ಮತದಾರರಲ್ಲಿ ಎಚ್ಚರ ಇರಲಿ ಕರ್ನಾಟಕ ವಿಧಾನಸಭೆಯ ಚುನಾವಣೆ ಘೋಷಣೆಯಾಗಿದ್ದು, ಮೇ ಐದರಂದು ಮತದಾನ ನಡೆದು ಎಂಟರಂದು ಫಲಿತಾಂಶ ಹೊರಬೀಳಲಿದೆ. ಸಾಮಾನ್ಯವಾಗಿ ಎರಡು ಮೂರು ಹಂತಗಳಲ್ಲಿ ನಡೆಸಲಾಗುತ್ತಿದ್ದ ಮತದಾನವನ್ನು ಈ ಬಾರಿ ಒಂದೇ ಹಂತದಲ್ಲಿ ನಡೆಸಲು ನಿರ್ಧರಿಸಿರುವುದು ಚುನಾವಣಾ ಆಯೋಗ ಹೊಂದಿರುವ ಆತ್ಮವಿಶ್ವಾಸದ ಪ್ರತೀಕ. ಚುನಾವಣೆ ಘೋಷಣೆಯಾದ ಕ್ಷಣದಲ್ಲಿಯೇ ನೀತಿ ಸಂಹಿತೆ ರಾಜ್ಯದಲ್ಲಿ ಜಾರಿಗೆ ಬಂದಿದೆ. ಕಟ್ಟುನಿಟ್ಟಾಗಿ ಇದನ್ನು ಪಾಲಿಸುವುದು ಹೇಗೆ ರಾಜಕೀಯ ಪಕ್ಷಗಳ ಕರ್ತವ್ಯವೋ, ಹಾಗೆಯೇ ನಿರ್ದಾಕ್ಷಿಣ್ಯವಾಗಿ ಜಾರಿಗೆ ತರುವುದು ಚುನಾವಣಾ ಆಯೋಗದ ಹೊಣೆ ಕೂಡಾ ಆಗಿದೆ. ಚುನಾವಣಾ ಪ್ರಕ್ರಿಯೆಯ ಅವಧಿಯಲ್ಲಿ ರಾಜ್ಯದ ಅಧಿಕಾರಿಗಳೆಲ್ಲ ನೇರವಾಗಿ ಚುನಾವಣಾ ಆಯೋಗದ ನಿಯಂತ್ರಣ, ಮೇಲ್ವಿಚಾರಣೆ ಮತ್ತು ಶಿಸ್ತಿನ ಪರಿಧಿಯೊಳಗೆ ಬರುತ್ತಾರೆ. ಚುನಾವಣಾ ಕರ್ತವ್ಯನಿರತ ಅಧಿಕಾರಿಗಳು ಸ್ವಂತ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವಂತಿಲ್ಲ, ಕಳೆದ ನಾಲ್ಕು ವರ್ಷಗಳ ಅವಧಿಯ್ಲ್ಲಲಿ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯನ್ನು ಒಂದೇ ಸ್ಥಳದಲ್ಲಿ ಕಳೆದ ಅಧಿಕಾರಿಗಳು ಜಾಗ ಖಾಲಿ ಮಾಡಬೇಕಾಗುತ್ತದೆ ಮತ್ತು ಹಿಂದಿನ ಚುನಾವಣೆಯಲ್ಲಿ ಆಯೋಗದ ಶಿಸ್ತಿನ ಕ್ರಮಕ್ಕೊಳಗಾದವರು ಕರ್ತವ್ಯ ನಿರ್ವಹಿಸುವಂತಿಲ್ಲ. ನೀತಿ ಸಂಹಿತೆಯ ಈ ಕ್ರಮಗಳನ್ನು ಆಯೋಗ ಯಾವುದೇ ಮುಲಾಜಿಗೊಳಗಾಗದೆ ಜಾರಿಗೆ ತರಬೇಕು. ಸಾಮಾನ್ಯವಾಗಿ ಕೇಳಿಬರುವ ಮತದಾರರ ಪಟ್ಟಿಯಲ್ಲಿನ ದೋಷ, ಮತಗಟ್ಟೆಗಳ ಸ್ಥಳವಿವಾದ, ನೀತಿ ಸಂಹಿತೆಯ ಉಲ್ಲಂಘನೆಯ ದೂರುಗಳ ಬಗ್ಗೆ ಚುನಾವಣಾ ಆಯೋಗ ತಕ್ಷಣ ಗಮನಹರಿಸಿ ಕ್ರಮಕೈಗೊಳ್ಳಬೇಕು. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯ ಮಟ್ಟದಲ್ಲಿ ಜರಡಿ ಹಿಡಿದರೆ ಅಯೋಗ್ಯರು ದುಡ್ಡು ಜಾತಿ ಮತ್ತು ತೋಳ್ಬಲದ ಮೂಲಕ ಆರಿಸಿಬಂದು ಪ್ರಜಾಪ್ರಭುತ್ವದ ಅಣಕಮಾಡುವುದನ್ನು ತಪ್ಪಿಸಲು ಸಾಧ್ಯ. ಚುನಾವಣೆಯ ಘೋಷಣೆಯಿಂದಾಗಿ ಕಳೆದ ಐದು ವರ್ಷಗಳ ಅನಿಶ್ಚಿತ ರಾಜಕೀಯಕ್ಕೆ ಕೊನೆಗೂ ತೆರೆಬಿದ್ದು ರಾಜ್ಯದ ಜನರಲ್ಲಿ ನಿರಾಳಭಾವ ಮೂಡಿರಬಹುದು. ಆದರೆ ಇದು ನೆಮ್ಮದಿಯಿಂದ ಮೈಮರೆಯುವ ಕಾಲ ಅಲ್ಲ. ಜಾಗೃತ ಮತದಾರನೇ ಪ್ರಜಾಪ್ರಭುತ್ವದ ಶಕ್ತಿ. ಮತದಾರನನ್ನು ದುರ್ಬಲ ಮತ್ತು ಅಸಹಾಯಕನಾಗಿ ಮಾಡುವಂತಹ ಅನೇಕ ಘಟನೆಗಳು ಕಳೆದ ಐದುವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ನಡೆದಿದೆ. ಪಕ್ಷಾಂತರ ಕಾಯ್ದೆಯನ್ನೇ ವಿಫಲಗೊಳಿಸಿದ `ಆಪರೇಷನ್ ಕಮಲ' ಎಂಬ ಅನೈತಿಕ ರಾಜಕಾರಣ ಪ್ರಜಾಪ್ರಭುತ್ವ ವ್ಯವಸ್ಥೆಯ ಯಶಸ್ಸನ್ನೇ ಪ್ರಶ್ನಿಸುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗೆ ಬರಬೇಕಾಗಿದ್ದ ವಿರೋಧಪಕ್ಷಗಳು ಕೂಡಾ ಕರ್ತವ್ಯನಿರ್ವಹಣೆಯಲ್ಲಿ ಸೋತಿವೆ ಎಂಬ ಭಾವನೆ ಪ್ರಜ್ಞಾವಂತರಲ್ಲಿ ಮೂಡಿದೆ. ಇವೆಲ್ಲಕ್ಕೂ ಉತ್ತರ ನೀಡುವ ಅವಕಾಶ ಮತದಾರನ ಮನೆ ಹೊಸ್ತಿಲಲ್ಲಿ ಬಂದು ನಿಂತಿದೆ. ಜಾತಿ, ಧರ್ಮ, ಪ್ರದೇಶದ ದೌರ್ಬಲ್ಯಕ್ಕೆ ಬೀಳದೆ, ಆಮಿಷಗಳಿಗೆ ಬಲಿಯಾಗದೆ, ಬೆದರಿಕೆಗಳಿಗೆ ಜಗ್ಗದೆ, ಅಕ್ರಮಗಳಲ್ಲಿ ಭಾಗಿಯಾಗದೆ ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸವಾಲು ಪ್ರತಿಯೊಬ್ಬ ಮತದಾರನ ಮುಂದೆ ಇದೆ. ಪ್ರಜಾಪ್ರಭುತ್ವದಲ್ಲಿ ಮತದಾರರು ನಿಜವಾದ ಪ್ರಭುಗಳಾಗುವುದು ಚುನಾವಣೆಯ ಕಾಲದಲ್ಲಿ ಮಾತ್ರ. ಈ ಅವಕಾಶವನ್ನು ಕಳೆದುಕೊಂಡು ನಂತರ ಜನಪ್ರತಿನಿಧಿಗಳನ್ನು ದೂರುತ್ತಾ ಕೂರುವುದು ಮೂರ್ಖತನ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ `ಮತದಾರರು ಅವರ ಅರ್ಹತೆಗೆ ತಕ್ಕ ಸರ್ಕಾರವನ್ನು ಪಡೆಯುತ್ತಾರೆ' ಎನ್ನುವುದು ನೆನಪಿರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.