ವನ್ಯಜೀವಿ ಉಳಿವಿಗೆ ಪರಿಣಾಮಕಾರಿ ಕ್ರಮ ಅಗತ್ಯ ಪ್ರತಿ ಎರಡು ವರ್ಷಕ್ಕೊಮ್ಮೆ ವಿಶ್ವ ವನ್ಯಜೀವಿ ನಿಧಿ ಮತ್ತು ಲಂಡನ್‌ನ ಝುವಾಲಜಿಕಲ್‌ ಸೊಸೈಟಿ ನಡೆಸುವ ವನ್ಯಜೀವಿ ಸಮೀಕ್ಷೆ ಆಘಾತಕಾರಿ ವರದಿಯನ್ನೇ ಹೊರಹಾಕಿದೆ. 1970ರಿಂದ ಇಲ್ಲಿಯವರೆಗೆ ವಿಶ್ವದಲ್ಲಿ ಮೀನು, ಸರೀಸೃಪ, ಉಭಯಚರಗಳು, ಸಸ್ತನಿಗಳು ಮುಂತಾದವುಗಳ ಸಂಖ್ಯೆಯಲ್ಲಿ ಶೇ 58ರಷ್ಟು ಕಡಿಮೆಯಾಗಿದೆ. ಮಾನವನ ಹಸ್ತಕ್ಷೇಪದಿಂದ ಆಗುತ್ತಿರುವ ಪ್ರಾಣಿಗಳ ವಾಸಸ್ಥಳ ನಷ್ಟ, ಪ್ರಾಣಿಗಳ ಕಳ್ಳಬೇಟೆ ಮತ್ತು ಅಕ್ರಮ ಮಾರಾಟ, ಮಾಲಿನ್ಯ ಮತ್ತು ಜಾಗತಿಕ ತಾಪಮಾನ ಬದಲಾವಣೆಯೇ ವನ್ಯಜೀವಿ ಸಂತತಿ ಕಣ್ಮರೆಗೆ ಪ್ರಮುಖ ಕಾರಣ. ಸಂತತಿಹರಣ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕಶೇರುಕಗಳ ಸಂಖ್ಯೆಯಲ್ಲಿ ಶೇ 66ರಷ್ಟು ಕಡಿಮೆಯಾಗಬಹುದು ಎಂದು ವರದಿ ಎಚ್ಚರಿಸಿದೆ. ಅತಿ ಹೆಚ್ಚು ಅಪಾಯವನ್ನು ಕೆರೆಕಟ್ಟೆ, ನದಿ, ಜಲಾಶಯಗಳಲ್ಲಿ ವಾಸಿಸುವ ಕಶೇರುಕಗಳು ಎದುರಿಸುತ್ತಿವೆ. ಅಂದರೆ ಜಲಮೂಲ ಅಪಾಯದ ಸ್ಥಿತಿಯಲ್ಲಿದೆ ಎಂದೇ ಅರ್ಥ. ಈ ಸೂಕ್ಷ್ಮವನ್ನು ಅರಿತು, ಪರಿಸರ ನಾಶಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ವಿಶ್ವ ವನ್ಯಜೀವಿ ನಿಧಿಯು ಸರ್ಕಾರಗಳು ಮತ್ತು ಸ್ವಯಂಸೇವಾ ಸಂಸ್ಥೆಗಳಿಂದ ದೊರಕುವ ಮಾಹಿತಿಯನ್ನು ಆಧರಿಸಿ ಎರಡು ವರ್ಷಕ್ಕೊಮ್ಮೆ ಜೀವಿಗಳ ಸ್ಥಿತಿಗತಿ ವರದಿಯನ್ನು ತಯಾರು ಮಾಡುತ್ತಿದೆ. ಇದನ್ನು ಗಮನಿಸಿದರೆ ವನ್ಯಜೀವಿ ಪರಿಸ್ಥಿತಿ ವಿಕೋಪಕ್ಕೆ ತಲುಪುತ್ತಿದೆ ಎನಿಸುತ್ತಿದೆ. 