ಅಕ್ರಮ ತಡೆಗೆ ಬಳಸಿದ ಸೂತ್ರವೇ ಅಕ್ರಮಕ್ಕೆ ನೆರವಾದಾಗ... ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಫಲಾನುಭವಿಗಳಿಗೆ ವಿತರಿಸುವ ಪಡಿತರ ಚೀಟಿಗಳಿಗೆ ‘ನಕಲಿ’ ಆಧಾರ್ ಸಂಖ್ಯೆಗಳನ್ನು ಜೋಡಿಸಿರುವ 1.60 ಲಕ್ಷ ಪ್ರಕರಣಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಒಂದು ಪ್ರಕರಣದಲ್ಲಂತೂ 708 ಪಡಿತರ ಚೀಟಿಗಳಿಗೆ ಒಂದೇ ಆಧಾರ್ ಸಂಖ್ಯೆಯನ್ನು ಜೋಡಿಸಲಾಗಿದೆ. ಈ ವಿವರಗಳು ಪಡಿತರ ಚೀಟಿ ವಿತರಣೆಗಾಗಿ ಸರ್ಕಾರ ರೂಪಿಸಿರುವ ತಂತ್ರಾಂಶದ ದಕ್ಷತೆಯನ್ನು ಪ್ರಶ್ನಿಸುತ್ತಿವೆ. ಹಾಗೆಯೇ ಸರ್ಕಾರಿ ಸವಲತ್ತುಗಳನ್ನು ಒದಗಿಸುವಾಗ ಫಲಾನುಭವಿಗಳ ಆಧಾರ್ ಸಂಖ್ಯೆ ಪಡೆಯುವುದನ್ನು ಕಡ್ಡಾಯಗೊಳಿಸುವುದರ ಹಿಂದಿನ ತರ್ಕದ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿವೆ. ಈಗಿನ ವ್ಯವಸ್ಥೆಯಲ್ಲಿ ಪಡಿತರ ಚೀಟಿ ವಿತರಣೆಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಿಸಲಾಗಿದೆ. ಅಂದರೆ ಪಡಿತರ ಚೀಟಿಗೆ ಅರ್ಹರಾದವರೆಲ್ಲರ ಹೆಸರೂ ಅವರ ಆಧಾರ್ ಸಂಖ್ಯೆಯ ಜೊತೆ ಒಂದೇ ದತ್ತಸಂಚಯವಾಗಿ ಲಭ್ಯವಿರುತ್ತದೆ. ಆಧಾರ್ ಸಂಖ್ಯೆಯೆಂದರೆ ಅದೊಂದು ವಿಶಿಷ್ಟ ಗುರುತಿನ ಸಂಖ್ಯೆ. ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ಸಂಖ್ಯೆಯನ್ನು ಹೊಂದಿರಲು ಸಾಧ್ಯವೇ ಇಲ್ಲ. ಆಧಾರ್ ಸಂಖ್ಯೆಗಳ ದತ್ತ ಸಂಚಯವನ್ನು ಸಂಪರ್ಕಿಸಿ ನಿರ್ದಿಷ್ಟ ವ್ಯಕ್ತಿಗಳ ಗುರುತನ್ನು ಖಾತರಿ ಪಡಿಸಿಕೊಳ್ಳುವ ಅವಕಾಶವನ್ನು ಸರ್ಕಾರಿ ಇಲಾಖೆಗಳಿಗೆ ನೀಡಲಾಗಿದೆ. ಇಷ್ಟಾಗಿಯೂ ಒಂದು ಆಧಾರ್ ಸಂಖ್ಯೆಯನ್ನು 708 ಪಡಿತರ ಚೀಟಿಗಳಿಗೆ ಜೋಡಿಸಲು ಹೇಗೆ ಸಾಧ್ಯವಾಯಿತು? ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವಾಗ ಈ ಪ್ರಕ್ರಿಯೆಯನ್ನು ನಡೆಸಲೇ ಇಲ್ಲವೇ? ಈ ಬಗೆಯಲ್ಲಿ ಗುರುತನ್ನು ಖಾತರಿಪಡಿಸಿಕೊಳ್ಳುವ ವ್ಯವಸ್ಥೆಯೊಂದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಳವಡಿಸಿಕೊಂಡಿಲ್ಲವಾದರೆ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಗೆ ಜೋಡಿಸುವ ಅಗತ್ಯವಾದರೂ ಏನಿತ್ತು? ಈ ಎಲ್ಲಾ ಪ್ರಶ್ನೆಗಳಿಗೆ ಇರುವ ಉತ್ತರ ಒಂದೇ. ಪಡಿತರ ಚೀಟಿಯನ್ನು ನೀಡುವ ತಂತ್ರಾಂಶವನ್ನು ರೂಪಿಸುವಾಗಲೇ ಇಂಥದ್ದೊಂದು ದೋಷವನ್ನು ಪ್ರಜ್ಞಾಪೂರ್ವಕವಾಗಿಯೇ ಅಳವಡಿಸಲಾಗಿತ್ತು! ಹೌದು, ಪಡಿತರ ಚೀಟಿ ನೀಡಿಕೆಯಲ್ಲಿ ಅಕ್ರಮ ಸಂಭವಿಸಬಾರದು ಎಂಬ ಉದ್ದೇಶದಿಂದ ರೂಪಿಸಲಾದ ತಂತ್ರಾಂಶವೊಂದು ಅಕ್ರಮಕ್ಕೆ ಸಹಾಯ ಮಾಡಿದ್ದನ್ನು ಇನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ? ಪಡಿತರ ಚೀಟಿಯನ್ನು ವಿತರಿಸುವ ಪ್ರಕ್ರಿಯೆಯಲ್ಲಿ ಈ ಬಗೆಯ ಅಕ್ರಮಗಳಿರುವುದು ಹೊಸತೇನೂ ಅಲ್ಲ. ಕೆಲವು ವರ್ಷಗಳ ಹಿಂದೆ ಭಾರೀ ಸಂಖ್ಯೆಯಲ್ಲಿ ಅಕ್ರಮ ಬಿಪಿಎಲ್ ಪಡಿತರ ಚೀಟಿಗಳು ವಿತರಣೆಯಾದುದಕ್ಕಾಗಿ ತಂತ್ರಾಂಶ ತಯಾರಿಕಾ ಕಂಪೆನಿಯೊಂದನ್ನು ಹೊಣೆಯಾಗಿಸಲಾಗಿತ್ತು. ತಂತ್ರಾಂಶ ತಯಾರಿಕಾ ಕಂಪೆನಿಯನ್ನಷ್ಟೇ ಅಪರಾಧಿಯನ್ನಾಗಿಸಿದ್ದನ್ನು ಆಗಲೂ ಪ್ರಶ್ನಿಸಲಾಗಿತ್ತು. ಅದು ಸರ್ಕಾರದ ಕಿವಿಗೆ ಬಿದ್ದಂತೆ ಕಾಣಲಿಲ್ಲ. ಈಗಿನ ಪ್ರಕರಣದಲ್ಲಿಯೂ ಕೇವಲ ‘ನಕಲಿ’ ಆಧಾರ್ ಸಂಖ್ಯೆಯನ್ನು ಯಾರು ಜೋಡಿಸಿದರು ಎಂಬುದನ್ನೇ ಮುಖ್ಯವಾಗಿಟ್ಟುಕೊಂಡು ಚರ್ಚೆಗಳು ನಡೆಯುತ್ತಿವೆ. ಇವರು ಇಡೀ ಹಗರಣದ ಸಣ್ಣ ಕೊಂಡಿ ಮಾತ್ರ. ತಂತ್ರಾಂಶವನ್ನು ಅಭಿವೃದ್ಧಿಪಡಿಸುವಾಗಲೇ ಅದರಲ್ಲೊಂದು ಲೋಪವಿರುವಂತೆ ನೋಡಿಕೊಂಡವರಲ್ಲಿ ಇವರು ಇರಲು ಸಾಧ್ಯವಿಲ್ಲ. ತಂತ್ರಾಂಶ ಹೇಗಿರಬೇಕೆಂದು ನಿರ್ಧರಿಸುವ ತಂಡದಲ್ಲಿ ಹಿರಿಯ ಅಧಿಕಾರಿಗಳೇ ಇರುತ್ತಾರೆ. ತಂತ್ರಾಂಶವನ್ನು ಪರೀಕ್ಷಿಸಿದವರಿಗೂ ಈ ಲೋಪ ಕಾಣಸಿಗಲಿಲ್ಲ ಎಂದರೆ ಅದಕ್ಕಿಂತ ದೊಡ್ಡ ಅಚ್ಚರಿ ಮತ್ತೊಂದಿಲ್ಲ. ಒಂದೇ ಆಧಾರ್ ಸಂಖ್ಯೆಯನ್ನು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳಿಗೆ ಜೋಡಿಸಲು ಸಾಧ್ಯವಿದೆ ಎಂಬುದು ಪ್ರಾಥಮಿಕ ಪರೀಕ್ಷೆಯಲ್ಲೇ ತಿಳಿಯಬೇಕಾಗಿದ್ದ ವಿಚಾರವಲ್ಲವೇ? ಇನ್ನು ಪಡಿತರ ಚೀಟಿ ವಿತರಣೆಯ ಒಟ್ಟು ಪ್ರಕ್ರಿಯೆಯಲ್ಲಿ ತಂತ್ರಾಂಶಕ್ಕೆ ಇರುವಷ್ಟೇ ದೊಡ್ಡ ಪಾತ್ರ ಸ್ಥಳ ಪರಿಶೀಲನೆ ನಡೆಸುವ ಪ್ರಕ್ರಿಯೆಗೂ ಇದೆ. ಸಾವಿರಾರು ಸಂಖ್ಯೆಯ ಅಕ್ರಮ ಪಡಿತರ ಚೀಟಿಗಳು ಇವರ ಕಣ್ಣಿಗೆ ಬೀಳದೆ ಸೃಷ್ಟಿಯಾಗುವುದಾದರೂ ಹೇಗೆ? ಅಂದರೆ ಅಕ್ರಮ ಪಡಿತರ ಚೀಟಿಗಳ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳೂ ಒಳಗೊಂಡಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದೆ. ತಂತ್ರಾಂಶ ಅಭಿವೃದ್ಧಿಯ ಹಂತದಿಂದ ಪಡಿತರ ಚೀಟಿ ವಿತರಣೆಯ ತನಕದ ಎಲ್ಲಾ ಹಂತಗಳನ್ನೂ ವ್ಯಾಪಿಸಿಕೊಂಡಿರುವ ಈ ಹಗರಣವನ್ನು ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರೆಲ್ಲರನ್ನೂ ಗುರುತಿಸಬೇಕಾಗಿದೆ. ಜೊತೆಗೆ ಆಧಾರ್ ಜೋಡಣೆಯ ಮೂಲಕ ‘ಅಕ್ರಮಮುಕ್ತ’ಗೊಳಿಸಲಾಗಿರುವ ಇತರ ಯೋಜನೆಗಳನ್ನು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸುವ ಕಾರ್ಯವೊಂದನ್ನು ಸರ್ಕಾರ ತಕ್ಷಣವೇ ಕೈಗೆತ್ತಿಕೊಳ್ಳಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ಕುರುಡಾಗಿ ರೂಪಿಸುವ ಬದಲಿಗೆ ತಂತ್ರಜ್ಞಾನದ ದಕ್ಷ ಬಳಕೆಗೆ ಅಗತ್ಯವಿರುವ ತರ್ಕಬದ್ಧ ಅನುಷ್ಠಾನ ಪದ್ಧತಿಯನ್ನು ಸರ್ಕಾರ ಅಳವಡಿಸಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.