ಖಾಸಗಿ ಆಸ್ಪತ್ರೆಗಳ ಉಸಾಬರಿಗಿಂತ ಸರ್ಕಾರಿ ವ್ಯವಸ್ಥೆ ಸುಧಾರಣೆ ಮುಖ್ಯ ಖಾಸಗಿ ಆಸ್ಪತ್ರೆಗಳ ಶುಲ್ಕದ ಮೇಲೆ ಕಡಿವಾಣ ಮತ್ತು ಸೇವೆಗಳ ಮೇಲೆ ನಿಗಾ ಇಡಲು ಹೊಸ ಕಾಯ್ದೆ ತರುವುದಾಗಿ ರಾಜ್ಯದ ಆರೋಗ್ಯ ಸಚಿವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳು, ಅಹವಾಲುಗಳನ್ನು ಆಲಿಸಿ ಪರಿಹಾರ ಒದಗಿಸಲು ಶಾಸನಬದ್ಧ ಸಮಿತಿ ರಚಿಸುವ ಉದ್ದೇಶವೂ ಇದೆ ಎಂದು ಬಹಿರಂಗಪಡಿಸಿದ್ದಾರೆ. ಅದಕ್ಕಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿಕ್ರಮಜಿತ್‌ ಸೇನ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆಯಾಗಿದೆ. ಆರೋಗ್ಯ ಸೇವೆ ಮತ್ತು ಅದರ ಗುಣಮಟ್ಟ ಸುಧಾರಿಸುವ ಯಾವುದೇ ಪ್ರಯತ್ನ ಅತ್ಯಗತ್ಯ, ಸ್ವಾಗತಾರ್ಹ. ಬಡವ ಬಲ್ಲಿದರೆನ್ನದೆ ಎಲ್ಲರಿಗೂ ಒಳ್ಳೆಯ ವೈದ್ಯಕೀಯ ಸೇವೆ ಪಡೆಯುವ ಹಕ್ಕಿದೆ. ಅದಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೆ ತನ್ನದೇ ಅಧೀನದ ಆಸ್ಪತ್ರೆಗಳ ಸ್ಥಿತಿಗತಿ ಸುಧಾರಣೆ ಮಾಡುವುದರಲ್ಲಿ ಹಿಂದೆಬಿದ್ದು, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಮುಂದಾಗುವುದು ಮಾತ್ರ ತೀರಾ ಅಸಂಬದ್ಧ. ಏಕೆಂದರೆ ಖಾಸಗಿ ಕ್ಷೇತ್ರ ಕೂಡ ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂಬುದನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಳ್ಳಬೇಕು. ಕಾನೂನು ಕಟ್ಟಳೆಗಳ ಹೆಸರಿನಲ್ಲಿ ವಿನಾಕಾರಣ ಹಸ್ತಕ್ಷೇಪಕ್ಕೆ, ಖಾಸಗಿ ಆಸ್ಪತ್ರೆಗಳ ಮೇಲೆ ಅಧಿಕಾರಶಾಹಿಯ ದರ್ಪ ಪ್ರದರ್ಶನಕ್ಕೆ ಅವಕಾಶ ಖಂಡಿತವಾಗಿಯೂ ಸಲ್ಲದು. ತಾನೂ ಸರಿಯಾಗಿ ಸೇವೆ ಕೊಡುವುದಿಲ್ಲ; ಖಾಸಗಿಯವರಿಗೂ ಕೆಲಸ ಮಾಡಲು ಬಿಡುವುದಿಲ್ಲ ಎಂಬ ಅಪವಾದಕ್ಕೆ ಎಡೆ ಮಾಡಿಕೊಡಬಾರದು. ಖಾಸಗಿ ಆಸ್ಪತ್ರೆಯೇ ಇರಲಿ ಅಥವಾ ಸರ್ಕಾರಿ ಆಸ್ಪತ್ರೆಯೇ ಇರಲಿ; ರೋಗಿಗಳಿಗೆ ಒಳ್ಳೆಯ ಸೇವೆ, ಉತ್ತಮ ಚಿಕಿತ್ಸೆ ಕೊಡುವುದು ಅವುಗಳ ಕರ್ತವ್ಯ. ಆದರೆ, ಕೈಯಲ್ಲಿ ಹಣ ಇಲ್ಲದಿದ್ದರೆ ಅಥವಾ ಹತ್ತಿರದಲ್ಲಿ ಒಳ್ಳೆಯ ಖಾಸಗಿ ಆಸ್ಪತ್ರೆ ಇಲ್ಲದಿದ್ದರೆ ಮಾತ್ರ ವಿಧಿಯಿಲ್ಲದೆ ಸರ್ಕಾರಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಇದೆ. ಅಲ್ಲಿ ಉತ್ತಮ ಚಿಕಿತ್ಸೆ ಸಿಗುವುದು ಒಂದು ಕಡೆ ಇರಲಿ; ಹೊಸ ಹೊಸ ಕಾಯಿಲೆ ಅಂಟಿಕೊಳ್ಳದಿದ್ದರೆ ಸಾಕು ಅದೇ ದೊಡ್ಡ ಪುಣ್ಯ ಎನ್ನುವಂತಾಗಿದೆ. ಹಳ್ಳಿಗಾಡಿನಲ್ಲಿ ಬಡವರು ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗಳನ್ನು ಆಶ್ರಯಿಸಿದ್ದಾರೆ. ವಸ್ತುಸ್ಥಿತಿ ಹೀಗಿದ್ದರೂ ಸಚಿವರ ಪ್ರಕಾರ, ಖಾಸಗಿ ಆಸ್ಪತ್ರೆಗಳು