ತ್ಯಾಜ್ಯ ಸುಡುವುದು ಬೇಡ ಸಂಸ್ಕರಣೆಗೆ ಸಹಕಾರ ನೀಡಿ ದೇಶದ ಯಾವುದೇ ಭಾಗದಲ್ಲಿ ಬಯಲು ಪ್ರದೇಶದಲ್ಲಿ ಒಣಕಸ, ಅಪಾಯಕಾರಿ ಪ್ಲಾಸ್ಟಿಕ್‌ ತ್ಯಾಜ್ಯ ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಿಸಿದೆ. ದೊಡ್ಡ ಮಟ್ಟದಲ್ಲಿ ಕಸ ಸುಟ್ಟ ಪ್ರಕರಣ ವರದಿಯಾದರೆ ₹ 25 ಸಾವಿರ ದಂಡ ವಿಧಿಸಬೇಕು. ವ್ಯಕ್ತಿಗಳು ಹಾಗೂ ಸಂಘ–ಸಂಸ್ಥೆಗಳು ಖಾಲಿ ಜಾಗದಲ್ಲಿ ಕಸ ಸುಟ್ಟರೆ ₹ 5 ಸಾವಿರ ದಂಡ ವಸೂಲಿ ಮಾಡಬೇಕು ಎನ್ನುವ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ನೇತೃತ್ವದ ಪೀಠ ನೀಡಿರುವ ಈ ಆದೇಶವನ್ನು ಪರಿಸರ ಸಂರಕ್ಷಣೆ ಹಾಗೂ ಗಾಳಿಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ್ದು ಎಂದೇ ಪರಿಗಣಿಸಬಹುದು. ಇದೇ ಪೀಠ ಕಳೆದ ವರ್ಷ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ತಾನ ರಾಜ್ಯಗಳಿಗೆ ಅನ್ವಯವಾಗುವಂತೆ ಬಯಲಿನಲ್ಲಿ ಒಣ ತ್ಯಾಜ್ಯ ಸುಡುವುದನ್ನು ನಿಷೇಧಿಸಿ ಆದೇಶ ನೀಡಿತ್ತು. ಆ ಸಂದರ್ಭದಲ್ಲಿ ದೆಹಲಿಯ ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿತ್ತು. ಉಸಿರಾಡಲು ಯೋಗ್ಯವಲ್ಲದ್ದು ಎನ್ನುವ ಹಂತ ತಲುಪಿತ್ತು. ದೆಹಲಿಯ ಸುತ್ತಮುತ್ತಲ ರಾಜ್ಯಗಳ ರೈತರು ಕೃಷಿಯ ಒಣತ್ಯಾಜ್ಯವನ್ನು ದೊಡ್ಡ ಮಟ್ಟದಲ್ಲಿ ಸುಡುತ್ತಿದ್ದುದು ಇದಕ್ಕೆ ಕಾರಣ. ಕೃಷಿ ತ್ಯಾಜ್ಯ ಸುಡುವ ಈ ರೂಢಿ ವಾಯುಮಾಲಿನ್ಯಕ್ಕೆ ಶೇ 29.4ರಷ್ಟು ಕೊಡುಗೆ ನೀಡುತ್ತಿದೆ. ಮಾಲಿನ್ಯ ಉಂಟುಮಾಡುವುದರ ಜತೆಗೆ ಗಾಳಿಯಲ್ಲಿ ತೇಲುವ ಕಣಗಳು ಶ್ವಾಸಕೋಶದ ಆರೋಗ್ಯವನ್ನೇ ಹಾಳುಮಾಡುತ್ತವೆ. ಕೃಷಿ ತ್ಯಾಜ್ಯ ಸುಡುವ ರೂಢಿ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕದಲ್ಲೂ ಇದು ರೂಢಿಯಲ್ಲಿದೆ. ಕೃಷಿ ತ್ಯಾಜ್ಯವನ್ನು ಹಸಿರು ಗೊಬ್ಬರವಾಗಿ ಪರಿವರ್ತಿಸಬೇಕಿದೆ. ಇದೇ ರೀತಿಯಲ್ಲಿ ನಗರಗಳ ತ್ಯಾಜ್ಯವನ್ನು ಸುಡುವ ಬದಲು, ವಿಂಗಡಿಸಿ ಸಂಸ್ಕರಣೆ ಮಾಡಬೇಕಿದೆ. ಬೆಂಗಳೂರಿನಂತಹ ನಗರಗಳಲ್ಲಿ ತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯೇ ಸರಿ. ಮಹಾನಗರ ಪಾಲಿಕೆಗೆ ಇದು ತಲೆನೋವಾಗಿ ಪರಿಣಮಿಸಿದೆ. ತ್ಯಾಜ್ಯ ಸುಡುವುದನ್ನು