ಸ್ಯಾಂಟೋಸ್‌ ಮೇಲೆ ಜವಾಬ್ದಾರಿ ಹೊರಿಸಿದ ನೊಬೆಲ್‌ ಶಾಂತಿ ಪ್ರಶಸ್ತಿ ಮಾದಕ ದ್ರವ್ಯ ಉತ್ಪಾದನೆ ಮತ್ತು ಮಾರಾಟದ ಮಾಫಿಯಾಗಳು ಹಾಗೂ ಭೂಗತ ದೊರೆಗಳ ಕ್ರೌರ್ಯ, ಹಿಂಸಾತ್ಮಕ ಅಂತಃಕಲಹಕ್ಕೆ ಕುಖ್ಯಾತಿ ಪಡೆದ ಕೊಲಂಬಿಯಾ ದೇಶ ಈಗ ಬೇರೆಯೇ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಅದರ ಅಧ್ಯಕ್ಷ ಉವಾನ್‌ ಮ್ಯಾನುಯೆಲ್ ಸ್ಯಾಂಟೋಸ್ ಅವರು ಈ ಸಲದ ನೊಬೆಲ್‌ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಳೆದ ಶುಕ್ರವಾರ ನಾರ್ವೆಯಲ್ಲಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸುತ್ತಿದ್ದಂತೆ ಅನೇಕರು ಹುಬ್ಬೇರಿಸಿದ್ದರು. ಆದರೆ ಇಂತಹ ಅಚ್ಚರಿಯೇನೂ ಹೊಸತಲ್ಲ. ಏಕೆಂದರೆ ನೊಬೆಲ್‌ ಪ್ರಶಸ್ತಿಗಳ ಪೈಕಿ ಶಾಂತಿ ಪ್ರಶಸ್ತಿ ಎಷ್ಟು ಪ್ರತಿಷ್ಠಿತವೋ ಅಷ್ಟೇ ವಿವಾದಾತ್ಮಕವೂ ಹೌದು. ಪ್ರಶಸ್ತಿಗಾಗಿ ಒಟ್ಟೂ 376 ಸಂಸ್ಥೆಗಳು, ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಲಾಗಿತ್ತು. ಅಣ್ವಸ್ತ್ರ ತಯಾರಿಕೆ ಕೈಬಿಡುವಂತೆ ಇರಾನ್‌ನ ಮನವೊಲಿಸಿ ಯಶಸ್ವಿಯಾದ ಸಂಧಾನಕಾರರು, ರಷ್ಯಾದ ನಾಗರಿಕ ಹಕ್ಕು ಹೋರಾಟಗಾರ್ತಿ ಸ್ವೆಟ್ಲಾನಾ ಗನುಷ್ಕಿನಾ, ಸಿರಿಯಾದ ಯುದ್ಧಪೀಡಿತ ಪ್ರದೇಶಗಳಲ್ಲಿ ಅಸಹಾಯಕ ನಾಗರಿಕರಿಗೆ ಸಹಾಯ ಮಾಡುತ್ತಿರುವ ವ್ಹೈಟ್‌ ಹೆಲ್ಮೆಟ್‌ ಸ್ವಯಂಸೇವಾ ತಂಡ, ಐಎಸ್‌ ಉಗ್ರರಿಂದ ಅಪಹರಣಕ್ಕೆ ಒಳಗಾಗಿ ಲೈಂಗಿಕ ಗುಲಾಮಳಂತೆ ಬಳಕೆಯಾದ ಯೆಜಿದಿ ಸಮುದಾಯದ ನಾಡಿಯಾ ಮುರಾದ್‌ ಹೆಸರು ಜೋರಾಗಿಯೇ ಚಲಾವಣೆಯಲ್ಲಿ ಇತ್ತು. ಸ್ಯಾಂಟೋಸ್‌ ಮತ್ತು ಬಂಡುಕೋರರ ಸಂಘಟನೆ ರೆವಲ್ಯೂಷನರಿ ಆರ್ಮ್‌್ಡ ಫೋರ್ಸ್‌ಸ್‌ ಆಫ್‌ ಕೊಲಂಬಿಯಾ ಮುಖ್ಯಸ್ಥ ರಾಡ್ರಿಗೊ ಲಂಡೊನೊ ಎಚೆವೆರಿ (ಟಿಮೊಚೆಂಕೊ) ಹೆಸರು ಮೊದಲು