ತಲಾಖ್‌ಗೆ ಕೇಂದ್ರದ ವಿರೋಧ ಸಮಾನತೆಯತ್ತ ಸಕಾರಾತ್ಮಕ ಹೆಜ್ಜೆ ಒಂದೇ ಬಾರಿಗೆ ಮೂರು ಸಲ ತಲಾಖ್ ಹೇಳಿ ವಿಚ್ಛೇದನ ನೀಡುವ ಪದ್ಧತಿಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ. ಸ್ವತಂತ್ರ ಭಾರತದಲ್ಲಿ ಕೇಂದ್ರ ಸರ್ಕಾರ ಇಂತಹ ಧೋರಣೆ ತಳೆದು, ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವುದು ಇದೇ ಮೊದಲು ಎನ್ನಲಾಗಿದೆ. ತಲಾಖ್ ಹಾಗೂ ಬಹುಪತ್ನಿತ್ವ ವಿರುದ್ಧ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಮಹಳೆಯರೇ ದನಿ ಎತ್ತಿದ್ದಾರೆ. ಹೀಗಾಗಿ ಈ ಧ್ವನಿಗಳಿಗೆ ಈಗ ಸರ್ಕಾರದ ಬೆಂಬಲ ಸಿಕ್ಕಂತಾಗಿರುವುದು ಸ್ವಾಗತಾರ್ಹ. ಮುಸ್ಲಿಮರಲ್ಲಿನ ಬಹುಪತ್ನಿತ್ವಕ್ಕೂ ವಿರೋಧ ದಾಖಲಿಸಿರುವ ಕೇಂದ್ರ, ಲಿಂಗ ಸಮಾನತೆ ಹಾಗೂ ಜಾತ್ಯತೀತ ತತ್ವಗಳ ಹಿನ್ನೆಲೆಯಲ್ಲಿ ಈ ಆಚರಣೆಯನ್ನು ಪುನರ್‌ವಿಮರ್ಶೆಗೆ ಒಳಪಡಿಸಬೇಕು ಎಂದು ಕೋರಿರುವುದು ಸರಿಯಾಗಿಯೇ ಇದೆ. ಕೇಂದ್ರದ ಈ ವಾದ, ಭಾರತೀಯರೆಲ್ಲರಿಗೂ ಏಕರೂಪ ನಾಗರಿಕ ಸಂಹಿತೆ ಕುರಿತ ಕಾನೂನು ಆಯೋಗದ ವರದಿಯಲ್ಲಿ ದನಿ ಪಡೆಯುವ ಸಾಧ್ಯತೆ ಇದೆ. ಏಕರೂಪ ನಾಗರಿಕ ಸಂಹಿತೆ ಕುರಿತಾದ ವರದಿಯನ್ನು ಕಾನೂನು ಆಯೋಗ 2018ರಲ್ಲಿ ಸಲ್ಲಿಸುವ ನಿರೀಕ್ಷೆ ಇದೆ. ಈಗಾಗಲೇ ತಲಾಖ್ ಮೂಲಕ ವಿಚ್ಛೇದನ ನೀಡುವ ಪದ್ಧತಿಯನ್ನು ನಿಷೇಧಿಸಬೇಕೇ ಬೇಡವೇ ಎಂಬುದರ ಬಗ್ಗೆ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಸಾರ್ವಜನಿಕರನ್ನು ಕಾನೂನು ಆಯೋಗ ಕೋರಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಐಚ್ಛಿಕವಾಗಿಸಬೇಕೇ ಎಂಬ ಬಗ್ಗೆಯೂ ಅಭಿಪ್ರಾಯ ತಿಳಿಸುವಂತೆ ಕಾನೂನು ಆಯೋಗ ಕೇಳಿಕೊಂಡಿದೆ. ತಲಾಖ್ ಮತ್ತು ಏಕರೂಪ ಸಂಹಿತೆಯಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಆಯೋಗ ಮುಂದಾಗಿರುವುದೂ ಇದೇ ಮೊದಲು. ಸಂವಿಧಾನದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿರುವ ಯಾವುದೇ ವೈಯಕ್ತಿಕ ಕಾನೂನು ಅಸಿಂಧು ಎಂದು ಭಾವಿಸಬಹುದು. ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ, ಆಫ್ಘಾನಿಸ್ತಾನ ಕೂಡ ವಿವಾಹಕ್ಕೆ ಸಂಬಂಧಿಸಿದ ಕಾನೂನುಗಳಲ್ಲಿ ಸುಧಾರಣೆ ತಂದಿವೆ. ಆದರೆ ತಲಾಖ್ ಪರವಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ (ಎಐಎಂಪಿಎಲ್‌ಬಿ) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರ ಹಾಸ್ಯಾಸ್ಪದ ಹಾಗೂ ಪ್ರಗತಿವಿರೋಧಿ. ‘ತಲಾಖ್‌ನಿಂದಾಗಿ ವಿಚ್ಚೇದನ ಪಡೆದುಕೊಳ್ಳುವುದು ಸುಲಭ. ಮಹಿಳೆಯರನ್ನು