ಚರಿತ್ರಾರ್ಹ ಗೆಲುವು ಕ್ರಿಕೆಟ್ ಜಗತ್ತಿನ ಬಲಾಢ್ಯ ತಂಡವೆಂದೇ ಪರಿಗಣಿಸಲಾಗಿದ್ದ ಆಸ್ಟ್ರೇಲಿಯ ಇದೀಗ ಭಾರತದ ಎದುರು ತಲೆ ಬಾಗಿದೆ. ಸರಣಿಯ ನಾಲ್ಕೂ ಪಂದ್ಯಗಳಲ್ಲಿ ಗೆದ್ದಿರುವುದು ಈ ನೆಲದ ಕ್ರಿಕೆಟ್ ಪ್ರಿಯರಿಗೆಲ್ಲಾ ಸಂಭ್ರಮ ತಂದಿದೆ. ಭಾರತ ಕ್ರಿಕೆಟ್ ಚರಿತ್ರೆಯಲ್ಲಿ ಇಂತಹದ್ದೊಂದು ವಿಜಯ ಸಿಕ್ಕಿರುವುದು ಇದೇ ಮೊದಲು. ಇದರ ಜತೆಗೆ ಹೊಸ ಪ್ರತಿಭಾವಂತರ ಪ್ರವಾಹ ಭವಿಷ್ಯದಲ್ಲಿ ಭಾರತದ ಕ್ರಿಕೆಟ್ ಇನ್ನಷ್ಟೂ ಶಕ್ತಿವಂತ ಆಗಲಿರುವುದರ ಮುನ್ಸೂಚನೆಯಾಗಿದೆ. ಈ ಸಲ ಸ್ಪಿನ್ ಮಾಂತ್ರಿಕರ ಕೈಚಳಕವೇ ಪ್ರಧಾನವಾಗಿದ್ದೂ ನೆನಪಲ್ಲಿ ಉಳಿಯುವಂತಹ ಸಂಗತಿ. ಭಾರತ ಸ್ವತಂತ್ರಗೊಂಡ ವರ್ಷದಿಂದ ಈವರೆಗೆ ಆಸ್ಟ್ರೇಲಿಯಾದ ಎದುರು 23 ಸರಣಿಗಳ 86 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 38ರಲ್ಲಿ ಆಸ್ಟ್ರೇಲಿಯವೇ ಗೆದ್ದರೆ, ಭಾರತ ಇದೀಗ ಮುಗಿದ ನಾಲ್ಕು ಪಂದ್ಯಗಳೂ ಸೇರಿದಂತೆ 24ರಲ್ಲಿ ಮಾತ್ರ ಗೆದ್ದಿದೆ. ಹೀಗೆ ಲೆಕ್ಕ ಹಾಕಿದಾಗ ಭಾರತದ ಈ ಗೆಲುವು ಅದೆಷ್ಟು ಮಹತ್ವದ್ದು ಎಂದೆನಿಸುವುದು ಸಹಜ. ಪ್ರಸಕ್ತ ಚೇತೇಶ್ವರ ಪೂಜಾರ, ಶಿಖರ್ ಧವನ್, ಮುರಳಿ ವಿಜಯ್, ಅಶ್ವಿನ್, ಜಡೇಜಾ ಅವರ ಅಪ್ರತಿಮ ಸಾಧನೆ ಈ ದೇಶದ ಕ್ರಿಕೆಟ್‌ನಲ್ಲಿ ಹೊಸ ಆತ್ಮವಿಶ್ವಾಸ, ಸ್ಫೂರ್ತಿ ತುಂಬಿದೆ. ಈ ನಾಡು ಅದ್ಭುತ ಆಟಗಾರರ ಅಕ್ಷಯ ಪಾತ್ರೆ ಎಂಬುದು ಸಾಬೀತಾಗಿದೆ. ಇಂಗ್ಲೆಂಡ್ ಎದುರು ಟೆಸ್ಟ್ ಸರಣಿ ಸೋತಾಗ ಟೀಕಾಸ್ತ್ರಗಳ ಮಳೆಗರೆದವರಿಗೆ ಇದೀಗ ದೋನಿ ಬಳಗ ಉತ್ತರ ನೀಡಿದೆ. ಆಗ ದೋನಿಯ ನಾಯಕತ್ವದ ಬಗ್ಗೆಯೇ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ದೋನಿ ಸ್ಥಾನ ಮತ್ತಷ್ಟು ಭದ್ರವಾದಂತಾಯಿತು ಎನ್ನುವುದು ನಿಜ. 42 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಎದುರು ಆಸ್ಟ್ರೇಲಿಯಾ ಹೀಗೆಯೇ ಸೋತಿತ್ತು. ಇದೀಗ ಮತ್ತೆ ಅಂತಹದ್ದೊಂದು ಮುಖಭಂಗ ಅನುಭವಿಸಿದೆ. ಆದರೆ ಕಳೆದ ಸಲ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಭಾರತವೂ ಹೀಗೆಯೇ ಸೋತಿತ್ತು. ಈ ಸಲ ಆಸ್ಟ್ರೇಲಿಯಾದ ಕೆಲವು ಪ್ರತಿಕೂಲ ಅಂಶಗಳೂ ಭಾರತಕ್ಕೆ ವರವಾದವು. ಆ ತಂಡದಲ್ಲಿ ಪರಿಣಾಮಕಾರಿ ಸ್ಪಿನ್ನರ್‌ಗಳಿರಲಿಲ್ಲ. ನೇಥನ್ ಲಿಯಾನ್ ಒಬ್ಬರ ಮೇಲೆಯೇ ಹೊರೆ ಬಿದ್ದಿತ್ತು. ಜತೆಗೆ ತಂಡದೊಳಗಿನ ಒಳಜಗಳವನ್ನೂ ಲಘುವಾಗಿ ಪರಿಗಣಿಸುವಂತಿರಲಿಲ್ಲ. ಈ ಪೀಳಿಗೆಯ ಮಂದಿಗೇ ಆಸ್ಟ್ರೇಲಿಯ ಎಂದೊಡನೆ ಸ್ಟೀವ್ ವಾ, ಪಾಂಟಿಂಗ್, ಗಿಲ್‌ಕ್ರಿಸ್ಟ್, ಮ್ಯಾಥ್ಯೂ ಹೇಡನ್, ಶೇನ್ ವಾರ್ನ್, ಮೈಕ್ ಹಸ್ಸಿ ಅವರಂತಹ ಅತಿರಥ ಮಹಾರಥರೇ ನೆನಪಾಗುತ್ತಾರೆ. ಆದರೆ ಈ ಸಲ ಅಂತಹವರು ತಂಡದಲ್ಲಿರಲಿಲ್ಲ. ಹೀಗಾಗಿ ಕಳೆದ 34ವರ್ಷಗಳಲ್ಲಿ ಆಸ್ಟ್ರೇಲಿಯಾ ಕಂಡ ಅತ್ಯಂತ ದುರ್ಬಲ ತಂಡ ಇದು ಎಂದೂ ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ. ಈ ಅಂಶಗಳನ್ನೂ ಭಾರತ ಗಂಭೀರವಾಗಿ ಪರಿಗಣಿಸಬೇಕಿದ್ದು, ಗೆಲುವಿನ ಅಲೆಯಲ್ಲಿ ತೇಲುವ ಅಗತ್ಯವೇನಿಲ್ಲ. ಈ ವರ್ಷದ ಕೊನೆಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟೆಸ್ಟ್ ಸರಣಿ ನಡೆಯಲಿದೆ. ಅಲ್ಲಿಯವರೆಗೆ ತನ್ನ ಶಕ್ತಿಯನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಅಗತ್ಯವಿದೆ. ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಪಟ್ಟವನ್ನು ಮರಳಿ ಪಡೆಯುವ ದಿಸೆಯಲ್ಲಿ ಭಾರತ ಹೊಸ ಹೆಜ್ಜೆಗಳನ್ನು ಇಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.