6.5 ಕೋಟಿ ವರ್ಷಗಳ ಹಿಂದೆ ಡೈನೋಸರ್‌ಗಳ ಅಳಿವು ಸಂಭವಿಸಿತ್ತು. ಅದರ ನಂತರ ಆರನೇ ಅತಿ ದೊಡ್ಡ ಪ್ರಮಾಣದಲ್ಲಿ ವನ್ಯಜೀವಿ ಸಂತತಿ ನಾಶ ಆಗುತ್ತಿರುವುದು ಈಗ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆಫ್ರಿಕಾ ಖಂಡದಲ್ಲಿ ಕೇವಲ ಏಳು ವರ್ಷಗಳಲ್ಲಿ ಆನೆಗಳ ಸಂಖ್ಯೆಯಲ್ಲಿ ಶೇ 30ರಷ್ಟು ಇಳಿಕೆಯಾಗಿದೆ. 1970ರಿಂದ 2012ರ ಅವಧಿಯಲ್ಲಿ ಶೇ 8ರಷ್ಟು ವನ್ಯಜೀವಿ ಪ್ರಭೇದವೇ ಕಣ್ಮರೆಯಾಗಿತ್ತು. ಮಾರಿಷಸ್‌ನಲ್ಲಿ ಮಾತ್ರ ಇದ್ದ ಬಾತುಕೋಳಿಯಂತಹ ಡೊಡೊ ಪಕ್ಷಿಯನ್ನು ಮಾಂಸದ ಆಸೆಗೆ ಬೇಟೆಯಾಡಿ ಪ್ರಪಂಚದಿಂದಲೇ ಕಣ್ಮರೆ ಮಾಡಲಾಯಿತು. ಈ ಪಕ್ಷಿಯನ್ನು ಇದೀಗ ಚಿತ್ರದಲ್ಲಿ ಮಾತ್ರ ನೋಡಬಹುದು. ಏಷ್ಯಾ ಸಿಂಹಗಳು ಗುಜರಾತ್‌ಗೆ ಮಾತ್ರ ಸೀಮಿತವಾಗಿವೆ. ಹಿಮ ಚಿರತೆಗಳನ್ನು ಹಿಮಾಲಯದ ತಪ್ಪಲಲ್ಲಿ ಮಾತ್ರವೇ ಕಾಣಬಹುದು. ಭಾರತದಲ್ಲಿದ್ದ ಚೀತಾಗಳು ಸಂಪೂರ್ಣವಾಗಿ ಅಳಿದುಹೋಗಿವೆ. ಸಿಂಹಬಾಲದ ಮಂಗಗಳು ಪಶ್ಚಿಮ ಘಟ್ಟದ ಕೆಲವೇ ಭಾಗಗಳಲ್ಲಿ ಕೇಂದ್ರಿಕೃತಗೊಂಡಿವೆ. ವಲಸೆಗೂ ಆಸ್ಪದವಿಲ್ಲದಂತೆ ಆಗಿರುವ ಅರಣ್ಯ ನಾಶದಿಂದ ಈ ಪ್ರಾಣಿಗಳು ಕಣ್ಮರೆಯಾಗಲಿರುವ ಪ್ರಾಣಿಗಳ ಪಟ್ಟಿಗೆ ಸೇರಿವೆ. ಅರಣ್ಯ ನಾಶ, ಕಳ್ಳಬೇಟೆ ಇದೇ ಪ್ರಮಾಣದಲ್ಲಿ ನಡೆದರೆ ಪ್ರತಿಯೊಂದು ವನ್ಯಜೀವಿ ಪ್ರಭೇದದ ಕತೆಯೂ ಡೊಡೊ ರೀತಿಯೇ ಆಗುವುದರಲ್ಲಿ ಸಂಶಯವಿಲ್ಲ. ಆದರೂ ಪ್ಯಾರಿಸ್‌ನಲ್ಲಾದ ಹವಾಮಾನ ಶೃಂಗಸಭೆಯ ಒಪ್ಪಂದದ ಜಾರಿ, ಭವಿಷ್ಯದಲ್ಲಿ ಈ ಪರಿಸ್ಥಿತಿಯನ್ನು ಬದಲಾಯಿಸಬಹುದು ಎನ್ನುವ ಆಶಾಭಾವನೆಯನ್ನು ಮೂಡಿಸುತ್ತಿದೆ. ಇದಕ್ಕೆ ರಾಜಕೀಯ ಬದ್ಧತೆ ಮತ್ತು ಸಮುದಾಯದ ಸಹಕಾರವೂ ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.