‘ಉಡಾನ್‌’: ಜನಪ್ರಿಯತೆಯ ಭಾರಕ್ಕೆ ನಲುಗದಿರಲಿ ಜನಸಾಮಾನ್ಯರೂ ವಿಮಾನದಲ್ಲಿ ಪ್ರಯಾಣಿಸುವ ಕನಸು ನನಸಾಗಿಸಲು ಕೇಂದ್ರ ಸರ್ಕಾರ ಹೊಸ ವರ್ಷದಿಂದ ಮಹತ್ವಾಕಾಂಕ್ಷೆಯ ಪ್ರಾದೇಶಿಕ ಸಂಪರ್ಕ ಯೋಜನೆ (ಆರ್‌ಸಿಎಸ್‌) ಆರಂಭಿಸಲು ಮುಂದಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದೇಶದ ಮೊದಲ ನಾಗರಿಕ ವಿಮಾನ ಯಾನ ನೀತಿಗೆ ಅನುಗುಣವಾಗಿ ವಿಮಾನ ಪ್ರಯಾಣವನ್ನು ಜನಸಾಮಾನ್ಯರಿಗೂ ಕೈಗೆಟುಕುವಂತೆ ಮಾಡುವುದು ಮತ್ತು ಪ್ರಾದೇಶಿಕ ಸಂಪರ್ಕ ಹೆಚ್ಚಿಸುವುದು ‘ಉಡೆ ದೇಶ್ ಕಾ ಆಮ್ ನಾಗರಿಕ್‌’ (ಉಡಾನ್‌) ಯೋಜನೆಯ ಉದ್ದೇಶವಾಗಿದೆ. ಯೋಜನೆಯ ಹೆಸರಿನಲ್ಲಿಯೇ ಜನಪ್ರಿಯತೆ ಉದ್ದೇಶ ಅಡಕವಾಗಿರುವ ಶಂಕೆಗೆ ಆಸ್ಪದ ಮಾಡಿಕೊಟ್ಟಿದೆ. ಈ ಕೈಗೆಟುಕುವ, ಅನುಕೂಲಕರ ಮತ್ತು ಅಗ್ಗದ ಪ್ರಯಾಣ ದರವು ವಿಮಾನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಲು, ವಿಮಾನ ನಿಲ್ದಾಣಗಳ ಬಳಕೆ ಪ್ರಮಾಣ ಹೆಚ್ಚಳಗೊಳ್ಳಲು ನೆರವಾಗಲಿದ್ದರೂ, ಖಾಸಗಿ ವಿಮಾನ ಯಾನ ಸಂಸ್ಥೆಗಳಿಗೂ ಈ ನೀತಿಯು ಪಥ್ಯವಾದಂತೆ ಕಾಣುತ್ತಿಲ್ಲ. 16 ಪ್ರಾದೇಶಿಕ ಸಣ್ಣ ನಗರಗಳ ಮಧ್ಯೆ ವಿಮಾನ ಯಾನ ಸಂಪರ್ಕಿಸುವ ಈ ಯೋಜನೆ ಮೇಲ್ನೋಟಕ್ಕೆ ತುಂಬ ಆಕರ್ಷಕವಾಗಿದ್ದರೂ, ಹಲವಾರು ಲೋಪದೋಷಗಳಿಂದ ಕೂಡಿದೆ. ವಿಮಾನಯಾನ ಸಂಸ್ಥೆಗಳಿಗೆ ಸಬ್ಸಿಡಿ ನೀಡುವುದು, ಸಬ್ಸಿಡಿ ಮೊತ್ತ ಸಂಗ್ರಹಿಸಲು ಇತರ ವಿಮಾನ ಪ್ರಯಾಣಿಕರ ಮೇಲೆ ಹೆಚ್ಚುವರಿ ಕರ (ಸೆಸ್‌) ವಿಧಿಸುವುದು, ಸೆಸ್‌ ವಿಧಿಸುವುದಕ್ಕೆ ವಿಮಾನ ಯಾನ ಸಂಸ್ಥೆಗಳು ಆಕ್ಷೇಪಿಸಿರುವುದು ಮತ್ತು ಇದುವರೆಗೂ ಸೆಸ್ ಪ್ರಮಾಣ ನಿಗದಿಪಡಿಸದಿರುವುದು ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟಿವೆ. ವಿಮಾನ ಯಾನ ಸಂಸ್ಥೆಗಳ ಮನವೊಲಿಕೆ ಕ್ರಮವಾಗಿ, ಅಗ್ಗದ ಪ್ರಯಾಣ ದರದ ನಷ್ಟ ಭರ್ತಿ ಮಾಡಿಕೊಡಲು ಈ ಮೊದಲಿನ ಕರಡು ನೀತಿಯಲ್ಲಿ ಪ್ರಕಟಿಸಿದ್ದಕ್ಕಿಂತ ಹೆಚ್ಚಿನ ಸಬ್ಸಿಡಿ ನೀಡಲು ಸರ್ಕಾರ ಮುಂದಾಗಿದೆ. ಒಂದೆಡೆ ಸಬ್ಸಿಡಿ ದುರುಪಯೋಗ ಆಗುತ್ತಿದ್ದು, ಅದನ್ನು ತಡೆಯಲು ಫಲಾನುಭವಿಗಳ ಖಾತೆಗೆ ನಗದು ನೇರ ವರ್ಗಾವಣೆ ಜಾರಿಗೆ ತರುತ್ತಿರುವ ಸರ್ಕಾರ, ಇನ್ನೊಂದೆಡೆ ಸಬ್ಸಿಡಿಗೆ ಮೊರೆ ಹೋಗುತ್ತಿರುವುದು ಅದರ ದ್ವಂದ್ವ ಧೋರಣೆಗೆ ಸಾಕ್ಷಿಯಾಗಿದೆ. ಪ್ರಯಾಣ ದರ ಕುರಿತ ಸರ್ಕಾರದ ನೀತಿಯು ಮಾರುಕಟ್ಟೆ ಶಕ್ತಿಗಳಾದ ಬೇಡಿಕೆ ಮತ್ತು ಪೂರೈಕೆ ನಿಯಮಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. 200 ಕಿ.ಮೀ.ನಿಂದ 800 ಕಿ.ಮೀ. ದೂರದ ಒಂದು ಗಂಟೆ ಅವಧಿಯ ಪ್ರಯಾಣಕ್ಕೆ ₹ 2,500 ಪ್ರಯಾಣ ದರ ವಿಧಿಸಿರುವುದು, ರಿಯಾಯಿತಿ ದರದ ಟಿಕೆಟ್‌ ನಷ್ಟವನ್ನು ಸಬ್ಸಿಡಿ ಮೂಲಕ ಭರ್ತಿ ಮಾಡಿಕೊಡಲು ಇತರ ಪ್ರಯಾಣಿಕರ ಟಿಕೆಟ್‌ ಮೇಲೆ ಹೆಚ್ಚುವರಿ ಕರ ವಿಧಿಸುವ ಪ್ರಸ್ತಾವನೆಗೆ ವಿಮಾನ ಯಾನ ಸಂಸ್ಥೆಗಳೇ ಆಕ್ಷೇಪ ದಾಖಲಿಸಿರುವುದು ಈ ಯೋಜನೆಯ ಜಾರಿಗೆ ತೊಡಕಾಗಿ ಪರಿಣಮಿಸಬಹುದು. ಸಮಾಜದ ಒಂದು ವರ್ಗಕ್ಕೆ ನೆರವಾಗಲು, ಇತರ ಪ್ರಯಾಣಿಕರ ಮೇಲೆ ಹೆಚ್ಚುವರಿ ಕರ ವಿಧಿಸುವುದು ಅದೆಷ್ಟರ ಮಟ್ಟಿಗೆ ಸಮಂಜಸ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ಯೋಜನೆ ಯಶಸ್ವಿಗೊಳಿಸಲು ಸರ್ಕಾರ ವಿಮಾನ ಯಾನ ಸಂಸ್ಥೆಗಳಿಗೆ ಹಲವಾರು ರಿಯಾಯಿತಿಗಳ ಆಮಿಷ ಒಡ್ಡಿದೆ. ಸಣ್ಣ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡಿಂಗ್‌ ಮತ್ತು