ಸಮಾಜವಾದಿ ಪಕ್ಷದ ಒಡಕು ಸೈದ್ಧಾಂತಿಕ ನೆಲೆಗೆ ಭಾರಿ ಪೆಟ್ಟು ಕುಟುಂಬದೊಳಗಿನ ಕಲಹವನ್ನು ಸಂಧಾನದ ಮೂಲಕ ಪರಿಹರಿಸಲು ಸೋಮವಾರದಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಕರೆದಿದ್ದ ಸಭೆ, ಸಂಘರ್ಷವನ್ನು ಇನ್ನಷ್ಟು ತೀವ್ರವಾಗಿಸಿದ್ದು ವಿಪರ್ಯಾಸ. ಈ ಸಭೆಯಲ್ಲಿ ನಡೆದ ನಾಟಕೀಯ ಘಟನಾವಳಿ, ಪರಸ್ಪರ ಕೈ ಕೈ ಮಿಲಾಯಿಸುವಂತಹ ಘರ್ಷಣೆ, ರಾಷ್ಟ್ರದ ಅತಿ ದೊಡ್ಡ ರಾಜ್ಯದ ಹಿತಕ್ಕಂತೂ ಪೂರಕವಾಗಿರಲಿಲ್ಲ. ಸಮಾಜವಾದಿ ಪಕ್ಷದೊಳಗಿನ ಒಡಕುಗಳನ್ನು ಈ ಘಟನಾವಳಿ ಬಟಾಬಯಲಾಗಿಸಿದೆ. ಕುಟುಂಬದೊಳಗಿನ ಅಗ್ಗದ ಕಿತಾಪತಿಗಳ ರಾಜಕಾರಣ ಮೇಲುಗೈ ಪಡೆದು ವಿಜೃಂಭಿಸಿದ್ದು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿರಲಿಲ್ಲ ಎಂಬುದು ವಿಷಾದನೀಯ. ಸಮಾಜವಾದಿ ಪಕ್ಷವನ್ನು ಕಟ್ಟಿ ಬೆಳೆಸಿದ್ದು ತಾವೇ ಎಂದು ಮುಲಾಯಂ ಸಿಂಗ್ ಯಾದವ್ ಅವರು ಪ್ರತಿಪಾದಿಸಿಕೊಳ್ಳಬಹುದು. ಲೋಹಿಯಾ ಅವರ ಸಮಾಜವಾದ, ಸಾಮಾಜಿಕ ನ್ಯಾಯ, ಚರಣ್ ಸಿಂಗ್ ಅವರ ರೈತ ಹೋರಾಟ, ವಿ.ಪಿ.ಸಿಂಗ್ ಅವರ ಮಂಡಲ್ ರಾಜಕಾರಣ ಹಾಗೂ 1990ರ ದಶಕದಲ್ಲಿ ರಾಮ ಜನ್ಮಭೂಮಿ ಹೋರಾಟಕ್ಕೆ ಜಾತ್ಯತೀತ ಪ್ರತಿರೋಧದ ಅಂಶಗಳನ್ನೆಲ್ಲಾ ಒಳಗೊಂಡು ಪಕ್ಷವನ್ನು ಕಟ್ಟಿ ಬೆಳೆಸಿದವರು ಮುಲಾಯಂ ಸಿಂಗ್ ಎಂಬುದು ನಿಜ. ಆದರೆ ಪಕ್ಷದಲ್ಲಿ ಈಗ ಆಗುತ್ತಿರುವ ಬೆಳವಣಿಗೆಗಳು, ಈ ಸೈದ್ಧಾಂತಿಕ ನೆಲೆಗಳಿಗೆ ಪೂರಕವಾಗಿಲ್ಲ. ಕುಟುಂಬದ ಸಾಮ್ರಾಜ್ಯವಾಗಿ ಪಕ್ಷವನ್ನು ಬೆಳೆಸಲು ಅವಕಾಶ ಮಾಡಿಕೊಂಡಿದ್ದು ‘ಸಮಾಜವಾದಿ ಪಕ್ಷ’ ಎಂಬ ಹೆಸರಿಗೇ ಮಾಡಿದ ಅಪಚಾರ. ಪುತ್ರ, ಸೋದರ, ಸೋದರ ಸಂಬಂಧಿಗಳು, ಅವರ ಪತ್ನಿಯರು ಮತ್ತು ಇತರ ಬಂಧುಗಳಿಗೆ ಪಕ್ಷದ ಪ್ರಮುಖ ಸ್ಥಾನಗಳಲ್ಲಿ ಅವಕಾಶ ನೀಡಲಾಗಿರುವುದು ಸಮಾಜವಾದಿ ಸಿದ್ಧಾಂತಕ್ಕೆ ವ್ಯತಿರಿಕ್ತವಾದದ್ದು. ಹೊಸ ಕಾಲಕ್ಕೆ ಹೊಸ ಮುಖವಾಗಿ ರಾಜಕೀಯ ಅಖಾಡಕ್ಕೆ ಇಳಿದ ಮುಲಾಯಂ ಸಿಂಗ್ ಪುತ್ರ ಅಖಿಲೇಶ್‌ ಯಾದವ್‌ 2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಿರ್ಣಾಯಕವಾಗಿ ಗೆಲುವು ಸಾಧಿಸಿ ಮುಖ್ಯಮಂತ್ರಿಯೂ ಆಗಿದ್ದು ಇತಿಹಾಸ. ಈಗ ಪಕ್ಷದ ಪ್ರಭಾವಿ ನಾಯಕರಾಗಿಯೂ ಅಖಿಲೇಶ್ ಬೆಳೆದಿದ್ದಾರೆ. ಸ್ವಂತ ವರ್ಚಸ್ಸನ್ನೂ ಬೆಳೆಸಿಕೊಂಡಿದ್ದಾರೆ. ಆದರೆ ಅಖಿಲೇಶ್‌ ಅವರಿಗೆ ಪ್ರತಿಸ್ಪರ್ಧಿಗಳು ಮುಲಾಯಂ ಸಿಂಗ್‌ ಯಾದವ್ ಕುಟುಂಬದೊಳಗೇ ಸೃಷ್ಟಿಯಾಗಿದ್ದಾರೆ. ಚಿಕ್ಕಪ್ಪ ಶಿವಪಾಲ್ ಸಿಂಗ್, ಮುಲಾಯಂ ಸಿಂಗ್ ಯಾದವ್ ಅವರ ಆಪ್ತ ಹಾಗೂ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಅವರು ತಮ್ಮ ವಿರುದ್ಧ ‘ಪಿತೂರಿ’ ನಡೆಸುತ್ತಿದ್ದಾರೆಂಬುದು ಅಖಿಲೇಶ್ ಯಾದವ್ ಆರೋಪ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸನಿಹದಲ್ಲಿರುವ ಸದ್ಯದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯ ಕುಟುಂಬದೊಳಗೇ ಅಧಿಕಾರದ ಆಕಾಂಕ್ಷಿಗಳು ಹುಟ್ಟಿಕೊಂಡು ಆ ಜಗಳ ಬೀದಿಮಾತಾಗುತ್ತಿರುವುದು ಅನಪೇಕ್ಷಣೀಯ ಬೆಳವಣಿಗೆ. ಇದರಿಂದ ಸಾರ್ವಜನಿಕ ದೃಷ್ಟಿಕೋನದಲ್ಲಿ ಪಕ್ಷದ ಪ್ರತಿಷ್ಠೆಗೆ ಆಗಿರುವ ಹಾನಿ ಅಪಾರ. ಪಕ್ಷದೊಳಗಿನ ಈ ತಳಮಳದಿಂದ ಆಗುತ್ತಿರುವ ಅಹಮಿಕೆಗಳ ಘರ್ಷಣೆಗಳಲ್ಲಿ ವಾಗ್ವಾದಗಳ ಘನತೆ ಕುಸಿದಿದೆ. ಇಷ್ಟೆಲ್ಲಾ ಕಹಿ ಬೆಳವಣಿಗೆಗಳ ನಂತರವೂ ಸಾರ್ವಜನಿಕವಾಗಿ ಏಕತೆಯನ್ನು ಸಮಾಜವಾದಿ ಪಕ್ಷ ಪ್ರದರ್ಶಿಸಬಹುದು. ಆ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆಯುತ್ತಿವೆ. ಆದರೆ ಈ ಕಹಿ ಬೆಳವಣಿಗೆಗಳಿಂದ ಪಕ್ಷಕ್ಕೆ ಆದ ಹಾನಿಯನ್ನು ಸರಿದೂಗಿಸುವುದಂತೂ ಕಷ್ಟ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.