ಮಾಲ್ಡೀವ್ಸ್ ಜೊತೆ ಬಾಂಧವ್ಯ ಬಿಕ್ಕಟ್ಟು: ನಿರ್ಲಕ್ಷ್ಯ ಸಲ್ಲದು ಭಾರತದ ಜೊತೆ ಸಂಘರ್ಷದ ಹಾದಿಯನ್ನು ಮಾಲ್ಡೀವ್ಸ್ ತುಳಿದಿದೆ. ಉಭಯ ರಾಷ್ಟ್ರಗಳ ಬಾಂಧವ್ಯದಲ್ಲಿ ಬಿರುಕುಗಳು ಹೆಚ್ಚಾಗುತ್ತಲೇ ಇವೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಹಲವು ದೇಶಗಳಿಗೆ ಭೇಟಿ ನೀಡುತ್ತಲೇ ಇದ್ದಾರೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಮಾಲ್ದೀವ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿಲ್ಲ ಎಂಬುದು ಬಹಳಷ್ಟನ್ನು ಹೇಳುತ್ತದೆ. 2015ರ ಮಾರ್ಚ್ ತಿಂಗಳಲ್ಲಿ ನಿಗದಿಯಾಗಿದ್ದ ಮಾಲ್ಡೀವ್ಸ್ ಭೇಟಿಯನ್ನು ಮೋದಿ ಅವರು ರದ್ದುಪಡಿಸಿದ್ದರು. ಮಾಲ್ಡೀವ್ಸ್‌ನ ಪ್ರತಿಪಕ್ಷದ ನಾಯಕ ಮೊಹಮ್ಮದ್ ನಶೀದ್ ಅವರನ್ನು ಅಲ್ಲಿನ ಸರ್ಕಾರ ನಡೆಸಿಕೊಂಡ ರೀತಿಯ ವಿರುದ್ಧ ಸಂದೇಶ ರವಾನೆ ಮಾಡುವುದು ಇದರ ಉದ್ದೇಶವಾಗಿತ್ತು. ಏಕೆಂದರೆ, ನಶೀದ್ ವಿರುದ್ಧ ದೇಶದ್ರೋಹ ಹಾಗೂ ಭಯೋತ್ಪಾದನೆ ಆರೋಪಗಳನ್ನು ಹೊರಿಸಿ ಅವರನ್ನು ಜೈಲಿಗೆ ಕಳಿಸಲಾಗಿತ್ತು. ಆಗಿನಿಂದಲೂ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ ಸರ್ಕಾರದ ಅನೇಕ ಕ್ರಮಗಳನ್ನು ಭಾರತ ಟೀಕಿಸುತ್ತಲೇ ಬಂದಿದೆ. ಈ ವರ್ಷ ಫೆಬ್ರುವರಿ ತಿಂಗಳಲ್ಲಿ ಮಾಲ್ಡೀವ್ಸ್‌ನಲ್ಲಿ ತುರ್ತುಸ್ಥಿತಿ ಹೇರಿದ್ದನ್ನೂ ಭಾರತ ಖಂಡಿಸಿತ್ತು. ಈಗ ಮತ್ತೆ ಯಮೀನ್ ಪದಚ್ಯುತಿಗೆ ಯತ್ನಿಸಿದರೆಂಬ ಆರೋಪದ ಮೇಲೆ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಂ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನು 19 ತಿಂಗಳ ಕಾಲ ಜೈಲಿಗೆ ಕಳಿಸುವ ಶಿಕ್ಷೆಯನ್ನು ಮಾಲ್ಡೀವ್ಸ್ ಕೋರ್ಟ್ ಕಳೆದ ವಾರ ಪ್ರಕಟಿಸಿದೆ. ‘ಈ ಶಿಕ್ಷೆ ಕಾನೂನು ಎತ್ತಿ ಹಿಡಿಯುವ ಸರ್ಕಾರದ ಬದ್ಧತೆ ಬಗ್ಗೆ ಸಂಶಯ ಹುಟ್ಟಿಸುತ್ತದೆ. ಸೆಪ್ಟೆಂಬರ್‌ನಲ್ಲಿ ಮಾಲ್ಡೀವ್ಸ್‌ನಲ್ಲಿ ನಡೆಯಬೇಕಿರುವ ಅಧ್ಯಕ್ಷೀಯ ಚುನಾವಣೆಯ ವಿಶ್ವಾಸಾರ್ಹತೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತುತ್ತದೆ’ ಎಂದು ಭಾರತ ತೀವ್ರವಾಗಿ ಪ್ರತಿಕ್ರಿಯಿಸಿತು. ಈ ಬೆಳವಣಿಗೆಗಳಿಗೆ ಪ್ರತಿಯಾಗಿ ಭಾರತ ವಿರೋಧಿ ನಿಲುವುಗಳನ್ನು ಮಾಲ್ಡೀವ್ಸ್ ಢಾಳಾಗಿ ಪ್ರದರ್ಶಿಸುವುದು ಮುಂದುವರಿದಿರುವುದು ವಿಷಾದನೀಯ. ಆಯಕಟ್ಟಿನ ವ್ಯವಹಾರಗಳು ಹಾಗೂ ಉಭಯ ರಾಷ್ಟ್ರಗಳ ಜನರ ಮಧ್ಯದ ಸಂಪರ್ಕ, ಭಾರತ –ಮಾಲ್ಡೀವ್ಸ್ ಬಾಂಧವ್ಯದಲ್ಲಿ ಪ್ರಮುಖವಾದದ್ದು.