ಮಾನವೀಯತೆ ಮರೆಯಾಗದಿರಲಿ ಸುಸಜ್ಜಿತ ಎಂದು ಹೇಳಿಕೊಳ್ಳುವ ಎರಡು ಖಾಸಗಿ ಆಸ್ಪತ್ರೆ ಹಾಗೂ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಸತ್ತ ಘಟನೆಗಳಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಎದುರಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಮುಂದುವರೆದ ನಗರ ಎಂದು ಖ್ಯಾತಿಯಾಗಿರುವ ಬೆಂಗಳೂರಿಗೆ ಈ ಪ್ರಕರಣಗಳು ತೀವ್ರ ಮುಜುಗರ ತರುವ ಸಂಗತಿ. ಹಲ್ಲುನೋವಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ಸಣ್ಣ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಅರಿವಳಿಕೆ ಔಷಧಿ ನೀಡಿದ ಪರಿಣಾಮ ಮಗು ಅಸ್ವಸ್ಥಗೊಂಡು ಕಣ್ಮುಚ್ಚಿತು. ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ , ಹದಿನಾರು ವರ್ಷ ವಯಸ್ಸಿನ ಬಾಲಕ ಅಭಿಷೇಕ್‌ನ ಶಸ್ತ್ರಚಿಕಿತ್ಸೆಗೆ ಮುಂಚೆ ನೀಡಿದ ಅತಿಯಾದ ಅರಿವಳಿಕೆ ದುರಂತಕ್ಕೆ ಕಾರಣವಾಯಿತು ಎಂಬಂತಹ ಆರೋಪ ಮಾಡಲಾಗಿದೆ. ಬಾಲಕ ಎಚ್ಚರಗೊಳ್ಳದ ಸ್ಥಿತಿ ತಲುಪಿದಾಗ, ವೈದ್ಯರ ಶಿಫಾರಸಿನಂತೆ ಮತ್ತೊಂದು ಆಸ್ಪತ್ರೆಗೆ ಬಾಲಕನನ್ನು ಕೊಂಡೊಯ್ಯಲಾಯಿತು. ಕೊನೆಗೂ ಬಾಲಕನನ್ನು ಉಳಿಸಿಕೊಳ್ಳಲಾಗದ ಆತನ ತಂದೆ ಅರಿವಳಿಕೆ ತಜ್ಞರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇಷ್ಟಲ್ಲದೆ, ಸತ್ತ ಬಾಲಕನ ಅಂಗಾಂಗಗಳನ್ನು ದಾನ ಮಾಡುವಂತೆ ಆಸ್ಪತ್ರೆಯ ಸಿಬ್ಬಂದಿ ಬಾಲಕನ ಪೋಷಕರ ಬಳಿ ದುಂಬಾಲು ಬಿದ್ದದ್ದು ಕ್ರೂರ ನಡವಳಿಕೆ. `ಈ ಒತ್ತಾಯದಲ್ಲಿ ಒಳ್ಳೆಯ ಉದ್ದೇಶಕ್ಕಿಂತ ವ್ಯಾಪಾರದ ಉದ್ದೇಶವೇ ಹೆಚ್ಚಾಗಿತ್ತು' ಎಂದು ಬಾಲಕನ ಪೋಷಕರು ಆರೋಪಿಸಿರುವುದು ವೈದ್ಯಕೀಯ ಕ್ಷೇತ್ರದ ಮತಿಹೀನ ನಡವಳಿಕೆಯನ್ನೂ, ಧನದಾಹಿ ಪ್ರವೃತ್ತಿಯನ್ನೂ ಬಿಂಬಿಸುತ್ತದೆ. ನಗರಗಳಲ್ಲಿ ನಾಯಿಕೊಡೆಗಳಂತೆ ಬೆಳೆದಿರುವ ಸುಸಜ್ಜಿತ ಖಾಸಗಿ ಆಸ್ಪತ್ರೆಗಳು ಈಗ ಜನಸೇವೆಗಿಂತ ಹೆಚ್ಚಾಗಿ ವ್ಯಾಪಾರೀ ಕೇಂದ್ರಗಳಾಗಿವೆ. ವೈದ್ಯಕೀಯ ನೀತಿ ಸಂಹಿತೆಗಳನ್ನೆಲ್ಲಾ ದೂರತಳ್ಳಿ, ಜಾಹೀರಾತುಗಳ ಮೂಲಕ ರೋಗಿಗಳನ್ನು ಸೆಳೆಯುವ ತಂತ್ರಗಳನ್ನು ಅಳವಡಿಸಿಕೊಂಡಿರುವ ಈ ಖಾಸಗಿ ಆಸ್ಪತ್ರೆಗಳು ಐಷಾರಾಮಿ ಸೇವೆ ಕಲ್ಪಿಸುವ ಭರದಲ್ಲಿ ರೋಗಿಗಳಿಂದ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತವೆ. ಆಧುನಿಕ ಜೀವನ ಶೈಲಿಗಳಿಗೆ ತಕ್ಕಂತೆ ಅಂದ ಚೆಂದ ರೂಪಿಸುವ ಚಿಕಿತ್ಸೆಗಳನ್ನೂ ಈ ಖಾಸಗಿ ಆಸ್ಪತ್ರೆಗಳು ಅಳವಡಿಸಿಕೊಂಡಿರುವುದು ವಾಣಿಜ್ಯ ದೃಷ್ಟಿಯಿಂದಲೇ. ಬೊಜ್ಜು ಕರಗಿಸುವುದು, ತೂಕ ಇಳಿಸುವುದು ಮೊದಲಾದ ಚಿಕಿತ್ಸೆಗಳನ್ನೂ ಅವೈಜ್ಞಾನಿಕವಾಗಿ ಅಳವಡಿಸಿಕೊಂಡಿರುವ ಉದಾಹರಣೆ ಹೇರಳವಾಗಿವೆ. ಅತಿಯಾದ ಅರಿವಳಿಕೆಗೆ ಬಲಿಯಾದ ಬಾಲಕನಿಗೆ ಶಸ್ತ್ರಚಿಕಿತ್ಸೆ ಅಗತ್ಯವಿತ್ತೇ ಎನ್ನುವುದನ್ನು ಆಸ್ಪತ್ರೆಯಲ್ಲಿ ವೈದ್ಯರು ಕೂಲಕಷವಾಗಿ ಪರಿಶೀಲಿಸ್ದ್ಲಿದರೆ ಎಂಬುದು ಪ್ರಶ್ನೆ. ಅಂಗಾಂಗದ ಅತಿ ಬೆಳವಣಿಗೆಯಿಂದ ಸಹಪಾಠಿಗಳ ಛೇಡಿಸುವಿಕೆಗೆ ಒಳಗಾದ ಅಭಿಷೇಕನಿಗೆ ಕೀಳರಿಮೆ ಹೋಗಲಾಡಿಸುವಂತಹ ಸಾಂತ್ವನ, ಆಪ್ತ ಸಲಹೆಯೂ ಅಗತ್ಯವಾಗಿತ್ತು. ದೈಹಿಕ ಗುಣಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಅದು ಶಾಲಾ ಹಂತದಲ್ಲಿ ಮಕ್ಕಳ ಛೇಡಿಸುವಿಕೆಗೆ ಗುರಿಯಾಗುವುದೂ ತಪ್ಪಬೇಕು. ಶಿಕ್ಷಕರು ಮಕ್ಕಳಿಗೆ ಈ ಹಿನ್ನೆಲೆಯಲ್ಲಿ ತಿಳಿವಳಿಕೆ ಪಾಠ ಹೇಳುವುದೂ ಇಂದಿನ ಅಗತ್ಯ. ವೈದ್ಯಕೀಯ ನಿರ್ಲಕ್ಷ್ಯದಿಂದ ರೋಗಿಗಳು ಸಾಯುತ್ತಿರುವುದು ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ದೇಶವ್ಯಾಪಿಯಾಗಿ ಈ ಸಮಸ್ಯೆ ಇದೆ. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಆಸ್ಪತ್ರೆಗಳು ಸಂಬಂಧಿಕರಿಗೆ ಕಾಯಿಲೆಯ ಸ್ವರೂಪವನ್ನೂ, ಔಷಧಗಳ ವಿವರಗಳನ್ನು ಸಮಗ್ರವಾಗಿ ತಿಳಿಸಿರಬೇಕು ಎಂದು ಸುಪ್ರೀಂೀರ್ಟ್ ಕೂಡ ಹೇಳಿದೆ. ಆದರೆ ಆಸ್ಪತ್ರೆಗಳಲ್ಲಿ ಮಾನವೀಯತೆ ಮರೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.