ಅಧಿಕ ಮುಖಬೆಲೆ ನೋಟು ಸ್ಥಗಿತ ಅನಿವಾರ್ಯವಾದ ದಿಟ್ಟ ನಡೆ 500 ರೂಪಾಯಿ ಮತ್ತು 1 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳಿಗೆ ಈಗ ಕವಡೆ ಕಾಸಿನ ಬೆಲೆಯೂ ಇಲ್ಲ. ಅವು ಬರೀ ಕಾಗದದ ತುಣುಕುಗಳು. ಅವುಗಳ ಚಲಾವಣೆಯನ್ನು ರದ್ದುಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದಿಟ್ಟತನ ಪ್ರದರ್ಶಿಸಿದ್ದಾರೆ. ಇದೊಂದು ಚಾರಿತ್ರಿಕ ನಿರ್ಧಾರ. ಭ್ರಷ್ಟಾಚಾರ, ಕಾಳಧನ ಸೃಷ್ಟಿ, ನಕಲಿ ನೋಟುಗಳ ಹಾವಳಿಯಿಂದ ತತ್ತರಿಸಿದ್ದ ಭಾರತೀಯ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರಲು ಇಂತಹ ಒಂದು ‘ನಿರ್ಣಾಯಕ ಹೊಡೆತದ’ ಅವಶ್ಯಕತೆ ಖಂಡಿತವಾಗಿಯೂ ಇತ್ತು. ಕಪ್ಪುಹಣ ಮತ್ತು ಖೋಟಾ ನೋಟುಗಳು ದೇಶದೊಳಗೆ ಭಯೋತ್ಪಾದನಾ ಚಟುವಟಿಕೆಗೂ ಬಳಕೆಯಾಗುತ್ತಿದ್ದವು. ಇವುಗಳ ನಿಯಂತ್ರಣಕ್ಕಾಗಿ, ಮೋದಿ ನೇತೃತ್ವದ ಸರ್ಕಾರ ಮಂಗಳವಾರ ಯಾವ ಪೂರ್ವಸೂಚನೆಯನ್ನೂ ನೀಡದೆ ಏಕಾಏಕಿ ಪ್ರಕಟಿಸಿರುವ ನಿರ್ಧಾರ ಕ್ರಾಂತಿಕಾರಕವಾದುದು. ಎಲ್ಲೋ ಅಲ್ಲೊಂದು ಇಲ್ಲೊಂದು ಅಪಸ್ವರ ಬಿಟ್ಟರೆ ಸಾರ್ವತ್ರಿಕವಾಗಿ ಈ ಕ್ರಮಕ್ಕೆ ಬೆಂಬಲ ವ್ಯಕ್ತವಾಗಿದೆ. ಜನಸಾಮಾನ್ಯರ ಮೆಚ್ಚುಗೆಯ ಪ್ರತಿಕ್ರಿಯೆಯೇ ಇದಕ್ಕೆ ಪುರಾವೆ ಎನ್ನಬಹುದು. ಬಹುತೇಕರು ಇದನ್ನು ಸಮಚಿತ್ತದಿಂದಲೇ ಸ್ವೀಕರಿಸಿದ್ದಾರೆ. ದೇಶದ ಅರ್ಥ ವ್ಯವಸ್ಥೆಯ ಆರೋಗ್ಯದ ದೃಷ್ಟಿಯಿಂದ ಇಂತಹ ಕ್ರಮ ಅನಿವಾರ್ಯವಾಗಿತ್ತು. ದಿನನಿತ್ಯದ ಬದುಕಿನ ಮೇಲೆ ಭಾರೀ ಪರಿಣಾಮ ಬೀರುವ ನಿರ್ಧಾರಗಳನ್ನು ತೆಗೆದುಕೊಂಡಾಗ ಆರಂಭಿಕ ಅನನುಕೂಲಗಳು ಇದ್ದೇ ಇರುತ್ತವೆ. 