ಸಾರ್ವಜನಿಕ ನಡಾವಳಿಗಳ ಪಾಠ ಕಲಿಯುವುದು ಯಾವಾಗ? ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯತೆಯಿಂದ ನಡೆದುಕೊಳ್ಳಬೇಕು, ಅಧಿವೇಶನ, ಸಭೆ, ಸಮಾರಂಭಗಳಲ್ಲಿ ಸಭಾ ಮರ್ಯಾದೆ ಕಾಪಾಡಬೇಕು ಎಂಬುದು ನಮ್ಮ ಕೆಲ ಜನಪ್ರತಿನಿಧಿಗಳಿಗೆ ಗೊತ್ತೇ ಇಲ್ಲ ಎಂದು ಕಾಣುತ್ತದೆ. ಗೊತ್ತಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ. ಮೊನ್ನೆ ರಾಯಚೂರಿನಲ್ಲಿ ಟಿಪ್ಪು ಜಯಂತಿ ಆಚರಣೆಯ ಸರ್ಕಾರಿ ಸಮಾರಂಭದಲ್ಲಿ ಸಚಿವ ತನ್ವೀರ್‌ ಸೇಠ್‌ ಅವರು ಘನತೆ, ಗೌರವ ಮರೆತು ಮೊಬೈಲ್‌ನಲ್ಲಿ ಯುವತಿಯರ ಅಶ್ಲೀಲ ಚಿತ್ರಗಳನ್ನು ನೋಡಿದ್ದಾರೆ. ಕೆಲ ವರ್ಷಗಳ ಹಿಂದೆ ಇದೇ ರೀತಿ ಬಿಜೆಪಿ ಸರ್ಕಾರದ ಮೂವರು ಮಂತ್ರಿಗಳು ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದಾಗಲೇ ಅಶ್ಲೀಲ ಚಿತ್ರಗಳನ್ನು ನೋಡಿ ಮಂತ್ರಿ ಹುದ್ದೆ ಕಳೆದುಕೊಂಡಿದ್ದರು. ಅದೇ ಪಕ್ಷದ ಶಾಸಕರೊಬ್ಬರು ದೇಶದ ಪ್ರತಿಷ್ಠಿತ ರಾಜಕೀಯ ಕುಟುಂಬದ ಮಹಿಳೆಯ ಚಿತ್ರವನ್ನು ಆಕ್ಷೇಪಾರ್ಹ ರೀತಿಯಲ್ಲಿ ವೀಕ್ಷಿಸಿ ಕ್ಷಮೆ ಕೇಳುವ ಪರಿಸ್ಥಿತಿ ತಂದುಕೊಂಡಿದ್ದರು. ಈಗ ವಿವಾದದಲ್ಲಿ ಸಿಕ್ಕಿಹಾಕಿಕೊಂಡ ತನ್ವೀರ್‌ ಅವರು ಕಾಂಗ್ರೆಸ್‌ ಪಕ್ಷದವರು. ಅಂದರೆ, ಇಂತಹ ಅಸಭ್ಯ ವರ್ತನೆಯ ವಿಚಾರದಲ್ಲಿ ಆ ಪಕ್ಷ, ಈ ಪಕ್ಷ ಎಂಬ ಭೇದಭಾವ ಇಲ್ಲ. ಇವರೆಲ್ಲ ತಮ್ಮ ತಮ್ಮ ಸರ್ಕಾರಕ್ಕೆ, ತಮ್ಮ ತಮ್ಮ ಪಕ್ಷಕ್ಕೆ ಬಹಳಷ್ಟು ಮುಜುಗರ ಉಂಟು ಮಾಡಿದ್ದಾರೆ. ಅದೂ ಸಾಲದು ಎಂಬಂತೆ ಕರ್ನಾಟಕದ ಬಗ್ಗೆ ಇರುವ ಒಳ್ಳೆಯ ಹೆಸರಿಗೆ, ಸಜ್ಜನಿಕೆ– ಸುಸಂಸ್ಕೃತ ನಡವಳಿಕೆಗೆ ಅದಕ್ಕಿಂತ ದೊಡ್ಡ ಕಳಂಕ ಅಂಟಿಸಿದ್ದಾರೆ. ತನ್ವೀರ್‌ ಸೇಠ್‌ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂತ್ರಿ. ಸೌಜನ್ಯ, ಸನ್ನಡತೆ, ಸಭ್ಯತೆಯನ್ನು ಸ್ವತಃ ಅನುಸರಿಸಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಅಧ್ಯಾಪಕರಿಗೆ ಮಾದರಿಯಾಗಬೇಕಾದ ಸಚಿವ ಸ್ಥಾನ ಅವರದು. ಅವರೇ ಈ ರೀತಿ ನಡೆದುಕೊಂಡಿದ್ದು ಅವರ ಸ್ಥಾನಕ್ಕೆ ಶೋಭಿಸುವುದಿಲ್ಲ. ಹಿಂದೆ ಇದೇ ರೀತಿ ಅಸಹ್ಯವಾಗಿ ವರ್ತಿಸಿದವರ ವಿರುದ್ಧ ಅವರು ಮತ್ತು ಅವರ ಪಕ್ಷದವರು ನಡೆಸಿದ ಪ್ರತಿಭಟನೆ, ಆಡಿದ ಮಾತುಗಳನ್ನು ಅವರೇ ಅಷ್ಟು ಬೇಗ ಮರೆಯಬಾರದು. ‘ಮನೆ ಬಿಟ್ಟು 3–4 ತಿಂಗಳು ಆಗಿದೆ. ವಾಟ್‌್ಸಆ್ಯಪ್‌ ಸಂದೇಶಗಳನ್ನು ನೋಡುತ್ತಿದ್ದೆ. ಟಿಪ್ಪು ಜಯಂತಿ ನಡೆದಿರುವ ಬಗ್ಗೆ ಬಂದ ಚಿತ್ರಗಳು, ಮಾಹಿತಿ ನೋಡಿದ್ದೇನೆಯೇ ಹೊರತು ಅಶ್ಲೀಲ ಚಿತ್ರಗಳನ್ನು ನೋಡಿಲ್ಲ’ ಎಂದು ಹೇಳುವುದಂತೂ ಅಸಂಬದ್ಧ. ಅವರ ಮನೆ ಇರುವುದು ಮೈಸೂರಲ್ಲಿ. ಅವರು ಪ್ರತಿನಿಧಿಸುವ ಕ್ಷೇತ್ರವೂ ಮೈಸೂರು. 3–4 ದಿನಗಳ ಹಿಂದೆ ಅಲ್ಲಿಯೇ ಇದ್ದರು. ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರು. ಆದರೂ ‘3–4 ತಿಂಗಳಿಂದ ಹೋಗಿಯೇ ಇಲ್ಲ’ ಎಂದು ರಾಜಾರೋಷವಾಗಿ ಹೇಳುವುದನ್ನು ಜನ ನಂಬಬೇಕೇ? ಅವರು ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಒಂದೊಂದಾಗಿ ನೋಡುತ್ತಿರುವುದರ ಮುದ್ರಿತ ದಾಖಲೆಗಳೇ ಇವೆ. ಟಿ.ವಿಯಲ್ಲಿಯೂ ಪ್ರಸಾರವಾಗಿವೆ. ಸಾರ್ವಜನಿಕರೂ ಇವನ್ನೆಲ್ಲ ಗಮನಿಸಿದ್ದಾರೆ. ಹೀಗಿರುವಾಗ,‘ನಾನು ತಪ್ಪು ಮಾಡಿಲ್ಲ’ ಎಂಬ ಅವರ ಸಮಜಾಯಿಷಿಗೆ ಬೆಲೆಯೇ ಇಲ್ಲ. ‘ವಾಟ್‌್ಸ್‌ಆ್ಯಪ್‌ನಲ್ಲಿ ಯಾರೋ ಅಶ್ಲೀಲ ಚಿತ್ರಗಳನ್ನು ಕಳಿಸಿದ್ದಾರೆ; ಅವರ ವಿರುದ್ಧ ದೂರು ಕೊಡುತ್ತೇನೆ’ ಎಂದು ಹೇಳಿದ್ದಾರೆ. ಅದಕ್ಕೆ ಅವರು ಸ್ವತಂತ್ರರು. ಆದರೆ ಮಾಡಿದ ತಪ್ಪನ್ನು ತಂತ್ರಜ್ಞಾನದ ಮೇಲೆ ಹಾಕಿ ತಪ್ಪಿಸಿಕೊಳ್ಳುವುದು ಕಷ್ಟ. ಏಕೆಂದರೆ ಮುಜುಗರದ ಚಿತ್ರಗಳು ಬರುತ್ತಿದ್ದರೆ ತಕ್ಷಣವೇ ಮೊಬೈಲ್‌ ಸ್ವಿಚ್‌ಆಫ್‌ ಮಾಡಲು ಅದೇ ತಂತ್ರಜ್ಞಾನದಲ್ಲಿಯೇ ಅವಕಾಶಗಳಿವೆ. ಅದನ್ನು ಬಳಸಿಕೊಳ್ಳಬಹುದಾಗಿತ್ತಲ್ಲ. ಆದರೆ ಸೇಠ್‌ ಹಾಗೆ ಮಾಡಲಿಲ್ಲ. ರಾಯಚೂರಿನಲ್ಲಿ ನಡೆಯುತ್ತಿದ್ದುದು ಟಿಪ್ಪು ಜಯಂತಿ ಕಾರ್ಯಕ್ರಮ. ಬಹಳಷ್ಟು ವಿವಾದ, ವಿರೋಧದ ನಡುವೆ ಸರ್ಕಾರವೇ ಪಟ್ಟು ಹಿಡಿದು ಏರ್ಪಡಿಸಿದ್ದ ಸಮಾರಂಭ. ಅಲ್ಲಿ ಉಪನ್ಯಾಸಕರೊಬ್ಬರು ಟಿಪ್ಪು ಬಗ್ಗೆ ಗಂಭೀರವಾಗಿ ಉಪನ್ಯಾಸ ನೀಡುವಾಗ ಅದನ್ನು ಅಷ್ಟೇ ಗಾಂಭೀರ್ಯದಿಂದ ಆಲಿಸುವುದು ಸಚಿವ ಸೇಠ್‌ ಅವರ ಕರ್ತವ್ಯವಾಗಿತ್ತು. ಅದನ್ನು ಮರೆತು ಮೊಬೈಲ್‌ ನೋಡುತ್ತ ಕುಳಿತಿದ್ದು ಸಭೆಗೆ, ಸಭಿಕರಿಗೆ, ಭಾಷಣಕಾರರಿಗೆ ಮಾಡಿದ ಅವಮಾನ. ಶಿಕ್ಷಣ ಮಂತ್ರಿಗೇ ಇವೆಲ್ಲ ತಿಳಿಯದೇ ಹೋಯಿತಲ್ಲ ಎಂಬುದು ತಲೆತಗ್ಗಿಸಬೇಕಾದ ಸಂಗತಿ. ಸಾರ್ವಜನಿಕ ಬದುಕಿನಲ್ಲಿ ಇರುವವರು ಮೈಯೆಲ್ಲ ಕಣ್ಣಾಗಿದ್ದರೂ ಸಾಲದು. ಜನ ಅವರ ಪ್ರತಿಯೊಂದು ನಡೆ– ನುಡಿಯನ್ನು ಗಮನಿಸುತ್ತಲೇ ಇರುತ್ತಾರೆ. ಆದರೆ ಈ ಸತ್ಯವನ್ನು ಮರೆತು ಔಚಿತ್ಯ ಮೀರಿ ವರ್ತಿಸಿದ್ದರಿಂದಲೇ ವಿವಾದವನ್ನು ಮೈಮೇಲೆ ಹಾಕಿಕೊಳ್ಳಬೇಕಾಗಿ ಬಂತು. ಹಿಂದೆ ಇಂಥದೇ ತಪ್ಪು ಮಾಡಿದ ಬಿಜೆಪಿ ಮಂತ್ರಿಗಳು ರಾಜೀನಾಮೆ ಕೊಡುವವರೆಗೂ ಕಾಂಗ್ರೆಸ್‌ ಪಕ್ಷ ಪ್ರತಿಭಟನೆ ಕೈಬಿಟ್ಟಿರಲಿಲ್ಲ. ಬಿಜೆಪಿಯ ಒಬ್ಬ ಶಾಸಕನನ್ನು ಸದನದಿಂದ ಅಮಾನತು ಮಾಡಲಾಗಿತ್ತು. ಹೀಗಿರುವಾಗ ಈಗ ಕಾಂಗ್ರೆಸ್‌ ಯಾವ ನಿಲುವು ತಳೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಸುಸಂಸ್ಕೃತಿ, ಸಭ್ಯತೆ, ಸಜ್ಜನಿಕೆಗೆ ಹೆಸರಾದ ನಮ್ಮ ನಾಡಿನಲ್ಲಿ ಇಂತಹ ಪ್ರಸಂಗಗಳು ಪದೇಪದೇ ನಡೆಯುತ್ತಿರುವುದು ತಲೆತಗ್ಗಿಸುವ ವಿಚಾರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.