ದಿಗ್ಭ್ರಮೆ ಸೃಷ್ಟಿಸಿದ ಫಲಿತಾಂಶ ಹೊಸ ಯುಗದ ಆರಂಭ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 45ನೇ ಅಧ್ಯಕ್ಷ ಎಂಬುದು 32.4 ಕೋಟಿ ಅಮೆರಿಕನ್ನರ ಹೃದಯಗಳಲ್ಲಿ ವಿಭಿನ್ನ ರೀತಿಗಳಲ್ಲಿ ಪ್ರತಿಧ್ವನಿಸಿದೆ. ಕೆಲವರಿಗೆ ಆಘಾತ. ಮತ್ತೆ ಕೆಲವರಿಗೆ ಹಿಗ್ಗಿನ ಹೊಳೆ. ಜಗತ್ತಿನ ನಿರೀಕ್ಷೆ, ಮಾಧ್ಯಮ ಸಮೀಕ್ಷೆಗಳನ್ನು ಸುಳ್ಳಾಗಿಸಿದ ಅಮೆರಿಕದ ಮತದಾರರು, ಕೇವಲ 18 ತಿಂಗಳ ಹಿಂದಷ್ಟೇ ರಾಜಕಾರಣ ಪ್ರವೇಶಿಸಿದ ರಾಜಕೀಯ ಅನನುಭವಿಯನ್ನು ತಮ್ಮ ಅಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡಿರುವುದು ಅನಿರೀಕ್ಷಿತ ಬೆಳವಣಿಗೆ. ರಾಜಕೀಯ ಬದುಕಿನ ಅನುಭವವಿಲ್ಲದ ವ್ಯಕ್ತಿ, ವಿಶ್ವದಲ್ಲೇ ಅತಿ ಹೆಚ್ಚು ಶಕ್ತಿಯುತವಾದ ಅಮೆರಿಕ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವುದು ಇದೇ ಮೊದಲು. ಇಂತಹ ವ್ಯಕ್ತಿಯ ಮೇಲೆ ಅಮೆರಿಕನ್ನರು ವಿಶ್ವಾಸ ಇರಿಸಿರುವುದು ಹಿಂದೆಂದೂ ನಡೆದಿರದಂತಹ ವಿದ್ಯಮಾನ. ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್‌ರಂತಹ ಅನುಭವಿ ರಾಜಕಾರಣಿ ಎದುರಿಗಿನ ತೀವ್ರ ಸ್ಪರ್ಧೆಯಲ್ಲಿ ಸಿಕ್ಕಿರುವಂತಹ ಈ ಗೆಲುವು ಮತ್ತೂ ಅಚ್ಚರಿಯದು. 240 ವರ್ಷಗಳ ಅಮೆರಿಕ ಇತಿಹಾಸದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷೆಯಾಗಿ ಹೊಸ ಇತಿಹಾಸ ನಿರ್ಮಿಸುವ ಸಾಧ್ಯತೆ, ಹಿಲರಿ ಕ್ಲಿಂಟನ್ ಸೋಲಿನೊಂದಿಗೆ ಇಲ್ಲದಂತಾಗಿದ್ದು ದುರದೃಷ್ಟಕರ. ಬಹುತ್ವ, ವೈವಿಧ್ಯಕ್ಕೆ ಪ್ರತೀಕವಾದ ಅಮೆರಿಕದ ಪರಿಕಲ್ಪನೆಗೇ ಈ ಫಲಿತಾಂಶ ಮಂಕು ಕವಿಸುವಂತಹದ್ದು. ಅಮೆರಿಕ ಸಮಾಜ ಆಳವಾಗಿ ವಿಭಜಿತಗೊಂಡಿರುವುದು ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ. ಮತಗಟ್ಟೆ ಸಮೀಕ್ಷೆಯ ಪ್ರಕಾರ, ಶೇ 58ರಷ್ಟು ಬಿಳಿಯರು, ಶೇ 21ರಷ್ಟು ಬಿಳಿಯರಲ್ಲದವರು ಟ್ರಂಪ್‌ಗೆ ಮತ ಹಾಕಿದ್ದಾರೆ. ಹಾಗೆಯೇ ಶೇ 