ಕಪ್ಪು ಹಣಕ್ಕೆ ಕಡಿವಾಣ ಬೇಕು ದಂಡನಾ ಕ್ರಮ ಆದಾಯ ಘೋಷಣೆ ಯೋಜನೆಯಡಿ (ಐಡಿಎಸ್‌), ತಮ್ಮ ಬಳಿ ತೆರಿಗೆಗೆ ಒಳಪಡದ ₹65,250 ಕೋಟಿಗಳಷ್ಟು ಸಂಪತ್ತು ಇರುವುದನ್ನು 64 ಸಾವಿರದಷ್ಟು ಕಾಳಧನಿಕರು ಘೋಷಿಸಿಕೊಂಡಿರುವುದು, ಕಪ್ಪು ಹಣ ಹೊರತೆಗೆಯುವ ಪ್ರಯತ್ನವು ತಕ್ಕಮಟ್ಟಿಗೆ ಯಶಸ್ಸಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ತೆರಿಗೆ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕಿ, ತೆರಿಗೆ ವ್ಯಾಪ್ತಿ ಹಿಗ್ಗಿಸುವ, ಹೆಚ್ಚೆಚ್ಚು ಜನರನ್ನು ತೆರಿಗೆ ವ್ಯಾಪ್ತಿಗೆ ತರುವ ಕ್ರಮಕ್ಕೆ ತೆರಿಗೆಗೆ ಒಳಪಡುವವವರು ಬಹುಶಃ ಅರೆಮನಸ್ಸಿನಿಂದಲೇ ಸ್ಪಂದಿಸಿದ್ದಾರೆ. ದೇಶಿ ಹಣಕಾಸು ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ, ಪರ್ಯಾಯ ಆರ್ಥಿಕತೆಯ ಬೆದರಿಕೆಯನ್ನೂ ಒಡ್ಡಿರುವ ಕಪ್ಪು ಹಣ ಹೊರಗೆ ತರುವ ನಿಟ್ಟಿನಲ್ಲಿನ ಅನುನಯ ಮತ್ತು ದಂಡನೆಯ ಪ್ರಯತ್ನಕ್ಕೆ ಅಂತೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದುಕೊಳ್ಳಬಹುದು. ಹೀಗಿದ್ದೂ ವ್ಯವಸ್ಥೆಯಲ್ಲಿನ ಊಹೆಗೂ ನಿಲುಕದ ಕಪ್ಪು ಹಣಕ್ಕೆ ಹೋಲಿಸಿದರೆ ಘೋಷಿತ ಸಂಪತ್ತಿನ ಪ್ರಮಾಣ ಕಡಿಮೆ ಎಂಬ ಭಾವನೆಯೂ ಮೂಡುತ್ತದೆ. ತೆರಿಗೆ ಪಾವತಿಸದ ಅಥವಾ ಕಡಿಮೆ ಪ್ರಮಾಣದಲ್ಲಿ ತೆರಿಗೆ ಪಾವತಿಸುತ್ತ ಆಡಂಬರದ ಜೀವನ ಶೈಲಿ ನಡೆಸುತ್ತಿದ್ದವರ ಕೈ ಕಟ್ಟಿ ಹಾಕುವ ಮೊದಲ ಹೆಜ್ಜೆಯಲ್ಲಿ ನೇರ ತೆರಿಗೆಯ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಯಶಸ್ವಿಯಾಗಿದೆ. ಕಳೆದ ವರ್ಷ, ವಿದೇಶಗಳಲ್ಲಿನ ಕಪ್ಪು ಹಣ ಘೋಷಣೆಗೆ ಮಾಡಿಕೊಳ್ಳಲಾದ ಮನವಿಗೆ ಬಂದಂತಹ ಮುಜುಗರ ಉಂಟುಮಾಡಿದ ಮೊತ್ತಕ್ಕೆ ಹೋಲಿಸಿದರೆ ಸರ್ಕಾರದ ಪಾಲಿಗೆ ಇದು ಹೆಚ್ಚು ಸಮಾಧಾನ ತಂದಿದೆ ಎನ್ನಬಹುದು. ಆಗ, 638 ಘೋಷಣೆಗಳಿಂದ ಕೇವಲ ₹ 4,147 ಕೋಟಿಗಳಷ್ಟು ಕಪ್ಪು ಹಣ ಹೊರಗೆ ಬಂದಿತ್ತು. ತೆರಿಗೆ ರೂಪದಲ್ಲಿ ಕೇವಲ ₹ 2,488 ಕೋಟಿ ಮಾತ್ರ ಸಂಗ್ರಹವಾಗಿತ್ತು. ಈ ಬಾರಿ, ತೆರಿಗೆ ಮತ್ತು ದಂಡದ ರೂಪದಲ್ಲಿ ₹ 30 ಸಾವಿರ ಕೋಟಿಗಳಷ್ಟು ವರಮಾನ ಸರ್ಕಾರದ ಬೊಕ್ಕಸ ಭರ್ತಿ ಮಾಡಲಿದೆ. ಅರ್ಥವ್ಯವಸ್ಥೆಯಲ್ಲಿನ ಕಪ್ಪು ಹಣದ ಅಂದಾಜು ಎಣಿಕೆಗೆ ಸಿಗದಿರುವುದರಿಂದ ಅದರ ವಿರುದ್ಧದ ಹೋರಾಟವು ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಿ ನಡೆಯುತ್ತಿಲ್ಲ. ಆರ್ಥಿಕ ಪರಿಣತರು ಸರ್ಕಾರಕ್ಕೆ ಸಲ್ಲಿಸಿರುವ ಆದರೆ, ಇನ್ನೂ ಬಹಿರಂಗಪಡಿಸದ ವರದಿ ಪ್ರಕಾರವೇ, ದೇಶಿ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 75ರಷ್ಟು ಅಂದರೆ ₹ 90 ಲಕ್ಷ ಕೋಟಿಗಳಷ್ಟು ಕಪ್ಪುಹಣ ಇದೆ ಎನ್ನುವ ಅಂದಾಜಿದೆ. ಈ ಕಾರಣಕ್ಕೆ, ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ ಕೊನೆಗೊಂಡ ಆದಾಯ ಘೋಷಣೆ ಯೋಜನೆಯು ಸಾಧಾರಣ ಯಶಸ್ಸು ಕಂಡಂತೆ ಭಾಸವಾಗುತ್ತದೆ. ಸರಾಸರಿ ₹6.5 ಕೋಟಿಗಳಷ್ಟು ನಿವ್ವಳ ಸಂಪತ್ತು ಹೊಂದಿರುವ 2.36 ಲಕ್ಷದಷ್ಟು ಸಿರಿವಂತರು ಆದಾಯ ತೆರಿಗೆ ಪಾವತಿಸುತ್ತಿಲ್ಲ. ಒಟ್ಟು ಜನಸಂಖ್ಯೆಯ ಶೇ 1ರಷ್ಟು ಜನರು ಮಾತ್ರ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎನ್ನುವ ಅಂದಾಜಿದೆ. ವಿದೇಶಗಳಲ್ಲಿನ ಕಪ್ಪು ಹಣ ಸ್ವದೇಶಕ್ಕೆ ತರುವುದೂ ಕಷ್ಟದ ಕೆಲಸವೇನೂ ಅಲ್ಲ. ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳ ಮೂಲಕ, ವಿದೇಶಿ ‘ತೆರಿಗೆ ಸ್ವರ್ಗ’ ತಾಣಗಳ ಮೇಲೆ ಕಟ್ಟುನಿಟ್ಟಿನ ಕಡಿವಾಣ ವಿಧಿಸಬಹುದಾಗಿದೆ. ದೇಶೀಯವಾಗಿಯೂ ಅನೇಕ ವಿದ್ಯಮಾನಗಳು ಕಪ್ಪು ಹಣ ಸಂಗ್ರಹಕ್ಕೆ ಪೂರಕವಾಗಿವೆ. ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ, ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲಿ ತೊಡಗಿಸಿರುವ ಅಗಾಧ ಮೊತ್ತ, ಗರಿಷ್ಠ ಮಟ್ಟದಲ್ಲಿನ ತೆರಿಗೆ ದರ ಮುಂತಾದವು ತೆರಿಗೆ ತಪ್ಪಿಸುವ ಸಂಪತ್ತಿನ (ಕಪ್ಪು ಹಣ) ಚಲಾವಣೆಗೆ ಮುಖ್ಯ ಕಾರಣಗಳಾಗಿವೆ. ಚುನಾವಣಾ ಅಕ್ರಮಗಳು, ಗಣಿಗಾರಿಕೆ ಮತ್ತು ಚಿನಿವಾರ ಪೇಟೆ ವಹಿವಾಟುಗಳು ತೆರಿಗೆ ಪಾವತಿ ತಪ್ಪಿಸಿಕೊಳ್ಳಲು, ಅಕ್ರಮ ಸಂಪತ್ತು ಸೃಷ್ಟಿಯಾಗಲು ನೆರವಾಗುತ್ತಿವೆ.ಇಂತಹ ಅಕ್ರಮ, ಕಾನೂನುಬಾಹಿರ, ತೆರಿಗೆ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಸರ್ಕಾರ ರಾಜಕೀಯ ಇಚ್ಛಾಶಕ್ತಿ ತೋರಬೇಕಾಗಿದೆ. ಅಕ್ರಮ ಸಂಪತ್ತು ಘೋಷಣೆಗೆ ಸರ್ಕಾರ ಅನುನಯದ ಅವಕಾಶ ಒದಗಿಸಿಕೊಡುವುದನ್ನು ಇನ್ನು ಮುಂದೆ ಕೈಬಿಟ್ಟು ದಂಡ ಪ್ರಯೋಗ ಮಾಡಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯೂ ಸೇರಿದಂತೆ ಅನೇಕ ವಹಿವಾಟುಗಳು ಹೆಚ್ಚು ಪಾರದರ್ಶಕವಾಗಿರಲೂ ಸರ್ಕಾರ ಆದ್ಯತೆ ನೀಡಬೇಕಾಗಿದೆ. ಕಪ್ಪುಹಣದ ವಿರುದ್ಧ ಹಲವು ಬಗೆಯ ಸಮರ ತಂತ್ರ ರೂಪಿಸಿ, ಇನ್ನಷ್ಟು ತೆರಿಗೆ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕು. ಹಾಗಾದಾಗ ಮಾತ್ರ ಕಪ್ಪು ಹಣದ ಹಾವಳಿಯನ್ನು ಮಟ್ಟಹಾಕಲು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.