ಲೋಕಪಾಲ ನೇಮಕ ವಿಳಂಬ ಸಲ್ಲದು: ಕೋರ್ಟ್ ಆದೇಶ ಪಾಲಿಸಿ ಲೋಕಪಾಲರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ಅವರ ಪ್ರತಿನಿಧಿ, ಲೋಕಸಭೆಯ ಸ್ಪೀಕರ್, ಲೋಕಸಭೆಯ ಪ್ರತಿಪಕ್ಷ ನಾಯಕ ಮತ್ತು ನ್ಯಾಯಪಂಡಿತರೊಬ್ಬರು ಇರಬೇಕು ಎನ್ನುವ ನಿಯಮ ಕಾಯ್ದೆಯಲ್ಲಿಯೇ ಇದೆ. ಆದರೆ ಲೋಕಸಭೆಯಲ್ಲಿ ಈಗ ಅಧಿಕೃತವಾಗಿ ಮಾನ್ಯತೆ ಪಡೆದ ವಿರೋಧ ಪಕ್ಷವೇ ಇಲ್ಲ. ಕನಿಷ್ಠ 55 ಸದಸ್ಯರಿದ್ದರೆ ಮಾತ್ರ ವಿರೋಧ ಪಕ್ಷದ ಮಾನ್ಯತೆ ಸಿಗುತ್ತದೆ. ಕಾಂಗ್ರೆಸ್‌ಗೆ ಅದಕ್ಕಿಂತ 10 ಸ್ಥಾನಗಳು ಕಡಿಮೆ ಇವೆ. ಹೀಗಾಗಿ ಅದು ಸದನದಲ್ಲಿ ಅತಿ ದೊಡ್ಡ ಪ್ರತಿಪಕ್ಷ ಮಾತ್ರ. ಇಂತಹ ಸ್ಥಿತಿ ಉದ್ಭವಿಸಿದಾಗ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ‘ಸದನದ ಅತಿ ದೊಡ್ಡ ವಿರೋಧ ಪಕ್ಷದ ಮುಖ್ಯಸ್ಥನನ್ನು’ ಲೋಕಪಾಲ ಆಯ್ಕೆ ಸಮಿತಿ ಸದಸ್ಯನಾಗಿ ಮಾಡುವ ತಿದ್ದುಪಡಿ ಮಸೂದೆ ಸಂಸತ್ತಿನ ಮುಂದೆ ಮಂಡಿಸಲಾಗಿದೆ. ಅದಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ ಎನ್ನುವುದು ಲೋಕಪಾಲರ ನೇಮಕದ ದಾರಿಯಲ್ಲಿ ಅಡ್ಡಿ ಆಗಬಾರದು. ಈ ವಿಷಯದಲ್ಲಿ ನ್ಯಾಯಾಂಗದ ಪರೋಕ್ಷ ಸಮ್ಮತಿಯ ಬಲ ಕೂಡ ಈಗ ಅದರ ಬೆನ್ನಿಗಿದೆ. ಆದ್ದರಿಂದ ತನ್ನ ಮೇಲೆ ಜನ ಇಟ್ಟುಕೊಂಡಿರುವ ವಿಶ್ವಾಸಕ್ಕೆ ಭಂಗ ಬಾರದಂತೆ ಸರ್ಕಾರ ನಡೆದುಕೊಳ್ಳಬೇಕು. ನೆಪ ಹೇಳುವುದು ಸಾಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.