ರೈಲ್ವೆ ಪ್ರಯಾಣ ಸುರಕ್ಷತೆಗೆ ಆದ್ಯತೆ ನೀಡಿ ಇಂದೋರ್ - ಪಟ್ನಾ ಎಕ್ಸ್‌ಪ್ರೆಸ್‌ನ 14 ಬೋಗಿಗಳು ಹಳಿ ತಪ್ಪಿ 142ಕ್ಕೂ ಹೆಚ್ಚು ಜನರು ಸಾವಿಗೀಡಾಗಿರುವ ಘಟನೆ ಇತ್ತೀಚಿನ ಆರು ವರ್ಷಗಳಲ್ಲಿ ಭೀಕರ ರೈಲು ದುರಂತವಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಗಮನಹರಿಸಲು ಈ ವಿದ್ಯಮಾನ ಎಚ್ಚರಿಕೆ ಗಂಟೆಯಾಗಬೇಕು. ಅಪಘಾತಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ರೈಲ್ವೆ ಸಚಿವಾಲಯ ತನಿಖೆಗೆ ಆದೇಶ ನೀಡಿದೆ. ದುರಂತಕ್ಕೆ ಹಳಿಗಳಲ್ಲಿನ ಬಿರುಕು ಕಾರಣ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಳಿಗಳ ಬಿರುಕು ಅಪಘಾತಕ್ಕೆ ಕಾರಣವಾದರೆ ಅದು ಮಾನವ ದೋಷ ಎಂದೇ ಹೇಳಬೇಕಾಗುತ್ತದೆ. ಹೀಗಾಗಿ ಇದು ತಪ್ಪಿಸಬಹುದಾಗಿದ್ದ ದುರಂತ . ಎನ್‌ಡಿಎ ಸರ್ಕಾರ 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಾಗಲಿಂದ ರೈಲ್ವೆ ಇಲಾಖೆಯಲ್ಲಿ ಪರಿವರ್ತನೆಯ ಪರ್ವದ ಮಾತುಗಳನ್ನಾಡಲಾಗುತ್ತಿದೆ. ರೈಲ್ವೆ ಸಾಮರ್ಥ್ಯ ಹೆಚ್ಚಳ ಹಾಗೂ ವ್ಯವಹಾರ ಮಾದರಿಯನ್ನು ಪುನರ್ ವಿನ್ಯಾಸಗೊಳಿಸಲು ಆದ್ಯತೆ ನೀಡಲಾಗುತ್ತಿದೆ. ಆದರೆ ಈ ಪ್ರಕ್ರಿಯೆಯಲ್ಲಿ ರೈಲ್ವೆ ಸುರಕ್ಷತೆ ವಿಚಾರ ಕಳೆದುಹೋಗಬಾರದು. ರೈಲ್ವೆ ಹಳಿಗಳ ಪರಿಶೀಲನೆಗೆ ಅನೇಕ ನಿಯಮಗಳಿವೆ. ಇದನ್ನು ನೋಡಿಕೊಳ್ಳುವುದಕ್ಕಾಗಿಯೇ ನೌಕರರೂ ಇದ್ದಾರೆ. ಉಪಕರಣದ ಮೂಲಕ ಹಳಿಗಳನ್ನು ಪರಿಶೀಲಿಸಲಾಗುತ್ತದೆ. ಆಗ ಸಣ್ಣ ಬಿರುಕೂ ಪತ್ತೆಯಾಗುತ್ತದೆ. ಆದರೆ ಇಂತಹ ಸುರಕ್ಷತಾ ಪರಿಶೀಲನೆಗಳು ಅಪಘಾತ ಸಂಭವಿಸಿದ ಮಾರ್ಗದಲ್ಲಿ ಸಮರ್ಪಕವಾಗಿ ನಡೆಯುತ್ತಿದ್ದವೆ ಎಂಬುದು ಪ್ರಶ್ನೆ. ಸುರಕ್ಷತೆ ಪರಿಶೀಲನೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಲೋಪಗಳಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು. ರೈಲ್ವೆಯಲ್ಲಿ ಸಮಸ್ಯೆಗಳು ಆಳವಾಗಿವೆ ಎಂಬುದು ಸ್ಪಷ್ಟ. ಹೀಗಾಗಿ ಸರ್ಕಾರಿ ಸ್ವಾಮ್ಯದ ಈ ಸಾರಿಗೆ ವ್ಯವಸ್ಥೆಯ ಸುರಕ್ಷತೆಯ ಗುಣಮಟ್ಟದ ಬಗ್ಗೆ ಆತಂಕ ಇದ್ದೇ ಇದೆ. ಭಾರತೀಯ ರೈಲ್ವೆ 64 ಸಾವಿರ ಕಿ.ಮೀ.