ಕೊನೆಗೂ ಜಾರಿಯಾದ ಶಿಕ್ಷೆ ಮುಂಬೈ ಸರಣಿ ಬಾಂಬ್ ಸ್ಫೋಟ ನಡೆದ ಇಪ್ಪತ್ತು ವರ್ಷಗಳ ನಂತರ ಕೊನೆಗೂ ತೀರ್ಪು ಹೊರಬಿದ್ದಿದೆ. 1993ರ ಮಾರ್ಚ್ 12 ರಂದು ನಡೆದ ಸರಣಿ ಸ್ಫೋಟಗಳಲ್ಲಿ 257 ಮಂದಿ ಸತ್ತಿದ್ದರು. 713 ಮಂದಿ ಗಾಯಗೊಂಡಿದ್ದರು. ಈ ದುಷ್ಕೃತ್ಯದ ಸಂಚು ರೂಪಿಸಿದ್ದ ಯಾಕೂಬ್ ಅಬ್ದುಲ್ ರಜಾಕ್ ಮೆಮನ್‌ಗೆ ಗಲ್ಲು ಶಿಕ್ಷೆ ಕಾಯಂ ಹಾಗೂ ಇತರ 33 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಕಾನೂನು ಬಾಹಿರವಾಗಿ ಶಸ್ತ್ರಾಸ್ತ್ರಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದಕ್ಕಾಗಿ ಬಾಲಿವುಡ್ ನಟ ಸಂಜಯ್ ದತ್ ಭಾರೀ ಬೆಲೆಯನ್ನೇ ತೆತ್ತಿದ್ದಾರೆ. ಭಯೋತ್ಪಾದಕರಲ್ಲ ಎನ್ನುವ ಆಪಾದನೆಯಿಂದ 2007ರಲ್ಲೇ ಮುಕ್ತರಾಗಿದ್ದ ಸಂಜಯ್ ದತ್, ದೇಶದ್ರೋಹದ ಆರೋಪದಿಂದ ಪಾರಾಗಿದ್ದರು. ಆದರೆ ಅಕ್ರಮವಾಗಿ ಏ.ಕೆ.56 ರೈಫಲ್ ಹಾಗೂ ಇತರ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಿಂದ ಅವರು ತಪ್ಪಿಸಿಕೊಳ್ಳಲು ಆಗಲೇ ಇಲ್ಲ. ಸಿನಿಮಾರಂಗದಲ್ಲಿ ಗಳಿಸಿದ ಜನಪ್ರಿಯತೆ, ಶಿಕ್ಷೆ ಪ್ರಮಾಣವನ್ನು ತಗ್ಗಿಸಬಹುದೇನೋ ಎನ್ನುವ ಸಂಜಯ್‌ದತ್ ಅಭಿಮಾನಿಗಳ ನಿರೀಕ್ಷೆ ಕೂಡ ಹುಸಿಯಾಗಿದೆ. ನ್ಯಾಯಾಲಯ ಸಂಜಯ್ ದತ್ ಅವರ ಜನಪ್ರಿಯತೆ ಮತ್ತು ಸಿನಿಮಾರಂಗಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಬದಿಗಿಟ್ಟು ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆಯ ಆರೋಪಿಯಾಗಿ ಅವರನ್ನು ಪರಿಗಣಿಸಿದೆ. ಅವರಿಗೆ ಐದು ವರ್ಷಗಳ ಕಾಲದ ಸೆರೆಮನೆವಾಸ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ಈ ನಿಲುವು ಸ್ವಾಗತಾರ್ಹ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಮುಂಬೈ ಚಿತ್ರರಂಗ ಭೂಗತ ಭೂಪತಿಗಳ ಹಿಡಿತದಲ್ಲಿರುವುದು ಹೊಸ ವಿಷಯವಲ್ಲ. ಜನಪ್ರಿಯ ನಟರನ್ನು ತಮ್ಮ ಅಧೀನದಲ್ಲಿಟ್ಟುಕೊಂಡು ಭೂಗತ ಲೋಕದ ಪಾತಕಿಗಳು ತಮ್ಮ ಸಂಚು ರೂಪಿಸಲು ಸದಾ ಯತ್ನಿಸುತ್ತಾರೆ. ಅಂತಹ ವಿಷವ್ಯೆಹದಲ್ಲಿ ಸಂಜಯ್ ದತ್ ಸಿಲುಕಿಕೊಂಡದ್ದು ದುರದೃಷ್ಟಕರ. ಸಿನಿಮಾ ನಟನಾದವನು ಏನು ಬೇಕಾದರೂ ಮಾಡಬಹುದು ಎನ್ನುವ ಅಹಂಗೆ ಇದೊಂದು ಉಳಿಪೆಟ್ಟು. ಮುಂಬೈ ಸರಣಿ ಬಾಂಬ್ ಸ್ಫೋಟದ ಮೂಲಕ ಇಡೀ ದೇಶದಲ್ಲಿ ತಲ್ಲಣ ಮೂಡಿಸುವ ಸಂಚು ರೂಪುಗೊಂಡಿದ್ದು ಪಾಕಿಸ್ತಾನದಲ್ಲಿ. ಉಗ್ರರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿ ನೀಡಿದ್ದು, ಆರ್‌ಡಿಎಕ್ಸ್ ಬಳಕೆ, ಸ್ವಯಂಚಾಲಿತ ಏ.ಕೆ.56 ರೈಫಲ್ ಬಳಕೆ , ಗ್ರೆನೇಡ್‌ಗಳ ತಯಾರಿ ಎಲ್ಲವೂ ಪಾಕಿಸ್ತಾನದ ನೆಲದಲ್ಲಿ ನಡೆದವು ಎನ್ನುವ ಪುರಾವೆಗಳಿವೆ. ಪಾಕ್ ನೆಲದಲ್ಲಿ ತಯಾರಾದ ಉಗ್ರರು ಭಾರತದೊಳಕ್ಕೆ ನುಸುಳಿ ಕಾರ್ಯಾಚರಣೆ ನಡೆಸಲು ವೇದಿಕೆ ಸಿದ್ಧಪಡಿಸಿದ್ದು ದಾವೂದ್ ಇಬ್ರಾಹಿಂ ಮತ್ತು ತಂಡ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ವಿಷಯದಲ್ಲಿ ಸುಪ್ರೀಂಕೋರ್ಟ್ ಪಾಕಿಸ್ತಾನದ ಕಿವಿ ಹಿಂಡಿದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿದ್ದು, ನೆರೆಹೊರೆ ಬಾಂಧವ್ಯ ವೃದ್ಧಿಗೊಳಿಸಬೇಕಾದ ಪಾಕಿಸ್ತಾನವೇ ಉಗ್ರಗಾಮಿ ಚಟುವಟಿಕೆಯನ್ನು ನಿಯಂತ್ರಿಸದಿರುವುದನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು ಸಕಾಲಿಕ. ಈಗ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಈ ಭಯೋತ್ಪಾದನೆ ಕೃತ್ಯದ ಮುಖ್ಯ ಸಂಚುಗಾರ ದಾವೂದ್ ಇಬ್ರಾಹಿಂಗೆ ಶಿಕ್ಷೆ ಆಗದ ಹೊರತು ಈ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ಸಿಗದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.