ಕೃಷ್ಣಾ ನೀರಿನ ಪೂರ್ಣ ಬಳಕೆ ನಮ್ಮ ಆದ್ಯತೆಯಾಗಲಿ ಕೃಷ್ಣಾ ನದಿ ನೀರನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿಗೆ ಹೊಸದಾಗಿ ಹಂಚಿಕೆ ಮಾಡಬೇಕು ಎಂಬ ತೆಲಂಗಾಣ ಸರ್ಕಾರದ ಕೋರಿಕೆಯನ್ನು ನ್ಯಾಯಮೂರ್ತಿ ಬ್ರಿಜೇಶ್‌ಕುಮಾರ್‌ ನೇತೃತ್ವದ ಎರಡನೆಯ ಕೃಷ್ಣಾ ನ್ಯಾಯಮಂಡಳಿ ತಿರಸ್ಕರಿಸಿದೆ. ಇದು ಕರ್ನಾಟಕಕ್ಕೆ ಭಾರಿ ಸಮಾಧಾನ ತರುವ ಸಂಗತಿ. ಇದರಿಂದ ಕೃಷ್ಣೆಯಲ್ಲಿ ನಮಗೆ ಹಂಚಿಕೆಯಾಗಿರುವ 906 ಟಿಎಂಸಿ ಅಡಿ ನೀರನ್ನು ನಿರಾತಂಕವಾಗಿ ಬಳಸಿಕೊಳ್ಳಲು ಸದ್ಯಕ್ಕಂತೂ ತೊಂದರೆಯಿಲ್ಲ. ಅವಿಭಜಿತ ಆಂಧ್ರಕ್ಕೆ ಹಂಚಿಕೆಯಾಗಿರುವ 1001 ಟಿಎಂಸಿ ಅಡಿಗಳಷ್ಟು ನೀರನ್ನೇ ತೆಲಂಗಾಣ ಮತ್ತು ಆಂಧ್ರಗಳು ಹಂಚಿಕೊಳ್ಳಬೇಕು ಎಂಬುದು ಮಂಡಳಿ ಬುಧವಾರ ನೀಡಿದ ಆದೇಶದ ಸಾರಾಂಶ. ‘ಇಡೀ ಕೃಷ್ಣಾ ಕಣಿವೆಯೇ ಒಂದು ಘಟಕ; ಹೀಗಾಗಿ ನಾಲ್ಕೂ ಫಲಾನುಭವಿ ರಾಜ್ಯಗಳ ಮಧ್ಯೆ ಮರು ಹಂಚಿಕೆ ಆಗಬೇಕು’ ಎಂಬ ತೆಲಂಗಾಣದ ವಾದವನ್ನು ಅದು ಒಪ್ಪಿಕೊಂಡಿಲ್ಲ. ಮಂಡಳಿಯ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತೆಲಂಗಾಣ ಸರ್ಕಾರದ ನೀರಾವರಿ ಸಲಹೆಗಾರ ಹೇಳಿದ್ದಾರೆ. ಆದರೆ ಜಲ ನ್ಯಾಯಮಂಡಳಿಗಳು ನೀಡುವ ಐತೀರ್ಪಿನ ಮರುವಿಮರ್ಶೆ ಮಾಡುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ ಎಂಬುದು ಕಾವೇರಿ ವಿವಾದ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪ್ರತಿಪಾದನೆಯಾಗಿದೆ. ಅದರ ಬಗ್ಗೆ ಸುಪ್ರೀಂ ಕೋರ್ಟ್ ಏನು ಹೇಳುತ್ತದೆ ಎನ್ನುವುದೂ ಮುಖ್ಯ. ಈ ಕುರಿತ ತೀರ್ಪನ್ನು ಸದ್ಯಕ್ಕಂತೂ ಅದು ಕಾಯ್ದಿರಿಸಿದೆ. ಅವನ್ನೆಲ್ಲ ಒಂದು ಬದಿಗೆ ಇಟ್ಟು ನೋಡುವುದಾದರೆ, ಕೃಷ್ಣೆಯಲ್ಲಿನ ನಮ್ಮ ಪಾಲಿನ ನೀರಿನ ಪೂರ್ಣ ಬಳಕೆಗೆ ನಾವು ಇನ್ನಷ್ಟು ಚುರುಕಾಗಲೇಬೇಕು. ‘ಕಾವೇರಿ ಮತ್ತು ಕೃಷ್ಣೆ ಕನ್ನಡ ನಾಡಿನ ಎರಡು ಕಣ್ಣುಗಳು’ ಎಂದು ಬಾಯುಪಚಾರಕ್ಕೆ ಹೇಳುವುದು ಸಾಕು. ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಕಾಮಗಾರಿಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ಏಕೆಂದರೆ ಹಿಂದೆ ಯುಕೆಪಿ ಸಾಕಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಕಾವೇರಿಗೆ ನೀಡುವ ಮಹತ್ವ ಕೃಷ್ಣೆಗೆ ಸಿಗುತ್ತಿಲ್ಲ ಎನ್ನುವ ಕೋಪತಾಪ ರಾಜ್ಯದ ಉತ್ತರ ಭಾಗದ ಜನರಲ್ಲಿದೆ. ಅದು ಕೆಲ ಮಟ್ಟಿಗೆ ನಿಜ ಕೂಡ. ಅದಕ್ಕೆ ಈಗಲೂ ಅನೇಕ ಉದಾಹರಣೆಗಳನ್ನು ಕೊಡಬಹುದು. ಈ ಯೋಜನೆಯಡಿ ನೀರು ಸಂಗ್ರಹಣೆಗಾಗಿ ಎರಡು ಅಣೆಕಟ್ಟೆಗಳ ನಿರ್ಮಾಣ ಪೂರ್ಣಗೊಂಡಿದ್ದರೂ ಶಾಖಾ ಕಾಲುವೆಗಳು, ಹೊಲಗಾಲುವೆಗಳ ನಿರ್ಮಾಣ, ವಿವಿಧ ಏತ ನೀರಾವರಿ ಯೋಜನೆ ಕಾಮಗಾರಿಗಳು ನಿರೀಕ್ಷೆಯಷ್ಟು ತ್ವರಿತವಾಗಿ ಹಿಂದೆಯೂ ನಡೆದಿಲ್ಲ; ಈಗಲೂ ನಡೆಯುತ್ತಿಲ್ಲ. ಹೊಲಗಾಲುವೆ ಇಲ್ಲದಿದ್ದರೆ ರೈತರ ಜಮೀನುಗಳಿಗೆ ನೀರು ಹೋಗುವುದು ಹೇಗೆ, ಅದರ ಪ್ರಯೋಜನ ಅವರಿಗೆ ದಕ್ಕುವುದು ಯಾವಾಗ? ಆಲಮಟ್ಟಿ ಅಣೆಕಟ್ಟೆ ಗೇಟ್‌ಗಳ ಎತ್ತರವನ್ನು 519.6 ಮೀಟರ್‌ಗಳಿಂದ 524.256 ಮೀಟರ್‌ಗಳಿಗೆ ಏರಿಸಲು ಎರಡನೇ ಕೃಷ್ಣಾ ನ್ಯಾಯಮಂಡಳಿ 2010ರ ಅಂತಿಮ ಐತೀರ್ಪಿನಲ್ಲಿಯೇ ಅನುಮತಿ ಕೊಟ್ಟಿತ್ತು. 6 ವರ್ಷ ಕಳೆದರೂ ಆ ಕೆಲಸವನ್ನು ಕೈಗೆತ್ತಿಕೊಂಡೇ ಇಲ್ಲ. ಹೀಗಾಗಿ ಹೆಚ್ಚು ನೀರು ಸಂಗ್ರಹಿಸಲು ಆಗುತ್ತಿಲ್ಲ. 1976ರಲ್ಲಿ ಬಚಾವತ್‌ ನ್ಯಾಯಮಂಡಳಿ ರಾಜ್ಯಕ್ಕೆ ಹಂಚಿಕೆ ಮಾಡಿದ್ದ 734 ಟಿಎಂಸಿ ಅಡಿ ನೀರನ್ನೇ 2000ನೇ ಇಸ್ವಿ ಗಡುವಿನ ಒಳಗೆ ಪೂರ್ಣವಾಗಿ ಬಳಸಿಕೊಂಡಿರಲಿಲ್ಲ. ಆದರೆ ಅವಿಭಜಿತ ಆಂಧ್ರ ಸರ್ಕಾರ ಅಷ್ಟರೊಳಗೆ ತನ್ನ ಪಾಲಿನ 811 ಟಿಎಂಸಿ ಅಡಿ ಬಳಸಿಕೊಂಡಿದ್ದಲ್ಲದೆ, ನದಿಯಲ್ಲಿ ಹೆಚ್ಚುವರಿಯಾಗಿ ಲಭ್ಯವಿದ್ದ ನೀರನ್ನೂ ಉಪಯೋಗಿಸಿಕೊಂಡಿತ್ತು. ಬೇರೆಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಿ ನೀರಾವರಿಗೆ ಆದ್ಯತೆ ಕೊಟ್ಟಿತ್ತು. ಸಮರೋಪಾದಿಯಲ್ಲಿ ದೊಡ್ಡ ಮತ್ತು ಸಣ್ಣ ಅಣೆಕಟ್ಟೆಗಳನ್ನು, ಕಾಲುವೆಗಳನ್ನು ನಿರ್ಮಿಸಿಕೊಂಡಿತ್ತು. ಅಲ್ಲಿನ ರಾಜಕೀಯ ಮುಖಂಡರು ತೋರಿಸಿದ್ದ ಕಾಳಜಿ, ಕಳಕಳಿ ನಮ್ಮಲ್ಲಿ ಕಂಡು ಬಂದಿರಲಿಲ್ಲ. ಅವೆಲ್ಲ ಮರುಕಳಿಸಬಾರದು. ಕಾವೇರಿಗೆ ಹೋಲಿಸಿದರೆ ಸರಿಸುಮಾರು ಮೂರೂವರೆ ಪಟ್ಟು ಹೆಚ್ಚು ನೀರು ನಮಗೆ ಕೃಷ್ಣಾ ಕಣಿವೆಯಲ್ಲಿ ದಕ್ಕಿದೆ. ತುಮಕೂರು ಜಿಲ್ಲೆಯ ಸಿರಾದಿಂದ ಪ್ರಾರಂಭವಾಗಿ ಬೀದರ್‌ ತುದಿವರೆಗಿನ ಪ್ರದೇಶದ ಒಳಗೆ ಬರುವ ನದಿ, ತೊರೆಗಳೆಲ್ಲ ಕೃಷ್ಣಾ ಕಣಿವೆ ವ್ಯಾಪ್ತಿಯಲ್ಲಿವೆ. ಇಷ್ಟಿದ್ದರೂ ಮುಖ್ಯವಾಗಿ ಕಲಬುರ್ಗಿ, ರಾಯಚೂರು ಜಿಲ್ಲೆಗಳ 6.22 ಲಕ್ಷ ಹೆಕ್ಟೇರ್‌ಗೆ ನೀರೊದಗಿಸುವ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ನಮಗಿರುವುದು 173 ಟಿಎಂಸಿ ಅಡಿ ಮಾತ್ರ. ಉಳಿದವು ತುಂಗಾ,ಭದ್ರಾ, ಭೀಮಾ, ಮಾಂಜರಾ, ಮಲಪ್ರಭಾ, ಘಟಪ್ರಭಾ ಮುಂತಾದ ಕಡೆ ಹಂಚಿಹೋಗಿದೆ. ಅಲ್ಲೆಲ್ಲ ಸಾಕಷ್ಟು ಕೆಲಸಗಳೂ ಆಗಿವೆ, ಬಳಕೆಯೂ ಆಗುತ್ತಿದೆ. ಆದರೆ ಯುಕೆಪಿಯಲ್ಲಿ ಹಿಂದೆ ಬಿದ್ದಿದ್ದೇವೆ. ಅದನ್ನು ಸರಿಪಡಿಸಿಕೊಳ್ಳಬೇಕು. ಕಂಟಕ ದೂರವಾಯಿತು ಎಂದು ಮೈಮರೆಯಬಾರದು. ಹಣ, ಇಚ್ಛಾಶಕ್ತಿಯ ಕೊರತೆ ನೆಪ ಆಗಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.