ಜಿಎಸ್‌ಟಿ ಜಾರಿ ಹಾದಿಯಲ್ಲಿನ ಕಂಟಕಗಳು ದೂರವಾಗಲಿ ದೇಶದಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಅನೇಕ ಕಂಟಕಗಳು ಎದುರಾಗಿರುವುದು ಅನಪೇಕ್ಷಿತ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ಭರವಸೆ ಮೂಡಿಸಿದ್ದ ವಿದ್ಯಮಾನಗಳು ಈಗ ನಿರಾಶೆಗೆ ಎಡೆಮಾಡಿಕೊಟ್ಟಿವೆ. ಪ್ರಮುಖ ಘಟ್ಟದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಣ ಭಿನ್ನಾಭಿಪ್ರಾಯಗಳು ತಾರಕಕ್ಕೆ ಏರುತ್ತಿರುವುದು ಸಮರ್ಥನೀಯವಲ್ಲ. ತೆರಿಗೆ ದರಗಳನ್ನು ಅಂತಿಮಗೊಳಿಸುವ ಉದ್ದೇಶದಿಂದಲೇ ಕಳೆದ ವಾರ ಸಭೆ ಸೇರಿದ್ದ ಜಿಎಸ್‌ಟಿ ಮಂಡಳಿಯ ಮೂರು ದಿನಗಳ ಸಭೆ ಎರಡೇ ದಿನಕ್ಕೆ ಮೊಟಕುಗೊಂಡು ಯಾವುದೇ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿರುವುದು ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟಿದೆ. ಶೇ 6, 12, 18 ಮತ್ತು ಶೇ 26ರಷ್ಟು ತೆರಿಗೆ ದರಗಳ ನಾಲ್ಕು ಹಂತದ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿರುವುದು ಬಳಕೆದಾರರ ಪಾಲಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಲಿದೆ. ಜನಸ್ನೇಹಿ ತೆರಿಗೆ ವ್ಯವಸ್ಥೆ ಜಾರಿಗೆ ತರುವ ಬದಲಿಗೆ ತೆರಿಗೆದಾರರ ಮೇಲೆ ಹೆಚ್ಚುವರಿ ಹೊರೆ ಹಾಕುವ ತೆರಿಗೆ ಹಂತಗಳನ್ನು ರೂಪಿಸಲು ಹೊರಟಿರುವುದು ಜಿಎಸ್‌ಟಿಯ ಮೂಲ ಆಶಯಕ್ಕೇ ಧಕ್ಕೆ ತರುವಂತಹದ್ದು. ಇದರ ಜತೆಗೆ ರಾಜ್ಯ ಸರ್ಕಾರಗಳ ನಷ್ಟ ಭರ್ತಿ ಮಾಡಿಕೊಡಲು ಕೆಲವು ಸರಕುಗಳ ಮೇಲೆ ಉಪಕರ (ಸೆಸ್‌) ವಿಧಿಸುವ ನಿರ್ಧಾರ ಮತ್ತು ಸೇವಾ ತೆರಿಗೆ ಅಧಿಕಾರಿಗಳ ನಿಯಂತ್ರಣ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಭಿನ್ನಾಭಿಪ್ರಾಯಗಳು ಕಂಡು ಬಂದಿರುವುದು ಅತಿದೊಡ್ಡ ಆರ್ಥಿಕ ಸುಧಾರಣಾ ಕ್ರಮದ ಜಾರಿಗೆ ಸದ್ಯಕ್ಕೆ ಶುಭಶಕುನವಂತೂ ಆಗಿಲ್ಲ. ಅನೇಕ ವಿಷಯಗಳಲ್ಲಿ ರಾಜ್ಯಗಳ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರಿರುವುದು ಸಹಜ. ಇಂತಹ ಭಿನ್ನಮತ ಶಮನಗೊಳಿಸುವುದೇ ‘ಜಿಎಸ್‌ಟಿ ಮಂಡಳಿ’ಯ ಮುಖ್ಯ ಕರ್ತವ್ಯವಾಗಿದೆ. ಆರಂಭದಲ್ಲಿ ನಡೆದ ಮಂಡಳಿಯ ಎರಡು ಸಭೆಗಳು ಭರವಸೆದಾಯಕವಾಗಿದ್ದವು. ಮೂರು ದಿನಗಳ ಮೂರನೇ ಸಭೆಯ ಆರಂಭದಲ್ಲಿ, ಮಹತ್ವದ ವಿಷಯಗಳ ಬಗ್ಗೆ ಒಮ್ಮತಾಭಿಪ್ರಾಯಕ್ಕೆ ಬಂದು, ಅಂತ್ಯದಲ್ಲಿ ದರಗಳನ್ನು ಪ್ರಕಟಿಸಲಾಗುವುದು ಎಂದು ಬಹುವಾಗಿ ನಿರೀಕ್ಷಿಸಲಾಗಿತ್ತು. ಮಂಡಳಿಯ ಸದಸ್ಯರು ಸರ್ವಸಮ್ಮತಕ್ಕೆ ಬರುವ ಬದಲಿಗೆ ಎರಡೇ ದಿನಕ್ಕೆ ಸಭೆ ಮುಕ್ತಾಯಗೊಳಿಸಿರುವುದು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವ ಭಾವನೆ ಮೂಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ವ್ಯಾಪಕ ಭಿನ್ನಾಭಿಪ್ರಾಯಗಳು ಬಹಿರಂಗವಾಗಿರುವುದು ಸಭೆಯ ವೈಫಲ್ಯಕ್ಕೆ ಕಾರಣವಾಗಿದೆ. ಈ ಮಹತ್ವದ ಪರೋಕ್ಷ ತೆರಿಗೆ ಸುಧಾರಣೆಯನ್ನು ಆಡಳಿತಾತ್ಮಕವಾಗಿ ಕಾರ್ಯಗತಗೊಳಿಸಲು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪೂರಕ ಮಸೂದೆ ಅಂಗೀಕರಿಸುವುದು ಅನಿವಾರ್ಯವಾಗಿದೆ. ನಾಲ್ಕು ಹಂತದ ತೆರಿಗೆ ವ್ಯವಸ್ಥೆಯಡಿ ಆದ್ಯತೆ, ಕಡಿಮೆ ಆದ್ಯತೆ, ಸ್ಟ್ಯಾಂಡರ್ಡ್‌ ಮತ್ತು ಆರೋಗ್ಯಕ್ಕೆ ಅಪಾಯಕಾರಿಯಾದ ತಂಬಾಕು, ಸಿಗರೇಟ್‌, ಮದ್ಯದ ಉತ್ಪನ್ನಗಳ ಮೇಲೆ ವಿಭಿನ್ನ ಹಂತದ ತೆರಿಗೆ ದರ ವಿಧಿಸಲು ಹೊರಟಿರುವುದು ತೆರಿಗೆ ಸರಳೀಕರಣ ಮತ್ತು ತೆರಿಗೆ ಬಾಧ್ಯತೆ ಪರಿಕಲ್ಪನೆಯನ್ನೇ ತಲೆಕೆಳಗು ಮಾಡಲಿದೆ. ಪೆಟ್ರೋಲಿಯಂ ಉತ್ಪನ್ನ ಮತ್ತು ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇರಿಸಿರುವುದೂ ಚರ್ಚಾಸ್ಪದವಾಗಿದೆ. ಇಂತಹ ಸಂಕೀರ್ಣ ಸ್ವರೂಪದ ತೆರಿಗೆ ದರಗಳಿಂದ ಗರಿಷ್ಠ ಪ್ರಮಾಣದ ಲಾಭ ಬಾಚಿಕೊಳ್ಳಲು ಕೈಗಾರಿಕಾ ಸಮೂಹಗಳು ಸರ್ಕಾರದ ಮೇಲೆ ಪ್ರಭಾವ ಬೀರಲು ಅಡ್ಡ ಹಾದಿ ಹಿಡಿಯಲು ಅವಕಾಶ ಮಾಡಿಕೊಡಲಿದೆ. ಮಧ್ಯಮವರ್ಗದ ಜನರು ಬಳಸುವ ಬಹುತೇಕ ಸರಕುಗಳನ್ನು ಶೇ 18 ಅಥವಾ ಶೇ 20ರಷ್ಟು ತೆರಿಗೆ ವ್ಯಾಪ್ತಿಗೆ ತರಲು ಉದ್ದೇಶಿಸಿರುವುದರಿಂದ ಬಹುಸಂಖ್ಯಾತ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ರಾಜ್ಯಗಳ ನಷ್ಟ ಭರ್ತಿ ಮಾಡಿಕೊಡಲು ಹೆಚ್ಚುವರಿಯಾಗಿ ‘ಸೆಸ್‌’ ವಿಧಿಸುವ ಪ್ರಸ್ತಾವನೆಯಂತೂ ಜಿಎಸ್‌ಟಿ ಸ್ವರೂಪವನ್ನೇ ಸಂಪೂರ್ಣವಾಗಿ ವಿರೂಪಗೊಳಿಸಲಿದೆ. ದೇಶದಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಜಾರಿಯ ಮೂಲ ಪರಿಕಲ್ಪನೆಯನ್ನೇ ಇದು ಹಾಳು ಮಾಡಲಿದೆ. ಕೆಲ ರಾಜ್ಯ ಸರ್ಕಾರಗಳು ಇದನ್ನು ವಿರೋಧಿಸಿರುವುದರಲ್ಲಿ ಆಕ್ಷೇಪಾರ್ಹವಾದುದೇನೂ ಇಲ್ಲ. ಇದಕ್ಕೆ ಬದಲಾಗಿ ಕೇಂದ್ರ ಸರ್ಕಾರವು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಶುದ್ಧ ಇಂಧನ ತೆರಿಗೆ, ಚಿನ್ನದ ಮೇಲಿನ ತೆರಿಗೆ ಹೆಚ್ಚಳ, ತಂಬಾಕಿನ ಇತರ ಉತ್ಪನ್ನ, ಗುಟ್ಕಾ, ಬೀಡಿಗಳನ್ನು ತೆರಿಗೆ ವ್ಯಾಪ್ತಿಗೆ ತರಬಹುದಾಗಿದೆ. ನಾಲ್ಕು ಹಂತದ ತೆರಿಗೆ ವ್ಯವಸ್ಥೆಯು ಹಣದುಬ್ಬರದ ಮೇಲೆ ಇನ್ನಷ್ಟು ಒತ್ತಡ ಬೀಳದಂತೆಯೂ ನೋಡಿಕೊಳ್ಳಬೇಕಾಗಿದೆ. ತೆರಿಗೆ ಸುಧಾರಣೆಯ ವ್ಯವಸ್ಥೆಯನ್ನು ಸರಳಗೊಳಿಸುವ ಪ್ರಯತ್ನಗಳು ಮಹತ್ವದ ಹಂತದಲ್ಲಿ ಹಾದಿ ತಪ್ಪದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾಗರೂಕತೆ ವಹಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.