ಗೂ ಉದ್ದದ ಜಾಲವಾಗಿದೆ. ವಸಾಹತುಶಾಹಿ ಕಾಲದ ವ್ಯವಸ್ಥೆಯಾಗಿರುವ ವಿಶ್ವದ ನಾಲ್ಕನೇ ಅತಿ ದೊಡ್ಡ ಸಾರಿಗೆ ವ್ಯವಸ್ಥೆಯಾಗಿದೆ ಇದು. ಪ್ರತಿದಿನ ರಾಷ್ಟ್ರದ 2 ಕೋಟಿಗೂ ಹೆಚ್ಚು ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ ಎಂದರೆ ಈ ವಲಯದ ಸುರಕ್ಷತೆಗೆ ನೀಡಬೇಕಾದ ಮಹತ್ವವನ್ನು ನಾವು ಗ್ರಹಿಸಬೇಕು. ಆದರೆ ರೈಲ್ವೆ ವ್ಯವಸ್ಥೆಗೆ ವಯಸ್ಸಾಗುತ್ತಾ ರೈಲು ಅಪಘಾತಗಳು ಮಾಮೂಲಾಗುತ್ತಿರುವ ಇಂದಿನ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕು. ರೈಲ್ವೆ ಹಳಿಗಳನ್ನು ಮೇಲ್ದರ್ಜೆಗೇರಿಸುವ ಅಥವಾ ಮುಖ್ಯ ರೈಲ್ವೆ ಜಾಲಗಳಲ್ಲಿ ಆಧುನಿಕ ಸಿಗ್ನಲ್ ವ್ಯವಸ್ಥೆ ಅಳವಡಿಸುವ ವಿಚಾರದಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ ಎಂಬುದು ವಿಪರ್ಯಾಸ. ಕಳೆದ ಮೂರು ವರ್ಷಗಳಲ್ಲಿ ಸುಮಾರು ಶೇ 50ರಷ್ಟು ರೈಲು ಅಪಘಾತಗಳು ಹಳಿ ತಪ್ಪಿದ್ದರಿಂದಲೇ ಸಂಭವಿಸಿವೆ ಎಂಬುದು ನಮ್ಮ ಕಣ್ಣು ತೆರೆಸಬೇಕು. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಬಗೆಯ ಅಪಘಾತಗಳ ಪ್ರಮಾಣ ಶೇ 67ರಷ್ಟು ಹೆಚ್ಚಾಗಿದೆ ಎಂಬುದೂ ಸಮಸ್ಯೆಯ ತೀವ್ರತೆಗೆ ದ್ಯೋತಕ. ಜೊತೆಗೆ, ಹಳತಾಗುತ್ತಿರುವ ಹಳಿಗಳ ಮೇಲೆ ಈ ರೈಲು ದುರಂತ ಮತ್ತೊಮ್ಮೆ ಬೆಳಕು ಚೆಲ್ಲಿದೆ. ರೈಲ್ವೆ ಮೂಲ ಸೌಲಭ್ಯಗಳ ನಿರ್ವಹಣೆ ಹಾಗೂ ರೈಲ್ವೆಯನ್ನು ಮೇಲ್ದರ್ಜೆಗೇರಿಸುವಲ್ಲಿ ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಅಕ್ಷಮ್ಯ. ರೈಲ್ವೆ ಸುರಕ್ಷತೆ ಕುರಿತಂತೆ ಅನಿಲ್ ಕಾಕೋಡ್ಕರ್ ಸಮಿತಿ ಶಿಫಾರಸುಗಳ ಅನುಷ್ಠಾನಕ್ಕೆ ಗಮನ ನೀಡಿದ್ದರೆ ಭಾನುವಾರದ ಅಪಘಾತದ ತೀವ್ರತೆ ಕಡಿಮೆ ಇರುತ್ತಿತ್ತು. ಈಗಿರುವ ಬೋಗಿಗಳನ್ನು ಜರ್ಮನಿಯ ಎಲ್‌ಎಚ್‌ಬಿ ಕಂಪೆನಿಯ ಬೋಗಿಗಳಿಗೆ ಬದಲಾವಣೆ ಮಾಡಿಕೊಂಡಿದ್ದಲ್ಲಿ ಈ ಅಪಘಾತದಲ್ಲಿ ಇಷ್ಟೊಂದು ಸಾವುನೋವು ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ. ಅನಿಲ್ ಕಾಕೋಡ್ಕರ್ ಸಮಿತಿಯ ಎಲ್ಲಾ ಶಿಫಾರಸುಗಳನ್ನೂ ಇನ್ನೂ ಅನುಷ್ಠಾನಗೊಳಿಸಲಾಗಿಲ್ಲ. ರೈಲ್ವೆ ಸುರಕ್ಷತೆ ಪ್ರಾಧಿಕಾರದ ರಚನೆಗೂ ಈ ಸಮಿತಿ ಶಿಫಾರಸು ಮಾಡಿದೆ. ಜೊತೆಗೆ ರೈಲ್ವೆ ಸಂಶೋಧನಾ ಮತ್ತು ಅಭಿವೃದ್ದಿ ಮಂಡಳಿಯನ್ನು ಸ್ಥಾಪಿಸುವ ಅಗತ್ಯವನ್ನೂ ಈ ಸಮಿತಿ ಎತ್ತಿ ಹೇಳಿದೆ. ರೈಲ್ವೆ ವಿಚಾರದಲ್ಲಿ ರಾಜಕೀಯ ಸಲ್ಲದು. ರೈಲ್ವೆ ಪ್ರಯಾಣದ ಸುರಕ್ಷತೆಗೆ ಗಮನ ನೀಡುವುದು ಆದ್ಯತೆಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.