37ರಷ್ಟು ಬಿಳಿಯರು ಹಾಗೂ ಶೇ 74ರಷ್ಟು ಬಿಳಿಯರಲ್ಲದವರು ಹಿಲರಿ ಕ್ಲಿಂಟನ್‌ಗೆ ಮತ ಹಾಕಿದ್ದಾರೆ. ಚುನಾವಣೆಯ ಗಾಳಿ ಎತ್ತ ಬೀಸುತ್ತಿದೆ ಎಂಬುದನ್ನು ಗ್ರಹಿಸಲು ಅಮೆರಿಕ ಮಾಧ್ಯಮ ಹಾಗೂ ಚುನಾವಣಾ ವೀಕ್ಷಕರು ವಿಫಲವಾದದ್ದೂ ಅಚ್ಚರಿಯ ಸಂಗತಿ. ಅಸಮತೋಲನದ ಅಭಿವೃದ್ಧಿಯು ಸಮಾಜದಲ್ಲಿ ಸೃಷ್ಟಿಸಿದ ಅಸಮಾಧಾನದ ಸವಾಲುಗಳನ್ನು ಎದುರಿಸುವಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳದಿದ್ದುದೂ ಸದ್ಯದ ಬೆಳವಣಿಗೆಗಳಿಗೆ ಕಾರಣ. ಅಮೆರಿಕದ ಹತಾಶೆಗೆ ಚೀನಾ, ಭಾರತ ಹಾಗೂ ನ್ಯಾಟೊಗಳನ್ನು ದೂಷಿಸುತ್ತಾ ‘ಅಮೆರಿಕವೇ ಮೊದಲು’ ಹಾಗೂ ‘ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸುತ್ತೇನೆ’ ಎಂಬಂತಹ ಟ್ರಂಪ್ ಘೋಷಣೆಗಳು ಜನಸಾಮಾನ್ಯರನ್ನು ಭಾವುಕ ನೆಲೆಯಲ್ಲಿ ಸ್ಪರ್ಶಿಸಿರುವುದು ಸ್ಪಷ್ಟ. ‘ನನಗೆ ಅರ್ಥವಾದದ್ದು ಅವರೊಬ್ಬರ ಮಾತುಗಳು ಮಾತ್ರ’ ಎಂದು ಟ್ರಂಪ್ ಬೆಂಬಲಿಗ ಮತದಾರರೊಬ್ಬರು ನುಡಿದಿರುವುದು ಇದಕ್ಕೆ ಸಾಕ್ಷಿ. ರಾಜತಾಂತ್ರಿಕ ಭಾಷೆಯ ನುಡಿಗಟ್ಟುಗಳಿಂದ ಕೂಡಿದ ಭಾಷಣಗಳಿಗಿಂತ ಕೆರಳಿಸುವ, ಭಾವೋನ್ಮಾದದ ಟ್ರಂಪ್ ಮಾತುಗಳೇ ಕಾಲೇಜು ಶಿಕ್ಷಣ ಪಡೆದಿರದ ಜನಸಾಮಾನ್ಯರಿಗೆ ಅಪ್ಯಾಯಮಾನವಾದ ವಾಸ್ತವವನ್ನು ಗಮನಿಸಬೇಕಿದೆ. ಅಮೆರಿಕ ಕಾಂಗ್ರೆಸ್‌ನ ಎರಡೂ ಸದನಗಳಲ್ಲಿ ರಿಪಬ್ಲಿಕನ್‌ ಸದಸ್ಯರೇ ನಿಯಂತ್ರಣ ಸಾಧಿಸಿರುವಂತಹ ವಿದ್ಯಮಾನ ನೂತನ ಅಧ್ಯಕ್ಷರಿಗೆ ಮತ್ತೊಂದು ವರವಾಗಿದೆ. ಸರ್ಕಾರದ ನೀತಿ ನಿರೂಪಣೆಗಳಿಗೆ ಇದು ಅನುಕೂಲಕರವಾಗಿ ಪರಿಣಮಿಸಲಿದೆ. ಡೆಮಾಕ್ರಟಿಕ್ ಪಕ್ಷದ ನೀಲಿ ಗೋಡೆ ಛಿದ್ರವಾಗಿದ್ದು ರಿಪಬ್ಲಿಕನ್ ಪಕ್ಷದ ಕೆಂಪು ಗೋಡೆ ವಿಜೃಂಭಿಸಿದೆ. ಫ್ಲಾಂಕ್ಲಿನ್ ರೂಸ್‌ವೆಲ್ಟ್ ಹಾಗೂ ಜಾನ್ ಕೆನಡಿಯವರ ಪಕ್ಷ ಕುಸಿದಿದ್ದು ಬರಾಕ್ ಒಬಾಮ ಸೃಷ್ಟಿಸಿದ ಪರಂಪರೆಗೂ ಧಕ್ಕೆಯಾಗಬಹುದು. ಅದನ್ನು ಛಿದ್ರಗೊಳಿಸುವುದಾಗಿ ಟ್ರಂಪ್ ಹೇಳಿಕೊಂಡೇ ಬಂದಿದ್ದಾರೆ. ಜಗತ್ತಿನಲ್ಲಿ ಪಸರಿಸುತ್ತಿರುವ ಭಯೋತ್ಪಾದನೆ ಹಾಗೂ ವಲಸಿಗರಿಂದಾಗಿ ಸ್ಥಳೀಯರಿಗೆ ಉದ್ಯೋಗಾವಕಾಶಗಳ ನಿರಾಕರಣೆಯಾಗುತ್ತಿದೆ ಎಂಬುದರ ಕುರಿತಾಗಿ ಜನಸಾಮಾನ್ಯರಲ್ಲಿ ಹೆಪ್ಪುಗಟ್ಟಿದ ಆಕ್ರೋಶದ ಭಾವನೆಗಳೂ ಟ್ರಂಪ್ ಗೆಲುವಿಗೆ ದೊಡ್ಡ ಕಾಣಿಕೆ ನೀಡಿವೆ. ಜನಾಂಗೀಯ ದ್ವೇಷ, ಮಹಿಳೆಯನ್ನು ನಿಕೃಷ್ಟವಾಗಿ ಕಾಣುವ ಮಾತುಗಳು ಹಾಗೂ ರಾಜಕೀಯ ಸಭ್ಯತೆ ಮೀರಿದ ಕಹಿತನವೇ ಟ್ರಂಪ್ ಪ್ರಚಾರಾಂದೋಲನದ ಜೀವಾಳವಾಗಿತ್ತು ಎಂಬುದನ್ನು ಸ್ಮರಿಸಬೇಕು. ಆದರೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಟ್ರಂಪ್ ಮಾಡಿದ ವಿಜಯದ ಅಂಗೀಕಾರದ ಭಾಷಣದಲ್ಲಿ ಸಂಧಾನದ ದನಿ ಇದೆ. ಎಲ್ಲರನ್ನೂ ಒಳಗೊಳ್ಳುವ ಮಾತುಗಳಿವೆ. ಇದು ಹೀಗೇ ಮುಂದುವರಿದಲ್ಲಿ ವಿಭಜಿತವಾಗಿರುವ ಅಮೆರಿಕ ದೃಢ ನೆಲೆ ಕಂಡುಕೊಂಡು ಜಾಗತಿಕ ವ್ಯವಸ್ಥೆಗೆ ಬಲ ತುಂಬಬಹುದು. ಹೊಸ ಅಧ್ಯಕ್ಷರ ಹುಚ್ಚಾಪಟ್ಟೆ ನಿಲುವುಗಳು ಅಥವಾ ಅತಿರೇಕದ ಪ್ರವೃತ್ತಿಗಳನ್ನು ಅಮೆರಿಕನ್ ಸಾಂಸ್ಥಿಕ ವ್ಯವಸ್ಥೆ ನಿಯಂತ್ರಿಸಬಲ್ಲದು ಎಂಬ ನಿರೀಕ್ಷೆ ಇದ್ದೇ ಇದೆ. ಭಾರತಕ್ಕೆ ಸಂಬಂಧಿಸಿದಂತೆ ಟ್ರಂಪ್ ಅವರ ನೀತಿ ಸಕಾರಾತ್ಮಕವಾಗಿರುತ್ತದೆ ಎಂಬ ಭರವಸೆಯೂ ಇದೆ. ಚೀನಾ, ಪಶ್ಚಿಮ ಏಷ್ಯಾ ಹಾಗೂ ರಷ್ಯಾ ಕುರಿತಾಗಿ ಟ್ರಂಪ್ ಅವರ ವಿದೇಶಾಂಗ ನೀತಿ ಬದಲಾವಣೆ ಭಾರತದ ಮೇಲೆ ಪರಿಣಾಮ ಬೀರಬಹುದು ಎಂಬ ವಿಶ್ಲೇಷಣೆಗಳೂ ಇವೆ. ಟ್ರಂಪ್ ವಿಜಯ ಹಾಗೂ ಹಿಲರಿ ಕ್ಲಿಂಟನ್ ಸೋಲನ್ನು ಉದಾರವಾದದ ಮರಣಶಾಸನ ಎಂಬಂತೆ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಈ ಕುರಿತಂತೆ ಇಷ್ಟು ಬೇಗ ಈ ನಿರ್ಣಯಕ್ಕೆ ಬರುವುದು ಸರಿಯಲ್ಲ. ಹೀಗಿದ್ದೂ, ಭಾರತ ಸೇರಿದಂತೆ ಎಲ್ಲೆಡೆ ಇರುವ ಉದಾರವಾದಿಗಳು, ಉದಾರವಾದದ ಮೌಲ್ಯಗಳು ಮಂಕಾಗುತ್ತಿರುವುದಕ್ಕೆ ಕಾರಣಗಳೇನು ಎಂಬುದನ್ನು ಪ್ರಶ್ನಿಸಿಕೊಳ್ಳುವುದಕ್ಕೆ ಮಾತ್ರ ಇದು ಸಕಾಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.