ನಿರ್ದಿಷ್ಟ ದಾಳಿ: ವಾಕ್ಸಮರದಿಂದ ರಾಜಕೀಯಗೊಳಿಸುವುದು ಬೇಡ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಸೆಪ್ಟೆಂಬರ್ 29ರಂದು ಭಾರತದ ಸೇನೆ ನಡೆಸಿದ ‘ನಿರ್ದಿಷ್ಟ ದಾಳಿ’ (ಸರ್ಜಿಕಲ್ ಸ್ಟ್ರೈಕ್), ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡುವಂತಹದ್ದಾಗಿತ್ತು. ಏಕೆಂದರೆ, ಇದಕ್ಕೂ ಮುಂಚೆ ಕಾಶ್ಮೀರದ ಉರಿ ಪಟ್ಟಣದ ಮೇಲೆ ಪಾಕ್ ಉಗ್ರರು ದಾಳಿ ನಡೆಸಿ ಭಾರತದ 15ಕ್ಕೂ ಹೆಚ್ಚು ಸೈನಿಕರನ್ನು ಕೊಂದಿದ್ದಾಗ, ‘ಈ ದಾಳಿಗೆ ಕಾರಣರಾದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆ ನಂತರ ಭಾರತದ ಸೇನೆ ನಡೆಸಿದ ಈ ನಿರ್ದಿಷ್ಟ ದಾಳಿಗೆ ರಾಷ್ಟ್ರದಾದ್ಯಂತ ಬೆಂಬಲ ವ್ಯಕ್ತವಾಗಿತ್ತು. ಇದರಲ್ಲಿ ಯಾವುದೇ ರಾಜಕೀಯ ತರದೆ ಪ್ರತಿಪಕ್ಷಗಳೂ ಮೋದಿಯವರಿಗೆ ಬೆಂಬಲ ಘೋಷಿಸಿದ್ದು ಶ್ಲಾಘನೀಯವಾಗಿತ್ತು. ಭಾರತದ ರಾಜಕೀಯ ಸಂಸ್ಕೃತಿಯಲ್ಲಿ ಇದು ಅಪರೂಪದ ವಿದ್ಯಮಾನವಾಗಿತ್ತು ಎಂದೇ ಹೇಳಬಹುದು. ಆದರೆ ಇಂತಹದೊಂದು ರಾಜಕೀಯ ಸಂಯಮದ ಕಟ್ಟೆ ಒಡೆದಂತೆ ಈಗ ಈ ವಿಚಾರದ ಬಗ್ಗೆ ರಾಜಕೀಯ ಪಕ್ಷಗಳು ನೀಡುತ್ತಿರುವಂತಹ ಹೇಳಿಕೆ, ಪ್ರತಿಹೇಳಿಕೆಗಳು ವಿಷಾದನೀಯ ಬೆಳವಣಿಗೆ. ಉತ್ತರಪ್ರದೇಶ ಹಾಗೂ ಪಂಜಾಬ್‌ಗಳಲ್ಲಿ ವಿಧಾನಸಭೆ ಚುನಾವಣೆಗಳು ಸನಿಹದಲ್ಲಿವೆ. ಈ ಸಂದರ್ಭದಲ್ಲಿ ಸೇನೆ ನಡೆಸಿದ ನಿರ್ದಿಷ್ಟ ದಾಳಿಯಂತಹ ವಿಚಾರವನ್ನೂ ರಾಜಕೀಯ ಲಾಭಗಳಿಗೆ ಬಳಸಲು ಪ್ರಯತ್ನಿಸುತ್ತಿರುವುದು ಖಂಡನೀಯ. ಈ ಬೆಳವಣಿಗೆಗೆ ಎಲ್ಲಾ ರಾಜಕೀಯ ಪಕ್ಷಗಳೂ ಬಾಧ್ಯಸ್ತರು. ಸೇನೆಯ ಸಾಧನೆಯನ್ನು ಮೋದಿಯವರ ಸಾಧನೆಯಾಗಿ ಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ. ಮೋದಿಯವರನ್ನು ರಾಮನಾಗಿ, ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ರಾವಣನಾಗಿ ಹಾಗೂ ಅರವಿಂದ ಕೇಜ್ರಿವಾಲ್ ಅವರನ್ನು ರಾವಣನ ಪುತ್ರ ಮೇಘನಾದನಾಗಿ ಚಿತ್ರಿಸುವಂತಹ ಪೋಸ್ಟರ್‌ಗಳು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಣಿಸಿಕೊಂಡಿವೆ. ನಿರ್ದಿಷ್ಟ ದಾಳಿಗಾಗಿ ಮೋದಿಯವರನ್ನು ಆರಂಭದಲ್ಲಿ ಶ್ಲಾಘಿಸಿದ್ದ ಕೇಜ್ರಿವಾಲ್ ನಂತರ ದಾಳಿ ನಡೆದದ್ದಕ್ಕೆ ಸಾಕ್ಷ್ಯ ಒದಗಿಸಬೇಕೆಂದು ಆಗ್ರಹಿಸಿದ್ದು ಪಾಕಿಸ್ತಾನ ಮಾಧ್ಯಮಗಳಿಗೆ ದೊಡ್ಡ ಸುದ್ದಿಯಾಗುವಂತಹ ಅಹಿತಕರ ಬೆಳವಣಿಗೆಯೂ ನಡೆಯಿತು. ಜೊತೆಗೆ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರನ್ನು ಉತ್ತರ ಪ್ರದೇಶದ ಬಿಜೆಪಿ ಘಟಕ ಸಾರ್ವಜನಿಕವಾಗಿ ಸನ್ಮಾನಿಸಿದ್ದು ಪ್ರತಿಪಕ್ಷಗಳ ವಾಗ್ದಾಳಿಗಳಿಗೆ ಮತ್ತೊಂದು ನೆಪವಾಯಿತು. ‘ಇಂತಹದೇ ನಿರ್ದಿಷ್ಟ ದಾಳಿಗಳನ್ನು ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸಹ ನಡೆಸಿತ್ತು. ಆದರೆ ಆ ಬಗ್ಗೆ ಈ ಮಟ್ಟಿಗಿನ ಪ್ರಚಾರ ಪಡೆದುಕೊಂಡಿರಲಿಲ್ಲ ’ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದರು. ಆ ನಂತರ, ವೈಯಕ್ತಿಕ ಲಾಭಕ್ಕಾಗಿ ಯೋಧರ ಬಲಿದಾನವನ್ನು ಉತ್ತೇಜಿಸುತ್ತಿರುವ ‘ಖೂನ್ ಕಿ ದಲಾಲಿ’(ರಕ್ತದ ದಲ್ಲಾಳಿ) ಎಂದು ಮೋದಿಯವರ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡಿದ ಹೇಳಿಕೆ ಈ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದು ವಿಷಾದನೀಯ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅವರಿಂದಲೂ ಟೀಕಾಸ್ತ್ರಗಳು ಪ್ರಯೋಗವಾದವು. ‘ದಾಳಿಗಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದು ಬೇಡ ಹಾಗೂ ಭಾವೋನ್ಮಾದಗಳನ್ನು ಸೃಷ್ಟಿಸುವುದು ಬೇಡ’ ಎಂದು ಮೋದಿಯವರು ಮಧ್ಯ ಪ್ರವೇಶಿಸಿ ತಿಳಿ ಹೇಳುವ ಹೊತ್ತಿಗೆ ಸಾಕಷ್ಟು ಹಾನಿಯಾಗಿತ್ತು. ಉರಿ ದಾಳಿಯ ನಂತರ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ಬಿಜೆಪಿ ಸರ್ಕಾರ ನೀಡಿದೆ ಎಂಬುದನ್ನು ಉತ್ತರ ಪ್ರದೇಶದಲ್ಲಿ ಅಂಟಿಸಿರುವ ಪೋಸ್ಟರ್‌ಗಳು ಸಾರಿ ಹೇಳುತ್ತಿವೆ. ಇಷ್ಟಕ್ಕೇ ನಿಂತಿಲ್ಲ ಇದು. ‘ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರೊಡನೆ ಸಮಾಲೋಚಿಸಿದ ನಂತರವಷ್ಟೇ ಪ್ರಧಾನಿ ಮೋದಿ ಸರ್ಜಿಕಲ್ ದಾಳಿಗೆ ಆದೇಶ ನೀಡಿದರು’ ಎಂದು ಸಮಾಜವಾದಿ ಪಕ್ಷ ಪ್ರತಿಪಾದಿಸಿಕೊಳ್ಳುವಂತಹ ಪೋಸ್ಟರ್ ಸಹ ಉತ್ತರಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ರಾಜಕೀಯ ಪೋಸ್ಟರ್‌ಗಳಲ್ಲಿ ಯೋಧರ ಬಳಕೆಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿರ್ದಿಷ್ಟ ದಾಳಿಗಳು ಉಗ್ರರ ವಿರುದ್ಧ ಹೊರತು ಪಾಕಿಸ್ತಾನ ಅಥವಾ ಪಾಕಿಸ್ತಾನ ಸೇನೆ ವಿರುದ್ಧವಲ್ಲ ಎಂಬುದನ್ನು ಸೇನೆ ಹಾಗೂ ವಿದೇಶಾಂಗ ವ್ಯವಹಾರ ಸಚಿವಾಲಯ ಒತ್ತಿ ಹೇಳಿರುವುದನ್ನು ನಮ್ಮ ರಾಜಕೀಯ ನಾಯಕರು ಗಮನಿಸಬೇಕು. ಹೀಗಿದ್ದೂ ಅವರ ರಾಜಕೀಯ ಹೇಳಿಕೆಗಳಲ್ಲಿ ಉಗ್ರರು ಹಾಗೂ ಪಾಕಿಸ್ತಾನ ಮಧ್ಯದ ಗೆರೆ ಅಳಿಸಿ ಹೋದದ್ದು ಸರಿಯಲ್ಲ. ಯುದ್ಧೋನ್ಮಾದ, ದ್ವೇಷ ಸೃಷ್ಟಿಸುವ ಇಂತಹ ಬೆಳವಣಿಗೆ ಸಲ್ಲದು. ರಾಜಕೀಯ ವಾಗ್ವಾದಗಳು ಸಭ್ಯತೆಯ ಗೆರೆ ದಾಟಬಾರದು. ನಾವಾಡುವ ಮಾತುಗಳಲ್ಲಿ ಸಂಯಮ ಇರಬೇಕಾದುದು ಅಗತ್ಯ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ವಿಭಿನ್ನ ದನಿಗಳಿರುವುದು ಸಹಜ. ಆದರೆ ಅದು ಘನತೆಯ ಎಲ್ಲೆ ಮೀರಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.