ಅಧಿಕಾರದ ನಿರ್ಲಜ್ಜ ದುರ್ಬಳಕೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಕೇಂದ್ರ ತನಿಖಾದಳ (ಸಿಬಿಐ)ವನ್ನು ರಾಜಕೀಯ ದ್ವೇಷಸಾಧನೆಗೆ ದುರ್ಬಳಕೆ ಮಾಡುತ್ತಾ ಬಂದಿರುವ ಉದಾಹರಣೆಗಳು ಬಹಳಷ್ಟಿವೆ.ಇದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮೊದಲನೆ ಸ್ಥಾನ. ಈ ಕಾರಣದಿಂದಾಗಿಯೇ ಈಗಿನ ಯುಪಿಎ ಸರ್ಕಾರ ಅಧಿಕಾರದಲ್ಲಿರುವುದೇ ಸಿಬಿಐ ಬಲದಿಂದ ಎನ್ನುವ ವಿರೋಧಪಕ್ಷಗಳ ಆರೋಪವನ್ನು ತಳ್ಳಿಹಾಕಲಾಗುವುದಿಲ್ಲ. ಇದನ್ನು ಸಾಬೀತುಪಡಿಸುವಂತೆ ಗುರುವಾರ ಬೆಳಿಗ್ಗೆ ಚೆನ್ನೈನಲ್ಲಿ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಸ್ಟಾಲಿನ್ ಮಗ ಸುಂಕ ಪಾವತಿ ಮಾಡದೆ ಕಾರುಗಳನ್ನು ಆಮದುಮಾಡಿಕೊಂಡಿರುವುದಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ನೀಡಿರುವ ದೂರಿನ ಮೇರೆಗೆ ಸಿಬಿಐ ಕ್ರಮ ಕೈಗೊಂಡಿದೆ. ಬೇರೆ ಸಂದರ್ಭಗಳಲ್ಲಿ ಸಾಮಾನ್ಯವೆಂದು ಹೇಳಬಹುದಾದ ಈ ದಾಳಿ ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಮೈತ್ರಿಭಂಗದಿಂದಾಗಿ ವಿವಾದಕ್ಕೆ ಸಿಲುಕಿದೆ. ಲೋಕಸಭೆಯಲ್ಲಿ ಹದಿನೆಂಟು ಸದಸ್ಯಬಲದ ಡಿಎಂಕೆ ಬೆಂಬಲ ವಾಪಸು ಪಡೆದ ನಂತರ ಯುಪಿಐ ಭವಿಷ್ಯ ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿದೆ. ಆ ಪಕ್ಷವನ್ನು ಒಲಿಸಿಕೊಳ್ಳಲು ಸಾಮ, ದಾನ, ಭೇದದ ಮಾರ್ಗಗಳಲ್ಲಿ ಪ್ರಯತ್ನ ನಡೆಸಿ ವಿಫಲವಾದ ಕಾಂಗ್ರೆಸ್ ಪಕ್ಷ ಸಿಬಿಐ ಅಸ್ತ್ರ ಬಳಸಿಕೊಂಡು ದಂಡ ಪ್ರಯೋಗ ಮಾಡಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಆಶ್ಚರ್ಯವೆಂಬಂತೆ ಪ್ರಧಾನಿ ಮನಮೋಹನ್‌ಸಿಂಗ್ ಅವರಿಂದ ಹಿಡಿದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ವರೆಗೆ ಎಲ್ಲರೂ ಸಿಬಿಐ ದಾಳಿಯನ್ನು ಖಂಡಿಸಿದ್ದಾರೆ. ಈ ಅಮಾಯಕತನದ ಹಿಂದಿನ ಪ್ರಾಮಾಣಿಕತೆ ಮಾತ್ರ ಪ್ರಶ್ನಾರ್ಹ. ಯುಪಿಎ ಸರ್ಕಾರವನ್ನು ಮುಜುಗರಕ್ಕೀಡುಮಾಡಿರುವ ಈ ದುಸ್ಸಾಹಸದ ಹೊಣೆಯನ್ನು ಕೇಂದ್ರ ಸಿಬ್ಬಂದಿ ಖಾತೆ ಸಚಿವ ನಾರಾಯಣಸ್ವಾಮಿ ಅವರ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದ್ದರೂ ಸಚಿವರ ಮಟ್ಟದಲ್ಲಿಯೇ ಇಂತಹ ಮಹತ್ವದ ನಿರ್ಧಾರ ಕೈಗೊಂಡಿರುವ ಬಗ್ಗೆ ಅನುಮಾನಗಳಿವೆ. ಉಳಿದೆಲ್ಲರಿಗಿಂತಲೂ ಹೆಚ್ಚಾಗಿ ದಾಳಿಯನ್ನು ಖಂಡಿಸಿರುವ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ನಡವಳಿಕೆ ಹೆಚ್ಚು ಸಂಶಯಕ್ಕೆ ಕಾರಣವಾಗಿದೆ. ಸಿಬಿಐಗೆ ದೂರು ನೀಡಿರುವ ಡಿಆರ್‌ಐ ಚಿದಂಬರಂ ಹೊಂದಿರುವ ಹಣಕಾಸು ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ. ತನ್ನ ಖಾತೆಗೆ ಸೇರಿದ ಇಲಾಖೆಯೊಂದರ ನಿರ್ಧಾರ, ದಕ್ಷತೆಗೆ ಹೆಸರಾಗಿರುವ ಚಿದಂಬರಂ ಅವರ ಅರಿವಿಗೆ ಬಂದಿರಲಿಲ್ಲ ಎನ್ನುವುದನ್ನು ನಂಬುವುದು ಕಷ್ಟ. ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಲೋಕಸಭೆಗೆ ಆರಿಸಿಬಂದಿರುವ ಚಿದಂಬರಂಗೆ ರಾಜಕೀಯ ಸೂಕ್ಷ್ಮದ ಜ್ಞಾನ ಇಲ್ಲ ಎನ್ನುವುದನ್ನೂ ಹೇಳಲಾಗದು. ಈ ಎಲ್ಲ ವಿವಾದಗಳ ನಡುವೆ ಸಿಬಿಐ ದಾಳಿಗೆ ಆದೇಶ ನೀಡಿದ ಮತ್ತು ಅದನ್ನು ಹಿಂದೆಗೆದುಕೊಂಡ ವ್ಯಕ್ತಿ ಯಾರು ಎನ್ನುವುದು ನಿಗೂಢವಾಗಿಯೇ ಉಳಿದಿದೆ. ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಈಗಿನ ಸಂಘರ್ಷದ ಭಾಗವಾಗಿಯೇ ಈ ದಾಳಿ ನಡೆದಿರಬಹುದು ಮತ್ತು ಇದು ಬಾಹ್ಯಬೆಂಬಲ ನೀಡುತ್ತಿರುವ ಎಸ್‌ಪಿ-ಬಿಎಸ್‌ಪಿಗಳಿಗೂ ನೀಡಿರುವ ಎಚ್ಚರಿಕೆಯಾಗಿರಬಹುದು ಎಂದು ನಂಬಲು ಕಾರಣಗಳಿವೆ. ಸಿಬಿಐಗೆ ಸಾಂವಿಧಾನಿಕ ಸ್ಥಾನಮಾನದ ಮೂಲಕ ಸ್ವಾಯತ್ತತೆಯನ್ನು ನೀಡಿ ರಾಜಕೀಯ ಒಡೆಯರ ದಾಸ್ಯದಿಂದ ಬಿಡುಗಡೆಗೊಳಿಸುವುದೊಂದೇ ಈ ದುರ್ಬಳಕೆ ತಡೆಗೆ ಇರುವ ಏಕೈಕ ಪರಿಹಾರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.