ಮಹತ್ವದ ರಕ್ಷಣಾ ಖಾತೆಗೆ ಪೂರ್ಣಾವಧಿ ಮಂತ್ರಿ ಬೇಕು ‘ನೆರೆಯ ದೇಶಗಳಿಂದ ರಾಷ್ಟ್ರದ ಸುರಕ್ಷತೆಗೆ ಬೆದರಿಕೆ ಇದ್ದು, ರಕ್ಷಣಾ ಸನ್ನದ್ಧ ಸ್ಥಿತಿ ಸದಾಕಾಲ ಗರಿಷ್ಠ ಮಟ್ಟದಲ್ಲಿ ಇರಬೇಕಾದ ಅಗತ್ಯವಿದೆ’ ಎಂದು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಕುದಾಪುರದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ‘ಯುದ್ಧ ವಿಮಾನಗಳ ಪರೀಕ್ಷಾ ವಲಯ’ವನ್ನು ಅವರು ಲೋಕಾರ್ಪಣೆ ಮಾಡಿದ್ದಾರೆ. ದೇಶದಲ್ಲೇ ಮೊದಲನೆಯದಾದ ಈ ಪರೀಕ್ಷಾ ವಲಯ ದೇಶದ ದೀರ್ಘಕಾಲದ ಅಗತ್ಯವಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ಭಾರತ ದಿಟ್ಟ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹವೇ. ಆದರೆ ನಮ್ಮ ಸೈನ್ಯ ಸದಾಕಾಲ ರಕ್ಷಣಾ ಸನ್ನದ್ಧ ಸ್ಥಿತಿಯಲ್ಲಿ ಇರಲು ಅನುಕೂಲವಾಗುವಂತಹ ಆಡಳಿತ ಸಿದ್ಧತೆ ನಮ್ಮಲ್ಲಿ ಏಕಿಲ್ಲ ಎನ್ನುವ ಪ್ರಶ್ನೆಗೂ ರಕ್ಷಣಾ ಸಚಿವರು ಉತ್ತರ ನೀಡಬೇಕಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ಮಹತ್ವದ ಹಣಕಾಸು ಖಾತೆಯನ್ನು ನೋಡಿಕೊಳ್ಳುತ್ತಿರುವ ಅರುಣ್‌ ಜೇಟ್ಲಿಯವರು ಇನ್ನೊಂದೆಡೆ ಹಂಗಾಮಿಯಾಗಿ ರಕ್ಷಣಾ ಖಾತೆಯನ್ನೂ ನಿಭಾಯಿಸುತ್ತಿದ್ದಾರೆ. ರಕ್ಷಣಾ ಸನ್ನದ್ಧ ಸ್ಥಿತಿಯಲ್ಲಿ ಸದಾಕಾಲ ದೇಶದ ಸೇನೆ ಇರಬೇಕಾದ ಸ್ಥಿತಿ ಇದೆ ಎಂದು ಸರ್ಕಾರವೇ ಒಪ್ಪಿಕೊಂಡಿರುವಾಗ ಈ ಹಂಗಾಮಿ ನೀತಿ ಏಕೆ ಮುಂದುವರಿಯುತ್ತಿದೆ? ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕದ ಈ 36 ತಿಂಗಳಲ್ಲಿ ಸುಮಾರು 27 ತಿಂಗಳ ಕಾಲ ಮಾತ್ರ ರಕ್ಷಣಾ ಇಲಾಖೆಗೆ ಪೂರ್ಣ ಸಮಯ ವಿನಿಯೋಗಿಸುವ ರಕ್ಷಣಾ ಸಚಿವರು ಇದ್ದರು ಎನ್ನುವುದು ಏನನ್ನು ಸೂಚಿಸುತ್ತಿದೆ? 2014ರ ನವೆಂಬರ್‌ನಲ್ಲಿ ರಕ್ಷಣಾ ಖಾತೆಯ ಹೊಣೆಯನ್ನು ಮನೋಹರ್‌ ಪರಿಕ್ಕರ್‌ ಅವರು ವಹಿಸಿಕೊಳ್ಳುವವರೆಗೂ ಈ ಖಾತೆಗೆ ಪೂರ್ಣಪ್ರಮಾಣದ ಸಚಿವರು ಇರಲಿಲ್ಲ. ಈಗ ಪಕ್ಷದ ರಾಜಕೀಯ ಅನಿವಾರ್ಯದ ಹಿನ್ನೆಲೆಯಲ್ಲಿ ಪರಿಕ್ಕರ್‌ ಅವರು ಮತ್ತೆ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕವೂ ರಕ್ಷಣಾ ಖಾತೆಗೆ ಪೂರ್ಣಪ್ರಮಾಣದ ಸಚಿವರು ಇಲ್ಲ. ಅರುಣ್ ಜೇಟ್ಲಿ ಅವರು ಸದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿನ ಬಿಡುವಿಲ್ಲದ ಸಚಿವರು. ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿಯುತ್ತಿರುವ ಹೊತ್ತಿನಲ್ಲೇ ಅತ್ಯಂತ ಮಹತ್ವದ ಹಣಕಾಸು ಖಾತೆಯನ್ನು ಅವರು ನಿಭಾಯಿಸುತ್ತಿದ್ದಾರೆ. ಅಮೆರಿಕದ ಬದಲಾದ ಉದ್ಯೋಗ ನೀತಿ, ಯುರೋಪಿನ ದೇಶಗಳು ಎದುರಿಸುತ್ತಿರುವ ಹಣಕಾಸು ಬಿಕ್ಕಟ್ಟು, ಜಾಗತಿಕ ಉದ್ಯೋಗ ಮಾರುಕಟ್ಟೆಯ ಹಿಂಜರಿಕೆ– ಎಲ್ಲವೂ ನಮ್ಮ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿವೆ. ಇಂತಹ ಸಂದರ್ಭದಲ್ಲಿ ಹಣಕಾಸು ಸಚಿವರಾಗಿ ಜೇಟ್ಲಿಯವರಿಗೆ ಕೈತುಂಬಾ ಕೆಲಸಗಳಿವೆ. ಹಣಕಾಸು ಖಾತೆಯ ಜತೆಗೆ ರಕ್ಷಣಾ ಖಾತೆಯ ಒತ್ತಡಗಳನ್ನೂ ಅವರಿಂದ ನಿಭಾಯಿಸಲು ಸಾಧ್ಯವೇ? ರಕ್ಷಣಾ ಖಾತೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು, ರಕ್ಷಣಾ ಇಲಾಖೆಯ ಕುರಿತು ಸರ್ಕಾರದ ಹಂಗಾಮಿ ಮತ್ತು ನಿರ್ಲಕ್ಷ್ಯದ ನೀತಿಯನ್ನು ಇತ್ತೀಚೆಗೆ ಕಟುವಾಗಿ ಟೀಕಿಸಿದೆ. ಗಡಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳು ಒಡ್ಡುತ್ತಿರುವ ಸವಾಲುಗಳು ಸೈನ್ಯದ ತಲೆನೋವುಗಳನ್ನು ಹೆಚ್ಚಿಸಿವೆ. 2000ದಲ್ಲೇ ಕಾರ್ಗಿಲ್‌ ಸಮಿತಿ ನೀಡಿರುವ ವರದಿಯ ಪ್ರಕಾರ, ನಮ್ಮ ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ಪುನರ್ರಚನೆ ನಡೆಯಬೇಕಿದ್ದು, ಆ ಕುರಿತ ಹಲವು ಕ್ರಮಗಳು ನನೆಗುದಿಗೆ ಬಿದ್ದಿವೆ. ರಕ್ಷಣಾ ಖಾತೆಯಲ್ಲಿ ‘ಮೇಕ್‌ ಇನ್‌ ಇಂಡಿಯಾ’ ನೀತಿ ಜಾರಿಗೊಳಿಸುವುದಾಗಿ ಪ್ರಧಾನಿಯವರು ಘೋಷಿಸಿದ್ದರೂ, ಈ ನಿಟ್ಟಿನಲ್ಲಿ ವ್ಯೂಹಾತ್ಮಕ ಪಾಲುದಾರರನ್ನು ಆಯ್ಕೆ ಮಾಡುವ ಕೆಲಸವೂ ಆಗಿಲ್ಲ. ಹಂಗಾಮಿ ರಕ್ಷಣಾ ಸಚಿವರನ್ನು ಇಟ್ಟುಕೊಂಡು ಈ ಎಲ್ಲ ಕೆಲಸಗಳನ್ನು ವೇಗವಾಗಿ ಮಾಡಲು ಖಂಡಿತ ಸಾಧ್ಯವಿಲ್ಲ. ಪ್ರಧಾನಿಯವರು ರಕ್ಷಣಾ ಖಾತೆಗೆ ಪೂರ್ಣ ಪ್ರಮಾಣದ ಸಚಿವರೊಬ್ಬರನ್ನು ನೇಮಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.