ಅನುತ್ತೀರ್ಣರಹಿತ ನೀತಿ ರದ್ದು ಪರಿಹಾರವಾಗದು ಐದು ಹಾಗೂ ಎಂಟನೇ ತರಗತಿಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಿ ‘ಪಾಸ್’– ‘ಫೇಲ್’ ವ್ಯವಸ್ಥೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.ಅನುತ್ತೀರ್ಣರಹಿತ ನೀತಿ ಜಾರಿಯಿಂದಾಗಿ ಶಿಕ್ಷಣ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂಬಂತಹ ಅಭಿಪ್ರಾಯವನ್ನು ಹಲವು ರಾಜ್ಯಗಳು ಮುಂದಿಟ್ಟಿವೆ. ಹೀಗಾಗಿ ಕಲಿಕಾ ಗುಣಮಟ್ಟ ಸುಧಾರಣೆಗಾಗಿ ಅನುತ್ತೀರ್ಣರಹಿತ ನೀತಿಯನ್ನು ಕೈಬಿಡಬೇಕೆಂದು ಈ ರಾಜ್ಯಗಳು ಒತ್ತಾಯಿಸಿವೆ. ಇದಕ್ಕೆ ಓಗೊಟ್ಟು ಈ ಕ್ರಮ ಕೈಗೊಳ್ಳಲು ಮಾನವ ಸಂಪನ್ಮೂಲ ಸಚಿವಾಲಯ ಮುಂದಾಗಿದೆ. ಆದರೆ ಈ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾಜ್ಯಗಳ ವಿವೇಚನೆಗೇ ಬಿಡಲಾಗಿದೆ. ಕರ್ನಾಟಕ ಸೇರಿದಂತೆ ಎರಡು–ಮೂರು ರಾಜ್ಯಗಳು ಅನುತ್ತೀರ್ಣ ರಹಿತ ನೀತಿ ರದ್ದುಪಡಿಸುವುದಕ್ಕೆ ವಿರೋಧವನ್ನು ವ್ಯಕ್ತಪಡಿಸಿವೆ. ಸರ್ಕಾರದ ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳ ಮೂಲಕ ರಾಷ್ಟ್ರದಲ್ಲಿ ಶಾಲಾ ದಾಖಲಾತಿ ಪ್ರಮಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಚ್ಚಳ ಸಾಧಿಸಲಾಗಿದೆ. ಹೀಗಾಗಿ, ಈಗ ಮಕ್ಕಳ ಕಲಿಕೆ ಗುಣಮಟ್ಟ ಪರಿಣಾಮಕಾರಿಯಾಗಿದೆಯೇ ಎಂಬ ಬಗ್ಗೆ ಸರ್ಕಾರ ಗಮನ ಹರಿಸುತ್ತಿರುವುದು ಸಹಜವಾದದ್ದೇ. ಆದರೆ ಇದಕ್ಕಾಗಿ ಪಾಸ್– ಫೇಲ್ ವ್ಯವಸ್ಥೆ ಜಾರಿಗೊಳಿಸಲು ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ತಿದ್ದುಪಡಿ ಮಾಡಲು ಆತುರ ತೋರಬಾರದು. ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ತೀರಾ ಕೆಳಮಟ್ಟದಲ್ಲಿದೆ ಎಂಬುದನ್ನು ಅನೇಕ ಸಮೀಕ್ಷೆಗಳು ತೋರಿಸಿಕೊಡುತ್ತಲೇ ಇವೆ ಎಂಬುದು ನಿಜ. ಎನ್‌ಸಿಇಆರ್‌ಟಿ ನಡೆಸಿದ ಸಮೀಕ್ಷೆಯಲ್ಲಿಯೂ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕುಸಿದಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಇದಕ್ಕೆ ‘ಅನುತ್ತೀರ್ಣರಹಿತ ನೀತಿ’ ಅಥವಾ ‘ಪಾಸ್– ಫೇಲ್’ ವ್ಯವಸ್ಥೆ ಜಾರಿ ಉತ್ತರವಾಗುವುದಿಲ್ಲ. ಶಾಲಾ ಶಿಕ್ಷಣದ ಸದ್ಯದ ವಾಸ್ತವ ಸಂಗತಿಯನ್ನು ನಾವು ಅರಿತುಕೊಳ್ಳಬೇಕು. ರಾಷ್ಟ್ರದಲ್ಲಿ ಶಾಲೆಗಳಿಗೆ ಹೋಗುತ್ತಿರುವ ಮಕ್ಕಳಲ್ಲಿ ಹೆಚ್ಚಿನವರು ತಮ್ಮ ಕುಟುಂಬಗಳಲ್ಲೇ ಮೊದಲ ಬಾರಿ ಶಾಲೆ ಮುಖ ಕಂಡವರು ಎಂಬುದನ್ನು ಮರೆಯಲಾಗದು. ಈ ಮಕ್ಕಳ ತಂದೆತಾಯಿಯರು ಅವಿದ್ಯಾವಂತರು. ಅಕ್ಷರಲೋಕದ ಓನಾಮ ತಿಳಿಯದವರು. ಇಂತಹ ಕುಟುಂಬಗಳ ಮಕ್ಕಳು ಜ್ಞಾನದ ಲೋಕಕ್ಕೆ ತೆರೆದುಕೊಳ್ಳುವಾಗ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕಲಿಕೆಯ ಮಟ್ಟ ಚುರುಕಾಗಿರದಿರಬಹುದು. ಹೀಗಾಗಿ, ಆರಂಭದ ಹಂತದಿಂದಲೇ ಪೌಷ್ಟಿಕ ಆಹಾರದ ಜೊತೆಗೆ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವಂತಹ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಜೊತೆಗೆ ಬೋಧನೆಯ ರೀತಿಯೂ ಸೃಜನಾತ್ಮಕವಾಗಿರಬೇಕು. ಶಾಲಾ ತರಗತಿಗಳು ಜೈಲು ಕೋಣೆಗಳಂತಾಗಬಾರದು. ಕಲಿಕೆ ಎಂದರೆ ಬರೀ ಉರು ಹೊಡೆದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾಗುವುದು ಮಾತ್ರವಲ್ಲ ಎಂಬುದು ಮೊದಲು ನಮಗೆ ಮನದಟ್ಟಾಗಬೇಕಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಶಾಲಾ ಶಿಕ್ಷಣದಲ್ಲಿ ಈ ರೀತಿಯ ‘ಪಾಸ್– ಫೇಲ್’ ವ್ಯವಸ್ಥೆ ಇಲ್ಲ. ನಿಜಕ್ಕೂ ನಮಗೆ ಬೇಕಾಗಿರುವುದು, ಮಕ್ಕಳ ಜ್ಞಾನ ವಿಕಸಿಸುವ ರೀತಿಯ ಬೋಧನೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರ ಜವಾಬ್ದಾರಿ ದೊಡ್ಡದು. ವಿದ್ಯಾರ್ಥಿ ವೇತನ ನೀಡುವುದು ಸೇರಿದಂತೆ ವಿವಿಧ ರೀತಿಯ ಉತ್ತೇಜನ ಕ್ರಮಗಳನ್ನು ಕಲಿಕೆಯಲ್ಲಿ ಮುಂದಿರುವ ಮಕ್ಕಳಿಗಾಗಿ ಅಳವಡಿಸಿಕೊಳ್ಳುವುದನ್ನು ಚಿಂತಿಸಬಹುದು. ಆದರೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗಮನ ನೀಡಿ ಅವರನ್ನು ಸಜ್ಜುಗೊಳಿಸಬೇಕಾದ ದೊಡ್ಡ ಜವಾಬ್ದಾರಿ ಶಿಕ್ಷಕರಿಗಿದೆ ಎಂಬುದನ್ನು ಕಡೆಗಣಿಸಲಾಗದು. ಇಂತಹ ಮಕ್ಕಳಿಗೆ ಹೆಚ್ಚಿನ ಬೋಧನೆಯೂ ಅಗತ್ಯವಾಗಬಹುದು. ಇದಕ್ಕಾಗಿ ಸೃಜನಾತ್ಮಕ ರೀತಿಯ ಬೋಧನ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅವಶ್ಯ. ಇಂತಹ ಕ್ರಮಗಳನ್ನು ಬಿಟ್ಟು ಶಾಲಾ ಶಿಕ್ಷಣ ಹಂತದಲ್ಲಿ ಮಕ್ಕಳನ್ನು ಅನುತ್ತೀರ್ಣಗೊಳಿಸುವುದರಿಂದ ಮಕ್ಕಳು ಮಧ್ಯದಲ್ಲೇ ಶಾಲೆ ಬಿಡುವ ಸಮಸ್ಯೆ ಹೆಚ್ಚಾಗುತ್ತದೆ ಅಷ್ಟೆ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ವ ಶಿಕ್ಷಣ ಅಭಿಯಾನದಂತಹ ಕಾರ್ಯಕ್ರಮಗಳ ಮೂಲಕ ಶಾಲೆಗಳಿಗೆ ಮಕ್ಕಳ ದಾಖಲಾತಿಯಲ್ಲಿ ಏರಿಕೆ ಕಂಡು ಬಂದಿದ್ದರೂ ಮಕ್ಕಳು ಮಧ್ಯದಲ್ಲೇ ಶಾಲೆ ಬಿಡುವ ಸಮಸ್ಯೆ ಇದ್ದೇ ಇದೆ ಎಂಬುದನ್ನು ಮರೆಯುವಂತಿಲ್ಲ. ಜಾಗತೀಕರಣದ ಈ ಯುಗ ಸ್ಪರ್ಧಾತ್ಮಕವಾದದ್ದು. ಈ ಸ್ಪರ್ಧೆಯ ಓಟದಲ್ಲಿ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯ ದೋಷಗಳಿಂದಾಗಿ ಮಕ್ಕಳು ಹಿಂದುಳಿಯುವಂತಾಗಬಾರದು. ಈ ಬಗ್ಗೆ ಸರ್ಕಾರ ಎಚ್ಚರ ವಹಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.