500 ಮತ್ತು ಒಂದು ಸಾವಿರ ರೂಪಾಯಿಯ ನೋಟುಗಳನ್ನು ತಕ್ಷಣವೇ ಬದಲಿಸಿ ಅಷ್ಟೇ ಮೌಲ್ಯದ ಕಡಿಮೆ ಮುಖ ಬೆಲೆಯ ನೋಟುಗಳನ್ನು ಕೊಡಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಏಕೆಂದರೆ ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಚಲಾವಣೆಯಲ್ಲಿ ಇರುವ ಎಲ್ಲ ಮುಖಬೆಲೆಯ ನೋಟುಗಳ ಪೈಕಿ ₹ 1000 ಮತ್ತು ₹ 500ರ ನೋಟುಗಳ ಪ್ರಮಾಣ ಶೇ 86ರಷ್ಟು. ಹೀಗಾಗಿ ಏಕಾಏಕಿ ಒತ್ತಡವನ್ನು ತಡೆದುಕೊಳ್ಳಲು ಬ್ಯಾಂಕಿಂಗ್‌ ವ್ಯವಸ್ಥೆಗೂ ಸ್ವಲ್ಪ ಸಮಯದ ಅಗತ್ಯವಿದೆ. ಅದಕ್ಕಾಗಿಯೇ ಎರಡು ದಿನ ಎಟಿಎಂ ಕೇಂದ್ರಗಳನ್ನು ಮುಚ್ಚಲಾಗಿದೆ. ಬ್ಯಾಂಕ್‌ಗಳು ಕೂಡ ಬುಧವಾರ ತೆರೆದಿಲ್ಲ. ಜನರಿಗೆ ಆಗುವ ತೊಂದರೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸಿದೆ. ಪ್ರಧಾನಿ ಮೋದಿ ಅವರು ಮಂಗಳವಾರ ರಾತ್ರಿ ಮಾಡಿದ ಪ್ರಸಾರ ಭಾಷಣದಲ್ಲಿ ಪರ್ಯಾಯ ಕ್ರಮಗಳ ಬಗ್ಗೆ ಒತ್ತು ಕೊಟ್ಟು ವಿವರಣೆ ನೀಡಿದ್ದು, ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದು ಶ್ಲಾಘನೀಯ. ಹೀಗಾಗಿಯೇ ಬುಧವಾರ ಷೇರು ಮಾರುಕಟ್ಟೆ ಬಿಟ್ಟರೆ ಬೇರೆಡೆ ಅಂತಹ ಅಲ್ಲೋಲಕಲ್ಲೋಲ ಕಂಡು ಬರಲಿಲ್ಲ. ಅಧಿಕ ಮೌಲ್ಯದ ಈ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಂಡರೂ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಗುರುವಾರದಿಂದಲೇ ಅವಕಾಶ ಕಲ್ಪಿಸಲಾಗಿದೆ. ರದ್ದಾದ ಮುಖಬೆಲೆ ನೋಟುಗಳನ್ನು ರೈಲ್ವೆ, ಸರ್ಕಾರಿ ಬಸ್‌ಗಳು, ಆಸ್ಪತ್ರೆಗಳು, ಸರ್ಕಾರಿ ಸ್ವಾಮ್ಯದ ಪೆಟ್ರೋಲ್‌ ಬಂಕ್‌ಗಳು, ವಿಮಾನ ಯಾನ ಸಂಸ್ಥೆಗಳಲ್ಲಿ ಶುಕ್ರವಾರ ಮಧ್ಯರಾತ್ರಿವರೆಗೂ ಚಲಾವಣೆ ಮಾಡಬಹುದು. ಚಿಲ್ಲರೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ದೇಶದಾದ್ಯಂತ ಟೋಲ್‌ಗಳಲ್ಲಿ ಶುಕ್ರವಾರ ಮಧ್ಯರಾತ್ರಿವರೆಗೂ ಟೋಲ್‌ ಸಂಗ್ರಹ ಸ್ಥಗಿತಗೊಳಿಸಿರುವುದು ಒಳ್ಳೆಯ ತೀರ್ಮಾನಗಳು. ಜನ ಆದಷ್ಟೂ ಚೆಕ್‌, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳು, ಎಲೆಕ್ಟ್ರಾನಿಕ್‌ ಹಣ ಪಾವತಿ ಹೀಗೆ ಕಾನೂನುಬದ್ಧ ಬದಲಿ ವ್ಯವಸ್ಥೆಗಳನ್ನು ಬಳಸಲು ಮುಂದಾಗಲಿ ಎಂಬುದು ಸರ್ಕಾರದ ಉದ್ದೇಶ. ಇದರಲ್ಲಿ ಕಾಳಧನ ಸೃಷ್ಟಿ, ತೆರಿಗೆ ತಪ್ಪಿಸುವಿಕೆ ನಿಲ್ಲುತ್ತದೆ. ನಕಲಿ ನೋಟುಗಳ ಹಾವಳಿಯನ್ನು ತೊಡೆದು ಹಾಕಬಹುದು. ನೋಟುಗಳ ಮುದ್ರಣ, ಸಾಗಣೆ, ಸಂಗ್ರಹ ಮುಂತಾದ ವೆಚ್ಚಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಅಂತಹ ಒಂದು ಅರ್ಥ ವ್ಯವಸ್ಥೆಯತ್ತ ಇಂದಲ್ಲ ನಾಳೆ ನಾವು ಸಾಗಲೇಬೇಕಾದುದು ಅನಿವಾರ್ಯ. ಇದಕ್ಕೆ ಪೂರಕ ಮತ್ತು ಉತ್ತೇಜನಕಾರಿ ವಾತಾವರಣ ನಿರ್ಮಿಸುವುದು ಸರ್ಕಾರದ ಹೊಣೆ. ಇವಿಷ್ಟೇ ಸಾಲದು. ಭ್ರಷ್ಟಾಚಾರ, ಕಾಳಧನ ಸೃಷ್ಟಿಯ ಮೂಲಕ್ಕೇ ಕೊಡಲಿ ಹಾಕುವುದು ಸರ್ಕಾರದ ಆದ್ಯತೆ ಆಗಬೇಕು. ಅದಕ್ಕಾಗಿ ವ್ಯವಸ್ಥೆಯ ಒಳಗೇ ಬದಲಾವಣೆ ತರಬೇಕು. ಅದಕ್ಷ ಆಡಳಿತ ವ್ಯವಸ್ಥೆ ಹಾಗೂ ಚುನಾವಣೆಗಳು ಭ್ರಷ್ಟಾಚಾರ ಮತ್ತು ಕಪ್ಪುಹಣದ ಬೇರುಗಳು ಎನ್ನುವುದು ಎಲ್ಲರ ಅನುಭವ. ಇವೆರಡೂ ಕ್ಷೇತ್ರಗಳಲ್ಲಿ ಸುಧಾರಣೆ ಅಗತ್ಯ. ಲಂಚ ಕೊಡಲು ಮತ್ತು ತೆಗೆದುಕೊಳ್ಳಲು ಅವಕಾಶ ಇರದಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಜಿಎಸ್‌ಟಿ ಮೂಲಕ ತೆರಿಗೆ ವ್ಯವಸ್ಥೆ ಸುಧಾರಣೆ ಈ ದಿಸೆಯಲ್ಲಿ ಒಂದು ಒಳ್ಳೆಯ ಹೆಜ್ಜೆ. ಇಂತಹ ಉಪಕ್ರಮಗಳನ್ನು ಮುಂದುವರಿಸಿದರೆ ಮಾತ್ರ ಇಷ್ಟೆಲ್ಲ ಕಸರತ್ತು ಮಾಡಿದ್ದಕ್ಕೂ ಸಾರ್ಥಕ. ಅದು ಸರ್ಕಾರದ ಗಮನದಲ್ಲಿ ಇರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.