಪಡೆಯುವ ಕೆಲಸ ಆಗಬೇಕು. ಕಣ್ತೆರೆದು ನೋಡಿದರೆ ಪರ್ಯಾಯಗಳು ಬೇಕಾದಷ್ಟಿವೆ. ಸಮೂಹ ಸಾರಿಗೆ ಸೌಲಭ್ಯವನ್ನು ಬಲಗೊಳಿಸಿದರೆ ಸಾವಿರಾರು ಕಾರುಗಳು ರಸ್ತೆಗಿಳಿಯುವುದು ತಪ್ಪುತ್ತದೆ. ಉಪನಗರ ರೈಲು ಯೋಜನೆ ಜಾರಿಗೆ ತರುವ ಪ್ರಸ್ತಾವ ಕೂಡ ಇದೆ. ಮೆಟ್ರೊ ರೈಲು ಸೌಲಭ್ಯ ವಿಸ್ತರಣೆಯೂ ಪರಿಹಾರೋಪಾಯಗಳಲ್ಲಿ ಒಂದು. ಆದರೆ, ಮೆಟ್ರೊ ಕಾಮಗಾರಿ ಆಮೆಗತಿಯಲ್ಲಿ ನಡೆದಿದ್ದು, ಗಡುವು ಮುಗಿದು 3–4 ವರ್ಷವಾದರೂ ಮೊದಲ ಹಂತದ ಕೆಲಸವೇ ಪೂರ್ಣವಾಗಿಲ್ಲ. ಕುರೂಪದಿಂದ ಕೂಡಿರುವ ಮೆಟ್ರೊ ಸೇತುವೆ ನಗರದ ಅಂದಗೆಡಿಸಿದೆ. ಟೆಂಡರ್‌ ಶ್ಯೂರ್‌ ಯೋಜನೆ ಜಾರಿಗೆ ತಂದರೂ ರಸ್ತೆಗಳ ಗುಣಮಟ್ಟದ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನಗರದ ರಸ್ತೆಗಳ ಗುಂಡಿಗಳು ಪ್ರತೀವರ್ಷ ನೂರಾರು ಕೋಟಿ ರೂಪಾಯಿ ನುಂಗಿ ನೀರು ಕುಡಿಯುತ್ತವೆ. ದಟ್ಟಣೆ ಕಡಿಮೆ ಮಾಡಲು ರಸ್ತೆಗಳ ಗುಣಮಟ್ಟ ಕಾಪಾಡುವ ಜತೆಗೆ ಸಮೂಹ ಸಾರಿಗೆ ಸೌಲಭ್ಯ ಹೆಚ್ಚಿಸುವುದು ಸುಲಭದ ಪರಿಹಾರ. ಆದ್ದರಿಂದ ಸರ್ಕಾರ ಒಣ ಪ್ರತಿಷ್ಠೆಗೆ ಒಳಗಾಗದೆ, ಮೊಂಡುತನ ಪ್ರದರ್ಶಿಸದೆ ಉಕ್ಕಿನ ಮೇಲ್ಸೇತುವೆ ನಿರ್ಮಾಣದ ಯೋಜನೆಯನ್ನು ಕೈಬಿಡಬೇಕು. ನಗರ ಮೂಲ ಸೌಕರ್ಯ ಹೆಚ್ಚಿಸುವ ಸಂಬಂಧ ಹೊಸ ದೃಷ್ಟಿಕೋನದಿಂದ ಆಲೋಚಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.