ಸುಗಮ ವ್ಯಾಪಾರ ಸೂಚ್ಯಂಕದಲ್ಲಿ ಹಿನ್ನಡೆ: ರಾಜ್ಯಕ್ಕೆ ಎಚ್ಚರಿಕೆ ಗಂಟೆ ನಮ್ಮ ರಾಜ್ಯದಲ್ಲಿ ಸಲೀಸಾಗಿ ಮತ್ತು ನಿಶ್ಚಿಂತೆಯಿಂದ ವ್ಯಾಪಾರ– ವಹಿವಾಟುಗಳನ್ನು ನಡೆಸಲು ಬೇಕಾದ ಅನುಕೂಲಕರ ವಾತಾವರಣ ಕಡಿಮೆಯಾಗಿದೆ. ಹೋದ ವರ್ಷ ದೇಶದಲ್ಲಿಯೇ 9ನೇ ಸ್ಥಾನದಲ್ಲಿ ಇದ್ದ ನಾವು ಈ ಸಲ 13ನೇ ಸ್ಥಾನಕ್ಕೆ ಇಳಿದಿದ್ದೇವೆ. ಇದನ್ನು ಯಾವುದೋ ವಿರೋಧ ಪಕ್ಷ ಹೇಳುತ್ತಿಲ್ಲ. ವಿಶ್ವ ಬ್ಯಾಂಕ್‌ ಮತ್ತು ಕೇಂದ್ರ ಕೈಗಾರಿಕಾ ನೀತಿ ಹಾಗೂ ಉತ್ತೇಜನ ಇಲಾಖೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಕಳವಳಕಾರಿ ಮಾಹಿತಿ ಹೊರಬಿದ್ದಿದೆ. ನಮ್ಮದೇ ನೆರೆಯ ಎರಡು ರಾಜ್ಯಗಳು ನಂಬರ್‌ 1 ಸ್ಥಾನಗಳಲ್ಲಿ ಇವೆ. ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಇರುವ ಆಂಧ್ರ ಪ್ರದೇಶ 1ನೇ ಸ್ಥಾನಕ್ಕೆ ಏರಿದೆ. ಕೇವಲ ಎರಡೂವರೆ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ತೆಲಂಗಾಣ ರಾಜ್ಯ ಕೂಡ 13ನೇ ಸ್ಥಾನದಿಂದ ಮೇಲಕ್ಕೇರಿ ಒಂದನೇ ಸ್ಥಾನವನ್ನು ಆಂಧ್ರದ ಜತೆ ಹಂಚಿಕೊಂಡಿದ್ದಂತೂ ಬೆರಗುಗೊಳಿಸುವಂತಹುದು. ಗುಜರಾತ್‌, ಮಧ್ಯಪ್ರದೇಶಗಳಂತಹ ಉದ್ಯಮ, ವ್ಯಾಪಾರ ಸ್ನೇಹಿ ರಾಜ್ಯಗಳ ಜತೆ ಹೋಲಿಸುವುದು ಬೇಡ; ಆದರೆ ಛತ್ತೀಸಗಡ, ಜಾರ್ಖಂಡ್‌, ಉತ್ತರಾಖಂಡದಂತಹ ರಾಜ್ಯಗಳೂ ನಮಗಿಂತ ಮೇಲಿನ ಸ್ಥಾನದಲ್ಲಿವೆ. ಇದನ್ನೆಲ್ಲ ನೋಡಿದ ಮೇಲೆ, ‘ನಾವೇಕೆ ಹಿಂದೆ ಬಿದ್ದಿದ್ದೇವೆ; ಎಲ್ಲಿ ಏನು ತಪ್ಪಾಗಿದೆ’ ಎಂದು ಅಧಿಕಾರಶಾಹಿ ವ್ಯವಸ್ಥೆ ಮತ್ತು ನಮ್ಮ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ತೆರಿಗೆ, ಪರಿಸರ, ಕಾರ್ಮಿಕ ಹಾಗೂ ತಪಾಸಣಾ ಕ್ಷೇತ್ರದ ಸುಧಾರಣೆಯಲ್ಲಿ ನಮ್ಮ ಸಾಧನೆ ಚೆನ್ನಾಗಿದೆ ಎಂದು ಸಮೀಕ್ಷೆ ಹೇಳಿದೆ. ಬಹುತೇಕ ಪರವಾನಗಿಗಳನ್ನು ಆನ್‌ಲೈನ್‌ನಲ್ಲಿಯೇ ನೀಡುತ್ತಿದ್ದೇವೆ ಎಂದು ಬೀಗಿ ನಮ್ಮ ಬೆನ್ನು ನಾವೇ ತಟ್ಟಿಕೊಂಡರೆ ಪ್ರಯೋಜನವಿಲ್ಲ. ಏಕೆಂದರೆ ಸಾಕಷ್ಟು ಸುಧಾರಣಾ ಕ್ರಮಗಳ ನಡುವೆಯೂ ವ್ಯಾಪಾರೋದ್ಯಮಗಳು ತಲೆಯೆತ್ತಲು ನಮ್ಮಲ್ಲಿ ಇನ್ನೂ ಅನೇಕ ಅಡಚಣೆಗಳು ಇದ್ದೇ ಇವೆ ಎನ್ನುವುದನ್ನು ನಮಗೆ ನೆನಪಿಸಲು ಈ ಸಮೀಕ್ಷೆಯೇ ಸಾಕು. ನಮ್ಮಲ್ಲಿ ವ್ಯಾಪಾರ ವಹಿವಾಟುಗಳಿಗಾಗಿ ಭೂಮಿ ಖರೀದಿ, ಕಟ್ಟಡ ನಿರ್ಮಾಣ, ವ್ಯವಹಾರ ಆರಂಭಿಸಲು ಪರವಾನಗಿ ಪಡೆಯುವುದು ಎಷ್ಟು ಕಷ್ಟ ಎನ್ನುವುದು ಅನುಭವಿಸಿದವರಿಗೇ ಗೊತ್ತು. ಅದಕ್ಕೆ ಮುಖ್ಯ ಕಾರಣ ನಮ್ಮ ನೌಕರಶಾಹಿಯಲ್ಲಿನ ಊಳಿಗಮಾನ್ಯ ಮನೋಭಾವ. ಪ್ರತಿಯೊಂದಕ್ಕೂ ಕೊಕ್ಕೆಹಾಕುವುದು, ಅರ್ಜಿದಾರರನ್ನು ಅಲೆದಾಡಿಸುವುದು ಎಂದರೆ ನಮ್ಮ ಸರ್ಕಾರಿ ಸಿಬ್ಬಂದಿಗೆ ಎಲ್ಲಿಲ್ಲದ ವಿಕೃತ ಖುಷಿ. ಇಂಥವರನ್ನು ಹದ್ದುಬಸ್ತಿನಲ್ಲಿ ಇಡಲೇಬೇಕು. ಇನ್ನು ಭ್ರಷ್ಟಾಚಾರದ ಬಗ್ಗೆಯಂತೂ ಹೇಳುವುದೇ ಬೇಡ. ಕೈಬಿಸಿ ಮಾಡದೇ ಕಡತಗಳು ಮುಂದೆ ಸಾಗುವುದೇ ಇಲ್ಲ. ಇವೆಲ್ಲ ಆಡಳಿತ ವೈಫಲ್ಯ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿತೋರಿಸುತ್ತವೆ. ಆಡಳಿತದ ಸೂತ್ರ ಹಿಡಿದವರು ಇದರ ಬಗ್ಗೆ ಗಮನ ಕೊಡಬೇಕು. ಇಲ್ಲದೇ ಹೋದರೆ ನಮ್ಮ ಅವಕಾಶಗಳನ್ನು ಬೇರೆ ರಾಜ್ಯಗಳು ಬಳಸಿಕೊಂಡು ಮುಂದೆ ಬರುತ್ತವೆ. ನಾವು ಮತ್ತಷ್ಟು ಹಿಂದೆ ಹೋಗುತ್ತಲೇ ಇರಬೇಕಾಗುತ್ತದೆ. ಒಂದು ಕಾಲದಲ್ಲಿ ನಮ್ಮ ರಾಜ್ಯ ಉದ್ಯಮ ಸ್ನೇಹಿಯಾಗಿತ್ತು. ಅನೇಕ ದೊಡ್ಡ ದೊಡ್ಡ ಉದ್ಯಮಗಳನ್ನು ಆಹ್ವಾನಿಸುವಲ್ಲಿ ಯಶಸ್ವಿಯಾಗಿತ್ತು. ವಿದ್ಯುತ್‌, ನೀರು, ಸಾರಿಗೆ ಮತ್ತು ಸಂಪರ್ಕ ಮತ್ತಿತರ ಮೂಲ ಸೌಕರ್ಯಗಳ ಜತೆಜತೆಯಲ್ಲಿಯೇ ಕೌಶಲಪೂರ್ಣ ಮಾನವ ಸಂಪನ್ಮೂಲ ಕೂಡ ಲಭ್ಯವಿತ್ತು. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಔದ್ಯಮಿಕ ಕ್ಷೇತ್ರದ ಕಾರ್ಮಿಕ ವರ್ಗ ಕೂಡ ತಮ್ಮ ಹೋರಾಟಕ್ಕೆ ಹಿಂಸಾತ್ಮಕ ಮಾರ್ಗ ಅನುಸರಿಸಿದ್ದು ಇಲ್ಲಿ ಕಡಿಮೆ. ಶಾಂತ ಪರಿಸರ ಇತ್ತು. ಇವೆಲ್ಲವೂ ಸರ್ಕಾರಿ ಕೆಂಪುಪಟ್ಟಿಯ ಅಡೆತಡೆಗಳ ನಡುವೆಯೂ ಉದ್ಯಮ, ವ್ಯವಹಾರ ಬೆಳೆಯಲು ಫಲವತ್ತಾದ ವಾತಾವರಣ ಸೃಷ್ಟಿಸಿದ್ದವು. ಮುಂದೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಅಸಾಧಾರಣ ಬೆಳವಣಿಗೆಯಿಂದಾಗಿ ಸೇವಾ ಆಧಾರಿತ ಉದ್ಯಮಗಳು ರಾಜ್ಯದಲ್ಲಿ ನೆಲೆಯೂರಿದವು. ಇಷ್ಟೆಲ್ಲ ಅನುಕೂಲ ಇದ್ದ ನಮ್ಮ ರಾಜ್ಯ ಈಗ ಹಿಮ್ಮುಖವಾಗಿ ಹೊರಟಿರುವುದು ಬೇಸರದ ಸಂಗತಿ. ಕೇಂದ್ರ ಕೈಗಾರಿಕಾ ಉತ್ತೇಜನ ಇಲಾಖೆಯು ವ್ಯಾಪಾರೋದ್ಯಮಗಳಿಗೆ ಪೂರಕ ವಾತಾವರಣ ಕಲ್ಪಿಸುವುದಕ್ಕಾಗಿ ವ್ಯವಹಾರ ಸುಧಾರಣಾ ಕ್ರಿಯಾ ಯೋಜನೆ ರೂಪಿಸಿ ಕಳೆದ ವರ್ಷವೇ ರಾಜ್ಯಗಳಿಗೆ ಕಳುಹಿಸಿತ್ತು. ವ್ಯಾಪಾರ ಮತ್ತು ಉದ್ಯಮಗಳನ್ನು ಆಕರ್ಷಿಸಲು ರಾಜ್ಯಗಳ ಮಧ್ಯೆ ಆರೋಗ್ಯಕರ ಪೈಪೋಟಿ ಉಂಟು ಮಾಡುವುದು ಅದರ ಉದ್ದೇಶವಾಗಿತ್ತು. ಅದನ್ನು ನಾವು ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನುವುದು ಈ ವರದಿಯಿಂದ ಖಚಿತವಾಗುತ್ತದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಡೆಸಿ ಸಹಸ್ರಾರು ಕೋಟಿ ರೂಪಾಯಿ ಬಂಡವಾಳ ತಂದಿದ್ದೇವೆ ಎಂದು ಹೇಳಿಕೊಂಡರೆ ಏನು ಪ್ರಯೋಜನ? ಅದು ಕಾರ್ಯರೂಪಕ್ಕೆ ಬರಬೇಕಾದ ವಾತಾವರಣ ಸೃಷ್ಟಿಸಬೇಕು. ಅದರಲ್ಲಿ ಹಿಂದೆ ಬಿದ್ದದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಸರಿಪಡಿಸಲು ಮುಂದಾಗಬೇಕು. ಈ ವರದಿಯಿಂದಲಾದರೂ ಎಚ್ಚೆತ್ತುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.