ಪಾರ್ಕಿಂಗ್‌ ಶುಲ್ಕ ಮನ್ನಾ ಮಾಡಲಾಗಿದೆ. ಆದರೆ, ದೊಡ್ಡ ನಿಲ್ದಾಣಗಳಲ್ಲಿ ಪ್ರಾದೇಶಿಕ ವಿಮಾನಗಳ ಹಾರಾಟಕ್ಕೆ ಸಮಯಾವಕಾಶ ಒದಗಿಸಿಕೊಡುವುದು ಇನ್ನೊಂದು ಅಡಚಣೆಯಾಗಿ ಪರಿಣಮಿಸಬಹುದು. ಪ್ರತಿಯೊಬ್ಬ ಪ್ರಯಾಣಿಕನಿಗೆ ₹ 2,350 ರಿಂದ ₹ 5,100 ವರೆಗೆ ಮೂರು ವರ್ಷಗಳವರೆಗೆ ಸಬ್ಸಿಡಿ ನೀಡುವುದು ಸರ್ಕಾರದ ಆಲೋಚನೆಯಾಗಿದೆ. ಈ ಸಬ್ಸಿಡಿ ಹೊರೆ ಭರಿಸಲು ಗ್ರಾಹಕರ ಮೇಲೆ ಹೆಚ್ಚುವರಿ ತೆರಿಗೆ ಹೊರೆ ವಿಧಿಸುವುದರ ಬದಲಿಗೆ ಸರ್ಕಾರ ತನ್ನದೇ ಮೂಲಗಳಿಂದ ಸಂಪನ್ಮೂಲ ಹೊಂದಿಸಿಕೊಂಡರೆ ಸಬ್ಸಿಡಿ ಹೊರೆಯಿಂದ ಪಾರಾಗಬಹುದು. ಪ್ರಾದೇಶಿಕ ವಿಮಾನ ನಿಲ್ದಾಣಗಳಿಗೆ ಮಾತ್ರ ಸಂಪರ್ಕ ಕಲ್ಪಿಸುವ ವಿಮಾನಗಳಿಗೆ ನಿಗದಿಪಡಿಸಿರುವ ರಿಯಾಯಿತಿ ಪ್ರಯಾಣ ದರ ಸೌಲಭ್ಯವನ್ನು, ರಾಜಧಾನಿಗಳಿಗೆ ತೆರಳುವ ವಿಮಾನಗಳಿಗೂ ಅನ್ವಯಿಸಲಾಗುವುದೇ ಎನ್ನುವುದು ಸ್ಪಷ್ಟವಾಗಿಲ್ಲ. ಸಣ್ಣ ನಗರಗಳಿಗೆ ನೀಡಲಾಗುವ ರಿಯಾಯಿತಿ ಸೌಲಭ್ಯವನ್ನು ದೊಡ್ಡ ನಗರಗಳಿಗೂ ವಿಸ್ತರಿಸಿದರೆ ಮಾತ್ರ ಇದು ಆರ್ಥಿಕವಾಗಿ ಲಾಭದಾಯಕವಾಗಿರಲಿದೆ. ನಿಯಮಗಳ ಸಡಿಲಿಕೆಯಿಂದಷ್ಟೆ ದೇಶಿ ವಿಮಾನಯಾನ ವಲಯವು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯಲಾರದು. ಪೂರಕ ಮೂಲ ಸೌಕರ್ಯಗಳ ಅಭಿವೃದ್ಧಿಗೂ ಸರ್ಕಾರ ಗಮನ ನೀಡಬೇಕಾಗಿದೆ. ವಿಮಾನ ಪ್ರಯಾಣವು ಆರ್ಥಿಕ ಸಮೃದ್ಧಿಯ ಸಂಕೇತವಾಗಿದ್ದರೂ, ಅಗ್ಗದ, ಸಬ್ಸಿಡಿ ನೀಡುವಂತಹ ಜನಪ್ರಿಯ ಯೋಜನೆಗಳಿಂದಷ್ಟೆ ಅದನ್ನು ಈಡೇರಿಸಲಿಕ್ಕಾಗದು ಎನ್ನುವ ಕಟು ಸತ್ಯ ಸರ್ಕಾರಕ್ಕೆ ಮನವರಿಕೆಯಾದರೆ ಮಾತ್ರ ‘ಉಡಾನ್‌’ ಯಶಸ್ವಿಯಾಗಿ ಉಡಾವಣೆಯಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.