ಕೊಲ್ಲುವುದು ಅಥವಾ ಸುಡುವುದಕ್ಕಿಂತ ಇದು ಉತ್ತಮ ಆಯ್ಕೆ ಆಗುತ್ತದೆ’ ಎಂದು ಮಂಡಳಿ ವಾದಿಸಿದೆ. ಅಲ್ಲದೆ ‘ಪಿತೃಪ್ರಧಾನವಾದ ಈ ಆಚರಣೆಯಲ್ಲಿ ಯಾವುದೇ ದೋಷವಿಲ್ಲ. ಏಕೆಂದರೆ ಪುರುಷರಿಗೆ ಹೆಚ್ಚಿನ ವಿವೇಕ ವಿದ್ದು ನಿರ್ಧಾರ ಕೈಗೊಳ್ಳುವಲ್ಲಿ ಹೆಚ್ಚು ಸಮರ್ಥರು’ ಎಂಬಂತಹ ಮಂಡಳಿಯ ಮಾತುಗಳಂತೂ ಅಸಂಗತ. ಬಹುಪತ್ನಿತ್ವ ಸಾಮಾಜಿಕ ಅಗತ್ಯ ಎಂದೂ ಮಂಡಳಿ ಪ್ರತಿಪಾದಿಸುತ್ತದೆ. ‘ಲಿಂಗಾನುಪಾತದ ಅಸಮತೋಲನ ಇರುವುದರಿಂದ ಅಕ್ರಮ ಪತ್ನಿಗಿಂತ ಕಾನೂನುಬದ್ಧವಾಗಿಯೇ ಎರಡನೇ ಪತ್ನಿ ಇರುವುದು ಉತ್ತಮವಲ್ಲವೆ?’ ಎಂದು ವಾದಿಸಿರುವುದಂತೂ ಅಸೂಕ್ಷ್ಮತೆಯ ಪರಾಕಾಷ್ಠೆ. ತಲಾಖ್ ಅಕ್ರಮ ಎಂಬುದನ್ನು ಈಗಾಗಲೇ ಅನೇಕ ಹೈಕೋರ್ಟ್‌ಗಳ ತೀರ್ಪುಗಳು ಎತ್ತಿ ಹೇಳಿವೆ. ಹೀಗಿದ್ದೂ ಈ ಆಚರಣೆ ಈಗಲೂ ಮುಂದುವರಿದಿದೆ. ಹೀಗಾಗಿ ಪ್ರತಿ ಸಂತ್ರಸ್ತೆಯೂ ಪರಿಹಾರಕ್ಕಾಗಿ ವೈಯಕ್ತಿಕವಾಗಿಯೇ ಕೋರ್ಟ್‌ಗೆ ಹೋಗಬೇಕಾಗಿರುವುದು ಪ್ರಯಾಸದ ಸಂಗತಿಯಾಗಿದೆ. ಈಗ ಈ ವಿಚಾರದಲ್ಲಿ ಲಿಂಗತ್ವ ನ್ಯಾಯ ದೊರಕಿಸಿಕೊಡಲು ಉತ್ತಮ ಚೌಕಟ್ಟು ಸೃಷ್ಟಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳಲು ಸಂವಿಧಾನದ ಜೊತೆಗೆ ಹಿಂದಿನ ತೀರ್ಪುಗಳ ಪರಾಮರ್ಶೆಯನ್ನೂ ಕಾನೂನು ಆಯೋಗ ಮಾಡುತ್ತಿದೆ ಎಂಬುದು ಸಮಾಧಾನಕರ. ಜೊತೆಗೆ ಸಂಬಂಧಿಸಿದ ಎಲ್ಲರ ಜೊತೆ ಸಮಾಲೋಚನೆಗೆ ಕಾನೂನು ಆಯೋಗ ಮುಂದಾಗಿರುವುದು ಏಕರೂಪ ನಾಗರಿಕ ಸಂಹಿತೆ ರೂಪಿಸುವ ಹಾದಿಯನ್ನು ಸುಗಮಗೊಳಿಸಬಹುದು. ಆದರೆ ಈ ಬಗ್ಗೆ ಒಮ್ಮತ ಮೂಡುವುದು ಕಷ್ಟ ಎಂಬುದನ್ನೂ ತಳ್ಳಿಹಾಕಲಾಗದು. 1980ರ ದಶಕದ ಮಧ್ಯಭಾಗದಲ್ಲಿ ಅನೇಕ ಧೈರ್ಯವಂತ ಮಹಿಳೆಯರು ವೈಯಕ್ತಿಕ ಕಾನೂನುಗಳ ವಿರುದ್ಧ ದನಿ ಎತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು. ವಿವಿಧ ಧರ್ಮಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳಿಂದಾಗಿ ‘ಪೂರ್ಣ ಗೊಂದಲಮಯ’ ಸ್ಥಿತಿ ಇರುವ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಟೀಕಿಸಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಿಸಿತ್ತು. ಹೀಗಾಗಿ ಈಗ ಈ ಭರವಸೆ ಈಡೇರಿಸುವ ಅವಕಾಶ ಆಡಳಿತ ಪಕ್ಷಕ್ಕೆ ಸಿಕ್ಕಿದಂತಾಗಿದೆ. ಇದು ಸೂಕ್ಷ್ಮವಾದ ವಿಚಾರ ಎಂಬುದು ನಿಜ. ಆದರೆ ಈ ವಿಚಾರದಲ್ಲಿ ಒಮ್ಮತ ಮೂಡಿಸಲು ವಿಸ್ತೃತ ಸಮಾಲೋಚನೆಗಳ ಅಗತ್ಯವಿದೆ. ವಿವಿಧ ವೈಯಕ್ತಿಕ ಕಾನೂನು ಮಂಡಳಿಗಳೂ ಸೇರಿದಂತೆ ಸಂಬಂಧಿಸಿದ ಎಲ್ಲರ ಜೊತೆ ಚರ್ಚೆಗಳನ್ನು ನಡೆಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.