ಕಲಾವಿದರ ದುರ್ಮರಣ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ‘ಮಾಸ್ತಿಗುಡಿ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇಬ್ಬರು ಕಲಾವಿದರು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕನ್ನಡ ಚಿತ್ರರಂಗದ ನೈತಿಕಸ್ಥೈರ್ಯಕ್ಕಾದ ಆಘಾತವಾಗಿದೆ. ಎಂಟು ದಶಕಗಳಿಗೂ ಹೆಚ್ಚಿನ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇಂಥದೊಂದು ದುರ್ಘಟನೆ ನಡೆದುದು ಇದೇ ಮೊದಲು. ಇದಕ್ಕೆ ಮೊದಲು ಸಣ್ಣಪುಟ್ಟ ಆಕಸ್ಮಿಕ–ಅಪಘಾತಗಳು ನಡೆದಿದ್ದರೂ ಸಾಹಸ ದೃಶ್ಯಗಳ ಸಂಯೋಜನೆಯ ಯಡವಟ್ಟಿನಿಂದಾಗಿ ಸಾವು ಸಂಭವಿಸಿದ ಉದಾಹರಣೆ ಇದೊಂದೇ. ಪ್ರಸಕ್ತ ಘಟನೆ ಆಕಸ್ಮಿಕ ವಿದ್ಯಮಾನ ಆಗಿರದೆ, ಚಿತ್ರತಂಡದ ನಿರ್ಲಕ್ಷ್ಯದ ಕಾರಣದಿಂದ ಸಂಭವಿಸಿದ ದುರಂತವಾಗಿದೆ. ಸಾವಿಗೀಡಾಗಿರುವ ಉದಯ್‌ ರಾಘವ್‌ ಹಾಗೂ ಅನಿಲ್‌ಕುಮಾರ್‌ ಇಬ್ಬರೂ ಈಗಷ್ಟೇ ಚಿತ್ರರಂಗದಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದ ಪ್ರತಿಭಾವಂತರು. ಮಧ್ಯಮ ವರ್ಗದಿಂದ ಬಂದು ಸ್ವಸಾಮರ್ಥ್ಯದಿಂದ ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದ ಈ ಕಲಾವಿದರ ಸಾವಿಗೆ ಚಿತ್ರತಂಡದ ಮುಂಚೂಣಿಯಲ್ಲಿದ್ದವರ ನಿರ್ಲಕ್ಷ್ಯವೇ ಕಾರಣ. ಜಲಾಶಯದ ನಿಷೇಧಿತ ಭಾಗದಲ್ಲಿ ಚಿತ್ರೀಕರಣ ನಡೆಸುವ ಮೂಲಕ ಚಿತ್ರತಂಡ ಸ್ಪಷ್ಟವಾಗಿ ಕಾನೂನು ಉಲ್ಲಂಘಿಸಿದೆ. ಜಲಮಂಡಳಿ ಅನುಮತಿ ನಿರಾಕರಿಸಿದ್ದರೂ ಹೆಲಿಕಾಪ್ಟರ್‌ ಬಳಸಿರುವುದು ಚಿತ್ರತಂಡದ ಭಂಡತನಕ್ಕೆ ಉದಾಹರಣೆಯಾಗಿದೆ. ಈಜಿನಲ್ಲಿ ಪರಿಣತಿ ಹೊಂದಿಲ್ಲದೆ ಇರುವವರನ್ನು ಯಾವ ಮುನ್ನೆಚ್ಚರಿಕೆಯೂ ತೆಗೆದುಕೊಳ್ಳದೆ ನೂರು ಅಡಿಗೂ ಹೆಚ್ಚು ಎತ್ತರದಿಂದ ನೀರಿಗೆ ಧುಮುಕಲು ಒಪ್ಪಿಸಲಾಗಿದೆ. ಇದು ಕಲಾವಿದರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡಿರುವ ಅಮಾನವೀಯತೆ. ಎತ್ತರದಿಂದ ಜಿಗಿಯುವ ಸಾಹಸದೃಶ್ಯಗಳನ್ನು ಹಗ್ಗ ಬಳಸಿ ಚಿತ್ರೀಕರಣ ನಡೆಸಲು ಅವಕಾಶವಿದ್ದರೂ ಪ್ರಾಣಾಂತಿಕ ಘಟನೆಗೆ ಆಸ್ಪದ ಕಲ್ಪಿಸಿರುವುದು ನಿರ್ಮಾಪಕ, ನಿರ್ದೇಶಕ ಹಾಗೂ ಸಾಹಸ ಸಂಯೋಜಕರ ಹುಚ್ಚು ಮನಸ್ಥಿತಿಯ ದ್ಯೋತಕವಾಗಿದೆ. ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಮೂವರ ಪೈಕಿ ವಿಜಯ್‌ ಅವರಷ್ಟೇ ಜೀವರಕ್ಷಕ ಜಾಕೆಟ್‌ ಧರಿಸಿದ್ದುದನ್ನು ನೋಡಿದರೆ, ನಾಯಕನಟರ ಜೀವಕ್ಕಷ್ಟೇ ಚಿತ್ರರಂಗದಲ್ಲಿ ಬೆಲೆಯಿದೆ ಎಂದು ಭಾವಿಸಬೇಕಾಗಿದೆ. ಪ್ರಸಕ್ತ ದುರಂತ ಇಬ್ಬರು ಕಲಾವಿದರ ಸಾವಿನ ಘಟನೆಯಷ್ಟೇ ಅಲ್ಲ. ಇದು ಕನ್ನಡ ಚಿತ್ರರಂಗದಲ್ಲಿ ಸಾಹಸ ಕಲಾವಿದರ ಶೋಷಣೆ ಹಾಗೂ ಭಯದ ವಾತಾವರಣದಲ್ಲಿ ಅವರು ಕೆಲಸ ಮಾಡುತ್ತಿರುವುದನ್ನು ಸೂಚಿಸುವಂತಿದೆ. ಉದಯ್‌ ಹಾಗೂ ಅನಿಲ್‌ ಕೂಡ ಚಿತ್ರೀಕರಣಕ್ಕೆ ಮುನ್ನ ನೀಡಿರುವ ಸಂದರ್ಶನಗಳಲ್ಲಿ ಉದ್ದೇಶಿತ ಚಿತ್ರೀಕರಣದ ಕುರಿತು ಆತಂಕ ವ್ಯಕ್ತಪಡಿಸಿರುವುದು ಸ್ಪಷ್ಟವಾಗಿದೆ. ಅದ್ದೂರಿತನ, ಸಾಹಸ ದೃಶ್ಯಗಳ ಹೆಸರಿನಲ್ಲಿ ಕೆಲವು ಚಿತ್ರ ನಿರ್ಮಾತೃಗಳು ಹುಚ್ಚುಹುಚ್ಚಾಗಿ ವರ್ತಿಸುತ್ತಿರುವುದಕ್ಕೆ ಇದೊಂದು ಉದಾಹರಣೆ. ಅವಕಾಶಗಳ ಆಸೆಯಿಂದ ಇಂಥ ದೃಶ್ಯಗಳಲ್ಲಿ ಭಾಗವಹಿಸಲು ನಿರಾಕರಿಸಲಾಗದ ಒತ್ತಡವನ್ನು ಅನೇಕ ತರುಣರು ಎದುರಿಸುತ್ತಿದ್ದಾರೆ. ಚಿತ್ರೀಕರಣ ಸಮಯದಲ್ಲಿ ಕೈ–ಕಾಲು ಮುರಿದುಕೊಳ್ಳುವ ಘಟನೆಗಳು ವಿಶೇಷವೇ ಅಲ್ಲ ಎನ್ನುವಮಟ್ಟಿಗೆ ಚಿತ್ರರಂಗ ಜಡ್ಡುಗಟ್ಟಿ ಹೋಗಿದೆ. ನಾಯಕ–ನಾಯಕಿಯರ ಕ್ಯಾರವಾನ್‌ಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ನಿರ್ಮಾಪಕರು, ಪೋಷಕ ಕಲಾವಿದರ ಸುರಕ್ಷತೆಯ ವಿಷಯದಲ್ಲಿ ಜುಗ್ಗರಾಗಿಬಿಡುತ್ತಾರೆ. ‘ಮಾಸ್ತಿಗುಡಿ’ ದುರಂತ ಕನ್ನಡ ಚಿತ್ರರಂಗದ ಪಾಲಿಗೆ ಒಂದು ಪಾಠವಾಗಬೇಕು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದರಷ್ಟೇ ಸಾಲದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ ಅಸಹಾಯಕರ ಸಾವಿನ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರಕಿಸಿಕೊಡಬೇಕಾಗಿದೆ. ಸಾವಿಗೀಡಾದ ಕಲಾವಿದರ ಕುಟುಂಬಗಳಿಗೆ ಸೂಕ್ತ ಪರಿಹಾರವೂ ದೊರಕಬೇಕಿದೆ. ಚಿತ್ರೀಕರಣದ ಸಂದರ್ಭದಲ್ಲಿ ಕಾನೂನಿನ ನಿಯಮಾವಳಿಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಹಾಗೂ ನಿಯಮ ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ಆಗುವಂತೆ ಕೂಡ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ. ಚಿತ್ರರಂಗದ ಒಳಗಿನಿಂದಲೂ ಕಲಾವಿದರು–ತಂತ್ರಜ್ಞರ ಸುರಕ್ಷತೆಗೆ ಸಂಬಂಧಿಸಿದಂತೆ ನೀತಿಸಂಹಿತೆಯೊಂದು ರೂಪುಗೊಳ್ಳಬೇಕಾಗಿದೆ. ಅತಿರೇಕಗಳನ್ನೇ ಸೃಜನಶೀಲತೆ ಎಂದು ಭಾವಿಸಿರುವವರು ಇನ್ನಾದರೂ ಅರ್ಥಪೂರ್ಣ ಸಿನಿಮಾಗಳನ್ನು ರೂಪಿಸಲು ತಮ್ಮ ಬುದ್ಧಿಶಕ್ತಿಯನ್ನು ಖರ್ಚು ಮಾಡುವತ್ತ ಪ್ರಯತ್ನಿಸಬೇಕು. ಇದರ ಜೊತೆಗೆ, ಹುಚ್ಚುಸಾಹಸಗಳಿಗೆ ಮುಂದಾಗುವ ಸಿನಿಮಾಕರ್ತೃಗಳು ಹಾಗೂ ಮಾರಾಮಾರಿ ಚಿತ್ರಗಳನ್ನು ಇಷ್ಟಪಡುವ ಚಿತ್ರರಸಿಕರು ತಮ್ಮ ನಂಬಿಕೆ ಮತ್ತು ಅಭಿರುಚಿಯನ್ನು ಪುನರ್‌ ವಿಮರ್ಶಿಸಿಕೊಳ್ಳಲು ಕೂಡ ಈ ಘಟನೆ ಪ್ರೇರಣೆಯಾಗಬೇಕು. ನಮ್ಮ ರಂಜನೆಯ ಪಟ್ಟಿಯಲ್ಲಿ ಪ್ರಾಣಾಂತಿಕ ಸಾಹಸಗಳೂ ಇರುತ್ತವೆ ಎನ್ನುವ ಕಲ್ಪನೆಯೇ ಗಾಬರಿ ಹುಟ್ಟಿಸುವಂತಹುದು. ಭಾರತದಲ್ಲಿ ಜನಪ್ರಿಯ ಚಲನಚಿತ್ರದ ಅವಿಭಾಜ್ಯ ಅಂಗವಾಗಿ ಫ್ಯಾಂಟಸಿ ಬೆಳೆದುಬಂದಿದೆ. ಆದರೆ, ಇದು ಮೈಮನ ಪುಳಕಿತಗೊಳಿಸುವಂತೆ ಇರಬೇಕೇ ಹೊರತು ಜೀವಗಳೊಂದಿಗೆ ಚೆಲ್ಲಾಟ ಆಡುವಂತಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.