ರೋಗಿಗಳ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿವೆಯಂತೆ. ಇದು ನಿಜವೇ ಆಗಿದ್ದರೆ ಇದಕ್ಕೆ ಸರ್ಕಾರವೇ ಕಾರಣ ಎಂದು ಹೇಳಬೇಕಾಗುತ್ತದೆ. ಏಕೆಂದರೆ ಜನರಿಗೆ ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶ್ವಾಸವೇ ಉಳಿದಿಲ್ಲ. ಬರೀ ಮೂರು ದಿನಗಳ ಹಿಂದೆ ಅವರದೇ ಸಚಿವ ಸಂಪುಟದ ಸಭೆ ವೈದ್ಯೆಯೊಬ್ಬರ ಕಡ್ಡಾಯ ನಿವೃತ್ತಿಗೆ ತೀರ್ಮಾನಿಸಿತ್ತು. ಸಹಸ್ರಾರು ರೂಪಾಯಿ ಸಂಬಳ ಪಡೆಯುವ ಆ ಸರ್ಕಾರಿ ವೈದ್ಯೆ ಜುಜುಬಿ 200 ರೂಪಾಯಿ ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದಿದ್ದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚದ ಹಾವಳಿಯಂತೂ ಮಿತಿಮೀರಿದೆ. ಹೆರಿಗೆಯಾದರೆ ಮಗುವಿನ ಮುಖ ತೋರಿಸಲು ತಾಯಿಯಿಂದಲೇ ಹಣ ಕೀಳುತ್ತಾರೆ ಎಂಬುದು ಬಹಳಷ್ಟು ಜನರ ಅನುಭವ. ಅನೈರ್ಮಲ್ಯ, ರೋಗಿಗಳ ಜತೆ ದರ್ಪದ ವರ್ತನೆ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ, ಹಾಸಿಗೆ– ಔಷಧಿ ಇತ್ಯಾದಿ ಮೂಲ ಸೌಕರ್ಯಗಳ ಅಭಾವ ಸರ್ಕಾರಿ ಆಸ್ಪತ್ರೆಗಳಲ್ಲಿ ತಾಂಡವವಾಡುತ್ತಿದೆ. ಸರ್ಕಾರಿ ಔಷಧ ಉಗ್ರಾಣಗಳಲ್ಲಿ ಅವಧಿ ಮೀರಿದ ₹ 10 ಕೋಟಿ ಮೌಲ್ಯದ ಔಷಧಗಳಿವೆ. ಇದು ಜನರಿಂದ ಸಂಗ್ರಹಿಸಿದ ತೆರಿಗೆ ಹಣದ ದುರುಪಯೋಗ. ಇದನ್ನೆಲ್ಲ ಸರಿಪಡಿಸುವುದು ಆದ್ಯತೆಯಾಗಬೇಕು. ಈಗಲೂ ‘ಸರ್ಕಾರಿ ಆಸ್ಪತ್ರೆಗಳು, ಅಲ್ಲಿನ ವೈದ್ಯರು ಮತ್ತು ಇತರ ಸಿಬ್ಬಂದಿ ಜನ ಮೆಚ್ಚುವಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಯಾರಾದರೂ ಧೈರ್ಯದಿಂದ ಹೇಳುವ ಪರಿಸ್ಥಿತಿ ಇದೆಯೇ? ಖಾಸಗಿ ಆಸ್ಪತ್ರೆಗಳು ಇಲ್ಲದೇ ಹೋಗಿದ್ದರೆ ಎಲ್ಲರಿಗೂ ಗುಣಮಟ್ಟದ, ಉತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತಿತ್ತೇ? ಸರ್ಕಾರಿ ಆಸ್ಪತ್ರೆಗಳಲ್ಲಿ ಅಂತಹ ಸೌಕರ್ಯ, ಸಾಮರ್ಥ್ಯ ಇವೆಯೇ? ಖಂಡಿತ ಇಲ್ಲ. ಇದ್ದಿದ್ದರೆ ಜನ ಸರ್ಕಾರಿ ಆಸ್ಪತ್ರೆಗಳನ್ನು ಬಿಟ್ಟು ಖಾಸಗಿ ಆಸ್ಪತ್ರೆಗಳಿಗೆ ಏಕೆ ಹೋಗುತ್ತಿದ್ದರು? ಸರ್ಕಾರ ಮಾಡಬೇಕಾಗಿರುವುದು ತನ್ನ ಆಸ್ಪತ್ರೆಗಳ ಸುಧಾರಣೆ, ಮೂಲಸೌಕರ್ಯ ಹೆಚ್ಚಿಸುವುದು. ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಮಾನವೀಯತೆ, ಜನಪರ ಕಾಳಜಿ ಮೂಡಿದರೆ ಜನ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ತಾನೇತಾನಾಗಿ ಕಡಿಮೆಯಾಗುತ್ತದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ತಡವಾಗಿಯಾದರೂ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಇದು ಬರೀ ಹೇಳಿಕೆಯಾಗಿ ಉಳಿಯಬಾರದು. ಕಾರ್ಯರೂಪಕ್ಕೆ ಬರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.