ಅಗ್ರಪಟ್ಟವನ್ನು ದೀರ್ಘಕಾಲ ಉಳಿಸಿಕೊಳ್ಳುವ ಗುರಿ ಇರಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಚಾರಿತ್ರಿಕ ಸಾಧನೆ ಮಾಡಿದೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಭಾರತ ತಂಡ, ಕ್ರಿಕೆಟ್‌ ಲೋಕದ ಎಲ್ಲರ ಗಮನ ಸೆಳೆದಿದೆ. ಟೆಸ್ಟ್‌ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಐಸಿಸಿ ಕ್ರಮಾಂಕ ನೀಡುವ ಪದ್ಧತಿ 2003ರಲ್ಲಿ ಶುರುವಾಯಿತು. 2009ರಲ್ಲಿ ಮೊದಲ ಬಾರಿಗೆ ಭಾರತ ಅಗ್ರಪಟ್ಟಕ್ಕೇರಿತ್ತು. ಈಗ ನಾಲ್ಕನೇ ಬಾರಿಗೆ ಆ ಔನ್ನತ್ಯಕ್ಕೆ ಏರಿ ನಿಂತಿದೆ. ಆದರೆ ಹಿಂದಿನ ಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ. ಆ ಸಂದರ್ಭದಲ್ಲಿ ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ವೀರೇಂದ್ರ ಸೆಹ್ವಾಗ್‌, ಎಂ.ಎಸ್‌.ದೋನಿ ಅವರಂತಹ ಘಟಾನುಘಟಿಗಳಿದ್ದರು. ಆದರೆ ಈಗ ಅಂತಹ ತಾರಾಮೌಲ್ಯದ ಸಾಧಕರ ದಂಡು ಇಲ್ಲ. ಆದರೆ ವಿರಾಟ್‌ ಕೊಹ್ಲಿ, ಆರ್.ಅಶ್ವಿನ್‌ ಮುಂತಾದವರು ಆ ಎತ್ತರದತ್ತ ದಾಪುಗಾಲು ಇಟ್ಟಿದ್ದಾರೆ. ಈಚೆಗಷ್ಟೇ ಮುಗಿದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೂರೂ ಪಂದ್ಯಗಳನ್ನು ಭಾರತ ಗೆದ್ದಿದೆ. ವಿರಾಟ್‌ ಕೊಹ್ಲಿ ನಾಯಕತ್ವ ವಹಿಸಿಕೊಂಡ ನಂತರ ಭಾರತ ತಂಡ ಗೆದ್ದ ಸತತ ನಾಲ್ಕನೇ ಸರಣಿ ಇದು. ಪ್ರಸಕ್ತ ಸಂದರ್ಭದ ಅತಿರಥ ಮಹಾರಥ ತಂಡಗಳನ್ನೆಲ್ಲಾ ಮಣಿಸಿದ ಹೆಗ್ಗಳಿಕೆಯ ಭಾರತ ಆತ್ಮವಿಶ್ವಾಸದಿಂದ ಬೀಗುತ್ತಿದೆ. ನ್ಯೂಜಿಲೆಂಡ್‌ ಸರಣಿಯ ಪ್ರತಿಯೊಂದು ಪಂದ್ಯದಲ್ಲಿಯೂ ಲೀಲಾಜಾಲವಾಗಿ ರನ್‌ಗಳನ್ನು ಪೇರಿಸಿದೆ, ವಿಕೆಟ್‌ಗಳನ್ನು ಉರುಳಿಸಿದೆ. ಕೊಹ್ಲಿ, ಅಶ್ವಿನ್‌ ಅವರಷ್ಟೇ ಮಿಂಚಿರುವುದಲ್ಲ. ಕಾನ್ಪುರದಲ್ಲಿ ರವೀಂದ್ರ ಜಡೇಜ, ಕೋಲ್ಕತ್ತದಲ್ಲಿ ವೃದ್ಧಿಮಾನ್‌ ಸಹಾ ಮುಂತಾದವರು ಗಮನ ಸೆಳೆದಿದ್ದಾರೆ. ‘ನಮಗೆ ಇಂತಹದೇ ಪಿಚ್‌ ಇರಬೇಕೆಂದೇನಿಲ್ಲ, ಪಿಚ್‌ ಹೇಗಿದ್ದರೂ ನಾವು ಅತ್ಯುತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದ್ದೇವೆ’ ಎಂದು ಇದೀಗ ಕೊಹ್ಲಿ ಹೇಳಿರುವ ಮಾತು ಭಾರತ ತಂಡ ಆತ್ಮವಿಶ್ವಾಸದಿಂದ ಪುಟಿಯುತ್ತಿರುವುದರ ದ್ಯೋತಕವಾಗಿದೆ. ಈ ನಾಡಿನಲ್ಲಿ ಸಂಸ್ಕೃತಿಯ ಸ್ವರೂಪ ಪಡೆದುಕೊಂಡಿರುವ ಕ್ರಿಕೆಟ್‌ ಬಗ್ಗೆ ಎಳೆಯರಿಗೆ ಮತ್ತು ಯುವಜನರಿಗೆ ಜೀವದಷ್ಟು ಪ್ರೀತಿ. ರಾಷ್ಟ್ರೀಯ ತಂಡದ ಆಟಗಾರರು ಉತ್ಕೃಷ್ಟ ಸಾಧನೆ ತೋರಿದಾಗ ಈ ನೆಲದ ಕ್ರಿಕೆಟ್‌ಪ್ರಿಯರೆಲ್ಲರೂ ಸಂಭ್ರಮಿಸಿದ್ದಾರೆ. ಜಗತ್ತಿನಲ್ಲಿ ನಾವು ಯಾರಿಗಿಂತಲೂ ಕಡಿಮೆ ಇಲ್ಲ ಎಂಬ ಆತ್ಮಾಭಿಮಾನ ಅವರಲ್ಲಿ ತುಂಬಿ ತುಳುಕುತ್ತಿದೆ. ಹೀಗಾಗಿ ಈ ಸರಣಿ ಗೆಲುವು ನಮಗೆ ಬಹಳ ಮುಖ್ಯವಾಗಿದೆ. ಇದೀಗ ನ್ಯೂಜಿಲೆಂಡ್‌ ವಿರುದ್ಧ ಐದು ಪಂದ್ಯಗಳ ಅಂತರರಾಷ್ಟ್ರೀಯ ಏಕದಿನ ಸರಣಿಗೆ ಭಾರತ ಸಜ್ಜಾಗಿದೆ. ಅನುಭವಿ ದೋನಿ ಅವರ ನಾಯಕತ್ವದ ಈ ತಂಡ ನ್ಯೂಜಿಲೆಂಡ್‌ ಆಟಗಾರರಿಗೆ ಆಘಾತ ನೀಡಲು ತುದಿಗಾಲಲ್ಲಿ ನಿಂತಿದೆ. ಆಯ್ಕೆ ಸಮಿತಿ ಈ ತಂಡದಲ್ಲಿ ಗೌತಮ್‌ ಗಂಭೀರ್‌ಗೆ ಸ್ಥಾನ ನೀಡಿಲ್ಲ. ಅಶ್ವಿನ್‌, ರವೀಂದ್ರ ಜಡೇಜ, ಮಹಮ್ಮದ್‌ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕನ್ನಡಿಗ ಮನೀಷ್‌ ಪಾಂಡೆಯವರಿಗೆ ಅವಕಾಶ ಸಿಕ್ಕಿದೆ. ದೋನಿ, ಕೊಹ್ಲಿ ನೆರಳಿನಲ್ಲಿ ಹಲವು ಹೊಸಬರು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. 22 ತಿಂಗಳ ಹಿಂದೆ ಟೆಸ್ಟ್‌ ಕ್ರಿಕೆಟ್‌ಗೆ ದೋನಿ ವಿದಾಯ ಹೇಳಿದಾಗ ಆ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆ ಎದ್ದಿತ್ತು. ಕೊಹ್ಲಿ ಆ ಕೊರತೆ ಕಾಡದಂತೆ ನೋಡಿಕೊಂಡಿದ್ದಾರೆ. ನಮ್ಮಲ್ಲಿ ಕ್ರಿಕೆಟ್‌ ಪ್ರತಿಭಾವಂತರಿಗೆ ಕೊರತೆ ಇಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ. ಏಕದಿನ ಕ್ರಿಕೆಟ್‌ ಕ್ರಮಾಂಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್‌ ಎದುರಿನ ಏಕದಿನ ಸರಣಿಯನ್ನು ಗೆದ್ದರೆ ಭಾರತ 3ನೇ ಸ್ಥಾನಕ್ಕೆ ಏರಬಹುದು. ಆ ನಿಟ್ಟಿನಲ್ಲಿ ಭಾರತದ ಆಟಗಾರರು ಸತ್ವಪರೀಕ್ಷೆಗೆ ಇಳಿಯಲಿದ್ದಾರೆ. ಅತ್ಯಂತ ಜನಪ್ರಿಯ ಮಾದರಿಗಳಾದ ಏಕದಿನ ಮತ್ತು ಟ್ವೆಂಟಿ– 20 ಕ್ರಿಕೆಟ್‌ನಲ್ಲಿ ಗೆಲುವು ಸೋಲುಗಳ ಲೆಕ್ಕಾಚಾರಗಳ ನಡುವೆಯೂ ಟೆಸ್ಟ್‌ನಲ್ಲಿ ಎತ್ತರದ ಸ್ಥಾನ ಪಡೆಯುವುದು ಘನತೆಯ ಸಂಗತಿಯಾಗಿದೆ. ಇದೀಗ ಭಾರತ ಅಂತಹ ಗಣ್ಯ ಸ್ಥಾನದಲ್ಲಿದೆ. ಈ ಸ್ಥಾನವನ್ನು ದೀರ್ಘ ಕಾಲ ಉಳಿಸಿಕೊಂಡು ಹೋಗುವ ಬಗ್ಗೆಯೂ ಯೋಜನೆಗಳನ್ನು ರೂಪಿಸಬೇಕಿದೆ. ಅದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸಬೇಕಿದೆ. ಭಾರತ 115 ಪಾಯಿಂಟ್ಸ್‌ ಗಳಿಸಿದ್ದರೆ, ಪಾಕಿಸ್ತಾನ 111 ಪಾಯಿಂಟ್‌ಗಳೊಂದಿಗೆ ನಮ್ಮ ಬೆನ್ನಿಗಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು ತಲಾ 108 ಪಾಯಿಂಟ್‌ಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ. ಮುಂದಿನ ದಿನಗಳಲ್ಲಿ ನಡೆಯುವ ಟೆಸ್ಟ್‌ಗಳ ಏಳುಬೀಳುಗಳ ನಡುವಣ ಪಾಯಿಂಟ್ಸ್‌ ಲೆಕ್ಕಾಚಾರದಲ್ಲಿ ಭಾರತದ ಅಗ್ರಸ್ಥಾನಕ್ಕೆ ಯಾವುದೇ ಕ್ಷಣದಲ್ಲಿಯೂ ಚ್ಯುತಿ ಬರಬಹುದು. ಹೀಗಾಗಿ, ಮುಂದಿನ ತಿಂಗಳು ಭಾರತದಲ್ಲೇ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಗೆದ್ದು ಹೆಚ್ಚು ಪಾಯಿಂಟ್ಸ್‌ ಸಂಗ್ರಹಿಸುವ ಬಗ್ಗೆ ಭಾರತ ಗಮನ ಕೇಂದ್ರೀಕರಿಸಬೇಕಿದೆ. ನಮ್ಮಲ್ಲಿ ಪ್ರತಿಭೆಯ ಪ್ರವಾಹವೇ ಹರಿಯುತ್ತಿದೆ. ಅದನ್ನು ಇನ್ನಷ್ಟು ಸದುಪಯೋಗಪಡಿಸಿಕೊಳ್ಳಬೇಕು. ಸುಪ್ರೀಂ ಕೋರ್ಟ್‌ ಮತ್ತು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ನಡುವೆ ಸಂಘರ್ಷ ನಡೆಯುತ್ತಿರುವ ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ನಮ್ಮ ಆಟಗಾರರು ಈ ಮಟ್ಟಿಗಿನ ಅನನ್ಯ ಸಾಮರ್ಥ್ಯ ತೋರಿರುವುದು ಶ್ಲಾಘನಾರ್ಹ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.