ವಾಯು ಮಾಲಿನ್ಯ ನಿಯಂತ್ರಿಸಿ ಉದ್ಯಾನ ನಗರ, ನಿವೃತ್ತರ ಸ್ವರ್ಗ, ಏರ್ ಕಂಡೀಷನ್ಡ್ ನಗರ ಎಂದೆಲ್ಲಾ ಬೆಂಗಳೂರನ್ನು ಈ ಹಿಂದೆ ಕೊಂಡಾಡಲಾಗುತ್ತಿತ್ತು. ಕಾಲ ಚಕ್ರ ಉರುಳಿದಂತೆ ವಾಯು ಮಾಲಿನ್ಯ ಮಿತಿ ಮೀರಿರುವ ನಗರವಾಗಿ ಬೆಂಗಳೂರು ಪರಿವರ್ತಿತವಾಗಿರುವುದು ವಿಪರ್ಯಾಸ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ವರದಿಯ ಪ್ರಕಾರ, ದಕ್ಷಿಣ ಭಾರತದ ಶೇ 47 ನಗರಗಳಲ್ಲಿನ ಜನರು ಕಲುಷಿತ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ 14 ನಗರಗಳು ಅತಿ ಹೆಚ್ಚಿನ ವಾಯುಮಾಲಿನ್ಯ ಹೊಂದಿವೆ. ಅದರಲ್ಲೂ ಬೆಂಗಳೂರು, ಮೈಸೂರು ಸೇರಿದಂತೆ 10 ನಗರಗಳಲ್ಲಿನ ಗಾಳಿಯಲ್ಲಿ ನೈಟ್ರೊಜನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿದೆ ಎಂಬುದು ಆತಂಕಕಾರಿ. ಹಾಗೆಯೇ ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಬೆಂಜೀನ್ ಅನಿಲದ ಪ್ರಮಾಣ ಹೆಚ್ಚಾಗಿದೆ ಎಂಬಂತಹ ಮಾಹಿತಿಯನ್ನು ಹಗುರವಾಗಿ ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ. ಈ ವಾಯುಮಾಲಿನ್ಯಕ್ಕೆ ಮುಖ್ಯ ಕೊಡುಗೆ ಸಲ್ಲಿಸುತ್ತಿರುವುದು ಬೆಂಗಳೂರಿನ್ಲ್ಲಲಂತೂ ವಾಹನಗಳ ದಟ್ಟಣೆ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕು. ವಾಹನಗಳು ಹೊರಸೂಸುವ ಮಾಲಿನ್ಯ, ಗಡಚಿಕ್ಕುವ ಶಬ್ದ, ಸ್ವಚ್ಛಗೊಳಿಸದ ಕಸದ ರಾಶಿ, ಬೆಂಗಳೂರಿನ ವಾಯು ಗುಣಮಟ್ಟವನ್ನು ಇನ್ನಿಲ್ಲದಂತೆ ಹಾಳುಮಾಡಿರುವುದು ಸ್ವಯಂವೇದ್ಯ. ಅನಿಯಂತ್ರಿತ ಕಟ್ಟಡ ನಿರ್ಮಾಣ ಚಟುವಟಿಕೆ ಹಾಗೂ ಮೂಲ ಸೌಕರ್ಯಗಳ ನಿರ್ಮಾಣದ ನೆಪದಲ್ಲಿ ಮರಗಳ ಮಾರಣಹೋಮ ಕೂಡ ಬೆಂಗಳೂರಿನ ಮಾಲಿನ್ಯದ ಪ್ರಮಾಣವನ್ನು ಹೆಚ್ಚಿಸಿವೆ. ಪ್ರತಿ ವರ್ಷ ರಾಷ್ಟ್ರದಲ್ಲಿ 6,20,000 ಜನರು ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸಾಯುತ್ತಿದ್ದಾರೆ ಎಂಬ ಅಂಕಿಅಂಶ ನಮಗೆ ಎಚ್ಚರಿಕೆಯ ಗಂಟೆಯಾಗಬೇಕು. ತಂಬಾಕು ಹಾಗೂ ಅತಿಯಾದ ಮದ್ಯ ಸೇವನೆ ಆರೋಗ್ಯಕ್ಕೆ ಸಮಸ್ಯೆ ಎಂದಾದಲ್ಲಿ ಅವುಗಳ ಸೇವನೆ ನಿಯಂತ್ರಣಕ್ಕೆ ಪ್ರಯತ್ನಿಸಬಹುದು. ಆದರೆ ಅಶುದ್ಧ ಗಾಳಿ ಸೇವನೆ ನಿಯಂತ್ರಿಸುವುದಾದರೂ ಹೇಗೆ? ಶುದ್ಧ ಕುಡಿಯುವ ನೀರನ್ನು ಖರೀದಿ ಮಾಡಬಹುದು. ಆದರೆ ಶುದ್ಧಗಾಳಿ ಹೊಂದುವುದು ಹೇಗೆ? ತಮ್ಮದಲ್ಲದ ತಪ್ಪಿಗೆ ಜನರು ಬಲಿಪಶುಗಳಾಗಬೇಕಾದ ಈ ಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕಿದೆ. ವಾಯುಮಾಲಿನ್ಯದಿಂದಾಗಿ ಬೆಂಗಳೂರಿನಲ್ಲಿ ವಿಶೇಷವಾಗಿ ಚಿಕ್ಕಮಕ್ಕಳು ಹೆಚ್ಚಿನ ಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅಸ್ತಮಾ, ಕೆಮ್ಮು, ಶ್ವಾಸಕೋಶದ ಕ್ಯಾನ್ಸರ್, ಮಾನಸಿಕ ಸಮಸ್ಯೆ ಸೇರಿದಂತೆ ಅನೇಕ ವಿಧದ ರೋಗಗಳು ಮಕ್ಕಳಲ್ಲಿ ಹೆಚ್ಚುತ್ತಿವೆ ಎಂಬ ಬಗ್ಗೆ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಹೀಗಾಗಿ, ಸಾರ್ವಜನಿಕ ಆರೋಗ್ಯ ರಕ್ಷಣೆಗೆ ತೀವ್ರ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು ನಮ್ಮೆದುರಿಗಿದೆ. ವಾಹನಗಳಲ್ಲಿ ಸಿಎನ್‌ಜಿ ಇಂಧನ ಬಳಕೆಯನ್ನು ವ್ಯಾಪಕಗೊಳಿಸುವುದು ನಮ್ಮೆದುರಿಗಿರುವ ಪರಿಹಾರೋಪಾಯಗಳಲ್ಲಿ ಬಹು ಮುಖ್ಯವಾದದ್ದು. ಹಾಗೆಯೇ. ವಾಹನಗಳ ತಯಾರಿಕೆಯ್ಲ್ಲಲೇ ಉತ್ತಮ ತಂತ್ರಜ್ಞಾನ ಬಳಕೆಯ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬಹುದು. ಖಾಸಗಿ ವಾಹನಗಳಿಗಿಂತ ಸಾರ್ವಜನಿಕ ಸಾರಿಗೆಗೆ ಉತ್ತೇಜನ ನೀಡುವಂತಹ ನೀತಿಯನ್ನು ರೂಪಿಸಿ ಜಾರಿಗೊಳಿಸುವುದೂ ಮುಖ್ಯ. ಸಾರ್ವಜನಿಕ ಆರೋಗ್ಯ ಹಾಗೂ ವಾಯು ಮಾಲಿನ್ಯದ ಮಧ್ಯೆ ಇರುವ ಸಂಬಂಧದ ಬಗ್ಗೆ ಇನ್ನಾದರೂ ಸಾರ್ವಜನಿಕ ಜಾಗೃತಿ ಹೆಚ್ಚಿಸುವತ್ತಲೂ ನಮ್ಮ ಕಣ್ತೆರೆಯಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.