ಲೋಪ ಸರಿಪಡಿಸಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಎಂಜಿಎನ್‌ಆರ್‌ಇಜಿಎಸ್) ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ನೀಡುವ ದಿನದ ಕೂಲಿಯನ್ನು ರೂ 155ರಿಂದ ರೂ 174ಕ್ಕೆ ಏರಿಸಲಾಗಿದೆ. ರಾಜ್ಯದ ಸುಮಾರು 1.5 ಕೋಟಿ ಕೂಲಿ ಕಾರ್ಮಿಕರು ಇದರ ಲಾಭ ಪಡೆಯಲಿದ್ದಾರೆ. ಸದ್ಯದ ಅಂಕಿ ಅಂಶಗಳ ಪ್ರಕಾರ, ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದಲ್ಲಿ ಎರಡು ಲಕ್ಷ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೀಗಿದ್ದೂ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈ ಯೋಜನೆಯಡಿ ಹೇಳಿಕೊಳ್ಳುವ ಸಾಧನೆಯಾಗಿಲ್ಲ ಏಕೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಇದು. ನೆರೆಯ ತಮಿಳುನಾಡಿನ ಜೊತೆಗೆ ಕರ್ನಾಟಕದ ಸಾಧನೆಯನ್ನೇ ಹೋಲಿಸಬಹುದು. 2006ರಲ್ಲಿ ಈ ಯೋಜನೆ ಜಾರಿಯಾದ ನಂತರ ತಮಿಳುನಾಡಿನಲ್ಲಿ 40 ಕೋಟಿ ಮಾನವ ದಿನಗಳ ಕೆಲಸ ಆಗಿದೆ. ಆದರೆ ರಾಜ್ಯದ್ಲ್ಲಲಾಗಿರುವುದು ಕೇವಲ 2 ಕೋಟಿ ಮಾನವ ದಿನಗಳ ಕೆಲಸ ಎಂಬುದು ಅನುಷ್ಠಾನ ಹಂತದಲ್ಲಿನ ವೈಫಲಗಳಿಗೆ ಕನ್ನಡಿ ಹಿಡಿಯುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ವರ್ಷದಲ್ಲಿ 100 ದಿನವಾದರೂ ಕೆಲಸ ಕೊಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆ ಇದು. ಆದರೆ ಯೋಜನೆಯ ಅನುಷ್ಠಾನದಲ್ಲಿ ಭ್ರಷ್ಟಾಚಾರದ ದೂರುಗಳು ಅಪಾರವಾಗಿರುವುದು ಯೋಜನೆಯ ಮೂಲ ಆಶಯಕ್ಕೇ ಧಕ್ಕೆ ತಂದಿದೆ. ಜಾಬ್ ಕಾರ್ಡ್‌ಗಳ ದುರುಪಯೋಗ ಹಾಗೂ ನಕಲಿ ಹೆಸರುಗಳ ಸೇರ್ಪಡೆಯಂತಹ ಅಕ್ರಮಗಳಿಂದ, ತಲುಪಬೇಕಾದ ಬಡಜನರನ್ನೇ ಈ ಯೋಜನೆ ತಲುಪುತ್ತಿಲ್ಲ ಎಂಬಂತಹ ದೂರುಗಳು ವ್ಯಾಪಕವಾಗಿವೆ. ಜೊತೆಗೆ ಕಡಿಮೆ ಕೂಲಿ, ಹಣ ಪಾವತಿ ವಿಳಂಬ ಹಾಗೂ ಕೆಲಸ ನಿರಾಕರಣೆಗಳಂತಹ ದೂರುಗಳೂ ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಳಿ ಬರುತ್ತಿರುವುದು ದುರದೃಷ್ಟಕರ. ಇದ್ದ ಜಾಗಗಳಲ್ಲೇ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಪರ ಊರುಗಳಿಗೆ ವಲಸೆ ಹೋಗಬೇಕಾದ ಸ್ಥಿತಿಯನ್ನು ನಿಯಂತ್ರಿಸುವುದು ಈ ಯೋಜನೆಯಿಂದ ಆಗಬೇಕಿರುವ ಲಾಭಗಳಲ್ಲಿ ಒಂದು. ಆದರೆ ಈಗಲೂ ಉದ್ಯೋಗ ಅರಸಿ ನಗರಗಳಿಗೆ ವಲಸೆ ಬರುವವರ ಸಂಖ್ಯೆ ಕಡಿಮೆ ಆಗಿಲ್ಲ. ವಲಸೆಗಳಿಂದಾಗುವ ನಗರಗಳ ಮೇಲಿನ ಒತ್ತಡಗಳು ತಪ್ಪಿಲ್ಲ. ಹೀಗಾಗಿ, ಅರ್ಥಪೂರ್ಣವಾದ ಸಾರ್ವಜನಿಕ ಕಾಮಗಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗುತ್ತಿಲ್ಲವೆ? ವ್ಯಾಪಕ ಶ್ರಮ ಶಕ್ತಿಯನ್ನು ಬಳಸಿಕೊಳ್ಳುವಂತಹ ದೀರ್ಘಾವಧಿ ಹಣಹೂಡಿಕೆಗಳು ಸಾಧ್ಯವಾಗುತ್ತಿಲ್ಲವೆ? ಎಂಬಂತಹ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ. ಈ ಯೋಜನೆ ಜಾರಿಯಿಂದ ಉತ್ಪಾದಕತೆ ಹೆಚ್ಚಾಗುತ್ತಿಲ್ಲ ಅಥವಾ ಸಾರ್ವಜನಿಕ ಸಂಪತ್ತು ಸೃಷ್ಟಿಯಾಗುತ್ತಿಲ್ಲ ಎಂಬಂತಹ ಟೀಕೆಗಳೂ ಇವೆ. ಅಲ್ಲದೆ, ವೃತ್ತಿಪರರ ತಾಂತ್ರಿಕ ಬೆಂಬಲ ವ್ಯವಸ್ಥೆ ಇಲ್ಲದಿರುವುದೂ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಡ್ಡಿಯಾಗಿದೆ ಎಂಬ ವಿಶ್ಲೇಷಣೆಗಳೂ ಇವೆ. ಜನರ ಅಗತ್ಯಗಳಿಗೆ ಸ್ಪಂದಿಸುವ ರೀತಿ ಯೋಜನೆಯನ್ನು ರೂಪಿಸಿ ಗ್ರಾಮೀಣ ಬಡ ಜನರ ಆದಾಯ ಹೆಚ್ಚಳಕ್ಕೆ ಅನುವು ಮಾಡಿಕೊಡಲು ಶ್ರಮಿಸಬೇಕಿರುವುದು ಸರ್ಕಾರದ ಕರ್ತವ್ಯ. ಯೋಜನೆಗೆ ಹಣ ಬಿಡುಗಡೆ ಹಾಗೂ ಬಿಡುಗಡೆಯಾದ ಹಣದ ವೆಚ್ಚದ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ದೋಷಾರೋಪ ಮಾಡುವ ಪ್ರವೃತ್ತಿಗಳೂ ಕಡಿಮೆ ಆಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.