ಆದರೆ ಈ ಬಾಂಧವ್ಯಕ್ಕೇ ಈಗ ಹೊಡೆತ ಬೀಳುವಂತೆ ಕಾಣುತ್ತಿದೆ. ಪ್ರವಾಸೋದ್ಯಮ ಹಾಗೂ ಆರೋಗ್ಯ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಭಾರತೀಯರ ಉದ್ಯೋಗ ಅನುಮತಿ ವೀಸಾಗಳು ಇತ್ತೀಚಿನ ತಿಂಗಳುಗಳಲ್ಲಿ ಪುನರ್‌ನವೀಕರಣವಾಗಿಲ್ಲ ಎಂಬುದು ಆತಂಕದ ಸಂಗತಿ. ‘ಮಾಲ್ಡೀವ್ಸ್‌ಗೆ ಉದ್ಯೋಗಿಗಳು ಬೇಕು. ಆದರೆ ಭಾರತೀಯರು ಬರುವುದು ಬೇಕಿಲ್ಲ’ ಎಂಬಂಥ ಧೋರಣೆಯನ್ನು ಮಾಲ್ಡೀವ್ಸ್ ಪ್ರದರ್ಶಿಸುತ್ತಿದೆ. ಹಾಗೆಯೇ 2013ರಲ್ಲಿ ಮಾಲ್ಡೀವ್ಸ್‌ಗೆ ನೀಡಲಾಗಿದ್ದ ಎರಡು ಧ್ರುವ್ ಹೆಲಿಕಾಪ್ಟರ್‌ಗಳನ್ನು (ಎಎಲ್‌ಎಚ್) ಈ ತಿಂಗಳ ಅಂತ್ಯದೊಳಗೆ ವಾಪಸ್ ತೆಗೆದುಕೊಳ್ಳಬೇಕೆಂದೂ ಭಾರತಕ್ಕೆ ಮಾಲ್ಡೀವ್ಸ್ ಸೂಚಿಸಿರುವುದು ಸಂಬಂಧ ತೀವ್ರವಾಗಿ ಹದಗೆಟ್ಟಿರುವುದಕ್ಕೆ ದ್ಯೋತಕ. ಈ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವ ಸಿಬ್ಬಂದಿಯ ವೀಸಾಗಳ ನವೀಕರಣ ವಿಚಾರವನ್ನೂ ಮಾಲ್ಡೀವ್ಸ್ ನನೆಗುದಿಯಲ್ಲಿಟ್ಟಿದೆ. ಇದರಲ್ಲಿ ಒಂದನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಹಾಗೂ ಹಾಗೂ ಮತ್ತೊಂದನ್ನು ಭಾರತೀಯ ನೌಕಾಪಡೆ ನಿರ್ವಹಿಸುತ್ತಿದೆ. ಆದರೆ, ರಾಜತಾಂತ್ರಿಕತೆಯ ಸಂಕೀರ್ಣತೆಗಳನ್ನು ಮಾಲ್ಡೀವ್ಸ್ ಅರಿತುಕೊಳ್ಳಬೇಕು. ಬಿಕ್ಕಟ್ಟು ಸಂಭವಿಸಿದಾಗಲೆಲ್ಲಾ ಮಾಲ್ಡೀವ್ಸ್ ನಾಯಕರು ಮೊದಲು ಮೊರೆ ಹೋಗುವುದೇ ಭಾರತಕ್ಕೆ ಎಂಬುದು ಅದಕ್ಕೆ ನೆನಪಿರಬೇಕು. ‘ಭಾರತ ಮೊದಲು’ ಎಂಬ ನೀತಿಯನ್ನೇ ಮಾಲ್ಡೀವ್ಸ್ ಸಹ ಅನುಸರಿಸಿಕೊಂಡು ಬರುತ್ತಿದೆ. ಆದರೆ ಇತ್ತೀಚೆಗೆ ಚೀನಾ ಜೊತೆ ಬಾಂಧವ್ಯವನ್ನು ಮಾಲ್ಡೀವ್ಸ್ ವೃದ್ಧಿಸಿಕೊಂಡಿದೆ. ಚೀನಾ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದವನ್ನೂ ಮಾಡಿಕೊಂಡ ನಂತರ ಭಾರತದ ಜೊತೆಗಿನ ಆಪ್ತತೆ ಕಡಿಮೆಯಾಗಿರುವುದು ಎದ್ದು ಕಾಣಿಸುವಂತಹದ್ದು. ಈ ಬೆಳವಣಿಗೆಗಳಿಗೆ ಭಾರತ ಕಣ್ಮುಚ್ಚಿ ಕುಳಿತುಕೊಳ್ಳಲಾಗದು. ನೆರೆಯ ಸಣ್ಣ ರಾಷ್ಟ್ರಗಳ ತಳಮಳಗಳನ್ನು ದೊಡ್ಡ ರಾಷ್ಟ್ರ ಅರಿತುಕೊಳ್ಳಬೇಕು. ಈ ನೀತಿಯನ್ನು ಭಾರತ ಅನುಸರಿಸಿಕೊಂಡು ಬಂದಿದೆ ಎಂಬುದೂ ನಿಜ. ಈಗಲೂ ರಾಜತಾಂತ್ರಿಕ ಕ್ರಮಗಳ ಮೂಲಕ ಮಾಲ್ಡೀವ್ಸ್‌ನ ವಿಶ್ವಾಸ ಗಳಿಸಿಕೊಳ್ಳಲು ಭಾರತ ಮುಂದಾಗಬೇಕು. ಯಮೀನ್ ಸರ್ಕಾರವೂ ತನ್ನ ನೀತಿಗಳನ್ನು ಪುನರ್‍ ಪರಿಶೀಲಿಸುವುದು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.