ಪಟ್ಟಿಯಲ್ಲಿ ಸೇರಿತ್ತು. ಏಕೆಂದರೆ 52 ವರ್ಷಗಳಲ್ಲಿ 2.5 ಲಕ್ಷ ಜನರನ್ನು ಬಲಿ ತೆಗೆದುಕೊಂಡ ಸಂಘರ್ಷ ಕೊನೆಗೊಳಿಸಲು ಇವರಿಬ್ಬರೂ ಆಗಸ್ಟ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಇದೇ ತಿಂಗಳು 2 ರಂದು ನಡೆದ ಜನಮತಗಣನೆಯಲ್ಲಿ ಅಲ್ಲಿನ ಪ್ರಜೆಗಳು ಒಪ್ಪಂದ ತಿರಸ್ಕರಿಸಿದ ಕಾರಣ ಇವರಿಬ್ಬರ ಹೆಸರು ಚಲಾವಣೆಯಿಂದ ಹಿಂದೆ ಸರಿದಿತ್ತು. ಆದಾಗ್ಯೂ ಎಲ್ಲರ ಊಹೆ ತಲೆಕೆಳಗು ಮಾಡಿ ಸಮಿತಿಯು ಸ್ಯಾಂಟೋಸ್‌ ಅವರನ್ನು ಮಾತ್ರ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಟಿಮೊಚೆಂಕೊ ಹೆಸರನ್ನು ಗಣನೆಗೇ ತೆಗೆದುಕೊಂಡಿಲ್ಲ. ‘ಶಾಂತಿ ಸ್ಥಾಪನೆಗೆ ಸ್ಯಾಂಟೋಸ್‌ ಮಾಡಿದ ಪ್ರಯತ್ನ ಶ್ಲಾಘನೀಯ. ಇತರರಿಗೂ ಪ್ರೇರಣೆಯಾಗಬಹುದು’ ಎಂಬ ಸಮಜಾಯಿಷಿಯನ್ನು ಸಮಿತಿ ಕೊಟ್ಟಿದೆ. ಎಷ್ಟೋ ಸಲ ಸಮಿತಿಯ ಆಯ್ಕೆಗಳಿಗೆ ಆಧಾರ, ಸಮರ್ಥನೆ ಏನು ಎಂಬುದೇ ಗೊತ್ತಾಗುವುದಿಲ್ಲ. ಸಮಿತಿಯ ಒಳಗಿನ ಚರ್ಚೆಗಳಂತೂ ಬಹಿರಂಗಕ್ಕೆ ಬರುವುದೇ ಇಲ್ಲ. ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ, ಹಿಂದೆ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಹೆನ್ರಿ ಕಿಸಿಂಜರ್‌, ಪ್ಯಾಲೆಸ್ಟೀನ್‌ ಅಧ್ಯಕ್ಷರಾಗಿದ್ದ ಯಾಸೆರ್‌ ಅರಾಫತ್‌, ಇಸ್ರೇಲ್‌ ಅಧ್ಯಕ್ಷರಾಗಿದ್ದ ಶಿಮೋನ್‌ ಪೆರೆಸ್‌ ಮತ್ತು ಪ್ರಧಾನಿಯಾಗಿದ್ದ ಯಿಜಕ್‌ ರಬಿನ್‌ ಅವರಿಗೆಲ್ಲ ಶಾಂತಿ ಪ್ರಶಸ್ತಿ ಘೋಷಿಸಿದಾಗಲೂ ಟೀಕೆಗಳು ಕೇಳಿ ಬಂದಿದ್ದವು. 1901ರಿಂದ ಇಲ್ಲಿಯವರೆಗೆ ನಡುನಡುವೆ 19 ಬಾರಿ ‘ಅರ್ಹರು ಯಾರೂ ಇಲ್ಲ’ ಎಂದು ಶಾಂತಿ ಪ್ರಶಸ್ತಿಯನ್ನೇ ಘೋಷಿಸಿರಲಿಲ್ಲ. ಕೆಲ ವರ್ಷ ಒಂದಕ್ಕಿಂತ ಹೆಚ್ಚು ಜನರಿಗೆ, ಸಂಸ್ಥೆಗಳಿಗೆ ನೀಡಿದ ಉದಾಹರಣೆಗಳೂ ಇವೆ. ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ, ಅಹಿಂಸೆಯ ಮೂಲಕ ಸ್ವಾತಂತ್ರ್ಯ ಚಳವಳಿ ಮುನ್ನಡೆಸಿ ಎಲ್ಲರಿಗೂ ಪ್ರೇರಣೆಯಾದ ಮಹಾತ್ಮ ಗಾಂಧಿ ಅವರನ್ನು ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲೇ ಇಲ್ಲ. ಹೀಗೆ ಈ ಪ್ರಶಸ್ತಿ ಸುತ್ತ ವಿವಾದಗಳು ಕಡಿಮೆಯೇನಿಲ್ಲ. ಆದರೂ ಇದರ ಗೌರವಕ್ಕೆ ಕುಂದು ಬಂದಿಲ್ಲ. ಅದೇ ಇದರ ಹೆಗ್ಗಳಿಕೆ. ಪ್ರಶಸ್ತಿಯಿಂದಾಗಿ ಸ್ಯಾಂಟೋಸ್‌ ಅವರ ಮೇಲಿನ ಹೊಣೆ ಮತ್ತಷ್ಟು ಹೆಚ್ಚಿದೆ. ಏಕೆಂದರೆ ಪ್ರಜೆಗಳಿಂದ ತಿರಸ್ಕಾರಕ್ಕೆ ಒಳಗಾದ ಕದನ ವಿರಾಮ ಒಪ್ಪಂದ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಹೋರಾಡುವುದಕ್ಕೆ ಹಣ ಕೂಡಿಸಲು ದರೋಡೆ, ಅಪಹರಣ, ನರಮೇಧವನ್ನು ವೃತ್ತಿ ಮಾಡಿಕೊಂಡ ಬಂಡುಕೋರರು ಆ ನಂತರ ಮತ್ತೆ ಹಿಂಸಾತ್ಮಕ ಕಾದಾಟಕ್ಕೆ ಇಳಿಯುವುದಿಲ್ಲ ಎಂಬ ಖಾತರಿಯೇನೂ ಇಲ್ಲ. ‘ಮತ್ತೆ ಸಂಘರ್ಷ ಇಲ್ಲ’ ಎಂದು ಬಂಡುಕೋರರು ಈಗೇನೋ ಹೇಳಿದ್ದಾರೆ. ಹೀಗಾಗಿ ಸಂಧಾನದ ಬಾಗಿಲು ಮುಚ್ಚಿಲ್ಲ ಎಂಬ ಆಸೆ ಇಟ್ಟುಕೊಳ್ಳಬಹುದು. ಮತದಾನ ಕಾಲಕ್ಕೆ ಜನ ಕೂಡ ಒಪ್ಪಂದದ ಕೆಲ ಅಂಶಗಳ ಬಗ್ಗೆ ಮಾತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಕಗ್ಗಂಟುಗಳನ್ನು ಸ್ಯಾಂಟೋಸ್‌ ನಾಜೂಕಾಗಿ ನಿಭಾಯಿಸಬೇಕಿದೆ. ‘ಶಾಂತಿ ಸ್ಥಾಪನೆ ಪ್ರಯತ್ನಗಳಿಗೆ ಇನ್ನೂ ಒಂದು ಅವಕಾಶ ಕೊಡಿ’ ಎಂಬುದು ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿಯ ಬಯಕೆ. ಪ್ರಜೆಗಳನ್ನು ಮತ್ತು ಬಂಡುಕೋರರನ್ನು ಈ ವಿಚಾರದಲ್ಲಿ ಮನವೊಲಿಸಲು ಸ್ಯಾಂಟೋಸ್‌ ಯಶಸ್ವಿಯಾದರೆ ಪ್ರಶಸ್ತಿಗೂ ಬೆಲೆ, ಅವರಿಗೂ ಬೆಲೆ. ಅಂತಹ ಇಚ್ಛಾಶಕ್ತಿ ಅವರಲ್ಲಿದೆಯೇ? ಕಾದು ನೋಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.