ರೋಗಿಗಳ ಪಾಲಿಗೆ ಆಸ್ಪತ್ರೆಯೂ ಅಸುರಕ್ಷಿತವಾಗುವುದು ಸಲ್ಲದು ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವ ಉದ್ದೇಶವೇ, ಅವರ ಕಾಯಿಲೆ ವಾಸಿಯಾಗಲಿ ಮತ್ತು ಅವರು ಬೇಗ ಎಂದಿನಂತಾಗಲಿ ಎನ್ನುವುದು. ಆದರೆ ಅಂತಹ ಆಸ್ಪತ್ರೆಯೇ ಅವರ ಪಾಲಿಗೆ ಯಮಲೋಕವಾದರೆ ಏನು ಗತಿ? ಒಡಿಶಾದ ರಾಜಧಾನಿ ಭುವನೇಶ್ವರದ ಎಸ್‌ಯುಎಂ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತ ನೋಡಿದಾಗ ಈ ಪ್ರಶ್ನೆ ಉದ್ಭವವಾಗುತ್ತದೆ. ಅಲ್ಲಿ ಬೆಂಕಿ ಮತ್ತು ದಟ್ಟ ಹೊಗೆಯಿಂದ 21 ಜನ ಸಾವಿಗೀಡಾಗಿದ್ದಾರೆ. ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅವರೆಲ್ಲ ಅಮಾಯಕರು, ಅಸಹಾಯಕರು. ಕೆಲವರು ಎರಡನೇ ಮಹಡಿಯ ಡಯಾಲಿಸಿಸ್‌ ವಾರ್ಡ್‌ನಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದರು, ಇನ್ನು ಕೆಲವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು. ಕಾಯಿಲೆಪೀಡಿತರು ಬೇರೆ. ಅನಾಹುತ ಆದಾಗ ತಕ್ಷಣ ಎದ್ದು ಜೀವ ಉಳಿಸಿಕೊಳ್ಳಲು ಓಡುವುದೂ ಕಷ್ಟ. ಐಸಿಯುಗಳು ಹವಾನಿಯಂತ್ರಿತ ಆಗಿರುವುದರಿಂದ ಕಿಟಕಿ, ಬಾಗಿಲುಗಳು ಸದಾ ಮುಚ್ಚಿರುತ್ತವೆ. ಹೀಗಾಗಿ ಹೊಗೆ ಅಲ್ಲಿಗೂ ವ್ಯಾಪಿಸಿ ತುಂಬಿಕೊಂಡಿದೆ. ಸಾವಿನ ಸಂಖ್ಯೆ ಹೆಚ್ಚಲು ಅದೂ ಒಂದು ಕಾರಣ. ನಾಲ್ಕು ಅಂತಸ್ತುಗಳ ಈ ಆಸ್ಪತ್ರೆಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಒಳರೋಗಿಗಳು, ನೂರಾರು ವೈದ್ಯಕೀಯ ಸಿಬ್ಬಂದಿ ಇದ್ದರು. ರಾಜ್ಯದ ರಾಜಧಾನಿಯಾದ ಕಾರಣ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ದುರಂತ ಸ್ಥಳವನ್ನು ತಲುಪಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಇದರಿಂದಾಗಿ ಬಹಳಷ್ಟು ಜನರನ್ನು ಪಾರು ಮಾಡಲು ಸಾಧ್ಯವಾಯಿತು. ದುರಂತದಲ್ಲಿ ಬದುಕುಳಿದ ರೋಗಿಗಳ ಪಾಲಿಗೆ ಇದು ಪುನರ್ಜನ್ಮ. ಆದರೆ ಬದುಕಿನುದ್ದಕ್ಕೂ ಈ ಭೀತಿ ಅವರನ್ನು ಕಾಡುತ್ತಲೇ ಇರುತ್ತದೆ. ಆದ್ದರಿಂದ ಅವರಿಗೆಲ್ಲ ಮಾನಸಿಕ ಸ್ಥೈರ್ಯ ತುಂಬುವುದು ಕೂಡ ಮುಖ್ಯ. ಈ ಇಡೀ ಘಟನೆಯನ್ನು ನೋಡಿದರೆ ಆಸ್ಪತ್ರೆಯಲ್ಲಿ ಸರಿಯಾದ ಅಗ್ನಿನಿರೋಧಕ ವ್ಯವಸ್ಥೆ ಇರಲಿಲ್ಲ ಎನ್ನುವುದು ಸ್ಪಷ್ಟ. ದೈಹಿಕವಾಗಿ ದುರ್ಬಲರೇ ಇರುವ ಸ್ಥಳಗಳಲ್ಲಿಯೂ ಬೆಂಕಿ ಅಥವಾ ಇನ್ಯಾವುದೇ ಅವಘಡಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಧನಗಳು, ಅಲ್ಲಿನ ಸಿಬ್ಬಂದಿಗೆ ಸಮರ್ಪಕ ತರಬೇತಿ ಇರಲಿಲ್ಲವೇ ಎಂಬ ಅನುಮಾನ ಬರುತ್ತದೆ. ಏಕೆಂದರೆ ಬಹುಮಹಡಿ ಕಟ್ಟಡಗಳ ವಿಷಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳೇ ಬೇರೆ ರೀತಿಯವು. ಆರಂಭಿಕ ವರದಿಗಳ ಪ್ರಕಾರ ಶಾರ್ಟ್ ಸರ್ಕಿಟ್‌ನಿಂದ ಪ್ರಾರಂಭವಾದ ಬೆಂಕಿ ಕ್ರಮೇಣ ಎಲ್ಲೆಡೆ ವ್ಯಾಪಿಸಿತು ಎನ್ನಲಾಗುತ್ತಿದೆ. ಶಾರ್ಟ್‌ ಸರ್ಕಿಟ್‌ಗೆ ಏನು ಕಾರಣ, ಕಟ್ಟಡದಲ್ಲಿ ಬಳಸಿದ ವಿದ್ಯುತ್‌ ತಂತಿಗಳು ಮತ್ತು ಇತರ ಸಾಮಗ್ರಿಗಳ ಗುಣಮಟ್ಟ ಹೇಗಿತ್ತು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಈಗೇನೋ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಸ್ಪತ್ರೆಯ ವಿದ್ಯುತ್‌ ವಿಭಾಗದ ನಿರ್ವಹಣಾ ಸಿಬ್ಬಂದಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಊರು ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬಂತೆ ಒಡಿಶಾ ಸರ್ಕಾರ ಈಗ ಎಚ್ಚೆತ್ತುಕೊಂಡು ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಂಕಿ ಸುರಕ್ಷತಾ ವ್ಯವಸ್ಥೆಯ ತಪಾಸಣೆಗೆ ಸೂಚಿಸಿದೆ. ಮೃತರ ಅವಲಂಬಿಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಒಡಿಶಾ ಸರ್ಕಾರಕ್ಕೆ ನೋಟಿಸ್‌ ಕೊಟ್ಟು, ಸಂತ್ರಸ್ತರ ಪುನರ್‌ವಸತಿ ಮತ್ತು ಚಿಕಿತ್ಸೆಗೆ ಕೈಗೊಂಡ ಕ್ರಮಗಳ ವಿವರ ಕೇಳಿದೆ. ಅನಾಹುತ ನಡೆದ ಎಸ್‌ಯುಎಂ ಆಸ್ಪತ್ರೆಯಲ್ಲಿ ಸರಿಯಾದ ಸುರಕ್ಷತಾ ವ್ಯವಸ್ಥೆಗಳು ಇರಲಿಲ್ಲ ಎಂಬುದು 2013ರಲ್ಲಿಯೇ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಆದರೂ ಅಧಿಕಾರಿಗಳು ಕಟ್ಟುನಿಟ್ಟು ಕ್ರಮ ತೆಗೆದುಕೊಳ್ಳಲಿಲ್ಲ. ಆಸ್ಪತ್ರೆ ಆಡಳಿತ ಕೂಡ ಸುರಕ್ಷತೆಯನ್ನು ನಿರ್ಲಕ್ಷಿಸಿತು. ಆ ರಾಜ್ಯದಲ್ಲಿನ 568 ಆಸ್ಪತ್ರೆಗಳ ಪೈಕಿ ಮೂರು ಆಸ್ಪತ್ರೆಗಳಿಗೆ ಮಾತ್ರ ಅಗ್ನಿಶಾಮಕ ದಳದ ಪರವಾನಗಿ ಇದೆ ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ಅಂದರೆ, ಇನ್ನುಳಿದ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸದೇ ಅಧಿಕಾರಿಗಳು ಮೌನ ವಹಿಸಲು ಕಾರಣ ಏನು ಎಂಬುದು ಸುಸ್ಪಷ್ಟ. ಇಲ್ಲಿ ಕರ್ತವ್ಯಲೋಪ ಮತ್ತು ಹಣದ ಪ್ರಭಾವ ಎದ್ದು ಕಾಣುತ್ತವೆ. ಬರೀ ಐದು ವರ್ಷಗಳ ಹಿಂದೆ ಅಂದರೆ 2011ರ ಡಿಸೆಂಬರ್‌ 11ರ ಬೆಳಗಿನ ಜಾವ ಕೋಲ್ಕತ್ತದ ಎಎಂಆರ್‌ಐ ಆಸ್ಪತ್ರೆಯಲ್ಲೂ ಇದೇ ರೀತಿ ಬೆಂಕಿ ಹತ್ತಿಕೊಂಡು 89 ಜನರನ್ನು ಬಲಿ ತೆಗೆದುಕೊಂಡಿತ್ತು. ಇದರ ನಂತರವೂ ಅಲ್ಲಲ್ಲಿ ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತ ನಡೆಯುತ್ತಲೇ ಇದೆ ಎಂದರೆ ಅದು ತಲೆತಗ್ಗಿಸುವ ವಿಚಾರ; ಇಡೀ ಸರ್ಕಾರಿ ವ್ಯವಸ್ಥೆಯ ವೈಫಲ್ಯದ ಸಂಕೇತ. ಇದು ಒಡಿಶಾ ಮಾತ್ರವಲ್ಲ, ಇಡೀ ದೇಶಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು. ಇಂತಹ ಅನಾಹುತ ಮರುಕಳಿಸಲೇಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.