ವಿಶ್ವಸಂಸ್ಥೆ: ಹೊಸ ಭರವಸೆ ಮೂಡಿಸಿದ ಗುಟೆರಸ್‌ ನೇಮಕ ವಿಶ್ವದ ಸರ್ವೋಚ್ಚ ರಾಜತಾಂತ್ರಿಕ ಮತ್ತು ಅತ್ಯಂತ ಕಠಿಣ ಸವಾಲಿನ ಹುದ್ದೆಯಾಗಿರುವ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪೋರ್ಚುಗಲ್‌ನ ಮಾಜಿ ಪ್ರಧಾನಿ ಆಂಟೊನಿಯೊ ಗುಟೆರಸ್‌ (67) ಅವರನ್ನು ನೇಮಕ ಮಾಡಿರುವುದು ಹಲವಾರು ಕಾರಣಗಳಿಗೆ ಮಹತ್ವದ್ದಾಗಿದೆ. ಒಟ್ಟು 193 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ಬಲಿಷ್ಠ ದೇಶಗಳು ಈ ನೇಮಕದ ವಿಷಯದಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದಿರುವುದು ಮುಂಬರುವ ದಿನಗಳಲ್ಲಿ ವಿಶ್ವಸಂಸ್ಥೆ ಸಾಗಲಿರುವ ಹಾದಿಯ ಬಗ್ಗೆ ಹೊಸ ಆಶಾಭಾವನೆ ಮೂಡಿಸಿದೆ. ಸಿರಿಯಾದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಪರಸ್ಪರ ವಿರುದ್ಧ ನಿಲುವು ತಳೆದಿರುವ ಅಮೆರಿಕ ಮತ್ತು ರಷ್ಯಾ, ಬಾನ್‌ ಕಿ ಮೂನ್‌ ಉತ್ತರಾಧಿಕಾರಿ ನೇಮಕದಲ್ಲಿಯೂ ಸಂಘರ್ಷಕ್ಕೆ ಇಳಿಯಲಿವೆ ಎನ್ನುವ ನಿರೀಕ್ಷೆ ಹುಸಿಯಾಗಿರುವುದು ಇವರ ಹಾದಿ ಸುಗಮಗೊಳಿಸಿದೆ. ದಶಕಗಳಿಂದಲೂ ಭದ್ರತಾ ಮಂಡಳಿಯು ವಿಶ್ವಾಸಾರ್ಹತೆಯ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವುದರಿಂದ ವಿಶ್ವಸಂಸ್ಥೆಯ ಒಟ್ಟಾರೆ ಕಾರ್ಯವೈಖರಿ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರಿದೆ. ಬಲಿಷ್ಠ ದೇಶಗಳು ತಮ್ಮ ಹಿತಾಸಕ್ತಿ ರಕ್ಷಣೆಗೆ ಒಳಗೊಳಗೇ ಪರಸ್ಪರರ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವುದರಿಂದ ಈ ಜಾಗತಿಕ ಸಂಸ್ಥೆಯ ಮಹತ್ವ ಕ್ಷೀಣಿಸುತ್ತಲೇ ಬಂದಿದೆ. ಗುಟೆರಸ್‌ ನೇಮಕಾತಿ ವಿಷಯದಲ್ಲಿ ಕಂಡು ಬಂದಿರುವ ಒಗ್ಗಟ್ಟು, ಭದ್ರತಾ ಮಂಡಳಿ ಸದಸ್ಯ ದೇಶಗಳ ಮಧ್ಯೆ ಸಹಕಾರ ಹೆಚ್ಚಿಸಲಿದೆ. ಜಾಗತಿಕ ಬಿಕ್ಕಟ್ಟುಗಳನ್ನು ಬಗೆಹರಿಸುವ ವಿಷಯದಲ್ಲಿ ವಿಶ್ವಸಂಸ್ಥೆ ಇನ್ನು ಮುಂದೆ ಮಹತ್ವದ ಪಾತ್ರ ನಿರ್ವಹಿಸಲಿದೆ ಎನ್ನುವ ಆಶಾಭಾವ ಮೂಡಿಸಿದೆ. ಬಾನ್‌ ಕಿ ಮೂನ್‌ ಅವರ ಅಧಿಕಾರಾವಧಿ ಇದೇ ಡಿಸೆಂಬರ್‌ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, 2017ರ ಜನವರಿಯಿಂದ ಗುಟೆರಸ್‌ ಅವರ 5 ವರ್ಷಗಳ ಅಧಿಕಾರಾವಧಿ ಆರಂಭಗೊಳ್ಳಲಿದೆ. ಎರಡು ಬಾರಿ ಪ್ರಧಾನಿ ಹುದ್ದೆ ಮತ್ತು 10 ವರ್ಷಗಳ ಕಾಲ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್‌ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ ರಾಜಕೀಯ ಮತ್ತು ರಾಜತಾಂತ್ರಿಕ ಅನುಭವವು ಇವರ ನೆರವಿಗೆ ಬರಲಿದೆ. ಅಕಳಂಕ ವ್ಯಕ್ತಿತ್ವದ ಮುತ್ಸದ್ದಿ ರಾಜಕಾರಣಿ, ನಿರಾಶ್ರಿತರ ಬಗ್ಗೆ ಕಾರುಣ್ಯ ಹೊಂದಿರುವ ಗುಟೆರಸ್‌, ವಿಶ್ವ ಸಂಸ್ಥೆಯ ಹುದ್ದೆಯ ಘನತೆಯನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ. ಜಾಗತಿಕ ಮಟ್ಟದ ಹಲವಾರು ಗೋಜಲು, ಸಮಸ್ಯೆಗಳ ದೊಡ್ಡ ಬೆಟ್ಟವೇ ಇವರ ಮುಂದೆ ಇದೆ. ಇಂತಹ ಗುರುತರ ಸವಾಲನ್ನು ಅವರು ಹೇಗೆ ನಿಭಾಯಿಸಲಿದ್ದಾರೆ ಎನ್ನುವುದನ್ನು ಇಡೀ ವಿಶ್ವ ಕುತೂಹಲದಿಂದ ಎದುರು ನೋಡಲಿದೆ. ಇದುವರೆಗೆ ಬಲಿಷ್ಠ ದೇಶಗಳು ಮಾತ್ರ ತಮ್ಮೊಳಗೆ ಗೋಪ್ಯ ರೀತಿಯಲ್ಲಿ ಚರ್ಚಿಸಿ ತಮಗೆ ಸರಿಕಂಡವರನ್ನಷ್ಟೇ ಈ ಹುದ್ದೆಗೆ ನೇಮಕ ಮಾಡುತ್ತಿದ್ದವು. ಒಂಬತ್ತನೆ ಮಹಾ ಪ್ರಧಾನ ಕಾರ್ಯದರ್ಶಿಯಾಗಿರುವ ಗುಟೆರಸ್‌ ಅವರ ಆಯ್ಕೆಯು ಹೆಚ್ಚು ಪಾರದರ್ಶಕವಾಗಿದೆ. ಇವರ ನೇಮಕಾತಿ ಟೀಕೆಗಳಿಂದೇನೂ ಹೊರತಾಗಿಲ್ಲ. ಇದೇ ಮೊದಲ ಬಾರಿಗೆ 13 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. 7 ಮಂದಿ ಮಹಿಳೆಯರೂ ಆಸಕ್ತಿ ತೋರಿಸಿದ್ದರು. ಮಹಿಳಾ ಅಭ್ಯರ್ಥಿಗಳಲ್ಲಿ ಒಗ್ಗಟ್ಟು ಇಲ್ಲದಿರುವುದೇ ಅವರಿಗೆ ಮುಳುವಾಯಿತು. ಮಹಿಳಾ ವಿರೋಧಿ ಭಾವನೆ ವಿಶ್ವಸಂಸ್ಥೆಯಲ್ಲಿಯೂ ತನ್ನ ಕೈಚಳಕ ತೋರಿದೆ ಎಂದು ಮಹಿಳಾ ಪರ ಸಂಘಟನೆಗಳು ಟೀಕಿಸಿರುವುದರಲ್ಲಿಯೂ ಅರ್ಥ ಇದೆ. ಏಳು ದಶಕಗಳಿಂದ ಪುರುಷರೇ ಈ ಉನ್ನತ ಹುದ್ದೆ ಅಲಂಕರಿಸುತ್ತಿರುವುದು ಸಹಜವಾಗಿಯೇ ಮಹಿಳೆಯರ ಪಾಲಿಗೆ ನಿರಾಶಾದಾಯಕ ಸಂಗತಿಯಾಗಿದೆ. ತಮ್ಮ ಅವಕಾಶಕ್ಕಾಗಿ ಇನ್ನೂ ಕೆಲ ವರ್ಷಗಳವರೆಗೆ ಅವರು ಕಾಯಬೇಕಾಗಿದೆ. ಸಿರಿಯಾ ಮತ್ತಿತರ ಕಡೆ ಕವಿದಿರುವ ಯುದ್ಧದ ಕಾರ್ಮೋಡ, ಐಎಸ್‌ ಉಗ್ರಗಾಮಿ ಸಂಘಟನೆಯು ವಿಶ್ವ ಸಮುದಾಯಕ್ಕೆ ಒಡ್ಡಿರುವ ಬೆದರಿಕೆ, ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ವಲಸಿಗರು ಮತ್ತು ನಿರಾಶ್ರಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಗುಟೆರಸ್‌ ತಮ್ಮೆಲ್ಲ ಜಾಣ್ಮೆ, ಅನುಭವ, ರಾಜತಾಂತ್ರಿಕ ಪರಿಣತಿಯನ್ನೆಲ್ಲ ಪಣಕ್ಕೊಡ್ಡಬೇಕಾಗಿದೆ. ದಶಕದ ಉದ್ದಕ್ಕೂ ಲಕ್ಷಾಂತರ ನಿರಾಶ್ರಿತರ ಪುನರ್ವಸತಿಗೆ ದುಡಿದಿರುವ ಗುಟೆರಸ್‌, ವಲಸಿಗರ ಬವಣೆ ನಿವಾರಿಸಲು ವಿಶ್ವ ಸಮುದಾಯದ ನೆರವು ಒಗ್ಗೂಡಿಸಲು ತಮ್ಮ ರಾಜತಾಂತ್ರಿಕ ನೈಪುಣ್ಯ ಬಳಸಿಕೊಂಡರೆ ಭದ್ರತಾ ಮಂಡಳಿಗೆ ಅಂಟಿಕೊಂಡಿರುವ ಜಡತ್ವವೆಲ್ಲ ದೂರವಾದೀತು. ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ, ಮಾನವ ಹಕ್ಕುಗಳ ಉಲ್ಲಂಘನೆ, ಮಾನವೀಯ ನೆರವು, ವಿಶ್ವದಲ್ಲಿ ಶಾಂತಿ ಮತ್ತು ಸುರಕ್ಷತಾ ಭಾವ ಮೂಡಿಸುವ ಅವರ ಆಶಯಕ್ಕೆ ಸದಸ್ಯ ದೇಶಗಳೆಲ್ಲ ಕೈಜೋಡಿಸಿದರೆ ವಿಶ್ವ ಸಮುದಾಯದ ಬದುಕು ಇನ್ನಷ್ಟು ಹಸನಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.