ನಿಯಂತ್ರಿಸಲು ಹಾಗೂ ಕಸ ಸಂಸ್ಕರಣೆಗೆ ನಾಲ್ಕು ವಾರಗಳ ಒಳಗೆ ಕ್ರಿಯಾ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ಹಸಿರು ನ್ಯಾಯಮಂಡಳಿ ಸೂಚಿಸಿದೆ. ತೆಳುವಾದ ಪಾಲಿವಿನೈಲ್‌ ಕ್ಲೋರೈಡ್‌ (ಪಿವಿಸಿ) ಮತ್ತು ಕ್ಲೋರಿನೇಟೆಡ್‌ ಪ್ಲಾಸ್ಟಿಕ್‌ ಬಳಕೆಯನ್ನು ಆರು ತಿಂಗಳಲ್ಲಿ ನಿಲ್ಲಿಸಲು ರಾಜ್ಯಗಳ ಪರಿಸರ ಇಲಾಖೆಗಳು ಆದೇಶ ಹೊರಡಿಸಬೇಕು ಮತ್ತು ಕಂದಕಗಳಲ್ಲಿ ಸುರಿದಿರುವ ತ್ಯಾಜ್ಯದ ಪೈಕಿ ಪುನರ್‌ಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಮತ್ತು ಕಟ್ಟಡ ತ್ಯಾಜ್ಯಗಳನ್ನು ರಸ್ತೆ ಹಾಗೂ ಒಡ್ಡು ನಿರ್ಮಾಣಕ್ಕೆ ಬಳಸಬೇಕು. ಪುನರ್‌ಬಳಕೆಗೆ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು ಎಂದೂ ಮಂಡಳಿ ಆದೇಶಿಸಿರುವುದು ಮಹತ್ವದ್ದು. ಕೃಷಿ ತ್ಯಾಜ್ಯವನ್ನು ಹಸಿರು ಗೊಬ್ಬರವಾಗಿ ಪರಿವರ್ತಿಸುವ ಬಗ್ಗೆ ರೈತರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕು. ಇದರಿಂದಾಗಿ ರಾಸಾಯನಿಕ ಗೊಬ್ಬರ ಬಳಕೆಯ ಮೇಲೆ ಅವಲಂಬನೆ ಕಡಿಮೆಯಾಗಲಿದೆ. ಕೃಷಿ ಉತ್ಪಾದನಾ ವೆಚ್ಚ ಕೂಡ ಕಡಿಮೆಯಾಗಲಿದೆ. ನಗರಗಳಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಸಂಸ್ಕರಣೆ ಸಂಪೂರ್ಣವಾಗಿ ಯಶಸ್ವಿಯಾಗಲು ಸ್ಥಳೀಯ ಸಂಸ್ಥೆಗಳ ಆಡಳಿತ, ಕಾರ್ಮಿಕರು ಮತ್ತು ಗುತ್ತಿಗೆದಾರರ ಸಹಕಾರ ಅಗತ್ಯ. ಬೆಂಗಳೂರಿನಲ್ಲಿ ತ್ಯಾಜ್ಯ ವಿಂಗಡಣೆ ಉದ್ದೇಶ ಪೂರ್ತಿಯಾಗಿ ಈಡೇರಿಲ್ಲ. ಇದಕ್ಕೆ ಕಾರಣ ಕಸದ ಮಾಫಿಯಾ. ಈ ದುಷ್ಟಕೂಟದ ಜತೆ ಆಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿದ್ದಾರೆ. ಹಸಿ ಕಸವನ್ನು ಒಣ ಕಸವಾಗಿ ಪರಿವರ್ತಿಸಿ ಸಾಗಣೆ ಮಾಡಿದರೆ ಹೆಚ್ಚು ಹಣ ಸಿಗುವುದಿಲ್ಲ ಎನ್ನುವ ಕಾರಣದಿಂದ ಎರಡನ್ನೂ ಬೆರೆಸಲಾಗುತ್ತಿದೆ. ಈ ದುಷ್ಟಕೂಟವನ್ನು ಬಗ್ಗುಬಡಿಯುವ ಅಗತ್ಯವಿದೆ. ತಗ್ಗು ಪ್ರದೇಶಗಳಲ್ಲಿ ಕಸ ಸುರಿದು ಬೆಂಕಿ ಹಚ್ಚುವ ವ್ಯಕ್ತಿಗಳ ವಿರುದ್ಧ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಶುದ್ಧಗಾಳಿಯನ್ನೂ ಖರೀದಿಸಬೇಕಾದ ಸ್ಥಿತಿ ಬರಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.