ಕಲೆ–ಕಲಾವಿದರ ನಿರ್ಬಂಧ ಸಮಾಜ ವಿಘಟಿಸುವ ತಂತ್ರ ‘ಏ ದಿಲ್‌ ಹೈ ಮುಷ್ಕಿಲ್‌’ ಹಿಂದಿ ಸಿನಿಮಾದ ಬಿಡುಗಡೆಗೆ ಸಂಬಂಧಿಸಿದಂತೆ ವ್ಯಕ್ತವಾಗಿರುವ ವಿರೋಧ ಹಾಗೂ ಪಾಕಿಸ್ತಾನದ ಕಲಾವಿದರನ್ನು ನಿಷೇಧಿಸುವ ಪ್ರಯತ್ನಗಳು ಭಾರತ–ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧದ ಗೋಜಲನ್ನು ಸಾಂಸ್ಕೃತಿಕ ವಲಯಕ್ಕೂ ವಿಸ್ತರಿಸುವ ಅನಾರೋಗ್ಯಕರ ಪ್ರಯತ್ನ.ಭಾರತದ ಉರಿ ಸೇನಾನೆಲೆಯ ಮೇಲೆ ನಡೆದ ಭಯೋತ್ಪಾದಕರ ದಾಳಿ ಹಾಗೂ ನಂತರ ಭಾರತದ ಸೇನೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಎಲ್ಲ ರೀತಿಯ ನಂಟನ್ನೂ ಕಡಿದುಕೊಳ್ಳಲು ಕೆಲವರು ಒತ್ತಾಯಿಸುತ್ತಿದ್ದಾರೆ. ಪಾಕಿಸ್ತಾನದ ನಟ ಫವಾದ್‌ ಖಾನ್‌ ನಟಿಸಿರುವ ಕಾರಣಕ್ಕಾಗಿ ‘ಏ ದಿಲ್‌ ಹೈ ಮುಷ್ಕಿಲ್‌’ ಸಿನಿಮಾ ಬಿಡುಗಡೆಗೆ ಮಹಾರಾಷ್ಟ್ರದ ನವ ನಿರ್ಮಾಣ ವೇದಿಕೆ (ಎಂಎನ್‌ಎಸ್‌) ಹಾಗೂ ಚಿತ್ರಮಂದಿರಗಳ ಮಾಲೀಕರ ಸಂಘಟನೆಯಿಂದ ವಿರೋಧ ವ್ಯಕ್ತವಾಗಿದೆ. ಪಾಕಿಸ್ತಾನದ ಕಲಾವಿದರು 48 ಗಂಟೆಗಳಲ್ಲಿ ಭಾರತ ಬಿಟ್ಟು ಹೋಗಬೇಕೆಂದು ಗಡುವು ನೀಡುವ ಅತಿರೇಕಕ್ಕೂ ಎಂಎನ್‌ಎಸ್‌ ಮುಂದಾಯಿತು. ಉಭಯ ದೇಶಗಳ ರಾಜಕೀಯ ಬಿಕ್ಕಟ್ಟು ಈಗ ರಾಜಕಾರಣದ ಪರಿಧಿಯನ್ನು ಮೀರಿ ಕಲೆ–ಕಲಾವಿದರ ಮೇಲೆ, ಆ ಮೂಲಕ ಜನಸಾಮಾನ್ಯರ ಭಾವನೆಗಳ ಮೇಲೆ ಪರಿಣಾಮ ಬೀರುತ್ತಿರುವುದು ಆತಂಕ ಹುಟ್ಟಿಸುವ ಸಂಗತಿ. ಪಾಕಿಸ್ತಾನದ ಜನಪ್ರಿಯ ಗಜಲ್‌ ಗಾಯಕ ಗುಲಾಂ ಅಲಿ ಅವರ ಕಛೇರಿಗೆ ಕೂಡ ಇತ್ತೀಚೆಗೆ ಇದೇ ರೀತಿಯ ವಿರೋಧ ವ್ಯಕ್ತವಾಗಿತ್ತು. ಎರಡೂ ದೇಶಗಳ ನಡುವಣ ಕ್ರಿಕೆಟ್‌–ಹಾಕಿ ಪಂದ್ಯಗಳ ಸಂದರ್ಭದಲ್ಲಿ ಒಂದು ಬಗೆಯ ಉನ್ಮಾದ ವ್ಯಕ್ತವಾಗುತ್ತಿದ್ದರೂ, ಅದು ನಿಷೇಧದ ಅತಿರೇಕಕ್ಕೆ ಹೋಗಿರಲಿಲ್ಲ. ಜಗಳ–ಮುನಿಸಿನ ನಡುವೆಯೇ ನೆರೆಯ ದೇಶಗಳ ಕ್ರೀಡಾಪಟುಗಳನ್ನು, ಕಲಾವಿದರನ್ನು ಪ್ರೀತಿಸುವ ಸೌಹಾರ್ದ ಸಂಬಂಧ ಇತ್ತೀಚಿನವರೆಗೂ ಸಾರ್ವತ್ರಿಕವಾಗಿತ್ತು. ಆದರೆ, ಈಗ ರಾಜಕಾರಣದ ನಂಜು ಸಮಾಜದ ಬೇರುಗಳಿಗೂ ಇಳಿಯುವ ಪ್ರಯತ್ನ ಶುರುವಾದಂತಿದೆ. ಕಲೆ ಹಾಗೂ ಕಲಾವಿದರಿಗೆ ದೇಶ–ಭಾಷೆಗಳ ಚೌಕಟ್ಟಿಲ್ಲ ಎನ್ನುವ ಸಾರ್ವತ್ರಿಕ ನಂಬಿಕೆಯನ್ನು ಪ್ರಸಕ್ತ ವಿದ್ಯಮಾನಗಳು ಅಣಕಿಸುವಂತಿವೆ. ದೇಶಭಕ್ತಿಯ ಹೆಸರಿನಲ್ಲಿ ಚಿತ್ರರಂಗದ ಕೆಲವು ಕಲಾವಿದರು ಕೂಡ ಸಾಂಸ್ಕೃತಿಕ ಸಂಬಂಧ ಕಡಿದುಕೊಳ್ಳುವ ಮಾತುಗಳನ್ನಾಡಿರುವುದು ಗಾಬರಿ ಹುಟ್ಟಿಸುವಂತಿದೆ. ‘ಏ ದಿಲ್‌ ಹೈ ಮುಷ್ಕಿಲ್‌’ ಚಿತ್ರದ ನಿರ್ದೇಶಕ ಕರಣ್‌ ಜೋಹರ್‌ ಅವರೇ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಕಲಾವಿದರೊಂದಿಗೆ ಕೆಲಸ ನಿರ್ವಹಿಸುವುದಿಲ್ಲ ಎಂದು ಹೇಳಿದ್ದಾರೆ. ವ್ಯತಿರಿಕ್ತ ನಿಲುವುಗಳನ್ನು ಹೊಂದಿದವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅಳುಕುವಂತಹ ಒತ್ತಡವನ್ನು ‘ದೇಶಭಕ್ತಿ’ಯ ಹೆಸರಿನಲ್ಲಿ ಕೆಲವರು ಸೃಷ್ಟಿಸುತ್ತಿದ್ದಾರೆ. ತಮ್ಮ ನಿಲುವಿಗೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದವರನ್ನು ಪಾಕಿಸ್ತಾನದ ವಿಮಾನ ಹತ್ತಿಸಲು ಪ್ರಯತ್ನಿಸುವ ಒಂದು ಸಮೂಹವೇ ನಮ್ಮ ನಡುವೆಯಿದೆ. ಅಮೀರ್‌ಖಾನ್‌, ಶಾರುಖ್‌ ಖಾನ್‌ರಂಥ ನಟರು ತಮ್ಮ ಸಿನಿಮಾಗಳಿಗೆ ವಿರೋಧ ಎದುರಿಸಬೇಕಾಗಿ ಬಂದುದನ್ನು ಗಮನಿಸಿದರೆ, ದೇಶಭಕ್ತಿ–ಧರ್ಮದ ಹೆಸರಿನಲ್ಲಿ ಸಮಾಜದ ವಿಘಟನೆಯ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿರುವಂತಿವೆ. ಇಂಥ ಪ್ರಯತ್ನಗಳನ್ನು ಹತ್ತಿಕ್ಕಬೇಕಾದ ಕೇಂದ್ರ ಸರ್ಕಾರ, ‘ಬಹುತ್ವ’ದ ವಿರುದ್ಧ ಧ್ವನಿಯೆತ್ತುತ್ತಿರುವ ಶಕ್ತಿಗಳಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿರುವುದು ವಿಷಾದನೀಯ. ಪ್ರಸಕ್ತ ಸಿನಿಮಾ ನಿಷೇಧದ ಪ್ರಹಸನ ಹಾಗೂ ‘ದೇಶ ಬಿಟ್ಟು ಹೊರಡಿ’ ಎಂದು ಪಾಕಿಸ್ತಾನದ ಕಲಾವಿದರಿಗೆ ಎಂಎನ್‌ಎಸ್‌ ಬಹಿರಂಗವಾಗಿ ಬೆದರಿಕೆ ಒಡ್ಡಿರುವ ಘಟನೆಗೂ ತನಗೂ ಸಂಬಂಧ ಇಲ್ಲವೆನ್ನುವಂತೆ ಕೇಂದ್ರ ಸರ್ಕಾರ ತಳೆದ ಮೌನ, ಪುಢಾರಿಗಳ ಉದ್ಧಟತನಕ್ಕೆ ನೀಡಿದ ಪರೋಕ್ಷ ಸಮ್ಮತಿಯಲ್ಲದೆ ಬೇರೇನೂ ಅಲ್ಲ. ಸಾಮಾಜಿಕ ಸೌಹಾರ್ದ ಕದಡುವಂತಹ ಸನ್ನಿವೇಶಗಳಲ್ಲಿ ಕೊನೆಯವರೆಗೂ ಮೌನವಾಗಿದ್ದು, ಕೊನೆಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಜಾಣತನದ ಪ್ರತಿಕ್ರಿಯೆ ನೀಡುವುದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವೈಖರಿಯಾಗಿದೆ. ಇದಕ್ಕೆ ತಕ್ಕನಾಗಿ, ‘ಏ ದಿಲ್ ಹೈ ಮುಷ್ಕಿಲ್‌’ ವಿವಾದ ತಾರಕಕ್ಕೆ ಹೋಗುವವರೆಗೂ ಸುಮ್ಮನಿದ್ದು, ಚಿತ್ರದ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಭದ್ರತೆ ಒದಗಿಸುವುದಾಗಿ ಸರ್ಕಾರ ಹೇಳಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬೌದ್ಧಿಕ ವಲಯದ ಬಗ್ಗೆ ದೇಶದಲ್ಲಿ ಅಸಹನೆ ಹೆಚ್ಚುತ್ತಿದ್ದು, ಆ ಅಸಹನೆ ಈಗ ಸಿನಿಮಾ ಮತ್ತು ಕಲಾವಿದರತ್ತ ತಿರುಗಿದೆ. ಸಮಾಜದ ಆರೋಗ್ಯ ವಿಷಮಿಸಿದಾಗ ನಿಷೇಧಗಳೂ ಹೆಚ್ಚುತ್ತವೆ. ಇಂಥ ನಿರ್ಬಂಧಗಳನ್ನು ಪ್ರಜ್ಞಾವಂತರೆಲ್ಲರೂ ವಿರೋಧಿಸಬೇಕಿದೆ ಹಾಗೂ ಈ ಪ್ರಯತ್ನಗಳಿಗೆ ಪರೋಕ್ಷ ಬೆಂಬಲ ನೀಡುವ ಕೇಂದ್ರ ಸರ್ಕಾರದ ನಡವಳಿಕೆಯನ್ನು ಖಂಡಿಸಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.